varthabharthi

ಸುಗ್ಗಿ

ಎಸೆಸೆಲ್ಸಿ ಫಲಿತಾಂಶ ಮತ್ತು ಸುಧಾರಣಾ ಕ್ರಮಗಳು

ವಾರ್ತಾ ಭಾರತಿ : 15 Jun, 2019
ಡಾ. ಜಗನ್ನಾಥ ಕೆ. ಡಾಂಗೆ, (ಪ್ರಾಧ್ಯಾಪಕರು), ಸಿದ್ದರಾಜು. ಸಂಶೋಧನಾ ವಿದ್ಯಾರ್ಥಿ, ಶಿಕ್ಷಣ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ.

ಗಮನಿಸಬೇಕಾದ ಅಂಶವೆಂದರೆ ಶೇ. ಸೊನ್ನೆ ಫಲಿತಾಂಶ ಪಡೆದಿರುವ ಯಾವುದೇ ಸರಕಾರಿ ಶಾಲೆಗಳಿಲ್ಲ. ಇದು ಸರಕಾರಕ್ಕೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತುಸು ನಿರಾಳವಾದ ಸಂಗತಿ ಆಗಿದೆ. ಅನುದಾನ ರಹಿತ ಶಾಲೆಗಳು ಶೇ.82.72ರಷ್ಟು ಫಲಿತಾಂಶವನ್ನು ಪಡೆದರೆ, ಸುಮಾರು 37 ಶಾಲೆಗಳು ಶೇ.0 ಫಲಿತಾಂಶವನ್ನು ಪಡೆದಿರುವ ಬಗ್ಗೆ ಸರಕಾರಗಳು, ಶಿಕ್ಷಣ ಇಲಾಖೆ, ಅಧಿಕಾರಿಗಳು, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಚಿಂತಿಸಬೇಕಾದ ವಿಚಾರವಾಗಿದೆ. 

ಕಳೆದ ತಿಂಗಳು ಕರ್ನಾಟಕ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸೆಸೆಲ್ಸಿ ಫಲಿತಾಂಶವನ್ನು ಪ್ರಕಟಿಸಿದೆ. ಈ ಫಲಿತಾಂಶ ವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಕೆಲವು ಸ್ಪಷ್ಟವಾದ ಅಂಶಗಳು ನಮ್ಮ ಮುಂದೆ ಬರುತ್ತವೆ. ಕಳೆದ ಸಾಲಿಗೆ (2017-2018) ಶೇ.71.93 ಹೋಲಿಸಿದರೆ ಈ ಸಾಲಿನಲ್ಲಿ (2018-2019) ಶೇ.73.70 ಅಂದರೆ ಶೇಕಡಾ 1.8 ರಷ್ಟು ಫಲಿತಾಂಶವು ಹೆಚ್ಚಳವಾಗಿರುವುದು ಫಲಿತಾಂಶದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿರುವುದು ಕಂಡು ಬಂದಿದೆ. ಪ್ರತೀ ವರ್ಷವೂ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶವು ಬಂದಾಗ ಹುಡುಗರಿಗಿಂತ ಹುಡುಗಿಯರೇ ಮೇಲುಗೈ ಸಾಧಿಸುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಆದುದರಿಂದ ಹುಡುಗರ ಸಾಧನೆಯನ್ನು ಹೆಚ್ಚಿಸಲು ಸರಕಾರ, ಶಿಕ್ಷಣ ಇಲಾಖೆ, ಅಧಿಕಾರಿಗಳು ಕ್ರಮ ಕೈಗೊಳ್ಳುವರೇ ಎಂಬ ಪ್ರಶ್ನೆ ಉದ್ಭವಿಸಿದೆ. ಅದಕ್ಕೂ ಮೊದಲು ಹುಡುಗಿಯರ ಸಾಧನೆಗೆ ಕಾರಣಗಳನ್ನು ಹುಡುಕಬೇಕಾಗುತ್ತದೆ. ಶಾಲೆಯ ಶಿಕ್ಷಕರು ಮತ್ತು ಪೋಷಕರು ಕಲಿಕಾ ಪ್ರಕ್ರಿಯೆಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಹುಡುಗಿಯರು ನೀಡಿರುವ ಸಮಯದ ಒಳಗೆ ಅಚ್ಚುಕಟ್ಟಾಗಿ ಅತೀ ಜಾಗರೂಕತೆಯಿಂದ ಮಾಡಿ ಮುಗಿಸುತ್ತಾರೆ. ಆದರೆ ಹುಡುಗರು ನಿರ್ಲಕ್ಷ್ಯವಹಿಸಿ ಸಮಯ ಮುಗಿದ ಮೇಲೆ ಯೋಚಿಸಿ, ಕಲಿಕಾ ಪ್ರಕ್ರಿಯೆಯಲ್ಲಿ ತೊಡಗುತ್ತಾರೆ ಎನ್ನುವ ಕಲ್ಪನೆಗಳಿವೆ. ಇನ್ನೊಂದು ಮುಖ್ಯವಾದ ವಿಷಯವೇನೆಂದರೆ ಹುಡುಗಿಯರು ಅನುತ್ತೀರ್ಣರಾದರೆ, ಪೋಷಕರು ಮನೆಯಲ್ಲಿ ಮನೆಕೆಲಸ ವಾಡಲು, ತಾಯಿಗೆ ಸಹಾಯ ಮಾಡಲು ಮತ್ತು ಮದುವೆ ಮಾಡುತ್ತಾರೆ ಎನ್ನುವ ಒಂದು ಸಣ್ಣ ನಂಬಿಕೆ. ಆದುದರಿಂದ ಕಷ್ಟಪಟ್ಟು ಓದಿ ಕಲಿಕೆಯಲ್ಲಿ ಮುಂದುವರಿಯಲು ಅಣಿಯಾಗುತ್ತಾರೆ. ಆದರೆ ಕೆಲವು ಗಂಡು ಮಕ್ಕಳು ಅನುತ್ತೀರ್ಣರಾದರೆ ಸಾಕು, ಏಕೆಂದರೆ ಯಾವುದಾದರೂ ಕೆಲಸ ಮಾಡಿಕೊಂಡು ಜೀವನ ಸಾಗಿಸುವೆವು ಎನ್ನುವ ಮನೋಭಾವ. ಹಾಗೆಯೇ ಭಾರತೀಯ ಸಂಸ್ಕೃತಿಯಲ್ಲಿ ಗಂಡು ಮಕ್ಕಳಿಗೆ ತನ್ನದೇ ಆದ ಜವಾಬ್ದಾರಿಗಳಿರುವುದರಿಂದ ತಮ್ಮ ಮನೆಗೆ ಹೆಗಲಾಗಿ ದುಡಿಯಲಾರಂಭಿಸುವ ಯೋಚನೆಯಿಂದ ಕಲಿಕಾ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ ಎನ್ನಬಹುದು.

ನಗರ ಶಾಲೆಗಳಿಗಿಂತ ಗ್ರಾಮೀಣ ಶಾಲೆಗಳಲ್ಲಿ ಪ್ರತೀ ವರ್ಷವೂ ಉತ್ತಮ ಸಾಧನೆ ಮಾಡುತ್ತಿರುವುದರ ಗುಟ್ಟೇನು ಎಂದು ತಿಳಿಯಬೇಕಾಗುತ್ತದೆ. ನಗರ ಶಾಲೆಗಳಲ್ಲಿ ಅತೀ ಹೆಚ್ಚು ಸೌಲಭ್ಯ, ಸೌಕರ್ಯಗಳಿದ್ದರೂ, ಉತ್ತಮ ವ್ಯವಸ್ಥೆಯಿದ್ದರೂ, ಪ್ರತಿಯೊಂದು ನಗರಗಳಲ್ಲೂ ಟ್ಯೂಷನ್ ನೀಡುವ ದಂಧೆಯ ಸಂಸ್ಥೆಗಳಿದ್ದರೂ ಫಲಿತಾಂಶದಲ್ಲಿ ಹಿಂದುಳಿಯುವಿಕೆಗೆ ಕಾರಣಗಳನ್ನು ಹುಡುಕಬೇಕಾಗುತ್ತದೆ. ನಗರ ಶಾಲೆಗಳಲ್ಲಿ ಅತೀ ಹೆಚ್ಚಿನ ಹಣವನ್ನು ವ್ಯಯಿಸಿ ಶಿಕ್ಷಣ ಕೊಡಿಸಿದರೂ ಗ್ರಾಮೀಣ ಭಾಗದ ಸಾಧನೆಯನ್ನು ಮೀರಿಸಲು ಆಗುತ್ತಿಲ್ಲ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಕಲಿಕಾ ಪ್ರಕ್ರಿಯೆ ಹೇಗಿರುತ್ತದೆ, ವಾತಾವರಣವು ಕಲಿಕಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವುದು ಸಹಜವಾಗಿದೆ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪೋಷಕರ ಆರ್ಥಿಕತೆ ವಿದ್ಯಾಭ್ಯಾಸ, ಪೋಷಕರು ಕಷ್ಟ ಪಡುತ್ತಿರುವುದನ್ನು, ತುಂಬಾ ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಂಡಿರುವುದರಿಂದ ಮನಗಂಡು ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಓದಿ, ಉತ್ತೀರ್ಣರಾಗುವತ್ತ ದಾಪುಗಾಲು ಹಾಕುತ್ತಿದ್ದಾರೆ. ಈ ಸಲ ಇನ್ನೊಂದು ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಶೇ. ಸೊನ್ನೆ ಫಲಿತಾಂಶ ಪಡೆದಿರುವ ಯಾವುದೇ ಸರಕಾರಿ ಶಾಲೆಗಳಿಲ್ಲ. ಇದು ಸರಕಾರಕ್ಕೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತುಸು ನಿರಾಳವಾದ ಸಂಗತಿಯಾಗಿದೆ. ಅನುದಾನ ರಹಿತ ಶಾಲೆಗಳು ಶೇ.82.72ರಷ್ಟು ಫಲಿತಾಂಶವನ್ನು ಪಡೆದರೆ, ಸುಮಾರು 37 ಶಾಲೆಗಳು ಶೇ.0 ಫಲಿತಾಂಶವನ್ನು ಪಡೆದಿರುವ ಬಗ್ಗೆ ಸರಕಾರಗಳು, ಶಿಕ್ಷಣ ಇಲಾಖೆ, ಅಧಿಕಾರಿಗಳು, ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಚಿಂತಿಸಬೇಕಾದ ವಿಚಾರವಾಗಿದೆ. ಕೆಲವು ಅನುದಾನರಹಿತ ಶಾಲೆಗಳಲ್ಲಿ ಡೊನೇಷನ್ ಮೂಲಕ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿದ್ದು, ಇನ್ನು ಕೆಲವು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದ್ದು ಹಾಗೂ ವಿಷಯಾಧಾರಿತ ಶಿಕ್ಷಕರೇ ಇಲ್ಲದಿರುವುದು ಗಮನಿಸಬೇಕಾದ ಅಂಶವಾಗಿದೆ.

ಆದರೆ ಒಟ್ಟಾರೆ ಫಲಿತಾಂಶದಲ್ಲಿ ಸರಕಾರಿ ಶಾಲೆಗಳಿಗಿಂತ (ಶೇ.77.84) ಅನುದಾನರಹಿತ ಶಾಲೆಗಳೇ (ಶೇ. 82.72)ಮುಂದಿರುವುದನ್ನು ಗಮನಿಸಿದಾಗ, ಸರಕಾರವು ಕೂಡ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಎಲ್ಲಾ ಸರಕಾರಿ ಶಾಲೆಗಳಿಗೂ ಪ್ರಯೋಗಾಲಯ, ಗ್ರಂಥಾಲಯ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯವನ್ನು ಒದಗಿಸಬೇಕಾದುದು ಸರಕಾರದ ಕರ್ತವ್ಯ ಹಾಗೂ ಪೋಷಕರು ಕೂಡ ಸರಕಾರದ ಶಾಲೆಗಳ ಜೊತೆ ಕೈ ಜೋಡಿಸಿದಾಗ ಮಾತ್ರ ಮತ್ತು ಸರಕಾರಿ ಅಧಿಕಾರಿಗಳು, ಉತ್ತಮ ಮನೋಭಾವವುಳ್ಳವರು, ಸಮಾಜ ಸೇವಕರು ಸರಕಾರಿ ಶಾಲೆಗಳನ್ನು ದತ್ತು ಪಡೆದಾಗ, ಸರಕಾರಿ ಶಾಲೆಗಳಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ.

ಸರಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಸರಕಾರಿ ನೌಕರರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗಳಿಗೆ ಸೇರಿಸುವಂತೆ ಕಡ್ಡಾಯ ಕಾನೂನು ಮಾಡಿ ಸರಕಾರಿ ಶಾಲೆಯಲ್ಲಿ ಓದಿದವರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡಿದಾಗ ಮಾತ್ರ ಸರಕಾರಿ ಶಾಲೆಗಳು ಉಳಿಯುತ್ತವೆ. ಇಲ್ಲದಿದ್ದರೆ ಒಂದೊಂದಾಗಿ ಸರಕಾರಿ ಶಾಲೆಗಳು ಮುಚ್ಚಬೇಕಾದಂತಹ ಪರಿಸ್ಥಿತಿಯನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಹಾಗೂ ಪ್ರತಿ ವರ್ಷವೂ ಖಾಲಿಯಿರುವ ಶಿಕ್ಷಕ ಹುದ್ದೆಗಳನ್ನು ಪಾರದರ್ಶಕತೆಯಿಂದ, ಉತ್ತಮ ಸಾಮರ್ಥ್ಯವಿರುವವರನ್ನು ನೇಮಕ ಮಾಡಿದಾಗ ಮಾತ್ರ ಸರಕಾರದ ಶಾಲೆಗಳು ಪ್ರಗತಿಯನ್ನು, ಯಶಸ್ಸನ್ನು ಸಾಧಿಸುವಲ್ಲಿ ಸಂದೇಹವಿಲ್ಲ.

ಈ ಸಲ ಎಲ್ಲಾ ಜಿಲ್ಲೆಗಳಲ್ಲೂ ಫಲಿತಾಂಶವನ್ನು ಸುಧಾರಿಸಲು ಆ ಜಿಲ್ಲೆಯ ಉಸ್ತುವಾರಿ ಸಚಿವರು, ಡಿಡಿಪಿಐ ಹಾಗೂ ಜಿಲ್ಲಾಧಿಕಾರಿಗಳು, ಶಿಕ್ಷಣಾಧಿಕಾರಿಗಳು ಹಲವಾರು ಕ್ರಮಕೈಗೊಂಡು ಫಲಿತಾಂಶ ಸುಧಾರಣೆಯಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದೇ ಹೇಳಬಹುದು. ಆದರೆ ಬಹುತೇಕ ಜಿಲ್ಲೆಗಳಲ್ಲಿ ಫಲಿತಾಂಶವು ಸುಧಾರಿಸಿದೇ ಇರುವುದನ್ನು ನೋಡಿದರೆ ವಿದ್ಯಾರ್ಥಿಗಳನ್ನು ಇನ್ನೂ ಅರಿಯಲು ಆಗದೇ ಇರುವುದು ದುರಂತದ ಸಂಗತಿ ಎಂದೇ ಹೇಳಬಹುದು. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಫಲಿತಾಂಶವನ್ನು ಶೇ.90ರಷ್ಟು ಹೆಚ್ಚಿಸಲು ಆಗದೇ ಇರುವುದನ್ನು ಗಮನಿಸಿದರೆ, ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡದೆ ಇರುವುದೇ ಆಗಿದೆ. ಕೆಲವು ಜಿಲ್ಲೆಗಳಲ್ಲಿ ಅಧಿಕಾರಿಗಳು, ಮುಖ್ಯೋಪಾಧ್ಯಾಯರು ಮತ್ತು ಪೋಷಕರ ವ್ಯಾಟ್ಸಆ್ಯಪ್ ಗ್ರೂಪ್ ರಚಿಸಿಕೊಂಡು ಅವರಿಗೆ ಮಾಹಿತಿಯನ್ನು ನೀಡಿ, ವಿದ್ಯಾರ್ಥಿಗಳು ಓದುವಂತೆ ಸಹಕಾರ, ಪ್ರೇರಣೆ, ಹಿಮ್ಮಾಹಿತಿ ನೀಡಿರುವುದು ಉತ್ತಮ ಬೆಳವಣಿಗೆ. ಪ್ರತೀ ವರ್ಷವೂ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಬಂದ ನಂತರ ಆತ್ಮಹತ್ಯೆಯ ಸಂಖ್ಯಾಬಲವೂ ಏರುತ್ತಲೇ ಇತ್ತು.ಆದರೆ ಈ ವರ್ಷ ಆತ್ಮಹತ್ಯೆಯ ಪ್ರಕರಣಗಳು ವಿರಳವಾಗಿರುವುದು ಸಮಾಜದ ಉತ್ತಮ ರೀತಿಯ ಬೆಳವಣಿಗೆ ಎನ್ನಬಹುದು. ಇದರರ್ಥ ಫೇಲಾದ ವಿದ್ಯಾರ್ಥಿಗಳು ಧೃತಿಗೆಡದೆ, ಮನನೊಂದುಕೊಳ್ಳದೆ, ಕೀಳರಿಮೆಯನ್ನು ತ್ಯಜಿಸಿರುವುದು ಅತ್ಯುತ್ತಮ ಸಂಗತಿ. ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶವೇ ಜೀವನಕ್ಕೆ ನಿರ್ಣಾಯಕವಲ್ಲ ಎಂಬುದನ್ನು ಅರಿತ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಇದರಿಂದ ವಿದ್ಯಾರ್ಥಿಗಳ ಮನೋಬಲವು, ಸ್ಥೈರ್ಯವು ಹೆಚ್ಚಾಗಿದೆ ಎಂದು ಹೇಳಬಹುದು.

ಈ ಸಲ ಅಧಿಕಾರಿಗಳು ಫಲಿತಾಂಶವನ್ನು ಹೆಚ್ಚಿಸಲು ವಿಶೇಷ ಕಾರ್ಯಕ್ರಮ ಗಳೊಂದಿಗೆ, ವಿಶೇಷ ತರಗತಿ, ನೋಡಲ್ ಅಧಿಕಾರಿಗಳ ನೇಮಕ, 15 ದಿನಗಳಿಗೊಮ್ಮೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಸೂಕ್ತ ಮಾಹಿತಿಯನ್ನು ಪಡೆದು ಪೋಷಕರಿಗೂ ತಿಳಿಸಿ, ಶಿಕ್ಷಕರೊಂದಿಗೆ ಚರ್ಚಿಸಿರುವುದು ಸಂತಸದಾಯಕ ವಿಷಯ.

ಮುಖ್ಯವಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸರಕಾರವು ಯಾವ ಯಾವ ಕ್ರಮಗಳನ್ನು ಕೈಗೊಳ್ಳುತ್ತಿದೆ ಎನ್ನುವುದು ಮಹತ್ವದ ಸಂಗತಿಯಾಗಿದೆ. ಉತ್ತೀರ್ಣದ ಪ್ರಮಾಣ ಶೇ.73.70. ಅಂದರೆ ಇನ್ನುಳಿದ ಶೇ.26.30ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಪ್ರತೀ ವರ್ಷವೂ ಅನುತ್ತೀರ್ಣರಾಗುತ್ತಿರುವವರ ಭವಿಷ್ಯವನ್ನು ರೂಪಿಸಬೇಕಾದುದು ಸರಕಾರದ, ಶಿಕ್ಷಣ ಇಲಾಖೆಯ, ಮಾನವ ಅಭಿವೃದ್ಧಿ ಸಂಪನ್ಮೂಲ ಸಚಿವಾಲಯದ ಕರ್ತವ್ಯವಾಗಿದೆ. ಏಕೆಂದರೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಲ್ಲಿ ಜ್ಞಾನ ಇಲ್ಲ ಎಂದುಕೊಳ್ಳುವ ಹಾಗಿಲ್ಲ. ಹಾಗಾಗಿ ಅವರಲ್ಲಿರುವ ಕೌಶಲಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವರಿಗೆ ಬೇಕಾದಂತಹ ತರಬೇತಿ ಕಾರ್ಯಕ್ರಮಗಳನ್ನು ಯೋಚಿಸಿ ನೀಡುವುದರ ಮೂಲಕ ಮಾರ್ಗದರ್ಶನ ಮಾಡಿದಾಗ ಮಾತ್ರ ಅವರ ಬೆಳವಣಿಗೆಯು ಸಾಧ್ಯ. ಹಾಗಾಗಿ ಎಲ್ಲರ ಬೆಳವಣಿಗೆಯಲ್ಲಿ ದೇಶದ ಬೆಳವಣಿಗೆ, ಅಭಿವೃದ್ಧಿ ಅಡಗಿದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.

ಎಸೆಸೆಲ್ಸಿ ಪರೀಕ್ಷೆಯಲ್ಲಿ ಇಂದಿಗೂ ಶೇ.100ಕ್ಕೆ ಶೇ.80 ರಷ್ಟು ಫಲಿತಾಂಶವನ್ನು ಪಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೆ ಈ ಸಮಸ್ಯೆಗಳಿಗೆ ಹಂತಹಂತ ವಾಗಿ ಉತ್ತರಗಳನ್ನು ಕಂಡುಕೊಳ್ಳದೆ ಇರುವುದು ವಿಪರ್ಯಾಸದ ಸಂಗತಿ ಎಂದೇ ಹೇಳಬಹುದು. ಇದಕ್ಕೆಲ್ಲಾ ಪ್ರಮುಖ ಕಾರಣಗಳೆಂದರೆ, ಶಿಕ್ಷಣ ಇಲಾಖೆಯು ಪರೀಕ್ಷೆಯ ಸಮಯದಲ್ಲಿ ಹಲವಾರು ತುರ್ತುಕ್ರಮಗಳನ್ನು ಕೈಗೊಂಡು ವಿಫಲ ವಾಗುತ್ತಾ, ಶಿಕ್ಷಕರಿಗೆ ಹೆಚ್ಚಿನ ಒತ್ತಡವನ್ನು ನೀಡುತ್ತಿರುವುದು, ಶಿಕ್ಷಕರು ತಮ್ಮ ವಿದ್ಯಾರ್ಥಿ ಗಳಿಗೆ ಪಾಠ ಪ್ರವಚನ ಮಾಡದೆ, ಬಿಸಿಯೂಟ ಇನ್ನಿತರ ಸರಕಾರಿ ಕೆಲಸ ಕಾರ್ಯಗಳಲ್ಲಿ ತೊಡಗಿರುವುದು ಹಾಗೂ ಕೆಲವು ಶಿಕ್ಷಕರು ಸಂಪೂರ್ಣವಾಗಿ ಪಾಠ ಮಾಡದೆ, ಕಾಲಹರಣ ಮಾಡುತ್ತಿರುವುದರ ಪರಿಣಾಮವಾಗಿದೆ.

ಸರಕಾರವು ಕೂಡ ಜ್ಞಾನದ ಆಧಾರದ ಮೇಲೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಶಿಕ್ಷಕರಾಗುವವರಿಗೆ ಅತೀ ಮುಖ್ಯವಾಗಿ ಬೇಕಾಗಿರುವುದು ಸಾಮರ್ಥ್ಯಗಳು ಇದುವರೆಗೂ ಸಾಮರ್ಥ್ಯಗಳನ್ನು ಪರೀಕ್ಷಿಸುವ ಮತ್ತು ಬೆಳೆಸುವ ಮಹತ್ವದ ಕಾರ್ಯಗಳಾಗದಿರುವುದು ಗುಣಾತ್ಮಕ ಶಿಕ್ಷಣದೆಡೆಗಿರುವ ಉತ್ತಮ ಬೆಳವಣಿಗೆಯಲ್ಲ.

ಕಡಿಮೆ ಫಲಿತಾಂಶವನ್ನು ಪಡೆದಿರುವ ಜಿಲ್ಲೆಗಳಲ್ಲಿ ಶೈಕ್ಷಣಿಕ ವ್ಯವಸ್ಥೆಯು ತೀರಾ ಕೆಳಮಟ್ಟದಾಗಿದ್ದು, ಇದಕ್ಕೆಲ್ಲ ಮುಖ್ಯಕಾರಣ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ, ಕೊಠಡಿಯ ಕೊರತೆ, ಪೀಠೋಪಕರಣಗಳು ಮತ್ತು ಶಿಕ್ಷಕರ ಕೊರತೆಯು ಪ್ರಮುಖವಾಗಿ ಎದ್ದು ಕಾಣುತ್ತಿದೆ. ವಿದ್ಯಾರ್ಥಿಗಳಿಗೆ ಓಡಾಡಲು ವಾಹನ ಸೌಲಭ್ಯದ ಕೊರತೆ, ಹೆಣ್ಣು ಮಕ್ಕಳಿಗೆ ಭದ್ರತೆಯ ಸಮಸ್ಯೆ ಹಾಗೂ ಇಲ್ಲಿರುವ ಬಹುತೇಕ ಜನರು ತಮ್ಮ ಹೊಟ್ಟೆಪಾಡಿಗಾಗಿ, ಆರ್ಥಿಕವಾಗಿ ಸಬಲರಾಗಲು ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ ಹಾಗೂ ತಮ್ಮ ಮಕ್ಕಳನ್ನು ದುಡಿಯಲು ಬಳಸಿಕೊಳ್ಳುತ್ತಿದ್ದಾರೆ. ಹೆಚ್ಚಿನದಾಗಿ ಮಾರ್ಗದರ್ಶಕರ, ಪ್ರೇರಕರ ಕೊರತೆ ಎದ್ದುಕಾಣುತ್ತಿದೆ. ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಅರಿವನ್ನುಂಟು ಮಾಡುವ ಕಾರ್ಯಕ್ರಮ ಆಯೋಜಿಸಿ, ಅವರಿಗೆ ಸೂಕ್ತ ರೀತಿಯಲ್ಲಿ ಮಾಹಿತಿಯನ್ನು ನೀಡಬೇಕಾದುದು ಶಾಲೆಯ ಶಿಕ್ಷಕರು, ಅಧಿಕಾರಿಗಳ ಕರ್ತವ್ಯವಾಗಿದೆ. ಹಲವಾರು ಪ್ರೋತ್ಸಾಹ ಕಾರ್ಯಕ್ರಮಗಳನ್ನು ಆರಂಭಿಸಿ ಶಿಕ್ಷಣದ ಮಹತ್ವವನ್ನು ತಿಳಿಸಿ, ಶಿಕ್ಷಣದ ಕಡೆ ಒಲವು ಮೂಡಿಸುವುದು ತುರ್ತಾಗಿ ಆಗಬೇಕಿದೆ ಹಾಗೂ ಅತೀ ಹೆಚ್ಚಿನ ಫಲಿತಾಂಶವನ್ನು ಪಡೆದಿರುವ ಜಿಲ್ಲೆಗಳಲ್ಲಿ ಅಳವಡಿಸಿಕೊಂಡಿರುವ ಶಿಕ್ಷಣದ ಪದ್ಧತಿ, ಪ್ಯಾಕೇಜ್, ನೀತಿನಿಯಮಗಳ, ಆವಶ್ಯಕವಾದ ಅಂಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಈ ಜಿಲ್ಲೆಗಳಲ್ಲಿ ಹೆಚ್ಚಿನ ಫಲಿತಾಂಶವನ್ನು ನಿರೀಕ್ಷಿಸಿ, ಫಲಿತಾಂಶದಲ್ಲಿನ ಅಸಮಾನತೆಯನ್ನು ತೊಡೆದು ಹಾಕಬಹುದು. ಕಡಿಮೆ ಫಲಿತಾಂಶ ಬಂದ ವಿಭಾಗದಲ್ಲಿ ಅತೀ ಹೆಚ್ಚು ದಲಿತರು ಮತ್ತು ಹಿಂದುಳಿದ ವರ್ಗಗಳ ಜನರಿರುವುದನ್ನು ಗಮನಿಸಬಹುದು. ಅದರ ಜೊತೆಗೆ ಅವರ ಕೌಟುಂಬಿಕ ರಚನೆ, ಆದಾಯದ ಮಟ್ಟ, ಶೈಕ್ಷಣಿಕ ಸ್ಥಿತಿಗತಿ, ಅಲ್ಲಿರುವ ಸಂಪನ್ಮೂಲ ವ್ಯಕ್ತಿಗಳ ಮೇಲೆ ಅವಲಂಬಿಸಿರಬಹುದು.

ವಿಭಾಗವಾರು ಸಾಧ್ಯವಾದರೆ ವಿಶೇಷ ಕಲಿಕಾ ಸಾಮಗ್ರಿಗಳನ್ನು ಗುರುತಿಸಿ, ನೀಡಿದರೆ ಫಲಿತಾಂಶಕ್ಕೆ ಪೂರಕವಾಗಿರುತ್ತದೆ ಎನ್ನಬಹುದು ಹಾಗೂ ಅತ್ಯುತ್ತಮ ಶಿಕ್ಷಕರಿಗೆ, ಜನಪ್ರಿಯ ಶಿಕ್ಷಕರಿಗೆ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿ, ಪುನರ್ಬಲನ ನೀಡಿದಾಗ ಅವರಲ್ಲಿರುವ ಶಕ್ತಿ, ಉತ್ಸಾಹವು ಹೆಚ್ಚಾಗಿ ಇನ್ನೂ ಉತ್ತಮವಾಗಿ ಕೆಲಸ ಮಾಡುವುದರಲ್ಲಿ ಸಂದೇಹವಿಲ್ಲ. ಶಿಕ್ಷಕರ ವರ್ಗಾವಣೆಯನ್ನು ಒಂದೇ ವಲಯಕ್ಕೆ ಸೀಮಿತಗೊಳಿಸದೆ, ಎಲ್ಲಾ ವಲಯಗಳಿಗೂ ವರ್ಗಾವಣೆ ಮಾಡಬೇಕು ಹಾಗೂ ಅತೀ ಹೆಚ್ಚಿನ ಫಲಿತಾಂಶವನ್ನು ಪಡೆದಿರುವ ಜಿಲ್ಲೆಗಳ ಶಿಕ್ಷಕರನ್ನು ಅತೀ ಕಡಿಮೆ ಬಂದಿರುವ ಜಿಲ್ಲೆಗಳಿಗೆ ಕೆಲವು ವರ್ಷಗಳ ಮಟ್ಟಿಗಾದರೂ ನಿಯೋಜನೆಗೊಳಿಸಬೇಕು. ಈ ಮೂಲಕ ಫಲಿತಾಂಶದ ಅಂತರವನ್ನು ಸರಿದೂಗಿಸಬಹುದು.

ಮಕ್ಕಳು ಕಲಿಯಲು ಮಾಧ್ಯಮವನ್ನು ಎಷ್ಟರ ಮಟ್ಟಿಗೆ ಬಳಕೆ ಮಾಡುತ್ತಾರೆ ಅಥವಾ ಮಾಧ್ಯಮಗಳು ಕಲಿಕಾ ಪ್ರಕ್ರಿಯೆಗೆ ಸಂಬಂಧಿಸಿದ ವಿಚಾರಗಳನ್ನು ಎಷ್ಟರ ಮಟ್ಟಿಗೆ ವಿನಿಮಯ ಮಾಡಿಕೊಳ್ಳುತ್ತವೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಓದಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ, ಉತ್ತಮ ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ಗುರುತಿಸುವಂತಹ ಕೆಲಸವಾಗಬೇಕು. ವಿದ್ಯಾರ್ಥಿಗಳಲ್ಲಿರುವ ಕೌಶಲಗಳನ್ನು ಗುರುತಿಸಿ ಜಗತ್ತಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಿದರೆ ಫಲಿತಾಂಶವು ಹೆಚ್ಚಳವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಗ್ರಾಮೀಣ ಪ್ರದೇಶದಲ್ಲಿರುವುದರಿಂದ, ಸ್ವ-ಸಹಾಯ ಸಂಘ (ಗುಂಪು)ಗಳು ಶಾಲೆಯ ಸ್ಥಿತಿಗತಿಗಳನ್ನು ಅರಿಯುವುದರ ಮೂಲಕ ಕಲಿಕೆಗೆ ಪೂರಕವಾದ ಯೋಜನೆಯನ್ನು ರೂಪಿಸಿ, ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೂ ಉಚಿತ ವಿಶೇಷ ಬೋಧನೆಯನ್ನು ಕೈಗೊಳ್ಳುವುದರ ಮೂಲಕ ತನ್ನ ಪಾತ್ರವನ್ನು ನಿರ್ವಹಿಸುವಂತೆ ಮಾಡಬೇಕು. ಈ ಕೆಲಸ ಕಾರ್ಯಗಳನ್ನು ಸ್ವಯಂ ಪ್ರೇರಣೆಯಿಂದ ಮಾಡಿದರೆ ವಿದ್ಯಾರ್ಥಿಗಳಿಗೂ, ಸಮಾಜಕ್ಕೂ ಹೆಚ್ಚಿನ ಕೊಡುಗೆಯನ್ನು ನೀಡಿದಂತಾಗುತ್ತದೆ. ಫಲಿತಾಂಶಕ್ಕೆ ಸಂಬಂಧಿಸಿದಂತೆ ಸರಕಾರದ ಮುಖ್ಯ ಜವಾಬ್ದಾರಿಯಾಗಿರುವುದು ಮೌಲ್ಯಮಾಪನ. ಮೌಲ್ಯಮಾಪನವನ್ನು ಸುಧಾರಿಸುವ ಮೂಲಕ ಅಂದರೆ ಈಗಿನ ಮೌಲ್ಯಮಾಪನವು ಅತೀ ಹೆಚ್ಚಾಗಿ ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಇದು ಬರೀ ಅಂಕೆಗಳಲ್ಲಷ್ಟೇ ಸಾಧ್ಯ.ಇದರ ಹೊರತಾಗಿ ಜ್ಞಾನದ ಜೊತೆಗೆ, ವಿದ್ಯಾರ್ಥಿಗಳ ಆಸಕ್ತಿ, ಸಾಮರ್ಥ್ಯ, ಕೌಶಲಗಳನ್ನು ಗುರುತಿಸಿ ಅವುಗಳಿಗೆ ಪೂರಕವೆಂಬಂತೆ ಪರೀಕ್ಷಾ ಪದ್ಧತಿಯನ್ನು ಸುಧಾರಿಸಿ, ಮೌಲ್ಯಮಾಪನದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ, ಮೌಲ್ಯಮಾಪನ ಪದ್ಧತಿಯಲ್ಲಿ ಯಾವುದೇ ತಪ್ಪಾಗದಂತೆ ನೋಡಿಕೊಳ್ಳುವುದು ಸರಕಾರದ ಪ್ರಮುಖ ಜವಾಬ್ದಾರಿಯಾಗಿದೆ. ಏಕೆಂದರೆ ಫಲಿತಾಂಶ ಬಂದ ನಂತರ ದಿನಪತ್ರಿಕೆ, ಮಾಧ್ಯಮಗಳಲ್ಲಿ ವಿದ್ಯಾರ್ಥಿಗಳ ಅಂಕಗಳನ್ನು ತಪ್ಪಾಗಿ ನಮೂದಿಸಿರುವುದು, ಅಂಕಗಳಲ್ಲಿ ಏರುಪೇರು, ಎಣಿಕೆ ಮಾಡುವಾಗ ತಪ್ಪಾಗಿರುವುದು, ಅಂಕಗಳನ್ನು ಒಟ್ಟುಗೂಡಿಸುವಾಗ ತಪ್ಪುಗಳು, ಎಂಬಂತಹ ವಿಚಾರಗಳನ್ನು ಗಮನಿಸಬಹುದು. ಆದುದರಿಂದ ಫಲಿತಾಂಶದ ಬಗ್ಗೆ ಇರುವ ಗೊಂದಲವನ್ನು ತಡೆಗಟ್ಟಿ, ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದರ ಮೂಲಕ ಜನರಲ್ಲಿ, ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಮನೋಭಾವವನ್ನು ಉಂಟು ಮಾಡಬಹುದು.

ಇನ್ನೊಂದು ಪ್ರಮುಖವಾದ ವಿಷಯವೇನೆಂದರೆ ಎಸೆಸೆಲ್ಸಿ ಯಲ್ಲಿ ಅತೀ ಹೆಚ್ಚಿನ ಅಂಕಗಳನ್ನು ಪಡೆದಾಕ್ಷಣ ಯಾವುದೇ ಉದ್ಯೋಗವಿಲ್ಲದಿರುವುದನ್ನು ಕಾಣಬಹುದು. ಬರೀ ಅಂಕಗಳನ್ನು ನೀಡುವುದರ ಬದಲು ಅವರ ಜೀವನಕ್ಕೆ ಬೇಕಾದಂತಹ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ, ಕೌಶಲಗಳನ್ನು ಕಲಿಸಿ, ಹಲವಾರು ಕುಶಲ-ಕರ್ಮಿಗಳ ತರಬೇತಿಯನ್ನು ನೀಡಿದರೆ,ಉದಾಹರಣೆಗೆ ಮೊಬೈಲ್ ರಿಪೇರಿ, ನೆಟ್‌ವರ್ಕಿಂಗ್ ಮತ್ತು ಹಾರ್ಡ್‌ವೇರ್‌ಗಳ ಬಳಕೆಯ ಕುರಿತು ತರಬೇತಿ ನೀಡುವುದು, ಸಾಫ್ಟ್‌ವೇರ್ ವಿನ್ಯಾಸ, ತೋಟಗಾರಿಕೆ ತರಬೇತಿ, ಪಶು, ಜೇನು, ಕುರಿ ಸಾಕಣೆಯ ಕುರಿತು ತರಬೇತಿ ನೀಡುವುದರ ಮೂಲಕ ಕೌಶಲಗಳನ್ನು ಬೆಳೆಸಿದರೆ, ಮುಂದೆ ಆ ಕ್ಷೇತ್ರದಲ್ಲಿಯೇ ತೊಡಗಿಕೊಳ್ಳುವಂತೆ ಮಾಡಿದಾಗ, ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಬಹುದು, ಎಸೆಸೆಲ್ಸಿ ಹಂತದಲ್ಲಿಯೇ ಉದ್ಯೋಗವನ್ನು ಪಡೆಯುವುದರ ಮೂಲಕ, ಸಮಯವನ್ನು ಉಳಿಸುವುದರ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಹೆಚ್ಚಿಸಿ ದೇಶದ ಪ್ರಗತಿಯಲ್ಲಿ ಕೈ ಜೋಡಿಸಬಹುದು.

ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ದೇಶದಲ್ಲಿ ಜಾರಿಗೆ ತಂದಾಗ ಮಾತ್ರ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಿದಂತಾಗುತ್ತದೆ. ಕಲಿಯುವ ಭಾಷೆಯಲ್ಲಿನ ಅಸಮಾನತೆಯನ್ನು ನಿವಾರಿಸಿ, ಸಂಪನ್ಮೂಲಗಳ ದೊರೆಯುವಿಕೆ ಮತ್ತು ಬಳಸುವಿಕೆಯಲ್ಲಿ ಸಮಾನತೆಯನ್ನು ತರುವ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಾಗ ಮಾತ್ರ ಫಲಿತಾಂಶದಲ್ಲೂ ಸಮಾನತೆಯನ್ನು ಅಪೇಕ್ಷಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)