varthabharthi

ಸುಗ್ಗಿ

► ಬೆಳೆಯುವ ಪೈರು ► ಅಧ್ಯಯನ ಮತ್ತು ಅರಿವು

ಬರವಣಿಗೆ ಎಷ್ಟು ಬೇಕು? ಹೇಗಿರಬೇಕು?

ವಾರ್ತಾ ಭಾರತಿ : 15 Jun, 2019
ಯೋಗೇಶ್ ಮಾಸ್ಟರ್

ಕಲಿಕೆಯೆಂಬ ಪ್ರಕ್ರಿಯೆ

► ಭಾಗ-25

ಕನ್ನಡ ಮಾಧ್ಯಮದಲ್ಲಿ ಓದಿರುವ ಮಕ್ಕಳು ಗುಂಡಾಗಿ ಬರಿ ಎಂಬ ಮಾತನ್ನು ಪದೇ ಪದೇ ಕೇಳಿರುತ್ತೇವೆ. ಹೌದು, ಕನ್ನಡದ ಬರಹದ ಜಾಯಮಾನವೇ ಅಕ್ಷರಗಳು ಗುಂಡು ಗುಂಡಾಗಿರುವುದು. ವಚನಕಾರ ಬಸವಣ್ಣನವರ ಕಾಲದಲ್ಲಿ ಅವರ ಬರಹಗಳು ತಾಡೋಲೆ ಮೇಲೆ ಇದ್ದಿದ್ದರಿಂದಲೋ ಏನೋ ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬಷ್ಟಕ್ಕೆ ನಿಲ್ಲಿಸಿಬಿಟ್ಟಿದ್ದಾರೆ. ಆದರೆ ಬರೆದರೂ ಮುತ್ತಿನ ಹಾರದಂತಿರಬೇಕು ಎಂಬುದು ಕನ್ನಡ ಬರಹದ ಪಾಲಿಗೆ ನಿಜ. ಆದರೆ ಈಗ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿರುವ ಮತ್ತು ಬರೆಯುತ್ತಿರುವ ಮಕ್ಕಳ ಬರವಣಿಗೆ ಹೇಗಿರಬೇಕು ಎಂಬುದು ಒಂದು ಅಗತ್ಯವಾದ ಚಿಂತನೆ. 

ಕರ್ಸಿವ್ ರೈಟಿಂಗ್

ಸಾಮಾನ್ಯವಾಗಿ ಶಾಲೆಗಳಲ್ಲಿ ಸೊಟ್ಟಗೆ ಕರ್ಸಿವ್ ರೈಟಿಂಗನ್ನು ಸಣ್ಣ ತರಗತಿಗಳಿಂದಲೇ ಪ್ರಾರಂಭಿಸುತ್ತಾರೆ. ಆದರೆ ಇಲ್ಲಿ ಬಹಳ ಮುಖ್ಯ ವಾದ ಪ್ರಶ್ನೆ ಎಂದರೆ ಕರ್ಸಿವ್ ರೈಟಿಂಗ್ ಏಕೆ ಮತ್ತು ಹೇಗೆ ಪ್ರಸ್ತುತ. ಕರ್ಸಿವ್ ಬರಹದಲ್ಲಿ ಪುಸ್ತಕಗಳು ಪ್ರಕಟವಾಗುವುದಿಲ್ಲ. ಮಕ್ಕಳು ಓದುವ ಶಾಲಾ ಪುಸ್ತಕಗಳಲ್ಲೇ ಕರ್ಸಿವ್ ಫಾಂಟ್‌ಗಳಲ್ಲಿ ಪಠ್ಯವಿರುವುದಿಲ್ಲ. ಅದರ ನಂತರ ಈಗಿನ ಮಕ್ಕಳು ಬರವಣಿಗೆಗಿಂತ ಹೆಚ್ಚಾಗಿ ಟೈಪಿಸುತ್ತಾರೆ. ಕೀಯಿಂಗ್ ಮಾಡುತ್ತಾರೆ. ಅವರ ಬರವಣಿಗೆ ಶಾಲಾದಿನಗಳಲ್ಲಿ ಅಥವಾ ಮುಂದಾದರೂ ಬರೀ ಪರೀಕ್ಷೆಗಳಿಗೆ ಮಾತ್ರ ಸೀಮಿತ. ಅಂದ ಹಾಗೆ ನೋಟ್ಸ್ ತೆಗೆದುಕೊಳ್ಳುವುದಕ್ಕೆ ಬರವಣಿಗೆ ಬೇಕಾದರೂ, ನೋಟ್ಸನ್ನು ಬರೆದುಕೊಂಡೇ ತೀರಬೇಕೆಂಬ ಹಟವೂ ಇಲ್ಲ. ಪ್ರಿಂಟೆಡ್ ನೋಟ್ಸ್ ಗೆ ಹೆಚ್ಚು ಮೊರೆ ಹೋಗುತ್ತಾರೆ. ಕಲಿಕೆಯ ಹಂತದ ನಂತರ ಮುಂದೆಯಂತೂ ಬರವಣಿಗೆ ಅದೆಷ್ಟು ಸಂಕುಚಿತಗೊಳ್ಳುತ್ತದೆ ಎಂದರೆ, ಸಹಿ ಮಾಡಲು, ಯಾವುದೋ ಒಂದೆರಡು ಸಾಲುಗಳನ್ನು ತಕ್ಷಣಕ್ಕೆ ಗೀಚಿಕೊಳ್ಳುವುದಕ್ಕಷ್ಟೇ ಸೀಮಿತವಾಗುತ್ತದೆ. ನಿಜ ಹೇಳಬೇಕೆಂದರೆ, ಮಕ್ಕಳು ನಾಲ್ಕನೆಯ ತರಗತಿಗೆ ಬರುವ ಹೊತ್ತಿಗೆ ಕೀಬೋರ್ಡಿಂಗ್ ಕೌಶಲ್ಯವನ್ನು ಹೊಂದಿರಬೇಕು. ಒಂದನೇ ತರಗತಿಗೆ ಬರುವಷ್ಟರಲ್ಲಿ ಮಗುವು ಮುದ್ರಣವಾಗುವ ಅಕ್ಷರಗಳನ್ನು ಗುರುತಿಸುವ ಸಾಮರ್ಥ್ಯವನ್ನು ಪಡೆದಿರಬೇಕು. ಪುಸ್ತಕಗಳಾಗಲಿ, ವಾರ್ತಾ ಪತ್ರಿಕೆಗಳಾಗಲಿ ಅಥವಾ ಯಾವುದೇ ನಿಯತ ಕಾಲಿಕಗಳಾಗಲಿ ಪ್ರಕಟವಾಗುವುದು ಕರ್ಸಿವ್ ಫಾಂಟ್‌ಗಳಲ್ಲಿ ಅಲ್ಲ. ಅಂದ ಮೇಲೆ ಅದರ ಮೇಲೆ ತೀರಾ ಒತ್ತುಕೊಟ್ಟು ಕಲಿಸುವ ಅಗತ್ಯವಾದರೂ ಏನಿದೆ?

ಇಂಕ್ ಪೆನ್ನಿನ ಮಿಥ್

ಕಾಗದದ ಮೇಲೆ ಇಟ್ಟ ಪೆನ್ನನ್ನು ಮೇಲಕ್ಕೆತ್ತದೇ ಹಾಗೆಯೇ ಬರೆದುಕೊಂಡು ಹೋಗುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಬರೆಯಲು ಸಾಧ್ಯವಾಗುತ್ತದೆ ಎಂಬ ಮಾತಿದೆ. ಅದರಿಂದಲೇ ಕರ್ಸಿವ್ ರೈಟಿಂಗನ್ನು ಅಭ್ಯಾಸ ಮಾಡಿಸಬೇಕು ಎಂದು ಹೇಳುತ್ತಾರೆ. ಆದರೆ, ಅದು ಹಾಗೇನಿಲ್ಲ. ಆಯಾ ವ್ಯಕ್ತಿಯ ಅಭ್ಯಾಸದಂತೆ ಆತ ತನ್ನ ಬರವಣಿಗೆಯ ವೇಗವನ್ನು ಹೊಂದಿರುತ್ತಾನೆ. ನೋಡಲು ಸುಂದರವಾಗಿ ಕಾಣುತ್ತದೆ ಎಂದು ಹೇಳುವು ದಾದರೂ, ಬಿಡಿಬಿಡಿಯಾಗಿ ಬರೆಯುವುದು ಕೆಟ್ಟದಾಗೇನೂ ಕಾಣುವುದಿಲ್ಲ. ಆಯಾ ಅಕ್ಷರಗಳ ಗಾತ್ರ, ಕಾಗದದ ಮೇಲೆ ಅದು ಸಾಲುಸಾಲಾಗಿ ಬಿಡಿಸಿಕೊಂಡಿರುವ ರೀತಿ, ತಪ್ಪುಗಳಿಲ್ಲದೇ ಇರುವುದು; ಇತ್ಯಾದಿಗಳು ಬರವಣಿಗೆಯ ಸೌಂದರ್ಯಕ್ಕೆ ಕಾರಣವಾಗುತ್ತದೆ. ಸಾರ್ವಜನಿಕ ಶಿಕ್ಷಣವು ಮಹತ್ವ ಕೊಡಬೇಕಾಗಿರುವುದು ಯಾವುದಕ್ಕೆಂದರೆ, ಮಗುವು ಯಶಸ್ವಿಯಾಗಿ ವಿದ್ಯಾವಂತ ಮತ್ತು ನಾಗರಿಕ ಉದ್ಯೋಗಿಯಾಗಿ ತನ್ನ ಬರವಣಿಗೆ ಮತ್ತು ಓದನ್ನು ಸಾರ್ಥಕಗೊಳಿಸಿಕೊಳ್ಳುವುದಕ್ಕೆ. ಅದಕ್ಕೆ ಈಗ ನಾವು ಪ್ರಾಮುಖ್ಯತೆ ಕೊಡಬೇಕಾಗಿರುವುದು ಕೀಲಿಮಣೆಯ ಮೇಲೆ ಟೈಪಿಸುವುದಕ್ಕೆ. ಅದು ಈಗ ಅತಿ ಹೆಚ್ಚು ಪ್ರಸ್ತುತ. ಮಗುವು ವಯಸ್ಕನಾದ ಮೇಲೆ ಉದ್ಯೋಗ ಕ್ಷೇತ್ರದಲ್ಲಿ ಬರವಣಿಗೆಗಿಂತ ಟೈಪಿಸುವುದರ ಮೇಲೆಯೇ ಹೆಚ್ಚು ಅವಲಂಬಿತವಾಗುತ್ತದೆ. ಅದಕ್ಕೆ ನಾವು ಮಗುವನ್ನು ತಯಾರು ಮಾಡಬೇಕಾಗಿರುವುದು ಕೂಡಾ. ಆದರೆ ಬರವಣಿಗೆ ಬೇಕು. ಬರೆಯುವ ಅಭ್ಯಾಸವಂತೂ ಖಂಡಿತ ಆಗಬೇಕು. ಆದರೆ ಹಟ ಹಿಡಿದು ಕರ್ಸಿವ್ ರೈಟಿಂಗಲ್ಲಿ ಬರವಣಿಗೆ ಇರಬೇಕು ಎಂದು ಪಟ್ಟು ಹಿಡಿಯುವುದು. ಅದನ್ನೇ ಅಭ್ಯಾಸ ಮಾಡಿಸುವುದು. ಅದಕ್ಕಾಗಿ ಮಕ್ಕಳ ಮೇಲೆ ಒತ್ತಡ ಹೇರುವುದು ತೀರಾ ಅನಗತ್ಯ. ಪುಕ್ಕ ಮತ್ತು ಗರಿಗಳಿಂದ ಬರೆಯುತ್ತಿದ್ದದ್ದು ಇಂಕ್ ಪೆನ್ನಿಗೆ ಬಂತು. ಇಂಕ್ ಪೆನ್ನನ್ನು ಮತ್ತಷ್ಟು ಸರಳಗೊಳಿಸಿಕೊಳ್ಳಲು, ಸರಾಗ ಗೊಳಿಸಿಕೊಳ್ಳಲು ಬಾಲ್ ಪೆನ್ನುಗಳು ಬಂದವು. ಟೈಪ್ ರೈಟರ್ ಗಳು ಪೆನ್ನುಗಳ ಜಾಗವನ್ನು ಪಡೆದುಕೊಂಡವು. ಈಗ ಟೈಪ್ ರೈಟರ್‌ಗಳ ಬದಲಾಗಿ ಕಂಪ್ಯೂಟರ್‌ಗಳು ಬಂದಿವೆ. ಇನ್ನು ಇವೇ ವ್ಯಾಪಕವಾಗುತ್ತಿವೆ. ಹಾಗಿರುವಾಗ, ಇಂಕ್ ಪೆನ್ನಿನಲ್ಲಿ ಬರೆಯು ತ್ತಿದ್ದಂತೆ ಕರ್ಸಿವ್ ರೈಟಿಂಗ್‌ಗೆ ಹಿಂದಿರುಗುವ ಅಗತ್ಯ ಏನಿದೆ? ವಾಸ್ತವವಾಗಿ ಇಂಕ್ ಪೆನ್ನುಗಳ ನಿಬ್‌ಗಳಿಗೆ ಪೂರಕವಾಗಿ ಕರ್ಸಿವ್ ರೈಟಿಂಗ್ ರೂಪುಗೊಂಡಿದ್ದು. ನಿಬ್ಬನ್ನು ಒಂದು ನಿರ್ದಿಷ್ಟ ಕೋನದಲ್ಲಿ ಇಟ್ಟುಕೊಂಡು ಬರೆಯುವ ಅಗತ್ಯವಿರುತ್ತದೆ. ಹಾಗೆಯೇ ಅದನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಲು ಕರ್ಸಿವ್ ರೈಟಿಂಗ್ ಸಹಾಯವಾಗುತ್ತದೆ. ಪೆನ್ನನ್ನು ಕಾಗದ ಮೇಲೆ ಇಟ್ಟು ಒಂದೇ ಸಮನೆ ಬರೆದುಕೊಂಡು ಹೋಗಲು ಕರ್ಸಿವ್ ರೈಟಿಂಗ್ ಸಹಾಯವಾಗುತ್ತದೆ ಎಂಬುದನ್ನೂ ತೀರಾ ಒಪ್ಪಲು ಸಾಧ್ಯ ವಿಲ್ಲ. ಏಕೆಂದರೆ ಪದ-ಪದಕ್ಕೂ ಮಧ್ಯದಲ್ಲಿ ಅಂತರವಿರಲೇ ಬೇಕು. ಕರ್ಸಿವ್ ರೈಟಿಂಗ್‌ನಲ್ಲಿ ಇನ್ನೆಷ್ಟು ಸಮಯ ಉಳಿಸಿಬಿಡಲು ಸಾಧ್ಯ? ಇಂಕ್ ಪೆನ್ನು ಇಂಕು ಸುರಿಯುವುದು, ನಿಬ್ಬಿನ ಮಧ್ಯ ಭಾಗದಲ್ಲಿ ಧೂಳು ಸೇರಿಕೊಂಡು ಬರವಣಿಗೆಗೆ ಅಡಚಣೆಯಾಗುವುದು, ಮುರಿದು ಹೋಗುವುದು ಇತ್ಯಾದಿಗಳ ಸಮಸ್ಯೆಗಳನ್ನು ಮತ್ತು ಕೊರತೆಗಳನ್ನು ನೀಗಿಸಿಕೊಳ್ಳಲೇ ಬಾಲ್ ಪೆನ್ನುಗಳು ಅಸ್ತಿತ್ವಕ್ಕೆ ಬಂದವು. ಆದರೆ ಅದೇಕೋ ಕೆಲವು ಸಾಂಪ್ರದಾಯಿಕ ಬರವಣಿಗೆಯ ಪ್ರಭಾವದಲ್ಲಿರುವವರು ಈಗಲೂ ಬಾಲ್ ಪೆನ್ನನ್ನು ಒಪ್ಪುವುದಿಲ್ಲ. ಹ್ಯಾಂಡ್ ರೈಟಿಂಗ್ ಹಾಳಾಗಿ ಬಿಡುತ್ತೆ ಎಂಬ ವಾದ ಅವರದು. ಬರವಣಿಗೆ ಸುಂದರವಾಗಿರುವುದಕ್ಕೆ ಬಾಲ್ ಪೆನ್ನು ಅಥವಾ ಇಂಕ್ ಪೆನ್ನು ಎಂಬ ಬರವಣಿಗೆಯ ಉಪಕರಣಗಳು ಕಾರಣ ಎಂದಿಗೂ ಅಲ್ಲ. ಅದು ಬರೆಯುವವರ ರೂಢಿಯ ಮೇಲೆ ಮಾತ್ರವೇ ಆಗಿರುತ್ತದೆ. ಬಾಲ್ ಪೆನ್ ಬರಣಿಗೆಯ ಸೌಂದರ್ಯವನ್ನು ಹಾಳು ಮಾಡುತ್ತದೆ ಎಂಬುದು ಒಂದು ಮಿಥ್. ಮಗುವು ಅಪ್ ಡೇಟ್ ಆಗಬೇಕೆಂದರೆ, ಶಿಕ್ಷಕರು ಮತ್ತು ಪೋಷಕರು ಅಪ್‌ಡೇಟ್ ಆಗಬೇಕು. ನಮ್ಮ ದೇಶದ ಸಮಸ್ಯೆ ಇರುವುದೇ ಇಲ್ಲಿ.

ಕೆಲವರ ವಾದವೆಂದರೆ, ಬರೆಯುವುದರಿಂದ ಮಕ್ಕಳ ನರಮಂಡಲದ ಮೇಲೆ ಪ್ರಭಾವ ಬೀರುತ್ತವೆ. ಜೊತೆಗೆ ಅವರಿಗೆ ಅಧ್ಯಯನಶೀಲತೆಯು ಹೆಚ್ಚುತ್ತದೆ ಎಂಬುದು. ಆದರೆ, ಕೆಲವು ಅಧ್ಯಯನಗಳು ಹೊರ ಹಾಕಿದ ಅಂಶವೆಂದರೆ, ಚೆನ್ನಾಗಿ ಬರೆಯುವ ಮಕ್ಕಳ ಮತ್ತು ಟೈಪಿಸುವ ಮಕ್ಕಳ ಬುದ್ಧಿಮತ್ತೆಯಲ್ಲಿ ಮತ್ತು ಅಧ್ಯಯನ ಶೀಲತೆಯಲ್ಲಿ ಅವರ ಬರವಣಿಗೆಯ ಅಥವಾ ಟೈಪಿಸುವ ಯಾವುದೇ ಪ್ರಭಾವವು ಇರುವುದಿಲ್ಲ. ಮುಖ್ಯವಾಗಿ ಮಗುವು ಯಾವುದೇ ವಿಶೇಷ ಶ್ರಮವಿಲ್ಲದೇ ಅಕ್ಷರಗಳನ್ನು ಬರೆಯಬೇಕು. ಅಷ್ಟಕ್ಕೆ ಎಷ್ಟು ನೆರವಾಗಬೇಕೋ ಅಷ್ಟು ನೆರವನ್ನು ಮತ್ತು ತರಬೇತಿಯನ್ನು ಶಿಕ್ಷಕರು ಮತ್ತು ಪೋಷಕರು ಕೊಡಬೇಕು. ಬರವಣಿಗೆ ಬೇಕು ನಿಜ. ಆದರೆ ಎಷ್ಟು ಬೇಕು? ಯಾವ ಬಗೆಯ ಅಕ್ಷರಗಳನ್ನು ಅವರು ಬರೆಯುವುದನ್ನು ಓದುವುದನ್ನು ರೂಢಿ ಮಾಡಿಕೊಳ್ಳಬೇಕು ಎಂಬುದನ್ನೂ ಕೂಡಾ ನಾವು ಗಮನಿಸಬೇಕಾದಂತಹ ವಿಷಯ. ಮಕ್ಕಳು ತಮ್ಮ ಶಾಲಾ ದಿನಗಳಲ್ಲಿ ಅಥವಾ ಕಲಿಕೆಯ ಅವಧಿ ಯಲ್ಲಿ ನೋಟ್ಸ್ ತೆಗೆದುಕೊಳ್ಳಲು ಅಥವಾ ಚಾರ್ಟ್ಸ್ ಮಾಡಲು ಇತ್ಯಾದಿ ಕಾರಣಗಳಿಗೆ ಬರವಣಿಗೆಯನ್ನು ಅವಲಂಬಿಸಬೇಕಾಗುತ್ತದೆ. ಆದರೆ ಬರುಬರುತ್ತಾ ಮುಂದೆ ಸಹಿ ಮಾಡಲು, ಅಪ್ಲಿಕೇಶನ್ ಫಾರ್ಮ್ ತುಂಬಲು, ಅಂಗಡಿಗೆ ಪಟ್ಟಿ ಮಾಡಲು, ಬ್ಯಾಂಕಿನಲ್ಲಿ ಚಲನ್ ಬರೆಯಲು, ಚೆಕ್ ಬರೆಯಲು, ತಕ್ಷಣಕ್ಕೆ ಏನೋ ಮೆಸೇಜ್ ಬರೆದಿಡಲಷ್ಟೇ ಬರವಣಿಗೆ ಮೀಸಲಾಗಿಬಿಡುತ್ತದೆ. ಕಾಗದವನ್ನು ಮತ್ತು ಸಮಯವನ್ನೂ ಉಳಿಸಲು ಟೈಪಿಂಗ್‌ಗೇ ಮೊರೆಹೋಗುವುದು ಅನಿವಾರ್ಯವಾಗುತ್ತದೆ. ಆದರೂ ಕಲಿಕೆಯ ಸಮಯದಲ್ಲಿ ಬರವಣಿಗೆ ಬೇಕು? ಆದರೆ ಅದು ಹೇಗಿರಬೇಕು ಎಂಬುದನ್ನು ಮುಂದೆ ನೋಡೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)