varthabharthi

ಸಿನಿಮಾ

ಐ ಲವ್ ಯೂ: ನೈತಿಕ, ಅನೈತಿಕ ಮತ್ತು ಧಾರ್ಮಿಕ..!

ವಾರ್ತಾ ಭಾರತಿ : 16 Jun, 2019

ಮದುವೆಯ ಬಳಿಕ ‘ಕುಟುಂಬ’ ಎನ್ನುವ ರಿಮೇಕ್ ಸಿನೆಮಾದಲ್ಲಿ ನಟಿಸಿ ಉಪೇಂದ್ರ ಕೌಟುಂಬಿಕ ಪ್ರೇಕ್ಷಕರಿಗೆ ಪ್ರಿಯರಾಗಿ ಬದಲಾಗಿದ್ದರು. ಉಪ್ಪಿಯ ಈ ಬದಲಾವಣೆಯನ್ನೇ ನಿರ್ದೇಶಕ ಆರ್. ಚಂದ್ರು ತಮ್ಮ ಸಿನೆಮಾದ ನಾಯಕನ ಮೂಲಕ ತೋರಿಸಿದ್ದಾರೆ ಎಂದರೆ ಅಚ್ಚರಿ ಪಡಬಾರದು.

ಟ್ರೇಲರ್ ನೋಡಿದಾಗಲೇ ಇದು ಒಂದು ಉಪೇಂದ್ರ ಶೈಲಿಯ ಚಿತ್ರ ಎಂದು ಸುದ್ದಿಯಾಗಿತ್ತು. ಹಾಗಂತ ಅನಿಸಲು ಕಾರಣವಾಗಿದ್ದು, ಚಿತ್ರದಲ್ಲಿ ಉಪೇಂದ್ರರ ಹಿಂದಿನ ಚಿತ್ರಗಳ ಸಂಭಾಷಣೆಗಳನ್ನು ಬಳಸಿಕೊಂಡಿರುವುದಕ್ಕೆ ಹೊರತು ಬೇರೇನಲ್ಲ. ಆ ಸಂಭಾಷಣೆಗಳು ಯಾಕೆ ಬಳಸಲ್ಪಟ್ಟಿವೆ ಎನ್ನುವ ಕುತೂಹಲವೇ ಉಪೇಂದ್ರರ ಎಲ್ಲ ಅಭಿಮಾನಿಗಳನ್ನು ಥಿಯೇಟರ್‌ಗೆ ಬರುವಂತೆ ಮಾಡಿವೆ. ಆದರೆ ಹಾಗೆ ಬಂದವರಿಗೆ ಅಲ್ಲಿ ಹಳೆಯ ‘ಎ’ ಚಿತ್ರದ ಉಪೇಂದ್ರನೇ ಕಾಣಬಹುದು. ಯಾಕೆಂದರೆ ಇಲ್ಲಿ ಉಪ್ಪಿ ನಿರ್ವಹಿಸಿರುವ ಸಂತೋಷ್ ನಾರಾಯಣ್ ಪಾತ್ರ ಪ್ರೀತಿ ಎನ್ನುವುದು ಪುಸ್ತಕದ ಬದನೆಕಾಯಿ ಅಂತಾನೆ, ಕಾಮದ ಕಾರ್ಯಸಾಧನೆಗೊಂದು ಮುನ್ನುಡಿಯೇ ಪ್ರೇಮ ಎನ್ನುವುದು ಆತನ ವಾದವಾಗಿರುತ್ತದೆ. ಮಧ್ಯಂತರದ ತನಕ ಇದೇ ಕತೆ ನಡೆಯುವುದರಿಂದ ಚಾಂದಿನಿಯ ಬದಲು ರಚಿತಾ ಇದ್ದಾರೆ, ಅಷ್ಟೇ ವ್ಯತ್ಯಾಸ ಎನಿಸಿಬಿಡುತ್ತದೆ. ಆದರೆ ಅದು ಫ್ಲಾಷ್ ಬ್ಯಾಕ್ ಸನ್ನಿವೇಶ ಮಾತ್ರವಾಗಿರುವುದರಿಂದ ವರ್ತಮಾನದಲ್ಲಿ ಏನು ನಡೆಯುತ್ತದೆ ಎನ್ನುವ ಕಾತರತೆ ಪ್ರೇಕ್ಷಕರಲ್ಲಿ ಉಳಿದಿರುತ್ತದೆ.

 ಪ್ರೇಕ್ಷಕರ ನಿರೀಕ್ಷೆಗಳು ಉಪೇಂದ್ರ ಅವರ ಬಗ್ಗೆ ಆಗಿದ್ದರೆ ದ್ವಿತೀಯಾರ್ಧದಲ್ಲಿ ಕೂಡ ನಿರಾಶೆ ಕಟ್ಟಿಟ್ಟ ಬುತ್ತಿ. ಯಾಕೆಂದರೆ ಅದು ಸಂಪೂರ್ಣವಾಗಿ ಆರ್. ಚಂದ್ರು ಶೈಲಿಯಲ್ಲಿ ಸಾಗುತ್ತದೆ. ಸಂತೋಷ್ ನಾರಾಯಣ್ ಎನ್ನುವ ನಾಯಕನಾಗಿ ಆ ಪಾತ್ರಕ್ಕೆ ಏನೆಲ್ಲ ಬೇಕೋ ಅದೆಲ್ಲವನ್ನು ಕೂಡ ಸಮರ್ಪಣಾ ಭಾವದಿಂದ ನೀಡಿದ್ದಾರೆ ನಾಯಕ ಉಪೇಂದ್ರ. ಕಾಲೇಜ್ ಸುಪರ್ ಸೀನಿಯರ್ ಆಗಿ ತೋರಿಸುವ ತುಂಟತನ, ಸಂಸಾರದಲ್ಲಿ ಒಲ್ಲದ ಪತ್ನಿಯತ್ತ ತೋರುವ ಅಸಡ್ಡೆ ಮಾತ್ರವಲ್ಲ ಡ್ಯಾನ್ಸ್, ಫೈಟು, ಬಾಡಿ ಬಿಲ್ಡಿಂಗ್ ಎಲ್ಲ ವಿಚಾರದಲ್ಲೂ ಅವರು ನೂರಕ್ಕೆ ನೂರರಷ್ಟು ಪರ್ಫೆಕ್ಟ್ ಎನಿಸುತ್ತಾರೆ. ಆದರೆ ಅವರ ವರ್ತನೆಗಳೇ ಪರ್ಫೆಕ್ಟ್ ಆಗಿರುವುದಿಲ್ಲ ಎಂದು ತೋರಿಸಿಕೊಡುವ ಕತೆ ಮಾತ್ರ ಉಪ್ಪಿಯ ಸ್ಟಾರ್ ಇಮೇಜ್ ಗೆ ಧಕ್ಕೆ ಮೂಡಿಸುವಂತಿದೆ. ಹಾಗಾಗಿ ಸಹಜವಾಗಿ ಇಬ್ಬರು ನಾಯಕಿಯರು ಕೂಡ ಹೈಲೈಟಾಗಿದ್ದಾರೆ. ರಚಿತಾ ರಾಮ್ ಅವರಿಗೆ ಧಾರ್ಮಿಕ ಎನ್ನುವ ಪಾತ್ರ ಅಭಿನಯ ಸಾಧ್ಯತೆಗಳಿಗೆ ಅವಕಾಶ ನೀಡಿದೆ. ಮುಗ್ಧೆಯಂತೆ, ಬಳಿಕ ತುಂಟಿಯಂತೆ ಮತ್ತು ಜವಾಬ್ದಾರಿಯುತ ಸಮಚಿತ್ತೆಯ ಹಾಗೆ ಅವರು ತೋರಿಸಿರುವ ವೈವಿಧ್ಯತೆಯನ್ನು ಮೆಚ್ಚಬಹುದು. ಸಂಪ್ರದಾಯಕ್ಕೆ ಮೌಲ್ಯ ನೀಡುವ ಪತ್ನಿಯಾಗಿ ಸೋನುಗೌಡ ಸೋನೆ ಮಳೆ! ಇತ್ತೀಚೆಗೆ ಯಶಸ್ವಿ ಚಿತ್ರಗಳ ಭಾಗವಾಗುತ್ತಿರುವ ಪಿ.ಡಿ. ಸತೀಶ್ ಇಲ್ಲಿಯೂ ನಾಯಕನ ಸ್ನೇಹಿತನ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ಬೆರಳೆಣಿಕೆಯ ದೃಶ್ಯಗಳಲ್ಲಿ ಕಾಣಿಸಿಕೊಂಡರೂ, ನಾಯಕನ ತಂದೆಯಾಗಿ ಹೊನ್ನವಳ್ಳಿ ಕೃಷ್ಣ ಮನದೊಳಗೆ ಅಚ್ಚೊತ್ತುವ ಪಾತ್ರ ಮಾಡಿದ್ದಾರೆ. ಛಾಯಾಗ್ರಹಣ ಚಂದ. ಚಿತ್ರದ ಹಿನ್ನೆಲೆ ಸಂಗೀತ ಮತ್ತು ಹಾಡೊಂದಕ್ಕೆ ಕಂಠವಾಗಿ ಗುರುಕಿರಣ್ ಮಿಂಚಿದ್ದಾರೆ. ಸೋನು ಗೌಡ ಅವರನ್ನು ಇಂಟ್ರಡ್ಯೂಸ್ ಮಾಡುವ ಗೀತೆ ‘ಪೂಜಿಸಲೆಂದೇ ಹೂಗಳ ತಂದೇ’ ಹಾಡನ್ನು ಥಟ್ಟನೆ ನೆನಪಿಸಿ ಮುಂದೆ ಸಾಗುತ್ತದೆ.
ಚಿತ್ರದ ಕಾನ್ಸೆಪ್ಟ್ ಹೊಸದೇನಲ್ಲ. ಟೈಟಲ್ ಕಾರ್ಡ್‌ನಲ್ಲಿ ಖುದ್ದು ನಿರ್ದೇಶಕರೇ ತೋರಿಸಿರುವ ಹಾಗೆ ಪ್ರೀತಿಸಿದ ಹುಡುಗಿ ಮತ್ತೊಬ್ಬನ ಪಾಲಾಗಿ ನಾಯಕ ಕೊರಗುವ ಎಷ್ಟೋ ಸಿನೆಮಾಗಳು ಬ್ಲ್ಯಾಕ್ ಆ್ಯಂಡ್ ವೈಟ್ ಕಾಲದಿಂದಲೇ ನಮ್ಮಲ್ಲಿ ಬಂದಿವೆ. ಆದರೆ ಆನಂತರ ಏನಾಗುತ್ತದೆ ಎನ್ನುವ ಕುತೂಹಲವೇ ಚಿತ್ರದ ಜೀವಾಳ. ಆ ತಿರುವಿನಲ್ಲಿ ಪ್ರೇಕ್ಷಕ ಒಬ್ಬ ಸ್ಟಾರ್‌ನನ್ನು ಕಾಣಲು ಬಯಸಿದರೆ ಅದು ಪ್ರೇಕ್ಷಕರ ಸೋಲು! ಯಾಕೆಂದರೆ ಧಾರ್ಮಿಕ ಎನ್ನುವ ಹೆಸರಲ್ಲೇ ಚಂದ್ರು ನಾಯಕಿಯ ಗುಣವನ್ನು ಮಾರ್ಮಿಕವಾಗಿ ಹೇಳಿದ್ದಾರೆ. ಹಾಗಾಗಿ ಇದೊಂದು ನೈತಿಕ ಸಾಂಸಾರಿಕ ಚಿತ್ರವಾಗಿ ಉಳಿದುಕೊಂಡಿದೆ.

ತಾರಾಗಣ: ಉಪೇಂದ್ರ, ರಚಿತಾರಾಮ್,
ಸೋನು ಗೌಡ
ನಿರ್ದೇಶಕ, ನಿರ್ಮಾಪಕ: ಆರ್. ಚಂದ್ರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)