ದುಬೈ: ಶಾಲಾ ಬಸ್ಸಿನಲ್ಲಿ ಒಬ್ಬಂಟಿಯಾಗಿದ್ದ ಭಾರತ ಮೂಲದ ಬಾಲಕ ಮೃತ್ಯು
ದುಬೈ, ಜೂ.16: ಶಾಲಾ ಬಸ್ಸಿನಲ್ಲೇ ಉಳಿದುಕೊಂಡಿದ್ದ ಭಾರತ ಮೂಲದ 6 ವರ್ಷದ ಬಾಲಕನೊಬ್ಬ ಹಲವು ಗಂಟೆಗಳ ಕಾಲ ಒಬ್ಬಂಟಿಯಾಗಿದ್ದು, ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಕೇರಳ ಮೂಲದ ಮುಹಮ್ಮದ್ ಫರ್ಹಾನ್ ಫೈಝಲ್ ಎಂಬ ಬಾಲಕ ವಿದ್ಯಾರ್ಥಿಯಾಗಿದ್ದ. ಶಾಲಾ ಬಸ್ ಹತ್ತಿದ್ದ ಈತ ಬಸ್ಸಿನಲ್ಲೇ ನಿದ್ದೆ ಮಾಡಿದ್ದ. ಎಲ್ಲ ಮಕ್ಕಳು ಬೆಳಿಗ್ಗೆ 8ರ ಸುಮಾರಿಗೆ ಇಳಿದು ಶಾಲೆಗೆ ಹೋದ ಬಳಿಕ ಆತ ಬಸ್ಸಿನಲ್ಲಿ ಒಬ್ಬಂಟಿಯಾದ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಮಧ್ಯಾಹ್ನ 3ರವೇಳೆಗೆ ಬಾಲಕ ಮೃತಪಟ್ಟಿರುವ ಬಗ್ಗೆ ದೂರು ಬಂದಿದೆ ಎಂದು ದುಬೈ ಪೊಲೀಸರು ಹೇಳಿದ್ದಾರೆ.
"ಮಕ್ಕಳನ್ನು ಮರಳಿ ಮನೆಗೆ ಕರೆದೊಯ್ಯಲು ಚಾಲಕ ಬಸ್ಸು ತೆರೆದಾಗ ಈತ ಮೃತಪಟ್ಟಿರುವುದು ಕಂಡುಬಂದಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ. ಈತನ ಪೋಷಕರು ದೀರ್ಘಕಾಲದಿಂದ ದುಬೈ ನಿವಾಸಿಗಳು. ತಂದೆ ಫೈಝಲ್, ಕೇರಳ ಹಾಗೂ ದುಬೈನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
Next Story