varthabharthi

ಆರೋಗ್ಯ

ಎಚ್ಚರಿಕೆ, ಸಾಮಾಜಿಕ ಮಾಧ್ಯಮಗಳ ನಿರಂತರ ಬಳಕೆ ಈ ಸಮಸ್ಯಗಳಿಗೆ ಕಾರಣವಾಗಬಹುದು…

ವಾರ್ತಾ ಭಾರತಿ : 16 Jun, 2019

ಯುವಜನರು ಗಂಟೆಗಟ್ಟಲೆ ತಮ್ಮ ಸ್ಮಾರ್ಟ್‌ ಫೋನ್‌ಗಳಿಗೆ ಅಂಟಿಕೊಂಡಿರುವುದು ಸಾಮಾಜಿಕ ಕಳವಳವನ್ನು ಹೆಚ್ಚಿಸುತ್ತಿದೆ. ಫೋನ್ ರಿಂಗ್ ಅಥವಾ ವೈಬ್ರೇಟ್ ಆದಾಗ,ನೋಟಿಫಿಕೇಷನ್ ಸಂಕೇತ ಕಾಣಿಸಿಕೊಂಡಾಗ ಇರುವ ಕೆಲಸವನ್ನೆಲ್ಲ ಬಿಟ್ಟು ಫೋನ್ ಕೈಗೆತ್ತಿಕೊಳ್ಳುತ್ತಾರೆ. ಕಾಯುವ ವ್ಯವಧಾನವೂ ಇರುವುದಿಲ್ಲ. ಇದು ಸಾಮಾಜಿಕ ಮಾಧ್ಯಮಗಳು ಮತ್ತು ಸ್ಮಾರ್ಟ್‌ಫೋನ್‌ಗಳು ನಮ್ಮ ಮೇಲೆ ಬೀರಿರುವ ಪ್ರಭಾವ. ಮಾನಸಿಕ ಸ್ಥಿತಿ ಮತ್ತು ಖಿನ್ನತೆ ಸಾಂಕ್ರಾಮಿಕವೆನ್ನಲಾಗಿದ್ದು,ಚಿತ್ರಗಳು ಅಥವಾ ಇತರರ ಸಂದೇಶಗಳನ್ನೂ ನೋಡಿದರೂ ವರ್ಗಾವಣೆಗೊಳ್ಳುತ್ತವೆ. ಸಾಮಾಜಿಕ ಮಾಧ್ಯಮಗಳು ಇಂತಹ ಮಾನಸಿಕ ಸ್ಥಿತಿಗಳನ್ನು ಹರಡುವುದರಲ್ಲಿ ಪ್ರಭಾವಿಯಾಗಿವೆ ಎಂದು ಇತ್ತೀಚಿನ ಅಧ್ಯಯನವೊಂದು ಎಚ್ಚರಿಸಿದೆ.

ಸಾಮಾಜಿಕ ಮಾಧ್ಯಮ ಮತ್ತು ಅದರ ಪರಿಣಾಮಗಳು

ನಿಮ್ಮ ಸಾಮಾಜಿಕ ಮಾಧ್ಯಮ ಪಟ್ಟಿಯಲ್ಲಿರುವ ಭಾವೋದ್ವೇಗದ ಅನುಭವಗಳು ನಿಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಬಲ್ಲವು. ನಾವು ಕೆಲವೊಮ್ಮೆ ಸೆಲೆಬ್ರಿಟಿಗಳ ಪೋಟೊಗಳನ್ನು ನೋಡಿದರೂ ಪ್ರಭಾವಕ್ಕೊಳಗಾಗುತ್ತೇವೆ. ಈ ವಿಧದಲ್ಲಿ ಭಾವೋದ್ವೇಗಗಳು ಮತ್ತು ಚಿಂತನಾ ಪ್ರಕ್ರಿಯೆಗಳು ಸಾಮಾಜಿಕ ಮಾಧ್ಯಮಗಳ ವೇದಿಕೆಯ ಮೂಲಕ ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ರವಾನಿಸಲ್ಪಡುತ್ತವೆ. ‘ಸ್ನೇಹಿತರ ಸ್ನೇಹಿತರನ್ನು’ ಹೊಂದುವ ಪರಿಕಲ್ಪನೆಯು ಹಲವಾರು ಮನಸ್ಸುಗಳಿಗೆ ಹಾನಿಯನ್ನುಂಟು ಮಾಡಬಲ್ಲದು. ನಿಮ್ಮ ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಮಯವನ್ನು ಕಳೆಯುವುದು ನಿಮ್ಮನ್ನು ಪ್ರತ್ಯೇಕವಾಗಿಸುತ್ತವೆ ಮತ್ತು ಖಿನ್ನತೆಯನ್ನು ಹೆಚ್ಚಿಸುತ್ತವೆ.

ಮನಸ್ಥಿತಿಯಲ್ಲಿ ಬದಲಾವಣೆಗಳು ಮತ್ತು ಒಂಟಿಯಾಗಿರುವ ನಿರಂತರ ಅಗತ್ಯ,ಹೊಸ ಗೆಳೆಯರನ್ನು ಮಾಡಿಕೊಳ್ಳಲು ಅಸಾಮರ್ಥ್ಯ,ಇತರರೊಡನೆ ಸಂವಾದಿಸುವುದಲ್ಲಿ ಕಷ್ಟ,ಹೃದ್ರೋಗಗಳಿಗೆ ಕಾರಣವಾಗುವ ಒತ್ತಡ, ಹಾರ್ಮೋನ್‌ಗಳ ಮಟ್ಟದಲ್ಲಿ ಏರಿಕೆ, ಸಾರ್ವಜನಿಕ ಸಮಾವೇಶಗಳಲ್ಲಿ ಸಾಮಾಜಿಕ ಗಮನದಿಂದ ಅಹಿತಕರ ಭಾವನೆ ಇತ್ಯಾದಿಗಳು ವ್ಯಕ್ತಿಯ ಮೇಲೆ ಒಂಟಿತನ ಮತ್ತು ಖಿನ್ನತೆಗಳು ಬೀರುವ ಪರಿಣಾಮಗಳಾಗಿವೆ.

ತಂತ್ರಜ್ಞಾನಕ್ಕೆ ದಾಸರಾಗುವುದು ಒಂದು ಅಮಲು

ನಾವು ಮಹತ್ವದ ಸಭೆಗಳು ಅಥವಾ ಸಮಾವೇಶಗಳಲ್ಲಿ ಭಾಗವಹಿಸಿದ್ದಾಗ ನಮ್ಮ ಗಮನವನ್ನು ನಮ್ಮ ಫೋನ್‌ಗಳತ್ತ ಹರಿಸಲು ವೈಬ್ರೇಷನ್‌ಗಳು,ನೋಟಿಫಿಕೇಷನ್‌ಗಳು,ಇತರ ಅಲರ್ಟ್‌ಗಳು ಸಾಕು. ಫೋನ್‌ಗಳ ಸಮೀಪವೇ ಇರಬೇಕು ಎಂಬ ನಿರಂತರ ಅಗತ್ಯವು ಜನರಲ್ಲಿ ಖಿನ್ನತೆಗೆ ಕಾರಣವಾಗಬಲ್ಲದು. ನಮ್ಮ ಮೆದುಳು ಸದಾ ಕ್ರಿಯಾಶೀಲವಾಗಿರುತ್ತದೆ ಮತ್ತು ಒಂದು ಸಣ್ಣ ಸಂಚಲನೆಯೂ ಕೂಡಲೇ ಗಮನವನ್ನು ಪಡೆದುಕೊಳ್ಳುತ್ತದೆ. ಇದು ಸ್ಮಾರ್ಟ್‌ಫೋನ್‌ಗಳ ಮೇಲೆ ನಮ್ಮ ಅವಲಂಬನೆಗೆ ಒಂದು ಕಾರಣವಾಗಬಹುದು.

ನಾವು ಅಗತ್ಯ ಕರೆಗಳಿಗಾಗಿ ಕಾಯುತ್ತಿದ್ದಾಗ ರಿಂಗ್ ಆಗುವ ಬಗ್ಗೆ ಉದ್ವೇಗದಲ್ಲಿರುತ್ತೇವೆ. ನಿರೀಕ್ಷಿಸಿದ್ದ ಮುಖ್ಯವಾದ ಕರೆ ಬರದಿದ್ದಾಗ ಶರೀರವು ಹಲವಾರು ರೀತಿಗಳಲ್ಲಿ ಪ್ರತಿಕ್ರಿಯಿಸಲು ಆರಂಭಿಸುತ್ತದೆ. ಮನಸ್ಸು ಯೋಚನೆಯಲ್ಲಿ ತೊಡಗುತ್ತದೆ ಮತ್ತು ಅತಿಯಾದ ಯೋಚನೆಗೆ ಶಕ್ತಿಯು ವ್ಯಯವಾಗುತ್ತದೆ. ಇದು ನಮ್ಮ ಮನಸ್ಸು ಹಾಗೂ ಶರೀರದ ದಣಿವಿಗೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.

ಕುಟುಂಬಗಳಲ್ಲಿ ಸಂಘರ್ಷ

ಹೆತ್ತವರು ಮತ್ತು ಮಕ್ಕಳ ನಡುವಿನ ಸಂಘರ್ಷಗಳ ಪೈಕಿ ಸುಮಾರು ಶೇ.30ರಷ್ಟು ಸ್ಮಾರ್ಟ್‌ಫೋನ್‌ಗಳ ಕಾರಣದಿಂದ ಸಂಭವಿಸುತ್ತವೆ ಎಂದು ಇತ್ತೀಚಿನ ಅಧ್ಯಯನವೊಂದು ಬೆಟ್ಟು ಮಾಡಿದೆ. ಮಕ್ಕಳು ಸಾಮಾಜಿಕ ಮಾಧ್ಯಮಗಳಲ್ಲಿ ಅತಿಯಾಗಿ ತಲ್ಲೀನರಾಗಿದ್ದಾಗ ತಮ್ಮದೇ ಆದ ಕೆಲಸವನ್ನು ಮಾಡುತ್ತಿರುತ್ತಾರೆ. ಇದು ಅವರ ಎಲ್ಲ ಪ್ರಯತ್ನಗಳನ್ನು ಮತ್ತು ಬಿಡುವಿನ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ತಮ್ಮ ಕುಟುಂಬಗಳು ಹಾಗೂ ಹೆತ್ತವರೊಡನೆ ಬೆರೆಯಲು ಸಮಯಾವಕಾಶವನ್ನು ನೀಡುವುದಿಲ್ಲ. ಎಲ್ಲವನ್ನೂ ಗ್ಯಾಜೆಟ್‌ಗಳ ಮೂಲಕ ಮಾಡುವ ಈ ಕಾಲದಲ್ಲಿ ಇಂತಹ ಸಾಧನಗಳು ಮತ್ತು ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ಒಂದು ಮಿತಿಗೊಳಪಡಿಸಿಕೊಂಡು ಬಾಹ್ಯ ಚಟುವಟಿಕೆಗಳಿಗಾಗಿ ಸಮಯವನ್ನು ಮೀಸಲಿಡುವುದು ಮುಖ್ಯವಾಗುತ್ತದೆ.

ಸಂಯಮ ಪ್ರಮುಖ ಪಾತ್ರ ವಹಿಸುತ್ತದೆ

ಸಾಮಾಜಿಕ ಮಾಧ್ಯಮಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ಈ ದಿನಗಳಲ್ಲಿ ಮುಂದಿನ ತಲೆಮಾರನ್ನು ಉದ್ವೇಗ ಮತ್ತು ಸಾಮಾಜಿಕ ಖಿನ್ನತೆಯಿಂದ ರಕ್ಷಿಸಲು ಸಂಯಮವು ಏಕೈಕ ಅಸ್ತ್ರವಾಗಿದೆ.

ಸಾಮಾಜಿಕ ಮಾಧ್ಯಮಗಳ ಗೊಂದಲಗಳಿಂದ ನಿಮ್ಮ ಮನಸ್ಸನ್ನು ಮುಕ್ತಗೊಳಿಸಲು ಇಲ್ಲಿವೆ ಕೆಲವು ಮಾರ್ಗಗಳು.

-ನಿಮ್ಮ ಸ್ನೇಹಿತರನ್ನು ಮುಖತಃ ಭೇಟಿಯಾಗಿ ಅವರೊಡನೆ ಸಮಯ ಕಳೆಯಿರಿ

-ಸಾಮಾಜಿಕ ಮಾಧ್ಯಮಗಳಲ್ಲಿಯ ವಿಷಯಗಳ ಅಂಧಾನುಕರಣೆ ಮತ್ತು ಅವುಗಳನ್ನು ಶೇರ್ ಮಾಡಿಕೊಳ್ಳುವುದರಿಂದ ದೂರವಿರಿ

-ನಿಮಗೆ ಯಾವುದು ಅತ್ಯುತ್ತಮ ಫಲ ನೀಡುತ್ತದೆಯೋ ಅದನ್ನೇ ಅನುಸರಿಸಿ

-ಇನ್ನೊಬ್ಬರ ಬದುಕುಗಳು,ಅವು ಒಳ್ಳೆಯದಿರಲಿ ಅಥವಾ ಕೆಟ್ಟದಿರಲಿ...ನಿಮ್ಮ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಿ

-ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿಧಾನವಾಗಿ ಸೀಮಿತಗೊಳಿಸಿ ಮತ್ತು ವಿಶ್ರಾಂತಿ ಹಾಗೂ ಸ್ವಯಂ ಮನರಂಜನೆಗಾಗಿ ಸಮಯವನ್ನು ತೆಗೆದುಕೊಳ್ಳಿ

-ಸ್ಮಾರ್ಟ್‌ಫೋನ್‌ಗಳಲ್ಲಿ ಗೇಮ್‌ಗಳನ್ನು ಆಡುವ ಬದಲು ವಾಸ್ತವದಲ್ಲಿ ಕ್ರೀಡೆಗಳು,ಇತರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)