varthabharthi

ಕ್ರೀಡೆ

ಪ್ರಧಾನಿ ಇಮ್ರಾನ್ ಖಾನ್ ಸಲಹೆ ಕಡೆಗಣಿಸಿದ ಪಾಕ್ ನಾಯಕ ಸರ್ಫರಾಝ್ ಅಹ್ಮದ್!

ವಾರ್ತಾ ಭಾರತಿ : 16 Jun, 2019

ಮ್ಯಾಂಚೆಸ್ಟರ್, ಜೂ.16: ಭಾರತ ಹಾಗೂ ಪಾಕಿಸ್ತಾನ ಮಧ್ಯೆ ವಿಶ್ವಕಪ್ ಪಂದ್ಯ ಆರಂಭವಾಗಲು ಕೆಲವೇ ಗಂಟೆಗಳ ಮೊದಲು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಟ್ವೀಟ್ ಮೂಲಕ ನೀಡಿದ್ದ ಸಲಹೆಯನ್ನು ಪಾಕ್ ಕ್ರಿಕೆಟ್ ನಾಯಕ ಸರ್ಫರಾಝ್ ಅಹ್ಮದ್ ಕಡೆಗಣಿಸಿ ಅಚ್ಚರಿ ಮೂಡಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿದ್ದ 1992ರ ವಿಶ್ವಕಪ್ ವಿಜೇತ ನಾಯಕ ಖಾನ್, “ಒಂದು ವೇಳೆ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಿ. ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಹಾಗೂ ಬೌಲರ್‌ಗಳನ್ನು ಕಣಕ್ಕಿಳಿಸಿ, ಒತ್ತಡದ ಪರಿಸ್ಥಿತಿಯಲ್ಲಿ ಆಡಲು ಪರದಾಡುವ ಆಟಗಾರರನ್ನು ಆಡುವ ಬಳಗದಿಂದ ಕೈಬಿಡಿ” ಎಂದು ಸಲಹೆಗಳನ್ನು ನೀಡಿದ್ದರು.

ಆದರೆ, ಟಾಸ್ ಜಯಿಸಿದ ಅಹ್ಮದ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಅಹ್ಮದ್ ನಿರ್ಧಾರ ತಿರುಗುಬಾಣವಾಗಿದ್ದು, ಮೊದಲು ಬ್ಯಾಟಿಂಗ್ ಮಾಡಿರುವ ಭಾರತ ರೋಹಿತ್ ಶರ್ಮಾರ ಶತಕ, ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿದೆ.

ಪಾಕ್ ತಂಡಕ್ಕೆ ಶುಭಾಶಯ ಕೋರಿದ್ದ ಖಾನ್, “ಭಾರತ ಪಂದ್ಯದಲ್ಲಿ ಫೇವರಿಟ್ ತಂಡವಾಗಿದೆ. ಆದರೆ, ಪಾಕಿಸ್ತಾನ ತಂಡ ಕೊನೆಯ ಎಸೆತದ ತನಕ ಹೋರಾಟ ನೀಡಬೇಕು. ಯಾವುದೇ ರೀತಿಯ ಫಲಿತಾಂಶವನ್ನು ನಿಜವಾದ ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸಬೇಕೆಂದು” ಟ್ವೀಟ್ ಮಾಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)