varthabharthi

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಕಟ್ಟೆಚ್ಚರ

‘ಸ್ಫೋಟಕ ವಾಹನ ’ದಾಳಿಯ ಬಗ್ಗೆ ಭಾರತ, ಅಮೆರಿಕಕ್ಕೆ ಪಾಕಿಸ್ತಾನದಿಂದ ಮಾಹಿತಿ

ವಾರ್ತಾ ಭಾರತಿ : 16 Jun, 2019

ಹೊಸದಿಲ್ಲಿ,ಜೂ.16: ಪುಲ್ವಾಮಾ ಜಿಲ್ಲೆಯಲ್ಲಿ,ಬಹುಶಃ ಅವಂತಿಪುರದ ಬಳಿ ಸಂಭಾವ್ಯ ಭಯೋತ್ಪಾದಕ ದಾಳಿಯ ಕುರಿತು ಪಾಕಿಸ್ತಾನವು ಭಾರತ ಮತ್ತು ಅಮೆರಿಕಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದೆ ಎನ್ನಲಾಗಿದ್ದು, ಶ್ರೀನಗರದಲ್ಲಿಯ ಹಿರಿಯ ಭದ್ರತಾ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ಈ ವಿಷಯನ್ನು ದೃಢಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಇಡೀ ಭದ್ರತಾ ವ್ಯವಸ್ಥೆಯು ಕಟ್ಟೆಚ್ಚರದಲ್ಲಿದೆ.

  ಉಗ್ರರು ಸುಧಾರಿತ ಸ್ಫೋಟಕ ಸಾಧನ(ಐಇಡಿ)ವನ್ನು ಅಳವಡಿಸಿರುವ ವಾಹನವನ್ನು ಬಳಸಿ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಮಾಹಿತಿಯನ್ನು ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ನೀಡಿದೆ. ಪಾಕಿಸ್ತಾನವು ಅಮೆರಿಕಕ್ಕೂ ಈ ಮಾಹಿತಿಯನ್ನು ನೀಡಿದ್ದು,ಅದೂ ನಮ್ಮೊಂದಿಗೆ ಈ ಮಾಹಿತಿಯನ್ನು ಹಂಚಿಕೊಂಡಿದೆ. ಹೀಗೆ ಈ ಮಾಹಿತಿಯು ನಮಗೆ ನೇರವಾಗಿ ಮತ್ತು ಅಮೆರಿಕದ ಮೂಲಕವೂ ತಲುಪಿದೆ ಎಂದು ಅಧಿಕಾರಿ ತಿಳಿಸಿದರು.

ಉಗ್ರರು ಝಾಕಿರ್ ಮೂಸಾನ ಹತ್ಯೆಗೆ ಪ್ರತೀಕಾರವಾಗಿ ಈ ದಾಳಿಯನ್ನು ಯೋಜಿಸುತ್ತಿರುವಂತಿದೆ ಎಂದು ಪಾಕಿಸ್ತಾನವು ತಿಳಿಸಿದೆ ಎಂದರು.

ಮೇ 2017ರಲ್ಲಿ ಹಿಝ್ಬುಲ್ ಮುಜಾಹಿದೀನ್‌ನಿಂದ ಪ್ರತ್ಯೇಕಗೊಂಡು ಕಾಶ್ಮೀರದಲ್ಲಿ ಅಲ್ ಖೈದಾ ನಂಟಿನ ಅನ್ಸಾರ್ ಘಝಾವತುಲ್ ಹಿಂದ್ ಅನ್ನು ಸ್ಥಾಪಿಸಿ,ಅದರ ನೇತೃತ್ವ ವಹಿಸಿದ್ದ ಮೂಸಾ ಭದ್ರತಾ ಪಡೆಗಳು ಕಳೆದ ತಿಂಗಳು ಟ್ರಾಲ್ ಪ್ರದೇಶದಲ್ಲಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟಿದ್ದ. ಪೊಲೀಸರ ಹೇಳಿಕೆಯಂತೆ ಅನ್ಸಾರ್ ಈ ಹಿಂದೆ ಅಂದಾಜು ಒಂದು ಡಝನ್ ಉಗ್ರರನ್ನು ಸದಸ್ಯರನ್ನಾಗಿ ಹೊಂದಿದ್ದು,ಈ ಸಂಖ್ಯೆಯೀಗ 2-3ಕ್ಕಿಳಿದಿದೆ.

ಫೆ.14ರಂದು ಪುಲ್ವಾಮಾ ಜಿಲ್ಲೆಯ ಅವಂತಿಪುರದಿಂದ ಏಳು ಕಿ.ಮೀ.ದೂರದ ಲೇತಪುರದ ಹೆದ್ದಾರಿಯಲ್ಲಿ ನಡೆದಿದ್ದ ಆತ್ಮಾಹುತಿ ಕಾರ್ ಬಾಂಬರ್ ದಾಳಿಯಲ್ಲಿ ಸಿಆರ್‌ಪಿಎಫ್‌ನ 40ಕ್ಕೂ ಹೆಚ್ಚು ಯೋಧರು ಕೊಲ್ಲಲ್ಪಟ್ಟಿದ್ದರು. ಪಾಕಿಸ್ತಾನವು ಸಂಭಾವ್ಯ ದಾಳಿಯ ಕುರಿತು ಮಾಹಿತಿ ನೀಡಿರುವುದನ್ನು ನಾವು ಎರಡು ರೀತಿಗಳಲ್ಲಿ ಅರ್ಥೈಸಿಕೊಂಡಿದ್ದೇವೆ. ಅದು ಈಗಾಗಲೇ ಅಮೆರಿಕದೊಂದಿಗೆ ಮಾಹಿತಿ ಹಂಚಿಕೊಂಡಿರುವುದರಿಂದ ದೊಡ್ಡ ದಾಳಿಯೇನಾದರೂ ನಡೆದರೆ ತಾನು ಆರೋಪಕ್ಕೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳುವುದು ಅದರ ಉದ್ದೇಶವಾಗಿರಬೇಕು ಅಥವಾ ದಾಳಿಯ ಯೋಜನೆಯು,ವಿಶೇಷವಾಗಿ ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿರುವ ಗುಂಪಿನ ಸದಸ್ಯರಿಗೆ ಸಂಬಂಧಿಸಿರುವುದರಿಂದ ತಾನು ಮಾಹಿತಿಯನ್ನು ಪತ್ತೆ ಹಚ್ಚಿದ ಬಳಿಕ ಮೊದಲೇ ನಮಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನವಾಗಿರಬೇಕು ಎಂದು ಅಧಿಕಾರಿ ಹೇಳಿದರು.

ಅಲ್ ಖೈದಾದೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದಕರ ಯಾವುದೇ ಚಟುವಟಿಕೆಗಳನ್ನು ಪಾಕಿಸ್ತಾನವು ಭಿನ್ನವಾಗಿ ನೋಡುತ್ತದೆ ಎನ್ನುವುದೂ ನಮಗೆ ಗೊತ್ತಿದೆ ಎಂದರು.

 ಎಚ್ಚರಿಕೆಯ ಸೂಚನೆಯನ್ನು ಇನ್ನೋರ್ವ ಹಿರಿಯ ಪೊಲೀಸ್ ಅಧಿಕಾರಿಯೂ ದೃಢಪಡಿಸಿದರು. ‘ವಿಶೇಷವಾಗಿ ದಕ್ಷಿಣ ಕಾಶ್ಮೀರದಲ್ಲಿ ನಾವು ಯಾವಾಗಲೂ ಎಚ್ಚರಿಕೆಯಿಂದಲೇ ಇರುತ್ತೇವೆ. ಆದರೆ ಈ ಮಾಹಿತಿಯನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ ’ ಎಂದರು.

 ಪೊಲೀಸರು ಹೇಳುವಂತೆ ಝಾಕಿರ್ ರಶೀದ್ ಭಟ್ ಅಲಿಯಾಸ್ ಝಾಕಿರ್ ಮೂಸಾ ಬುರ್ಹಾನ್ ವಾನಿ ಗುಂಪಿನಲ್ಲಿ ಬದುಕುಳಿದಿದ್ದ ಕೊನೆಯ ಸದಸ್ಯನಾಗಿದ್ದ. ವಾನಿಯನ್ನು ಭದ್ರತಾ ಪಡೆಗಳು 2016,ಜು.8ರಂದು ಹತ್ಯೆಗೈದಿದ್ದವು. ನಂತರ ಮೂಸಾ ಹಿಝ್ಬುಲ್‌ನಿಂದ ಪ್ರತ್ಯೇಕಗೊಂಡು ಅನ್ಸಾರ್ ಅನ್ನು ಸ್ಥಾಪಿಸಿದ್ದ. ಚಂಡಿಗಡದ ಕಾಲೇಜೊಂದರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಮೂಸಾ 2013,ಜುಲೈನಲ್ಲಿ ನಾಪತ್ತೆಯಾಗಿದ್ದು,ಬಳಿಕ ಹಿಝ್ಬುಲ್‌ಗೆ ಸೇರಿದ್ದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)