varthabharthi

ಅಂತಾರಾಷ್ಟ್ರೀಯ

ಅಮೆರಿಕ-ತಾಲಿಬಾನ್ ಮಧ್ಯೆ ಮುಂದಿನ ವಾರ 7ನೆ ಸುತ್ತಿನ ಶಾಂತಿ ಮಾತುಕತೆ

ವಾರ್ತಾ ಭಾರತಿ : 16 Jun, 2019

ಕಾಬೂಲ್, ಜೂ.16: ಅಮೆರಿಕದ ಸಂಧಾನಕಾರರು ಹಾಗೂ ತಾಲಿಬಾನ್ ಬಂಡುಕೋರರ ನಡುವೆ ಏಳನೆ ಸುತ್ತಿನ ಶಾಂತಿ ಮಾತುಕತೆ ಮುಂದಿನ ವಾರ ದೋಹಾದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಗಳ ಹಿಂದೆಗೆತ, ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಭರವಸೆಗಳು, ಕದನ ವಿರಾಮ ಹಾಗೂ ಅಫ್ಘಾನ್ ಸರಕಾರ ಹಾಗೂ ತಾಲಿಬಾನ್ ನಡುವೆ ನೇರ ಮಾತುಕತೆಗೆ ಅವಕಾಶ ಮಾಡಿಕೊಡುವುದು, ಇವು ಅಮೆರಿಕದ ಮುಖ್ಯ ಸಂಧಾನಕಾರ ಖಲೀಲ್‌ ಝಾದ್ ಹಾಗೂ ತಾಲಿಬಾನ್ ಬಂಡುಕೋರರ ನಡುವೆ ಈವರೆಗೆ ನಡೆದ ಆರು ಸುತ್ತುಗಳ ಮಾತುಗಳಲ್ಲಿ ಪ್ರಮುಖವಾದ ವಿಷಯಗಳಾಗಿದ್ದವು.

ಏಳನೇ ಸುತ್ತಿನ ಮಾತುಕತೆಯಲ್ಲಿ ತಾಲಿಬಾನ್ ಬಂಡುಕೋರರಿಗೆ ಅಮೆರಿಕವು ‘‘ಹಲವಾರು ಸದವಕಾಶಗಳನ್ನು’’ ನೀಡಲಿದೆಯೆಂದು ಬಲ್ಲ ಮೂಲಗಳು ತಿಳಿಸಿವೆ.

ಅಮೆರಿಕ ಸರಕಾರದ ಪರವಾಗಿ ಖಲೀಲ್‌ಝಾದ್ ಅವರು ಕಳೆದ ಏಳು ತಿಂಗಳುಗಳಿಂದ ತಾಲಿಬಾನ್ ಬಂಡುಕೋರರ ಜೊತೆಗೆ ಶಾಂತಿ ಮಾತುಕತೆಗಳನ್ನು ನಡೆಸುತ್ತಿದ್ದು, ಹಲವು ಬಾರಿ ಸ್ಥಗಿತಗೊಂಡಿತ್ತು.

 ಆದಾಗ್ಯೂ, ಕಳೆದ ತಿಂಗಳು ಖಲೀಲ್‌ಝಾದ್ ಅವರು ಹೇಳಿಕೆಯೊಂದನ್ನು ನೀಡಿ ತಾಲಿಬಾನ್ ಬಂಡುಕೋರರ ಜೊತೆ ನಡೆಯುತ್ತಿರುವ ಶಾಂತಿ ಮಾತುಕತೆಗಳು ನಿಧಾನವಾಗಿಯಾದರೂ ಸ್ಥಿರವಾದ ಪ್ರಗತಿಯನ್ನು ಕಂಡಿದೆಯೆಂದು ತಿಳಿಸಿದ್ದರು.

ಕಳೆದ ವಾರವೇ ಕಾಬೂಲ್‌ಗೆ ಆಗಮಿಸಿದ್ದ ಖಲೀಲ್‌ಝಾದ್ ಅವರು ಅಫ್ಘಾನ್ ಸರಕಾರದ ನಾಯಕರು ಹಾಗೂ ಪ್ರಮುಖ ಅಫ್ಘಾನ್ ಗಣ್ಯರ ನಡುವೆ ಮಾತುಕತೆ ನಡೆಸಿದ್ದರು.

ದೋಹಾದಲ್ಲಿ ಅಮೆರಿಕ-ತಾಲಿಬಾನ್ ನಡುವೆ ಮಾತುಕತೆ ನಡೆದ ಬಳಿಕ ಮುಂದಿನ ಸಭೆಯು ನಾರ್ವೆಯಲ್ಲಿ ನಡೆಯಲಿದೆಯೆಂದು ಮೂಲಗಳು ತಿಳಿಸಿವೆ.

 ನಾರ್ವೆ ದೇಶವು ಅಫ್ಘಾನಿಸ್ತಾನಕ್ಕೆ ನೆರವಾಗಿರುವ ಸುದೀರ್ಘ ಇತಿಹಾಸವನ್ನು ಹೊಂದಿದೆ ಹಾಗೂ ಸಂಧಾನ ಮಾತುಕತೆಗಳನ್ನು ಏರ್ಪಡಿಸುವಲ್ಲಿ ಅದು ಪರಿಣತಿಯನ್ನು ಹೊಂದಿರುವುದಾಗಿ ಖಲೀಲ್‌ಝಾದ್ ಅವರು ಶುಕ್ರವಾರ ಟ್ವೀಟ್ ಸಂದೇಶವೊಂದರಲ್ಲಿ ತಿಳಿಸಿದ್ದಾರೆ.

ಶಾಂತಿ ಸಭೆಗಳಲ್ಲಿ ಪಾಲ್ಗೊಳ್ಳಲು ತಾಲಿಬಾನ್ ಕೆಲವೊಮ್ಮೆ ಇಚ್ಛೆಯನ್ನು ವ್ಯಕ್ತಪಡಿಸಿದರೆ, ಇನ್ನು ಕೆಲವೊಮ್ಮೆ ನಿರಾಕರಿಸುತ್ತಿದ್ದುದು, ರಾಜಕೀಯ ವಿಶ್ಲೇಷಕರಲ್ಲಿ ಹಾಗೂ ಕೆಲವು ಅಮೆರಿಕ ಸಂಸದರಲ್ಲಿ ಸಂದೇಹಗಳಿಗೆ ಕಾರಣವಾಗಿತ್ತು. ಬಂಡುಕೋರರಿಗೆ ಶಾಂತಿ ಮಾತುಕತೆಗಳಲ್ಲಿ ಆಸಕ್ತಿಯಿಲ್ಲವೆಂಬಂತೆ ತೋರುತ್ತಿದೆಯೆಂದು ಅವರು ಪ್ರತಿಕ್ರಿಯಿಸಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)