varthabharthi

ರಾಷ್ಟ್ರೀಯ

ಬಿಹಾರ: ಉಷ್ಣ ಮಾರುತಕ್ಕೆ ಕನಿಷ್ಠ 44 ಬಲಿ

ವಾರ್ತಾ ಭಾರತಿ : 17 Jun, 2019

 ಪಾಟ್ನಾ, ಜೂ. 15: ಬಿಹಾರದ ಮೂರು ಜಿಲ್ಲೆಗಳಲ್ಲಿ ಶನಿವಾರ ಬೀಸಿದ ಉಷ್ಣ ಮಾರುತಕ್ಕೆ ಕನಿಷ್ಠ 44 ಮಂದಿ ಮೃತಪಟ್ಟಿದ್ದಾರೆ.

ಉಷ್ಣ ಮಾರುತಕ್ಕೆ ಜಿಲ್ಲೆಗಳಾದ ಔರಂಗಾಬಾದ್‌ನಲ್ಲಿ 22, ಗಯಾದಲ್ಲಿ 20 ಹಾಗೂ ನವಾಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವಿಪತ್ತು ನಿಯಂತ್ರಣ ಕೊಠಡಿಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಮೂರು ಜಿಲ್ಲೆಗಳಲ್ಲಿ ಬೀಸಿದ ಉಷ್ಣ ಮಾರುತ ಹಾಗೂ ಬಿಸಿಲಾಘಾತದಿಂದ ಮೃತಪಟ್ಟವರ ಬಗ್ಗೆ ಮುಖ್ಯಮಂತ್ರಿ ನಿತೇಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೃತಪಟ್ಟವರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಸಿಲ ತಾಪ ಹಾಗೂ ಉಷ್ಣ ಮಾರುತ ನಿರ್ವಹಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಬಿಸಿಲ ಆಘಾತಕ್ಕೆ ತುತ್ತಾದವರಿಗೆ ಎಲ್ಲ ರೀತಿಯ ವೈದ್ಯಕೀಯ ನೆರವು ನೀಡುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  ಪಾಟ್ನಾದಲ್ಲಿ ಶನಿವಾರ ಗರಿಷ್ಠ 45.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಳೆದ 10 ವರ್ಷಗಳಲ್ಲಿ ಜೂನ್‌ನಲ್ಲಿ ಇದು ಅತ್ಯಧಿಕ ಉಷ್ಣಾಂಶ. ಗಯಾ ಹಾಗೂ ಬಾಗಲ್ಪುರದಲ್ಲಿ ಕ್ರಮವಾಗಿ ಅತ್ಯಧಿಕ 45.2 ಹಾಗೂ 41.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ನಿರಂತರ ಎರಡು ದಿನಗಳ ಕಾಲ ಗರಿಷ್ಠ ಉಷ್ಣಾಂಶ 4.5 ಡಿಗ್ರಿಗಿಂತ ಹೆಚ್ಚಿದ್ದಾಗ ಉಷ್ಣ ಮಾರುತವೆಂದು ಘೋಷಿಸಲಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 ಶನಿವಾರ ವಾಡಿಕೆಗಿಂತ ಹೆಚ್ಚು ಉಷ್ಣಾಂಶ ಪಾಟ್ನಾದಲ್ಲಿ 9.2 ಡಿಗ್ರಿ ಸೆಲ್ಸಿಯಸ್, ಗಯಾದಲ್ಲಿ 7.6 ಡಿಗ್ರಿ ಸೆಲ್ಸಿಯಸ್ ಹಾಗೂ ಭಾಗಲ್ಪುರದಲ್ಲಿ 5.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

 ಉಷ್ಣ ಮಾರುತ ಬೀಸುತ್ತಿರುವ ಹಿನ್ನೆಲೆಯಲ್ಲಿ ಪಾಟ್ನಾ ನಗರದಲ್ಲಿ ಸರಕಾರಿ ಹಾಗೂ ಖಾಸಗಿ ಶಾಲೆಗಳು ಜೂನ್ 19ರ ವರೆಗೆ ಮುಚ್ಚಲಿವೆ ಎಂದು ಪಾಟ್ನಾ ಜಿಲ್ಲಾ ದಂಡಾಧಿಕಾರಿ ಕುಮಾರ್ ರವಿ ಹೇಳಿದ್ದಾರೆ.

ಮೆದುಳಿನ ಉರಿಯೂತಕ್ಕೆ ಬಲಿಯಾದವರ ಸಂಖ್ಯೆ 84ಕ್ಕೆ ಏರಿಕೆ

ಈ ನಡುವೆ ಬಿಹಾರದ ಮುಝಪ್ಫರ್‌ಪುರ ಜಿಲ್ಲೆಯಲ್ಲಿ ಮೆದುಳಿನ ಉರಿಯೂತಕ್ಕೆ ಮತ್ತೆ ಮೂರು ಮಕ್ಕಳು ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೆದುಳಿನ ಉರಿಯೂತಕ್ಕೆ ಮೃತಪಟ್ಟವರ ಸಂಖ್ಯೆ 84ಕ್ಕೆ ಏರಿಕೆಯಾಗಿದೆ. ಮತ್ತೆ ಮೂರು ಮಕ್ಕಳು ಮೃತಪಟ್ಟಿರುವುದನ್ನು ಶ್ರೀಕೃಷ್ಣಾ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಅಧೀಕ್ಷಕ ಸುನೀಲ್ ಕುಮಾರ್ ಶಾಹಿ ದೃಢಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)