varthabharthi

ಕ್ರೀಡೆ

ವಿಶ್ವಕಪ್: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ವಾರ್ತಾ ಭಾರತಿ : 17 Jun, 2019

ಮ್ಯಾಂಚೆಸ್ಟರ್, ಜೂ.16: ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ 22ನೇ ವಿಶ್ವಕಪ್ ಪಂದ್ಯವನ್ನು ಡಿಎಲ್‌ಎಸ್ ನಿಯಮದ ಪ್ರಕಾರ 89 ರನ್‌ಗಳ ಅಂತರದಿಂದ ಗೆದ್ದುಕೊಂಡಿತು.

ಗೆಲ್ಲಲು 337 ರನ್ ಕಠಿಣ ಸವಾಲು ಪಡೆದ ಪಾಕಿಸ್ತಾನ ತಂಡ 35 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದ್ದಾಗ ಜೋರಾಗಿ ಮಳೆ ಸುರಿಯಿತು. ಪಂದ್ಯ ಮತ್ತೆ ಆರಂಭವಾದಾಗ ಪಾಕ್‌ಗೆ 40 ಓವರ್‌ಗಳಲ್ಲಿ 302 ರನ್ ಪರಿಷ್ಕೃತ ಗುರಿ ನೀಡಲಾಗಿದ್ದು 5 ಓವರ್‌ಗಳಲ್ಲಿ 136 ರನ್ ಗಳಿಸಬೇಕಾದ ಕಠಿಣ ಸವಾಲು ಪಡೆಯಿತು. ಪಾಕ್ ಅಂತಿಮವಾಗಿ 40 ಓವರ್‌ಗಳಲ್ಲಿ 6 ವಿಕಟ್‌ಗೆ 212 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪಾಕ್ 5ನೇ ಓವರ್‌ನಲ್ಲಿ ಇಮಾಮ್‌ವುಲ್ ಹಕ್(7) ವಿಕೆಟನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ 2ನೇ ವಿಕೆಟ್‌ಗೆ 104 ರನ್ ಜೊತೆಯಾಟ ನಡೆಸಿದ ಫಕಾರ್ ಝಮಾನ್(62, 75 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಬಾಬರ್ ಆಝಂ(48, 57 ಎಸೆತ, 3 ಬೌಂಡರಿ, 1 ಸಿಕ್ಸರ್)ತಂಡವನ್ನು ಆಧರಿಸಲು ಯತ್ನಿಸಿದರು. ಬಾಬರ್ ಆಝಂ(48) ವಿಕೆಟನ್ನು ಉರುಳಿಸಿದ ಕುಲದೀಪ ಯಾದವ್ ಈ ಜೋಡಿಯನ್ನು ಬೇರ್ಪಡಿಸಿದರು.

ಝಮಾನ್ 62 ರನ್‌ಗೆ ಯಾದವ್‌ಗೆ ಎರಡನೇ ಬಲಿಯಾದರು.ಝಮಾನ್-ಆಝಂ ಹೋರಾಟದ ಬಳಿಕ ಪಾಕ್ ಕುಸಿತದ ಹಾದಿ ಹಿಡಿಯಿತು. ಮುಹಮ್ಮದ್ ಹಫೀಝ್(9),ಶುಐಬ್ ಮಲಿಕ್(0), ಹಾಗೂ ಸರ್ಫರಾಝ್ ಅಹ್ಮದ್(12) ಪೆವಿಲಿಯನ್‌ಗೆ ಪರೇಡ್ ನಡೆಸಿದರು. ಇಮಾದ್ ವಸೀಂ(ಔಟಾಗದೆ 22) ಹಾಗೂ ಶಾದಾಬ್ ಖಾನ್ (1)ಕ್ರೀಸ್ ಕಾಯ್ದುಕೊಂಡಿದ್ದರು.

ಭಾರತದ ಪರ ವಿಜಯ ಶಂಕರ್(2-22), ಹಾರ್ದಿಕ್ ಪಾಂಡ್ಯ(2-40) ಹಾಗೂ ಕುಲದೀಪ್ ಯಾದವ್(2-32) ತಲಾ ಎರಡು ವಿಕೆಟ್ ಪಡೆದರು.

ಭಾರತ 336/5: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಭರ್ಜರಿ ಶತಕ(140 ರನ್, 113 ಎಸೆತ), ನಾಯಕ ವಿರಾಟ್ ಕೊಹ್ಲಿ(77, 65 ಎಸೆತ) ಹಾಗೂ ಕೆಎಲ್ ರಾಹುಲ್(57,78 ಎಸೆತ)ಅರ್ಧಶತಕಗಳ ಕೊಡುಗೆ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 336 ರನ್ ಗಳಿಸಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)