varthabharthi

ಕ್ರೀಡೆ

ಇಂದು ಬಾಂಗ್ಲಾ-ವಿಂಡೀಸ್ ಪಂದ್ಯ

ವಾರ್ತಾ ಭಾರತಿ : 17 Jun, 2019

  ಟೌಂಟನ್, ಜೂ.16: ಬಾಂಗ್ಲಾದೇಶ ಮತ್ತು ವೆಸ್ಟ್‌ಇಂಡೀಸ್ ತಂಡಗಳಿಗೆ ವಿಶ್ವಕಪ್ ಸೆಮಿಫೈನಲ್‌ಗೇರುವ ಅವಕಾಶ ಬಹುತೇಕ ಕ್ಷೀಣಿಸಿದೆ. ಸೋಮವಾರ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಈ ತಂಡಗಳು ಮುಖಾಮುಖಿಯಾಗಲಿವೆ.

 ಬಾಂಗ್ಲಾ ಮತ್ತು ವಿಂಡೀಸ್ ಈಗಾಗಲೇ 4 ಪಂದ್ಯಗಳನ್ನು ಆಡಿವೆ. ತಲಾ 3 ಅಂಕಗಳನ್ನು ಗಳಿಸಿವೆ. ಎರಡೂ ತಂಡಗಳು 2ರಲ್ಲಿ ಸೋಲು ಅನುಭವಿಸಿದ್ದು, 1ರಲ್ಲಿ ಜಯ ಗಳಿಸಿವೆ. ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿದೆ.

 ಪಾಕಿಸ್ತಾನ ವಿರುದ್ಧ ಜಯ ಗಳಿಸಿದ್ದ ವೆಸ್ಟ್‌ಇಂಡೀಸ್ ಬಳಿಕ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು. ದಕ್ಷಿಣ ಆಫ್ರಿಕ ವಿರುದ್ಧ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ದಕ್ಷಿಣ ಆಫ್ರಿಕ ವಿರುದ್ಧ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ್ದ ಬಾಂಗ್ಲಾದೇಶ ತಂಡ ಆ ಬಳಿಕ ನ್ಯೂಝಿಲ್ಯಾಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು. ಬಾಂಗ್ಲಾ ಜೂನ್ 8ರ ಬಳಿಕ ಆಡಿಲ್ಲ.

ಬಾಂಗ್ಲಾ ತಂಡದಲ್ಲಿ ಆಟಗಾರರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಮುಶ್ಫಿಕುರ್ರಹೀಮ್ ನೆಟ್ ಅಭ್ಯಾಸದ ವೇಳೆ ಗಾಯಗೊಂಡಿದ್ದರು. ಶಾಕಿಬ್ ಅಲ್ ಹಸನ್, ಮಶ್ರಾಫೆ ಮೊರ್ತಾಝ ಮತ್ತು ಮುಹಮ್ಮದ್ ಸೈಫುದ್ದೀನ್ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಶಾಕಿಬ್ ಈವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಂಡೀಸ್ ವಿರುದ್ಧ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.

 ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಪಾಕ್ ವಿರುದ್ಧ ಅರ್ಧಶತಕ ದಾಖಲಿಸಿದ್ದರು. ಶಾಹಿ ಹೋಪ್ ಮತ್ತು ಶಿಮ್ರಿನ್ ಹೆಟ್ಮಾಯರ್ ಇಂಗ್ಲೆಂಡ್ ವಿರುದ್ಧ 39 ರನ್ ಗಳಿಸಿದ್ದರು. ನಿಕೊಲಾಸ್ ಪೂರನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧ 63 ರನ್, ಆಸ್ಟ್ರೇಲಿಯ ವಿರುದ್ಧ 40 ರನ್ ಮತ್ತು ಪಾಕಿಸ್ತಾನ ವಿರುದ್ಧ ಔಟಾಗದೆ 34 ರನ್ ಸೇರಿಸಿದ್ದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)