varthabharthi

ನಿಮ್ಮ ಅಂಕಣ

ವೈದ್ಯರ ಮುಷ್ಕರ ಸಮರ್ಥನೀಯವೇ?

ವಾರ್ತಾ ಭಾರತಿ : 17 Jun, 2019
-ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

ಮಾನ್ಯರೇ,

ಕೋಲ್ಕತಾದಲ್ಲಿ ವೈದ್ಯರ ಮೇಲೆ ಹಲ್ಲೆಯಾದುದ್ದನ್ನು ಖಂಡಿಸಲು ಪ್ರಾರಂಭವಾದ ವೈದ್ಯವೃತ್ತಿಜನರ ಪ್ರತಿಭಟನೆಯು ರಾಷ್ಟ್ರವ್ಯಾಪಿ ಪ್ರತಿಭಟನೆಯಾಗಿ ಹಬ್ಬುತ್ತಿರುವುದು ಆತಂಕಕಾರಿಯಾದ ಸಂಗತಿ. ನಾಗರಿಕ ಸಮಾಜದಲ್ಲಿ ಯಾರು ಯಾರನ್ನೇ ಹಲ್ಲೆ ಮಾಡಿದರೂ ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ಆದರೆ ವೈದ್ಯರು ಮಾಡುತ್ತಿರುವ ರಾಜ್ಯಮಟ್ಟದ ಪ್ರತಿಭಟನೆ-ಮುಷ್ಕರಗಳು ಈಗ ಕರೆಕೊಟ್ಟಿರುವ ರಾಷ್ಟ್ರವ್ಯಾಪಿ ಮುಷ್ಕರವೂ ಅನೇಕ ಕಾರಣಗಳಿಗಾಗಿ ಸಮರ್ಥನೀಯವಲ್ಲ.

ವೈದ್ಯರು ತಾವೇ ಜನರ ಆರೋಗ್ಯದ ರಕ್ಷಕರೆಂದು ಪ್ಲೆಕಾರ್ಡ್ ಹಿಡಿದು ಪ್ರತಿಭಟಿಸುತ್ತಿರುವುದು ಈ ದೇಶದ ಸಂವಿಧಾನದ ಬಗ್ಗೆ, ಕಾನೂನಿನ ಬಗ್ಗೆ, ಕಳೆದ ಮೂವತ್ತು ವರ್ಷಗಳಲ್ಲಿ ಸರಕಾರಗಳು ಸಾಮಾನ್ಯ ಜನರಮೇಲೆ ಹೇರಿರುವ ಜನವಿರೋಧಿ ಆರ್ಥಿಕ ನೀತಿಗಳ ಬಗ್ಗೆ, ಅವುಗಳ ಹಿಂದಿರುವ ಬಲಿಷ್ಠರ, ಆಳುವ ವರ್ಗಗಳ ರಾಜಕೀಯದ ಬಗ್ಗೆ, ಸಂಘಪರಿವಾರವು ಕೀರ್ತಿಸುವ ಸಂಸ್ಕೃತಿಯಲ್ಲಿ ವೈದ್ಯಕೀಯ ಸೇವೆ ಮತ್ತು ಔಷಧೋಪಚಾರಗಳ ಬಗ್ಗೆ ಒಂದು ಕಾಲದಲ್ಲಿದ್ದ ನೈತಿಕ ಮತ್ತು ಸಾಮಾಜಿಕ ಸ್ಥಾನದ ಬಗ್ಗೆ ಅವರಿಗಿರುವ ಅಜ್ಞಾನ, ನಿರ್ಲಕ್ಷ ಮತ್ತು ಅಸಂವೇದನೆಗಳನ್ನು ತೋರಿಸುತ್ತದೆ.

ಯಾವುದೇ ನಾಗರಿಕನಿಂದ ಮತ್ತೊಬ್ಬ ನಾಗರಿಕನ ಮೇಲೆ ಹಲ್ಲೆಯಾದರೆ ಈ ದೇಶದ ಕಾನೂನಿನ ಪ್ರಕಾರ ಕಾನೂನು ಕ್ರಮಗಳನ್ನು ಕೈಗೊಳ್ಳಲು ಅವಕಾಶವಿದೆ. ದುರ್ಬಲರಿಗೆ ನ್ಯಾಯ ಸಿಗದೆ ಹೋಗಬಹುದು ಅಥವಾ ಬಲಿಷ್ಠರು ನ್ಯಾಯವನ್ನು ಕೊಂಡುಕೊಳ್ಳಬಹುದು. ಈಗ ಮುಷ್ಕರ ನಡೆಸುತ್ತಿರುವ ವೈದ್ಯರಲ್ಲಿ ಬೆರಳೆಣಿಕೆಯ ಜನರನ್ನು ಬಿಟ್ಟರೆ ಎಲ್ಲರೂ ಬಲಿಷ್ಠರೇ.

ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲರಾದ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಮೇಲೆ ಸಾರ್ವಜನಿಕವಾಗಿಯೇ ಹಲ್ಲೆಯಾದರೂ, ರಾಷ್ಟ್ರವ್ಯಾಪಿ ಮುಷ್ಕರಗಳಿಗೆ ಯಾರೂ ಕರೆಕೊಡುವುದಿಲ್ಲ. ಏಕೆಂದರೆ ಅವರಿಗೆ ಹಣವಿಲ್ಲ ಮತ್ತು ಜನಬಲವಿಲ್ಲ. ಸಾಮಾನ್ಯಜನರು ವೈದ್ಯರ ಅಚಾತುರ್ಯಗಳಿಂದ, ಪ್ರತಿಷ್ಠಿತರು ಮತ್ತು ಕಾನೂನುರಕ್ಷಕರ ದೌರ್ಜನ್ಯಗಳಿಂದ, ಹಸಿವಿನಿಂದ ಸಾವನ್ನಪ್ಪಿದಾಗ, ಕಾನೂನುಕ್ರಮ ಕೈಗೊಳ್ಳುವುದರಲ್ಲಿ ಅತಿ ಮುಖ್ಯ ಪುರಾವೆಯಾದ ಶವಪರೀಕ್ಷೆಯ ವೈದ್ಯಕೀಯ ದಾಖಲೆಗಳನ್ನು ಬಹಳಷ್ಟು ಜನ ವೈದ್ಯರು ಯಾರ ಪರವಾಗಿರುವಂತೆ ತಯಾರಿಸುತ್ತಾರೆ ಎಂಬುದನ್ನು ಜನಸಾಮಾನ್ಯರೂ ಬಲ್ಲರು.

 ಹಿಂದೆ ಒಂದು ಕಾಲದಲ್ಲಿ ಔಷಧಿ, ವಿದ್ಯೆ, ನೀರು, ಬೆಂದ ಆಹಾರ, ಸಾರ್ವಜನಿಕ ವಿಶ್ರಾಂತಿಸ್ಥಳಗಳಿಗೆ ಹಣ ಪಡೆಯಬಾರದೆಂಬ ನೈತಿಕ ಕಟ್ಟುಪಾಡಿತ್ತು. ಜಾಗತೀಕರಣದ ಆರ್ಥಿಕತೆ ಮತ್ತು ರಾಜಕೀಯದಲ್ಲಿ ಇವೆಲ್ಲವೂ ಅತ್ಯಂತ ಲಾಭತರುವ ಸರಕು ಮತ್ತು ಸೇವೆಗಳ ಬಲಿಷ್ಠ ಉದ್ಯಮಗಳಾಗಿವೆ. ವೈದ್ಯಕೀಯ ತಪಾಸಣೆ, ಶುಶ್ರೂಷೆ, ಔಷಧ ಮತ್ತು ಔಷಧೋಪಚಾರಗಳು ಜನಸಾಮಾನ್ಯರ ಕೈಗೆಟುಕದಷ್ಟು ದುಬಾರಿಯಾದ ಉದ್ಯಮಗಳಾಗಿವೆ. ಇವುಗಳೊಂದಿಗೆ ಕೈಜೋಡಿಸುವ ವೈದ್ಯರು ಈ ಉದ್ಯಮಗಳ ನೇರ ಫಲಾನುಭವಿಗಳಾಗಿದ್ದಾರೆ. ಹಿರಿ-ಕಿರಿ, ಶ್ರೀಮಂತ-ಬಡ ವೈದ್ಯರು ಜಾಗತೀಕರಣದ ಪರಿಭಾಷೆಯಲ್ಲಿ ವೈದ್ಯೋದ್ಯಮದ ಕಾರ್ಮಿಕರಾಗಿದ್ದಾರೆಂಬುದು ಎಷ್ಟು ಜನರಿಗೆ ಗೊತ್ತಿದೆ? ಗೊತ್ತಿದ್ದರೂ, ತಮ್ಮ ಬಂಧುಗಳಾದ ಉಳಿದ ಉದ್ಯಮಗಳ ಕಾರ್ಮಿಕರ ಬಗ್ಗೆ ಅವರಿಗೆ ಎಂತಹ ಭಾವನೆ ಇದೆ?

ನೋವಿನಿಂದ ಬಿಡುಗಡೆ ಪಡೆದ ಜನಸಾಮಾನ್ಯರು ವೈದ್ಯರನ್ನು ರಕ್ಷಕರೆಂದು ಗೌರವಿಸುವುದು ಅವರ ಸಜ್ಜನಿಕೆ. ಹಾಗೆಂದು ತಾವೇ ಧನ್ವಂತರಿ-ದೇವರೆಂದು ತಮ್ಮ ಕಾಲಿಗೆ ತಾವೇ ನಮಸ್ಕರಿಸಿಕೊಳ್ಳುವುದು ಹಾಸ್ಯಾಸ್ಪದವಲ್ಲವೇ?

ಬಹಳಷ್ಟು ಜನ ವೈದ್ಯರಿಗೆ ರೋಗ ಮತ್ತು ರೋಗಿಗಳು ಹಣ ಸಂಪಾದಿಸಲು ಸಿಗುವ ಕಚ್ಚಾ ವಸ್ತುಗಳು. ಜನರು ರೋಗಗ್ರಸ್ತರಾದಾಗ ವೈದ್ಯರ ಸೇವೆ ಲಭ್ಯವಿರಬೇಕು. ಆದರೆ ಈಗ ಇರುವುದು, ವೈದ್ಯರು ಬಿಡುವಾಗಿದ್ದಾಗ ಜನರು ರೋಗಗ್ರಸ್ತರಾಗಬೇಕು ಎಂಬಂತಹ ತಲೆಕೆಳಗು ಪರಿಸ್ಥಿತಿ. ಹಾಗಿಲ್ಲದಿದ್ದರೆ ವೈದ್ಯರು ರೋಗಿಗಳನ್ನು ನಿರ್ಲಕ್ಷಿಸಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮುಂದಾಗುತ್ತಿದ್ದರೇ?

ಇದರ ಜೊತೆಗೆ ಆಳುವ ವರ್ಗಗಳ ಎರಡು ಬಣಗಳ ನಡುವೆ ಅಧಿಕಾರಕ್ಕಾಗಿ ನಡೆಯುತ್ತಿರುವ ಕಿತ್ತಾಟದಲ್ಲಿ ತಾವು ಬಲಿಪಶುಗಳೋ, ಫಲಾನುಭವಿಗಳೋ ಅಥವಾ ಎರಡೂ ಆಗಿದ್ದೇವೆನ್ನುವುದು ಎಷ್ಟು ಮಂದಿ ವೈದ್ಯರಿಗೆ ಅರಿವಿದೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)