varthabharthi

ವೈವಿಧ್ಯ

ಹೆಣ್ಮಕ್ಕಳನ್ನು ಹತ್ಯೆಗೈಯುವ ದೇಶವಾಗಿ ಬದಲಾಗುತ್ತಿರುವ ಭಾರತ

ವಾರ್ತಾ ಭಾರತಿ : 18 Jun, 2019
ರಶ್ಮಿ ಸೆಹಗಲ್

ಅತ್ಯಾಚಾರಗಳನ್ನು ಕೋಮು ಹಿನ್ನೆಲೆಯಲ್ಲಿ ನೋಡುವುದು ನಿಲ್ಲಬೇಕಿದೆ. ಸರಕಾರ ಮತ್ತು ನಾಗರಿಕ ಸಮಾಜ ಸಮುದಾಯ ಬೆಂಬಲಿತ ಪರಿಹಾರ ಕಂಡುಕೊಳ್ಳುವತ್ತ ಪ್ರಯತ್ನಿಸುವ ಅಗತ್ಯ ಮತ್ತು ಪೊಲೀಸರಿಂದ ಪ್ರಾಮಾಣಿಕ ಕಾನೂನುಪಾಲನೆ, ಈ ಎರಡು ಕ್ರಮಗಳು ನಮ್ಮ ಹೆಣ್ಮಕ್ಕಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಈ ಸುಳಿಯನ್ನು ತಡೆಯಲು ಅತ್ಯಂತ ಮುಖ್ಯವಾಗಿವೆ.

ಜಗತ್ತಿನಲ್ಲೇ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ ಎಂದು ಥಾಮ್ಸನ್ ರಾಯ್ಟರ್ಸ್ ಪ್ರತಿಷ್ಠಾನ 2018ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಿತ್ತು.
ಕಳೆದ ಕೆಲವು ವಾರಗಳಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ಕ್ಷುಲ್ಲಕ ಕೌಟುಂಬಿಕ ವಿಷಯಗಳಿಗೆ ಹೆಣ್ಮಕ್ಕಳ ಹತ್ಯೆ ನಡೆದಿರುವುದನ್ನು ಗಮನಿಸಿದಾಗ ಭಾರತ ಹೆಣ್ಮಕ್ಕಳ ಹತ್ಯೆಗೈಯುವ ದೇಶವಾಗಿ ಬದಲಾಗುತ್ತಿರುವಂತೆ ಕಾಣುತ್ತಿದೆ.
ಉದಾಹರಣೆಗೆ, ಜೂನ್ 7ರಂದು ಗೋರಖ್‌ಪುರದ ಖುಷಿನಗರ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ 12 ವರ್ಷದ ಹೆಣ್ಮಗಳನ್ನು ಆಕೆಯ ಮನೆಯಿಂದ ಹೊರಗೆಳೆದ ಆರು ಮಂದಿಯ ಗುಂಪು ಆಕೆಯ ಅತ್ಯಾಚಾರ ನಡೆಸಿತ್ತು. ಆರೋಪಿಗಳು ಮತ್ತು ಸಂತ್ರಸ್ತೆಯ ಕುಟುಂಬದ ಮಧ್ಯೆ ಚರಂಡಿ ನಿರ್ಮಾಣಕ್ಕೆ ಕುರಿತಂತೆ ನಡೆದ ಜಗಳವೇ ಈ ಹೇಯ ಕೃತ್ಯಕ್ಕೆ ಕಾರಣವಾಗಿತ್ತು. ಸದ್ಯ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದರೆ ಸಂತ್ರಸ್ತೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಅದರ ಮುಂದಿನ ದಿನ ಜೂನ್ 8ರಂದು ಉತ್ತರ ಪ್ರದೇಶದ ಹಮೀರ್‌ಪುರದ ಸ್ಮಶಾನದಲ್ಲಿ 10ರ ಹರೆಯದ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಹತ್ಯೆಗೈಯ್ಯುವುದಕ್ಕೂ ಮೊದಲು ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದರು. ಜೂನ್ 9ರಂದು ಕಾನ್ಪುರ ಸಮೀಪದ ಜಲವುನ್ ಜಿಲ್ಲೆಯಲ್ಲಿ ಏಳು ವರ್ಷ ಪ್ರಾಯದ ಬಾಲಕಿಯ ನಗ್ನ ಮೃತದೇಹ ಪತ್ತೆಯಾಗಿತ್ತು. ಆಕೆಯನ್ನೂ ಹತ್ಯೆಗೂ ಮುನ್ನ ಅತ್ಯಾಚಾರಗೈಯಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿತ್ತು. ಮೃತ ಬಾಲಕಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ, ತನ್ನ ಮಗಳನ್ನು ನೆರೆಮನೆಯವರೇ ಹತ್ಯೆ ಮಾಡಿದ್ದಾರೆ. ಅವರು ಹಾಗೂ ನಮ್ಮ ಕುಟುಂಬದ ಮಧ್ಯೆ ದೀರ್ಘ ಸಮಯದಿಂದ ವೈಷಮ್ಯವಿದೆ ಎಂದು ತಿಳಿಸಿದ್ದರು.
ಜೂನ್ 8ರಂದು ಭೋಪಾಲದ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಹತ್ತರ ಹರೆಯದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ನಂತರ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ಇಡೀ ದೇಶವನ್ನು ತಲ್ಲಣಗೊಳಿಸಿತ್ತು. ಆಕೆಯ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿತ್ತು.
ಜೂನ್ 9ರಂದು ಮಧ್ಯಪ್ರದೇಶದ ಜಬಲ್ಪುರ್‌ನಲ್ಲಿ ನಾಲ್ಕು ವರ್ಷದ ಬಾಲಕಿಗೆ 16ರ ಹರೆಯದ ಬಾಲಕ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿತ್ತು.
ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ ಭೋಪಾಲ್‌ನ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಕುಟುಂಬಸ್ಥರಿಗೆ ಸಮಾಧಾನ ಹೇಳಿದ್ದರು. ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಮಧ್ಯ ಪ್ರದೇಶ ಅಗ್ರ ಸ್ಥಾನಿಯಾಗಿದೆ ಎನ್ನುವುದನ್ನು ಠಾಕೂರ್‌ಗೆ ಈ ಘಟನೆ ಮತ್ತೆ ನೆನಪಿಸಬಹುದು. ಇಡೀ ದೇಶದಲ್ಲೇ ಮಧ್ಯ ಪ್ರದೇಶದಲ್ಲಿ ಅತೀಹೆಚ್ಚು ಅತ್ಯಾಚಾರ ಘಟನೆಗಳು ದಾಖಲಾಗುತ್ತವೆ. 2016ರಲ್ಲಿ ಮಧ್ಯ ಪ್ರದೇಶದಲ್ಲಿ 4,882 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 2,479 ಪ್ರಕರಣಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿತ್ತು ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿಯ ಅಂಕಿಅಂಶಗಳು ತಿಳಿಸುತ್ತವೆ.
ಉತ್ತರ ಪ್ರದೇಶದ ಅಲಿಗಡ್‌ನ ತಪ್ಪಲ್‌ನಲ್ಲಿ ಮೂರರ ಬಾಲಕಿಯನ್ನು ಅತ್ಯಾಚಾರಗೈದು ತ್ಯಾಜ್ಯದ ರಾಶಿಯಲ್ಲಿ ಎಸೆದ ಘಟನೆ ದೇಶವನ್ನೇ ನಡುಗಿಸಿತ್ತು. ಮೇ 30ರಂದು ನಾಪತ್ತೆಯಾಗಿದ್ದ ಬಾಲಕಿ ಜೂನ್ 2ರಂದು ಮೃತದೇಹವಾಗಿ ಪತ್ತೆಯಾಗಿದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಮಗುವನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂಬ ಅಂಶ ತಿಳಿದುಬಂದಿತ್ತು. ಸದ್ಯ ಪೊಲೀಸರು, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಹೇಳುತ್ತಿದ್ದರೂ ಈ ಸಾಧ್ಯತೆ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಆರೋಪಿ, ಮೃತ ಬಾಲಕಿಯ ಕುಟುಂಬ ನೀಡಿದ್ದ 10,000ರೂ. ಸಾಲ ಮರುಪಾವತಿ ಮಾಡಲು ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ಬಾಲಕಿಯ ಮನೆಯವರು ಮತ್ತು ಆರೋಪಿ ಮಧ್ಯೆ ಜಗಳ ನಡೆದಿತ್ತು. ಈ ವೈಷಮ್ಯವೇ ಮುಗ್ಧ ಬಾಲಕಿಯ ಹತ್ಯೆಯಲ್ಲಿ ಪರ್ಯಾವಸಾನಗೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹತ್ಯೆಗೆ ಕೋಮುಬಣ್ಣ ಬಳಿಯುವ ಪ್ರಯತ್ನಗಳೂ ನಡೆದವು: ಆ ನಂತರ ನೂರಾರು ಜನರು ತಪ್ಪಲ್ ಗಡಿ ತಲುಪಿದರೆ, ವಿಶ್ವ ಹಿಂದೂ ಪರಿಷದ್ ನಾಯಕಿ ಸಾಧ್ವಿ ಪ್ರಾಚಿ ಅಲಿಗಡ್‌ಗೆ ಭೇಟಿ ನೀಡದಂತೆ ತಡೆಯಲಾಯಿತು.
2016ರಲ್ಲಿ ಉತ್ತರ ಪ್ರದೇಶದಲ್ಲಿ ಮಕ್ಕಳ ಅತ್ಯಾಚಾರ ಪ್ರಕರಣಗಳಲ್ಲಿ ಶೇ.400 ಏರಿಕೆಯಾಗಿದೆ ಎಂದು ಎನ್‌ಸಿಆರ್‌ಬಿ ಅಂಕಿಅಂಶ ತಿಳಿಸುತ್ತದೆ. ಅದರಂತೆ, 2015ರಲ್ಲಿ 10,934 ಮಕ್ಕಳ ಅತ್ಯಾಚಾರಗೈಯಲಾಗಿದ್ದರೆ 2016ರಲ್ಲಿ ಈ ಪ್ರಮಾಣ 20,000ಕ್ಕೆ ಏರಿಕೆಯಾಗಿದೆ.
ಎನ್‌ಸಿಆರ್‌ಬಿ ಮೂಲಗಳ ಪ್ರಕಾರ, 2010 (22,172 ಪ್ರಕರಣಗಳು)ರಿಂದ 2014 (36,735 ಪ್ರಕರಣಗಳು)ರವರೆಗೆ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಶೇ.65 ಏರಿಕೆಯಾಗಿದೆ. ಇದೇ ವೇಳೆ, ಉತ್ತರ ಪ್ರದೇಶದಲ್ಲಿ 2010 (1,563 ಪ್ರಕರಣಗಳು)ರಿಂದ 2014 (3,467 ಪ್ರಕರಣಗಳು) ರವರೆಗೆ ಶೇ.121 ಏರಿಕೆಯಾಗಿದೆ. ಅಪ್ರಾಪ್ತ ವಯಸ್ಸಿನ ಆರೋಪಿಗಳು ನಡೆಸುವ ಅತ್ಯಾಚಾರಗಳ ಪ್ರಮಾಣ 2015ರ 1,688ರಿಂದ 2018ರ ವೇಳೆಗೆ ಶೇ.13 ಏರಿಕೆ ಕಂಡು 1,903ಕ್ಕೆ ತಲುಪಿದೆ.
ಇಲ್ಲಿ ಕೇಳಲೇಬೇಕಾದ ಒಂದು ಪ್ರಶ್ನೆಯೆಂದರೆ ಮಹಿಳೆಯರ ವಿರುದ್ಧ ಲೈಂಗಿಕ ಹಿಂಸಾಚಾರವನ್ನು ತಡೆಯಲು ಜಾರಿ ಮಾಡಲಾಗಿರುವ ಕಠಿಣ ಕಾನೂನು ಯಾಕೆ ಫಲ ನೀಡುತ್ತಿಲ್ಲ ಎನ್ನುವುದು. 2013ರಲ್ಲಿ ಪರಿಚಯಿಸಲಾದ ನೂತನ ಅತ್ಯಾಚಾರ ಕಾನೂನು, ಶೀಘ್ರ ವಿಚಾರಣೆ ಮತ್ತು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದನ್ನು ಕಡ್ಡಾಯಗೊಳಿಸುತ್ತದೆ.
ಅನೇಕ ಅತ್ಯಾಚಾರ ಪ್ರಕರಣಗಳಲ್ಲಿ ಹತ್ಯೆ ಯಾಕೆ ನಡೆಯುತ್ತದೆ ಎಂದು ಕೇಳಿದಾಗ ಉತ್ತರಿಸಿದ ಡಾ. ರಾಜೇಶ್ ಕುಮಾರ್, ‘‘ನೂತನ ಅತ್ಯಾಚಾರ ಕಾಯ್ದೆಯನ್ನು 2013ರಲ್ಲಿ ಪರಿಚಯಿಸಿದಾಗ ಕಾನೂನನ್ನು ಬಿಗಿಗೊಳಿಸುವಲ್ಲಿ ಇರುವ ಲೋಪದೋಷಗಳನ್ನು ಬೆಟ್ಟು ಮಾಡಿದ್ದೆ. ಸಂತ್ರಸ್ತೆ ಬದುಕುಳಿದರೆ ಆಕೆ ಸಾಕ್ಷಿಯಾಗುತ್ತಾಳೆ. ಹಾಗಾಗಿ ಅತ್ಯಾಚಾರಿಗಳು ಸಂತ್ರಸ್ತೆಯನ್ನು ಹತ್ಯೆ ಮಾಡುವುದೇ ಸೂಕ್ತ ಎಂದು ತೀರ್ಮಾನಿಸುತ್ತಾರೆ. ಇಂತಹ ಹೇಯ ಕೃತ್ಯಗಳನ್ನು ನಡೆಸುವ ಅನೇಕ ಜನರಿಗೆ ರಸ್ತೆ ಬದಿಯಲ್ಲಿ ಜೀವಿಸುವುದು ಮತ್ತು ಜೈಲಿನಲ್ಲಿ ಸಮಯ ಕಳೆಯುವುದು ಈ ಎರಡರಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ.’’
ಡಾ. ರಾಜೇಶ್ ಕುಮಾರ್, ತಿಹಾರ್ ಜೈಲಿನಲ್ಲಿರುವ ಅಪ್ರಾಪ್ತ ವಯಸ್ಸಿನ ಅಪರಾಧಿಗಳು ಮತ್ತು ಕೊಲೆಗಾರರ ಜೊತೆ ಕಾರ್ಯನಿರ್ವಹಿಸುವ ಸೊಸೈಟಿ ಆಫ್ ಪ್ರೊಮೋಶನ್ ಆಫ್ ಯೂತ್ ಆ್ಯಂಡ್ ಮಾಸೆಸ್‌ನ ಮುಖ್ಯಸ್ಥರಾಗಿದ್ದಾರೆ.

ಮಕ್ಕಳ ಅಶ್ಲೀಲಚಿತ್ರಕ್ಕೆ ನಿಷೇಧ ಹೇರುವ ಸಮಯವೂ ಬಂದಿದೆ ಎಂದು ಕುಮಾರ್ ಹೇಳುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ವಿರುದ್ಧ ಕಠಿಣ ಕಾನೂನುಗಳಿವೆ. ಜರ್ಮನಿಯಲ್ಲಿ ನೀವು ಮಕ್ಕಳ ಅಶ್ಲೀಲ ಚಿತ್ರ ವೀಕ್ಷಿಸುವುದು ಕಂಡುಬಂದರೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ನಮ್ಮಲ್ಲೂ ಈ ಮಾದರಿಯ ಕಾನೂನುಗಳನ್ನು ಪರಿಚಯಿಸಬೇಕು ಎಂದು ಅವರು ಅಭಿಪ್ರಾಯಿಸುತ್ತಾರೆ. ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲೆ ರೆಬೆಕಾ ಜಾನ್, ಈ ಅಪರಾಧಗಳು ಹೆಚ್ಚಿನ ಸಮಸ್ಯೆಗಳತ್ತ ಬೆಟ್ಟು ಮಾಡುತ್ತವೆ ಎಂದು ಅಭಿಪ್ರಾಯಿಸುತ್ತಾರೆ.
ಅತ್ಯಾಚಾರಗಳ ಪ್ರಮಾಣ ಎಷ್ಟು ಹೆಚ್ಚಾಗಿದೆಯೆಂದರೆ ಅದಕ್ಕೆ ತಕ್ಷಣದ ಕಾರಣಗಳೇನು ಎಂದು ಹುಡುಕುವುದಕ್ಕಿಂತ ಅದರಾಚೆಗೆ ಗಮನಹರಿಸಿ ಆಳವಾಗಿರುವ ವಿಷಯಗಳನ್ನು ಕೆದಕುವ ಅಗತ್ಯವಿದೆ. ನಮ್ಮಲ್ಲಿ ಅತೀಹೆಚ್ಚು ಮಟ್ಟದಲ್ಲಿ ನಿರುದ್ಯೋಗವಿದೆ, ಆರ್ಥಿಕ ಸಮಸ್ಯೆಯಿದೆ. ಇದರೊಂದಿಗೆ ಭಾರತ ಜಗತ್ತಿನಲ್ಲೇ ಅತೀಹೆಚ್ಚು ಮಾನಸಿಕ ಆರೋಗ್ಯ ಸಮಸ್ಯೆಯನ್ನು ಹೊಂದಿದೆ. ಈ ಸಮಸ್ಯೆಗಳಿಗೆ ಸರಕಾರದ ಪ್ರತಿಕ್ರಿಯೆಯೇನು? ನೀರವ ವೌನ ಅಷ್ಟೇ.
ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದು ಇದಕ್ಕೆ ಉತ್ತರವಲ್ಲ ಎಂದು ರೆಬೆಕಾ ತಿಳಿಸುತ್ತಾರೆ.
ಈ ಹಿಂದೆ ಶ್ರೀಲಂಕಾದಲ್ಲಿ ಆದಂತೆ ನಮ್ಮ ಸಮಾಜವೂ ಆಂತರಿಕವಾಗಿ ಕುಸಿಯುತ್ತಿದೆ. ಸ್ಪರ್ಧಾತ್ಮಕ ಪ್ರಜಾಸತಾತ್ಮಕ ರಾಜಕೀಯ ಈ ವಿಭಜನೆಗಳನ್ನು ಸೃಷ್ಟಿ ಮಾಡಿದೆ ಮತ್ತು ಇದು ನಮ್ಮ ಸಮಾಜದ ಸಾಮಾನ್ಯ ರೂಪುರೇಷೆಯನ್ನು ನಾಶ ಮಾಡುತ್ತಿದೆ. ದುರದೃಷ್ಟಕರವೆಂದರೆ, 1947ರಿಂದಲೂ ನಡೆದುಕೊಂಡು ಬಂದಿರುವಂತೆ ನಮ್ಮ ಪೊಲೀಸ್ ಪಡೆ ಬಹುಜನ ಸಮುದಾಯದೊಂದಿಗೆ ಕೈಜೋಡಿಸಿದೆ ಎಂದು ರಾಜಕೀಯ ಮನಃಶಾಸ್ತ್ರಜ್ಞ ಮತ್ತು ಸಮಾಜವಾದಿ ಡಾ. ಆಶಿಶ್ ನಂದಿ ತಿಳಿಸುತ್ತಾರೆ.
ಆದರೆ ಜೈಪುರ ಮೂಲದ ಮಹಿಳಾ ಹೋರಾಟಗಾರ್ತಿ ಡಾ. ರೇಣುಕಾ ಪಮೆಚಾ ಪ್ರಕಾರ ಇನ್ನೂ ಕೆಲವು ಆಳವಾದ ವಿಷಯಗಳಿದ್ದು ಅವುಗಳನ್ನೂ ಪರಿಹರಿಸುವ ಅಗತ್ಯವಿದೆ. ‘‘ಸಂತ್ರಸ್ತ ಮಹಿಳೆಯರು ತಕ್ಷಣ ನೆರವು ಪಡೆಯಲು ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಲಹೆ ಮತ್ತು ಸುರಕ್ಷಾ ಕೇಂದ್ರಗಳನ್ನು ಸ್ಥಾಪಿಸುವಂತೆ 1970ರಲ್ಲಿ ನಾವು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದೆವು. ಆದರೆ, ಈ ಯೋಜನೆಗೆ ನಿಧಿಯನ್ನು ಕಡಿತ ಮಾಡುವ ಮೂಲಕ ವಿಜಯರಾಜೇ ಸಿಂಧಿಯಾ ನಮಗೆ ಆಘಾತ ನೀಡಿದ್ದರು. ಅವರು ಅನೇಕ ಮಹಿಳಾ ಕೇಂದ್ರಿತ ಯೋಜನೆಗಳಿಗೆ ಹೀಗೆ ಮಾಡಿದ್ದರು. ಮಹಿಳೆಯರ ಸಂಕಷ್ಟಗಳ ಬಗ್ಗೆ ಆಕೆ ಯಾವುದೇ ಸಹಾನುಭೂತಿ ಪ್ರದರ್ಶಿಸುತ್ತಿರಲಿಲ್ಲ’’ ಎಂದು ಹೇಳುತ್ತಾರೆ ಪಮೆಚಾ.
ಇದೇ ರೀತಿ, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಅಧಿಕಾರದ ಮೊದಲ ಅವಧಿಯಲ್ಲಿ ಅನೇಕ ಮಹಿಳಾಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ ಅವರ ಮೂರನೇ ಅವಧಿಯಲ್ಲಿ ಈ ಯೋಜನೆಗಳಿಗೆ ಬಿಡುಗಡೆ ಮಾಡಲಾಗುವ ನಿಧಿಯಲ್ಲಿ ಕಡಿತ ಮಾಡಲಾಗಿತ್ತು ಎಂದು ಭೋಪಾಲದ ಸ್ಥಳೀಯ ಹೋರಾಟಗಾರರು ತಿಳಿಸುತ್ತಾರೆ.
ಅತ್ಯಾಚಾರಕ್ಕೆ ಕೋಮು ಬಣ್ಣ
 ಈ ಪೈಕಿ ಕೆಲವು ಪ್ರಕರಣಗಳು ದೇಶದ ಗಮನವನ್ನು ತನ್ನತ್ತ ಸೆಳೆದಿತ್ತು. ಈ ಪೈಕಿ ಕಾಶ್ಮೀರದ ಕಥುವಾದಲ್ಲಿ ಎಂಟರ ಹರೆಯದ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ. ಈ ಪ್ರಕರಣದ ಏಳು ಆರೋಪಿಗಳ ಪೈಕಿ ಆರು ಮಂದಿಯನ್ನು ವಿಶೇಷ ನ್ಯಾಯಾಲಯ ಅಪರಾಧಿಗಳು ಎಂದು ಘೋಷಿಸಿದೆ ಮತ್ತು ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ಪ್ರಕರಣಕ್ಕೆ ಕೋಮುಬಣ್ಣ ಬಳಿಯುವ ಪ್ರಯತ್ನಗಳು ನಡೆದು ಹಿಂದೂ ಏಕತಾ ಮಂಚ್ ಆರೋಪಿಗಳ ಪರವಾಗಿ ರ್ಯಾಲಿಗಳನ್ನು ನಡೆಸಿತು. ಮೃತಬಾಲಕಿ ಪರ ವಕೀಲರು ಮತ್ತು ಆಕೆಯ ಕುಟುಂಬದ ಮೇಲೆ ಎಷ್ಟು ಒತ್ತಡ ಹೇರಲಾಗಿತ್ತು ಎಂದರೆ ಪ್ರಕರಣವನ್ನು ರಾಜ್ಯದಿಂದ ಹೊರಗಿನ ನ್ಯಾಯಾಲಯಕ್ಕೆ ವರ್ಗಾಯಿಸಬೇಕಾಯಿತು.
ಅತ್ಯಾಚಾರಗಳನ್ನು ಕೋಮು ಹಿನ್ನೆಲೆಯಲ್ಲಿ ನೋಡುವುದು ನಿಲ್ಲಬೇಕಿದೆ. ಸರಕಾರ ಮತ್ತು ನಾಗರಿಕ ಸಮಾಜ ಸಮುದಾಯ ಬೆಂಬಲಿತ ಪರಿಹಾರ ಕಂಡುಕೊಳ್ಳುವತ್ತ ಪ್ರಯತ್ನಿಸುವ ಅಗತ್ಯ ಮತ್ತು ಪೊಲೀಸರಿಂದ ಪ್ರಾಮಾಣಿಕ ಕಾನೂನುಪಾಲನೆ, ಈ ಎರಡು ಕ್ರಮಗಳು ನಮ್ಮ ಹೆಣ್ಮಕ್ಕಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಈ ಸುಳಿಯನ್ನು ತಡೆಯಲು ಅತ್ಯಂತ ಮುಖ್ಯವಾಗಿವೆ.
ಕೃಪೆ: thewire

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)