varthabharthi

ವೈವಿಧ್ಯ

ಒಡೆದ ದೇಶ ಮತ್ತೆ ಒಂದಾಗದು... ಒಡೆದ ಮನಸ್ಸುಗಳಾದರೂ ಒಂದಾದೀತೇ?

ವಾರ್ತಾ ಭಾರತಿ : 19 Jun, 2019

ಭಾಗ-40

ಜಗತ್ತನ್ನು ಯುದ್ಧರಹಿತ ಸ್ಥಾನವನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿರುವಾಗ ಭಾರತ-ಪಾಕಿಸ್ತಾನಗಳು ಯುದ್ಧಾಸಕ್ತವಾದರೆ ಎರಡೂ ದೇಶಗಳು ನಿರಂತರ ಶಾಶ್ವತ ಶತ್ರುಗಳಾಗಿ ಬಾಳಬೇಕಾದೀತು ಹಾಗೂ ಆ ಯುದ್ಧಗಳು ಮತೀಯ ಕಾರಣಗಳಿಗಾಗಿ ಆಗುವುದಂತೂ ಅವಿವೇಕದ ಪರಮಾವಧಿ! ಅಂಥ ಆತ್ಮಘಾತುಕ ಪಾತಕ ಆಗಬಾರದೆಂದು ಎರಡೂ ದೇಶಗಳ ಜಾತ್ಯತೀತ, ಸರ್ವಮತ ಸಮನ್ವಯ, ಸಹನೆ, ಸೌಹಾರ್ದ, ಸಮಾನತೆಯ ಸಂಘಟನೆಗಳು ಪ್ರಯತ್ನಿಸುತ್ತಿವೆ.

ಕಳೆದ ಕೆಲವು ವರ್ಷಗಳಲ್ಲಿ ಎರಡು ದೇಶಗಳ ಸಂಬಂಧ ಎಷ್ಟೋ ಸುಧಾರಿಸಿದೆ. ಐವತ್ತು ವರ್ಷಗಳಿಂದ ಕಡಿದುಹೋಗಿದ್ದ ದಿಲ್ಲಿ-ಲಾಹೋರ್ ರೈಲ್ವೆ ಸಾರಿಗೆ ಸಂಪರ್ಕ ಪುನರಾರಂಭವಾಗಿರುವುದು ಈ ಸ್ನೇಹ ಸಂವರ್ಧನೆಗೆ ಬಹುದೊಡ್ಡ ಹೆಜ್ಜೆಯಾಗಿದೆ. ಪಾಕಿಸ್ತಾನದಿಂದ ಭಾರತಕ್ಕೆ ಬರುವ ಬಂಧುಗಳನ್ನು ವಾಘಾ ಗಡಿಯಲ್ಲಿ ಬರಮಾಡಿಕೊಳ್ಳುವ, ಎಷ್ಟೋ ವರ್ಷಗಳಿಂದ ಅಗಲಿದ್ದ ಬಂಧುಗಳು ಒಬ್ಬರನ್ನೊಬ್ಬರು ಅಪ್ಪಿಕೊಂಡು ಆನಂದಬಾಷ್ಪ ಸುರಿಸುವ ದೃಶ್ಯ ಅಮೋಘವಾಗಿದೆ. ಪಾಕಿಸ್ತಾನ ಮತ್ತು ಭಾರತದ ಸಾಮಾನ್ಯಜನ ವಿಭಜನೆಯ ಪೂರ್ವದಲ್ಲಿ ಯಾವ ಪ್ರೇಮ, ವಿಶ್ವಾಸ, ಆತ್ಮೀಯತೆಯಿಂದ ಇದ್ದರೊ ಅದೇ ಪ್ರೇಮ, ವಿಶ್ವಾಸ, ಆತ್ಮೀಯತೆ ಈಗಲೂ ಇರುವುದನ್ನು ಪ್ರತ್ಯಕ್ಷ ಕಾಣಬಹುದು. ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಎರಡೂ ದೇಶಗಳ ಜನ ಬಂದು ಹೋಗುವ ದೃಶ್ಯ ಮೈತ್ರಿಯ ಸಂಕೇತವಾಗಿದೆ. ಸಾಧಾರಣ ಜನರ ಈ ವರ್ತನೆಯನ್ನು ಬೆಂಬಲಿಸುವ ಎರಡೂ ದೇಶಗಳ ನಾಯಕರು ಪರಸ್ಪರ ಕೂಡಿ ಮಾತನಾಡುವುದು, ಕಾಶ್ಮೀರ ಸಮಸ್ಯೆಯನ್ನು ಬಿಡಿಸಲು ದಾರಿ ಹುಡುಕುತ್ತಿರುವುದೂ ಶುಭ ಲಕ್ಷಣ.
ಗುಜ್ರಾಲ್, ಮನಮೋಹನ್ ಸಿಂಗ್ ಈಗ ಪಾಕಿಸ್ತಾದಲ್ಲಿರುವ ಊರುಗಳಲ್ಲಿ ಹುಟ್ಟಿದವರು. ಅವರು ತಮ್ಮ ಊರುಗಳಿಗೆ ಹೋದಾಗ, ದಿಕ್ಕೆಟ್ಟು ಬಂದ ಇವರು ತಮ್ಮ ಮನೆಗಳನ್ನು ನೋಡಿದಾಗ ಆಗ ಇವರನ್ನು ಮಕ್ಕಳಾಗಿ ಕಂಡು ಎತ್ತಿ ಆಡಿಸಿದ ಮುಪ್ಪಾದ ಮಹಿಳೆಯರು, ಗೆಳೆಯರು, ಇವರನ್ನು ಎದೆಗಪ್ಪಿಕೊಂಡು ಸ್ವಾಗತಿಸಿದ ದೃಶ್ಯ ರೋಮಾಂಚನಕಾರಿ. ಹಾಗೆಯೆ ಜನರಲ್ ಮುಷರ್ರಫ್ ದಿಲ್ಲಿಗೆ ಬಂದು ತಾನು ಚಿಕ್ಕಂದಿನಲ್ಲಿ ವಾಸಿಸುತ್ತಿದ್ದ ಮನೆಗೆ ಹೋದಾಗ ಅವರನ್ನು ಕಣ್ತುಂಬ ನೋಡಿ ಕಣ್ಣೀರು ತಂದ ಮುದುಕಿಯರನ್ನು ಕಂಡು ಮುಷರ್ರಫ್ ಕಣ್ಣೊರಸಿಕೊಂಡಿದ್ದರು. ಇಂತಹ ಮೈತ್ರಿ ರಾಷ್ಟ್ರಮಟ್ಟದಲ್ಲೂ ಏಕೆ ಬೆಳೆಯಬಾರದು? ಈ ದೃಶ್ಯವನ್ನು ಕಂಡಾಗ ಫೆಬ್ರವರಿ 1948ರಲ್ಲಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿಂದ ಹಿಂದಿರುಗಿ ಬರುವಾಗ ದಿಲ್ಲಿಯಿಂದ ಓಡಿಹೋಗಿದ್ದ ಮುಸ್ಲಿಮರನ್ನು ತಮ್ಮಿಡನೆ ಕಾಲ್ನಡಿಗೆಯಲ್ಲಿ ಕರೆತಂದು ಬಿಟ್ಟುಹೋಗಿದ್ದ ಮನೆಗಳಲ್ಲಿ ಅವರನ್ನು ಮತ್ತೆ ನೆಲೆಸುವಂತೆ ಮಾಡುವ ಕನಸು ಕಟ್ಟಿದ್ದರು ಗಾಂಧೀಜಿ. ಆದರೆ ಗೋಡ್ಸೆಯ ದ್ವೇಷದ ಗುಂಡು ಅವರ ಗುಂಡಿಗೆಯನ್ನು ಛಿದ್ರಿಸಿ ದೇಶದ ವಿಭಜನೆಯನ್ನು ಶಾಶ್ವತಗೊಳಿಸಿತು. ಹಿಂದೂ ಮುಸ್ಲಿಮರ ಮನಸ್ಸು ಒಡೆದುಹೋಯಿತು. ‘‘ಹೋಳಾದ ದೇಶವನ್ನು ರಾಜಕೀಯವಾಗಿ ಭೌಗೋಳಿಕವಾಗಿ ಒಂದು ಮಾಡುವುದು ಸಾಧ್ಯವಿಲ್ಲ. ಆದರೆ ಒಡೆದ ಮನಸ್ಸುಗಳನ್ನು ಒಂದುಗೂಡಿಸುವುದು ಸಾಧ್ಯ. ವಿಭಜನೆ ಹೋಗಬೇಕು; ಹೋಗಿಯೇ ಹೋಗುತ್ತದೆ’’ ಎಂದು ಶ್ರೀ ಅರವಿಂದರು ಸಾರಿದ ಸಂದೇಶ ಈ ಅರ್ಥದಲ್ಲಿ ಸತ್ಯವಾಗಬೇಕು. ಆ ಮಹರ್ಷಿಯ ವಾಣಿ ಹುಸಿಯಾಗಲಾರದು.

ಹೇಗೆ ಎಂದರೆ ಅವರೇ ಹೇಳಿರುವಂತೆ ಉಭಯ ದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದ ಸ್ಥಾಪನೆಯ ಹೆಬ್ಬಯಕೆ ಪ್ರಬಲವಾಗಿ ಒಂದುಗೂಡಲೇಬೇಕು. ಈ ಶಾಂತಿ ಮತ್ತು ಸೌಹಾರ್ದ(peace and concords) ಸಂವರ್ಧನೆಗಾಗಿ ಉಭಯ ದೇಶಗಳ ಪ್ರಜೆಗಳೂ ಸರಕಾರಗಳೂ ಶ್ರಮಿಸುವಂತಹ ವಾತಾವರಣ ಮತ್ತು ಸನ್ನಿವೇಶ ನಿರ್ಮಾಣವಾಗಬೇಕು. ತತ್ಫಲವಾಗಿ ಭಾರತ-ಪಾಕಿಸ್ತಾನಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಏಕತೆಯನ್ನು ಸಾಧಿಸಬೇಕು. ಹಾಗಲ್ಲದೆ ಇನ್ನಾವ ರೀತಿಯಿಂದಲೂ ಎರಡು ದೇಶಗಳು ಹೊಂದಿಕೊಂಡು ಸಹಬಾಳ್ವೆ ಮಾಡಲು ಸಾಧ್ಯವಿಲ್ಲ. ಇಂತಹ ಏಕತೆಯ ಕಡೆಗೆ ಇಡೀ ಜಗತ್ತು ಪ್ರಯತ್ನಿಸುತ್ತಿರುವ ಜಾಗತಿಕ ಏಕತೆಯ ಲಕ್ಷಣಗಳು ಕಾಣುತ್ತಿವೆ. ಕಳೆದ ಶತಮಾನದ ಪ್ರಥಮ ಜಾಗತಿಕ ಯುದ್ಧ ಮುಗಿದ ಮೇಲೆ ಲೀಗ್ ಆಫ್ ನೇಷನ್ಸ್ ವಿಶ್ವಸಂಸ್ಥೆಯನ್ನು ಸ್ಥಾಪಿಸಿದ್ದು ಜಗತ್ತಿನ ವಿವಿಧ ದೇಶಗಳು ಒಂದಾಗಿ ಬಾಳುವ ಯುದ್ಧ ಮುಕ್ತ ಜಗತ್ತಿನ ನಿರ್ಮಾಣಕ್ಕಾಗಿ. ಲೋಕವೆಲ್ಲ ‘ಏಕ ಜಗತ್ತು’(one world) ಆಗಿ ‘ಜಾಗತಿಕ ಸರಕಾರ’ (world government) ದ ಆಡಳಿತೆಯ ಕೆಳಗೆ ಬರಬೇಕೆಂಬ ಘನೋದ್ದೇಶದಿಂದ. ಯುದ್ಧಗಳು ಆಗಲೇಬಾರದೆಂಬ ಉದ್ದೇಶ ಭಗ್ನವಾಗಿ ದ್ವಿತೀಯ ಜಾಗತಿಕ ಯುದ್ಧ ನಡೆಯಿತು. ಅದು ಮುಕ್ತಾಯವಾಗುತ್ತಿದ್ದಂತೆ ‘ಯುಕ್ತ ರಾಷ್ಟ್ರ ಸಂಸ್ಥೆ (United Nation Organisation) (ಯುರಾಸಂ) ಅಸ್ತಿತ್ವದಲ್ಲಿ ಬಂದದ್ದು ಇದೇ ಘನೋದ್ದೇಶದಿಂದಲೇ. ದ್ವಿತೀಯ ಜಾಗತಿಕ ಯುದ್ಧಾನಂತರ ಜಾಗತಿಕ ಯುದ್ಧಗಳು ಆಗದಂತೆ ಸಂಯುಕ್ತ ರಾಷ್ಟ್ರ ಸಂಸ್ಥೆ ಪ್ರಯತ್ನಿಸುತ್ತದೆ. ಅಷ್ಟರಮಟ್ಟಿಗೆ ಜಗತ್ತು ಜಾಗತಿಕ ಐಕಮತ್ಯದ ಕಡೆಗೆ ಹೆಜ್ಜೆ ಹಾಕುತ್ತಿದೆ! ಆದರೂ ಜಗತ್ತಿನಲ್ಲಿ ಯುದ್ಧಗಳು ಸ್ಥಳೀಯ ಹಂತದಲ್ಲಿ ನಡೆಯುತ್ತಲೇ ಇವೆ ಎಂಬುದೂ ನಿಜವೆ. ನಮ್ಮ ದೇಶವೆ ಪಾಕಿಸ್ತಾನದೊಡನೆ, ಚೀನಾದೊಡನೆ ಯುದ್ಧ ಮಾಡಿತು. ಇರಾನ್-ಇರಾಕ್ ಮಧ್ಯೆ ಯುದ್ಧ ನಡೆಯಿತು. ವಿಯಟ್ನಾಮ್ ಯುದ್ಧ ಘನಘೋರವಾಗಿ ನಡೆಯಿತು. ಅಮೆರಿಕ -ಇರಾನ್ ಯುದ್ಧ ಜಗತ್ತನ್ನು ತಲ್ಲಣಗೊಳಿಸಿದೆ! ಇಸ್ರೇಲ್- ಫೆಲೆಸ್ತೀನ್ ದೇಶಗಳೂ ಯುದ್ಧದಲ್ಲಿ ನಿರತವಾಗಿವೆ. ಆದರೂ ಆ ಯುದ್ಧಗಳು ಆಯಾ ದೇಶಗಳ ಮಧ್ಯೆ ಗಡಿಗಳ ಒಳಗಡೆಗೇ ಸೀಮಿತವಾಗಿವೆ. ಜಗತ್ತನ್ನು ಜಾಗತಿಕ ಯುದ್ಧಕುಂಡಕ್ಕೆ ತಳ್ಳಿಲ್ಲ ಎಂಬುದೊಂದೇ ಸಮಾಧಾನ.
ಹೀಗೆ ಜಗತ್ತನ್ನು ಯುದ್ಧರಹಿತ ಸ್ಥಾನವನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿರುವಾಗ ಭಾರತ-ಪಾಕಿಸ್ತಾನಗಳು ಯುದ್ಧಾಸಕ್ತವಾದರೆ ಎರಡೂ ದೇಶಗಳು ನಿರಂತರ ಶಾಶ್ವತ ಶತ್ರುಗಳಾಗಿ ಬಾಳಬೇಕಾದೀತು ಹಾಗೂ ಆ ಯುದ್ಧಗಳು ಮತೀಯ ಕಾರಣಗಳಿಗಾಗಿ ಆಗುವುದಂತೂ ಅವಿವೇಕದ ಪರಮಾವಧಿ! ಅಂಥ ಆತ್ಮಘಾತುಕ ಪಾತಕ ಆಗಬಾರದೆಂದು ಎರಡೂ ದೇಶಗಳ ಜಾತ್ಯತೀತ, ಸರ್ವಮತ ಸಮನ್ವಯ, ಸಹನೆ, ಸೌಹಾರ್ದ, ಸಮಾನತೆಯ ಸಂಘಟನೆಗಳು ಪ್ರಯತ್ನಿಸುತ್ತಿವೆ. ಆ ಪ್ರಯತ್ನಗಳನ್ನು ವಿಫಲಗೊಳಿಸುವ ಸಂಘಸಂಸ್ಥೆಗಳು, ಸಮಾವೇಶಗಳು, ರಥಯಾತ್ರೆಗಳು, ಜಾತಿಗೊಬ್ಬ ಜಗದ್ಗುರು, ಪೀಠವನ್ನು ಸ್ಥಾಪಿಸುವ ದುಃಶಕ್ತಿಗಳೂ ವಿಜೃಂಭಿಸುವಂತೆ ಕಾಣುತ್ತಿದೆ! ಆದರೆ ಅವೆಲ್ಲ ಯಶಸ್ವಿಯಾಗಲಾರದೆಂಬ ಆತ್ಮವಿಶ್ವಾಸವೂ ಬೆಳೆಯುತ್ತಿದೆ. ಒಂದು ದಿನ ಉಭಯ ದೇಶಗಳಲ್ಲೂ ಶಾಂತಿ ಸೌಹಾರ್ದಗಳು ಭದ್ರವಾಗಿ ಸ್ಥಾಪನೆಯಾಗಿ ಶ್ರೀ ಅರವಿಂದರು ಹಾಗೂ ಇತರ ಹಲವು ಮಹನೀಯರು 1914-15ರ ಕಾಲಾವಧಿಯಲ್ಲಿ ಕಂಡ ಮಾನವ ಏಕತೆ (human unity) ಸ್ಥಾಪನೆ ಆದೀತೆಂಬ ಆಶಾವಾದದಿಂದ ಮನುಕುಲ ಉದ್ಧಾರವಾದೀತೆಂಬ ದೃಢನಂಬಿಗೆಯಿಂದ ಮುಂದುವರಿಯೋಣ.

(ಶನಿವಾರದ ಸಂಚಿಕೆಗೆ ಮುಂದುವರಿಯುವುದು...)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)