varthabharthi

ಕರಾವಳಿ

ಚಿಕಿತ್ಸೆ ನೀಡದ ವೀಡಿಯೊ ಅಪ್‌ಲೋಡ್ ಮಾಡಿದ ಪ್ರಕರಣ; ಆರೋಪಿಗಳ ಸೆರೆ

ವಾರ್ತಾ ಭಾರತಿ : 19 Jun, 2019

ಮಂಗಳೂರು, ಜೂ.19: ಅಪಘಾತಕ್ಕೀಡಾದ ಯುವಕನೊಬ್ಬನಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದೆ ನಿರ್ಲಕ್ಷ ವಹಿಸಿದ್ದಾರೆ ಎಂದು ಆಪಾದಿಸಿ ವೈದ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವೀಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪಾಂಡೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ದೀಕ್ಷಿತ್ ಹಾಗೂ ನಿತಿನ್ ಬಂಧಿತರು.

ಅಂಬೇಡ್ಕರ್ ವೃತ್ತದ ಬಳಿ ಸೋಮವಾರ ಮುಂಜಾನೆ ಅಪಘಾತ ನಡೆದಿದ್ದು, ಇದರಲ್ಲಿ ಧನುಷ್ ಶೆಟ್ಟಿ ಎಂಬವರು ಗಾಯಗೊಂಡಿದ್ದರು. ಕೂಡಲೇ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು, ಪರಿಶೀಲನೆ ನಡೆಸಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆದರೆ, ತಲೆಗೆ ಪೆಟ್ಟಾದ ಹಿನ್ನೆಲೆಯಲ್ಲಿ ಸಿಟಿ ಸ್ಕಾನ್ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದರು.

ಆದರೆ ಆಸ್ಪತ್ರೆಯಲ್ಲಿ ಸುಮಾರು 45 ನಿಮಿಷವಾದರೂ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡದ ಕಾರಣಕ್ಕೆ ಅಸಮಾಧಾನಗೊಂಡ ಧನುಷ್ ಶೆಟ್ಟಿಯ ನಿಕಟವರ್ತಿಗಳಾದ ದೀಕ್ಷಿತ್ ಹಾಗೂ ನಿತಿನ್ ಎಂಬವರು ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ವೀಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು ಎಂದು ಆರೋಪಿಸಲಾಗಿದೆ.

ಈ ಬಗ್ಗೆ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕರ್ನಾಟಕ ವೈದ್ಯಕೀಯ ಸೇವಾ ಸಿಬ್ಬಂದಿ ವಿರುದ್ಧ ಹಿಂಸೆ ತಡೆ ಕಾಯ್ದೆ ಅನ್ವಯ ಹಾಗೂ ಐಪಿಸಿ 504ರ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳನ್ನು ಬಂಧಿಸಿದ ಪಾಂಡೇಶ್ವರ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)