varthabharthi

ವೈವಿಧ್ಯ

ಬಡವನ ಪಾಲಿಗೆ ಬಲು ದುಬಾರಿ

ವಾರ್ತಾ ಭಾರತಿ : 20 Jun, 2019
ಡಾ. ಬಿ. ಭಾಸ್ಕರ ರಾವ್

ಪ್ರಶಾಂತ್ ಕನೋಜಿಯಾ

ಸಾಮಾಜಿಕ ಮಾಧ್ಯಮಗಳ ‘ದುರುಪಯೋಗ’ದ ಮೇಲೆ, ಅವುಗಳಲ್ಲಿ ಆಕ್ಷೇಪಾರ್ಹ, ಅವಹೇಳನಕಾರಿ ಪೋಸ್ಟ್‌ಗಳನ್ನು ಶೇರ್ ಮಾಡುವುದರ ಮೇಲೆ ನಿಯಂತ್ರಣ ಹೇರುವ ಪ್ರಶ್ನೆ ಕೇವಲ ಕಾನೂನಾತ್ಮಕವಷ್ಟೇ ಆಗಿರದೆ ನೈತಿಕ (ಎಥಿಕಲ್) ಪ್ರಶ್ನೆಯೂ ಆಗಿದೆ. ಆದ್ದರಿಂದ ಅದು ಯಾವ ಅರ್ಥದಲ್ಲಿ ‘ದುರುಪಯೋಗ’? ಯಾಕೆ, ಹೇಗೆ ಮತ್ತು ಯಾರಿಗೆ ‘ಅವಹೇಳನಕಾರಿ’? ಎಂದು ನಿರ್ಧರಿಸುವವರು ಯಾರು? ರಾಜಕೀಯ ಪುಢಾರಿಗಳೇ? ಅಥವಾ ಇವರು ಹೇಳಿದಂತೆ (ತಮ್ಮ ಹೊಟ್ಟೆಪಾಡಿಗಾಗಿ) ಅನಿವಾರ್ಯವಾಗಿ ಕುಣಿಯಲೇ ಬೇಕಾಗಿರುವ ಪೊಲೀಸರೇ? ಅಥವಾ ನ್ಯಾಯಾಲಯವೇ?

‘‘ನಮಗೆ ವರ್ತಮಾನ ಪತ್ರಿಕೆಗಳಿಲ್ಲದ ಒಂದು ಸರಕಾರ ಬೇಕೋ ಅಥವಾ ಒಂದು ಸರಕಾರವಿಲ್ಲದ ವರ್ತಮಾನ ಪತ್ರಿಕೆಗಳು ಬೇಕೋ ಎಂದು ನಿರ್ಧರಿಸುವುದನ್ನು ನನಗೆ ಬಿಟ್ಟಲ್ಲಿ ನಾನು ಎರಡನೆಯದನ್ನು ಆಯ್ಕೆ ಮಾಡಲು ಒಂದು ಕ್ಷಣ ಕಾಲವೂ ಹಿಂದು ಮುಂದು ನೋಡುವುದಿಲ್ಲ’’
- ಅಮೆರಿಕದ ಅಧ್ಯಕ್ಷರಾಗಿದ್ದ ಥಾಮಸ್ ಜೆಫರ್‌ಸನ್

ಅಭಿವ್ಯಕ್ತಿ ಸ್ವಾತಂತ್ರಪ್ರಿಯರು ನಿರೀಕ್ಷಿಸಿದ್ದಂತೆಯೇ ನಡೆಯುತ್ತಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ, ನ್ಯಾಯಾಂಗದ ನಿರ್ದೇಶಗಳನ್ನೂ ಮೀರಿ ಕಾರ್ಯಾಂಗವೂ ಸಾಮಾಜಿಕ ಮಾಧ್ಯಮಗಳನ್ನು ಅತಾರ್ಕಿಕವಾಗಿ ನಿಯಂತ್ರಿಸುವ ಅಭಿಯಾನದಲ್ಲಿ ತೊಡಗಿರುವಂತೆ ಕಾಣುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯವರಿಗೆ ಸಂಬಂಧಿಸಿದ ವೀಡಿಯೊ ಒಂದನ್ನು ಶೇರ್ ಮಾಡಿದ್ದಕ್ಕಾಗಿ ಪೊಲೀಸರಿಂದ ಪತ್ರಕರ್ತ ಪ್ರಶಾಂತ್ ಕನೋಜಿಯಾ ಬಂಧಿಸಲ್ಪಟ್ಟರು. ಸುಪ್ರೀಂ ಕೋರ್ಟ್ ಆ ಪ್ರಕರಣದಲ್ಲಿ ತೋರಿದ ಪ್ರಸಂಗಾವಧಾನತೆ ಮತ್ತು ಕೈಗೊಂಡ ತುರ್ತು ತೀರ್ಮಾನದಿಂದಾಗಿ ಅವರು ಬಿಡುಗಡೆಗೊಂಡರು. ಇನ್ನೊಂದೆಡೆ ಒಂದೇ ವಾರದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳನ್ನು ಮುಂದುಮಾಡಿ ಪೊಲೀಸರು ಎಂಟು ಜನರನ್ನು ಬಂಧಿಸಿದ ಸುದ್ದಿ ಬಂದಿದೆ.
ಎಂತೆಂತಹ ಕ್ಷುಲ್ಲಕ ಕಾರಣಗಳಿಗಾಗಿ ನಾಗರಿಕರನ್ನು ಬಂಧಿಸಲಾಗುತ್ತಿದೆ ಎಂದು ಯೋಚಿಸಿದರೆ ಸಾಮಾಜಿಕ ಮಾಧ್ಯಮಗಳ ಹೆಸರಿನಲ್ಲಿ ಈ ದೇಶದಲ್ಲಿ ಯಾರು ಯಾವಾಗ ಬಂಧಿಸಲ್ಪಡುತ್ತಾರೆ ಎಂದು ಹೇಳುವುದೇ ಕಷ್ಟವಾಗಬಹುದು.
 ಮುಖ್ಯಮಂತ್ರಿಯೊಬ್ಬರ ನಿವಾಸದ ಹೊರಗೆ ಮಹಿಳೆಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡುತ್ತಿರುತ್ತಾಳೆ. ಹಾಗೆ ಮಾತನಾಡುತ್ತಿರುವ ವೀಡಿಯೊವನ್ನು ಪತ್ರಕರ್ತನೊಬ್ಬ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳುತ್ತಾನೆ. ಕೂಡಲೇ ಆತನನ್ನು ಪೊಲೀಸರು ಬಂಧಿಸುತ್ತಾರೆ. ತಾನು ವೀಡಿಯೊ ಚಾಟ್ ಮೂಲಕ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತಿದ್ದೇನೆ ಮತ್ತು ಅವಿವಾಹಿತರಾದ ಅವರಿಗೆ ವಿವಾಹದ ಪ್ರಸ್ತಾವನೆಯನ್ನು ಕಳುಹಿಸಿದ್ದೇನೆ ಎಂದು ಆ ಮಹಿಳೆ ವೀಡಿಯೊದಲ್ಲಿ ಹೇಳಿಕೊಂಡಿರುತ್ತಾಳೆ.
ಆ ಪತ್ರಕರ್ತ ಶೇರ್ ಮಾಡಿದ್ದ ವೀಡಿಯೊವನ್ನು ಸುದ್ದಿವಾಹಿನಿಯೊಂದು ಪ್ರಸಾರ ಮಾಡಿ ಅದು ಮುಖ್ಯಮಂತ್ರಿಗಳಿಗೆ ಮಾನಹಾನಿ ಮಾಡಿದೆ-ಎಂಬ ಆರೋಪದಲ್ಲಿ ಸುದ್ದಿವಾಹಿನಿಯ ಮುಖ್ಯಸ್ಥರನ್ನು ಮತ್ತು ಸಂಪಾದಕರನ್ನೂ ಬಂಧಿಸಲಾಗುತ್ತದೆ.
ಗುಜರಿ ವ್ಯಾಪಾರಿಯೊಬ್ಬ ಸಾಮಾಜಿಕ ಮಾಧ್ಯಮಗಳಲ್ಲಿ ಮುಖ್ಯಮಂತ್ರಿಗಳೊಬ್ಬರ ಕುರಿತು ‘ಆಕ್ಷೇಪಾರ್ಹ’ ಪೋಸ್ಟ್‌ನ್ನು ಶೇರ್ ಮಾಡಿಕೊಂಡರೆ ಸಾಕು; ಕೂಡಲೇ ಆತನೂ ಬಂಧನಕ್ಕೊಳಗಾಗುತ್ತಾನೆ. ಹೀಗೆಯೇ ‘ಆಕ್ಷೇಪಾರ್ಹ ಪೋಸ್ಟ್ಟ್’ ಎಂಬ ಕಾರಣವನ್ನು ಮುಂದು ಮಾಡಿ ಇನ್ನಿಬ್ಬರನ್ನೂ ಪೊಲೀಸರು ಬಂಧಿಸುತ್ತಾರೆ. ಒಂದು ರಾಜ್ಯದ ಮೂಲ ನಿವಾಸಿಗಳನ್ನು ವಲಸಿಗರಿಂದ ರಕ್ಷಿಸುವಲ್ಲಿ ಆ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ವಿಫಲರಾಗಿದ್ದಾರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸುವಂತಿಲ್ಲ! ಹಾಗೆ ‘ಆಕ್ಷೇಪಾರ್ಹ’ವಾಗಿ ಟೀಕಿಸಿದ್ದಕ್ಕಾಗಿ ಆಡಳಿತಾರೂಢ ರಾಜಕೀಯ ಪಕ್ಷದ ಸದಸ್ಯನನ್ನೇ ಪೊಲೀಸರು ಬಂಧಿಸಿ ಎಳೆದೊಯ್ಯುತ್ತಾರೆ. ಇಷ್ಟೇ ಅಲ್ಲ, ಇನ್ನೋರ್ವ ಮುಖ್ಯಮಂತ್ರಿಯ ವಿರುದ್ಧ ‘ಆಕ್ಷೇಪಾರ್ಹ’ ಟೀಕೆಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪೊಲೀಸರು 26 ಜನರನ್ನು ಬಂಧಿಸುತ್ತಾರೆ.
ಇವನ್ನೆಲ್ಲ ನೋಡುವಾಗ 40 ವರ್ಷಗಳ ಹಿಂದೆ ತುರ್ತು ಪರಿಸ್ಥಿತಿಯ ವೇಳೆ ಪ್ರಕಟವಾದ ಕನ್ನಡದ ಸಣ್ಣಕತೆಯೊಂದು ನೆನಪಾಗುತ್ತದೆ: ಹುರಿಮೀಸೆ ಬೆಳೆಸಿಕೊಂಡು ರಸ್ತೆ ಬದಿ ನಿಂತಿದ್ದವನೊಬ್ಬನನ್ನು ಬೀಟ್ ಪೊಲೀಸ್ ಗದರಿಸಿ ಕೇಳುತ್ತಾನೆ ‘‘ನೀನ್ಯಾಕೆ ಹುರಿಮೀಸೆ ಬಿಟ್ಟುಕೊಂಡಿದ್ದಿ? ಇದಕ್ಕೆ ಸರಕಾರದಿಂದ ಅನುಮತಿ ಪಡೆದಿದ್ದೀಯಾ?’’
ಸಾಮಾಜಿಕ ಮಾಧ್ಯಮಗಳ ‘ದುರುಪಯೋಗ’ದ ಮೇಲೆ, ಅವುಗಳಲ್ಲಿ ಆಕ್ಷೇಪಾರ್ಹ, ಅವಹೇಳನಕಾರಿ ಪೋಸ್ಟ್‌ಗಳನ್ನು ಶೇರ್ ಮಾಡುವುದರ ಮೇಲೆ ನಿಯಂತ್ರಣ ಹೇರುವ ಪ್ರಶ್ನೆ ಕೇವಲ ಕಾನೂನಾತ್ಮಕವಷ್ಟೇ ಆಗಿರದೆ ನೈತಿಕ (ಎಥಿಕಲ್) ಪ್ರಶ್ನೆಯೂ ಆಗಿದೆ. ಆದ್ದರಿಂದ ಅದು ಯಾವ ಅರ್ಥದಲ್ಲಿ ‘ದುರುಪಯೋಗ’? ಯಾಕೆ, ಹೇಗೆ ಮತ್ತು ಯಾರಿಗೆ ‘ಅವಹೇಳನಕಾರಿ’? ಎಂದು ನಿರ್ಧರಿಸುವವರು ಯಾರು? ರಾಜಕೀಯ ಪುಢಾರಿಗಳೇ? ಅಥವಾ ಇವರು ಹೇಳಿದಂತೆ (ತಮ್ಮ ಹೊಟ್ಟೆಪಾಡಿಗಾಗಿ) ಅನಿವಾರ್ಯವಾಗಿ ಕುಣಿಯಲೇ ಬೇಕಾಗಿರುವ ಪೊಲೀಸರೇ? ಅಥವಾ ನ್ಯಾಯಾಲಯವೆ? ಈಗ ‘ದುರುಪಯೋಗ’ ಅಥವಾ ‘ಅವಹೇಳನಕಾರಿ’ ಎಂಬ ಕಾರಣ ಮುಂದು ಮಾಡಿ ಜನ ಸಾಮಾನ್ಯ ನಾಗರಿಕರಿಗೆ ಗಂಧಗಾಳಿ ಇಲ್ಲದ ಭಾರತೀಯ ದಂಡ ಸಂಹಿತೆಯ ಯಾವ್ಯಾವುದೋ ಸಂಖ್ಯೆಯನ್ನು ಉಲ್ಲೇಖಿಸಿ ಪೊಲೀಸರು ಮೊದಲು ಪತ್ರಕರ್ತರನ್ನು ಬಂಧಿಸುತ್ತಾರೆ. ಆ ಬಳಿಕ ಪ್ರಕರಣ ನ್ಯಾಯಾಲಯಕ್ಕೆ ಹೋದ ಬಳಿಕವಷ್ಟೆ ಯಾವ್ಯಾವ ನಿಯಮಗಳ ಅನುಸಾರ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂಬುದು ನಾಗರಿಕರಿಗೆ ತಿಳಿಯುತ್ತದೆ.
ನಮಗೆ ನಾವೇ ಕೊಟ್ಟುಕೊಂಡ ಸಂವಿಧಾನದಲ್ಲಿ ನಮಗೆ ನೀಡಲಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಸಾಮಾಜಿಕ ಮಾಧ್ಯಮಗಳ ನಿಯಂತ್ರಣದ ಹೆಸರಿನಲ್ಲಿ ಪ್ರಭುತ್ವವು ದಮನಿಸದಂತೆ ನಾಗರಿಕರಿಗೆ ಸುರಕ್ಷತಾ ಕವಾಟಗಳನ್ನು ಹೇಗೆ ಅಳವಡಿಸಬಹುದು? ಎಂಬುದು ಇಂದಿನ ತುರ್ತು ಸಾಂಸ್ಕೃತಿಕ ಅವಶ್ಯಕತೆಗಳಲ್ಲಿ ಒಂದು. ಈ ನಿಟ್ಟಿನಲ್ಲಿ ಕಳೆದವಾರ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ‘‘ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳ ಹಿನ್ನೆಲೆಯಲ್ಲಿ ಮುಕ್ತ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ಪ್ರತಿಬಿಂಬಗಳು’’ ಎಂಬ ವಿಷಯದ ಬಗ್ಗೆ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಇಬ್ಬರು ಕಾನೂನು ತಜ್ಞರು ವ್ಯಕ್ತಪಡಿಸಿದ ನಿಲುವುಗಳು ನನ್ನ ಗಮನ ಸೆಳೆದವು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಈಶ್ವರ ಭಟ್, ‘‘ಈಗ ವಿಭಿನ್ನ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಕ್ತವಾಗುತ್ತಿರುವ ನಾನಾ ರೀತಿಯ ಸಂವಹನ ವ್ಯಕ್ತಿಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಭಾಗವಾಗಿದೆ; ಇದು ದುರುಪಯೋಗವಾಗದಂತೆ ತಡೆಯುವ ಜವಾಬ್ದಾರಿ ಶಾಸಕಾಂಗದ ಮೇಲಿದೆ; ಆದರೆ ತಡೆಯುವ ಈ ಪ್ರಕ್ರಿಯೆ, ಸಾಮಾಜಿಕ ಮಾಧ್ಯಮಗಳ ನಿಯಂತ್ರಣ ಸಂವಿಧಾನದ ಆಶಯಗಳಿಗೆ ಅನುಗುಣವಾಗಿರಬೇಕು’’ ಎಂದರು.
ಸಾಮಾಜಿಕ ಮಾಧ್ಯಮಗಳಿಂದ ಅನಾಹುತಗಳಾಗುತ್ತಿವೆ, ಸಮಾಜ ವಿರೋಧಿ ಶಕ್ತಿಗಳ, ದುಷ್ಕರ್ಮಿಗಳ ಬೇಜವಾಬ್ದಾರಿತನದ ಸಂದೇಶಗಳಿಂದಾಗಿ ಅದೆಷ್ಟೋ ಮುಗ್ಧರ ಬದುಕು ಹಾಳಾಗುತ್ತಿದೆ, ಲೈಂಗಿಕ ಕಿರುಕುಳಕ್ಕೆ, ಅತ್ಯಾಚಾರಕ್ಕೆ ಒಳಗಾದವಳು ಶಾಬ್ದಿಕ ಅತ್ಯಾಚಾರಕ್ಕೆ ಗುರಿಯಾಗುತ್ತಿದ್ದಾಳೆ. ಆದ್ದರಿಂದ ಸಾಮಾಜಿಕ ಮಾಧ್ಯಮಗಳ ದುರ್ಬಳಕೆಯನ್ನು ತಡೆಗಟ್ಟಬೇಕು ಎಂಬ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಆದರೆ ಡಾ.ಈಶ್ವರ ಭಟ್ ಹೇಳುವಂತೆ ಈ ತಡೆಗಟ್ಟುವಿಕೆ ನಮ್ಮ ಸಂವಿಧಾನದಲ್ಲಿ ನೀಡಲಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಅಪಚಾರವಾಗದಂತೆ ನಡೆಯಬೇಕು.
 ಇದು ಈಗ ಎಷ್ಟರ ಮಟ್ಟಿಗೆ ನಡೆಯುತ್ತಿದೆ? ಎಂಬ ಪ್ರಶ್ನೆಗೆ ಸೂಕ್ತ ಉತ್ತರ ದೊರೆಯುವುದಿಲ್ಲ. ಯಾಕೆಂದರೆ ಪ್ರಭುತ್ವವು ಸಾಮಾಜಿಕ ಮಾಧ್ಯಮಗಳ ಮೇಲೆ ಬೇಕಾಬಿಟ್ಟಿಯಾಗಿ ನಿಯಂತ್ರಣ ಹೇರುವಾಗ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿಯನ್ನು ಕಾಪಾಡುವುದಕ್ಕಾಗಿ ತಾನು ಕ್ರಮಕೈಗೊಳ್ಳುತ್ತಿದ್ದೇನೆ ಎನ್ನುತ್ತದೆ. ನಾಗರಿಕರ ಖಾಸಗಿತನದ ಹಕ್ಕನ್ನು ಕಿತ್ತುಕೊಳ್ಳುವಾಗಲೂ ಇದೇ ಸಮರ್ಥನೆಯನ್ನು ನೀಡುತ್ತದೆ.
ಆದರೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕುಲ ಸಚಿವ ಜಿ. ಬಿ. ಪಾಟೀಲ್ ಹೇಳಿದಂತೆ, ಖಾಸಗಿತನದ ಹಕ್ಕು ಮತ್ತು ನಾಗರಿಕರಿಗೆ ಇರುವ ಮಾಹಿತಿ ಹಕ್ಕು ಇವೆರಡರ ನಡುವೆ, ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆ ಬಂದಾಗ ಖಾಸಗಿತನದ ಹಕ್ಕು ತಲೆಬಾಗಬೇಕಾಗುತ್ತದೆ. ಹಾಗಾದರೆ ಸಾಮಾಜಿಕ ಮಾಧ್ಯಮಗಳ ಮೇಲೆ ಸರಕಾರ ನಿಯಂತ್ರಣ ಹೇರುವಾಗ ಅನುಸರಿಸಬೇಕಾದ ಮಾನದಂಡಗಳು ಯಾವುವು? ಪ್ರಭುತ್ವವನ್ನು ಟೀಕಿಸಿದ ಎಂಬ ಒಂದೇ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ನ್ನು ಶೇರ್ ಮಾಡಿದ ವ್ಯಕ್ತಿಯೊಬ್ಬನನ್ನು ಬಂಧಿಸುವುದಾದಲ್ಲಿ ಆತನ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಗತಿ ಏನು? ಮತ್ತು ಹೀಗೆ ಬಂಧಿಸಲ್ಪಟ್ಟಾಗ ಎಷ್ಟು ಮಂದಿಗೆ ಕಾನೂನಾತ್ಮಕ ಹೋರಾಟ ನಡೆಸುವ ಆರ್ಥಿಕ ಬಲ ಇರುತ್ತದೆ? ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಿಗೆ ಹೋಗಿ ಜಾಮೀನು ಪಡೆಯುವುದು ಉಚಿತ ಅಕ್ಕಿ ಅಥವಾ ಉಚಿತ ಬಸ್‌ಪಾಸ್ ಪಡೆಯುವಷ್ಟು ಸುಲಭವೇ? ಅಥವಾ ಅಗ್ಗವೇ? ಕೋರ್ಟು ಕಚೇರಿಗೆ ಅಲೆದವರಿಗೆ ಈ ದೇಶದಲ್ಲಿ ನ್ಯಾಯಪಡೆಯುವುದು ಎಷ್ಟು ದುಬಾರಿಯಾದ ಮತ್ತು ತ್ರಾಸದಾಯಕವಾದ ಸಂಗತಿ ಎಂದು ಗೊತ್ತಿದೆ.
ಭಿನ್ನಾಭಿಪ್ರಾಯಗಳನ್ನು ಸಹಿಸದ, ಭಿನ್ನಮತವನ್ನು ದಮನಿಸಬಯಸುವ ಒಂದು ಪ್ರಭುತ್ವದಲ್ಲಿ, ಕಾರ್ಪೊರೇಟ್ ಶಕ್ತಿಗಳು ಮಾಧ್ಯಮಗಳನ್ನು ನಿಯಂತ್ರಿಸುತ್ತಿರುವಾಗ ಮತ್ತು ಈ ಶಕ್ತಿಗಳು ಮತ್ತು ಪ್ರಭುತ್ವ ಸದಾ ಜೊತೆ ಜೊತೆಯಾಗಿಯೇ ಸಾಗುತ್ತಿರುವಾಗ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ ಜನಸಾಮಾನ್ಯ ಪ್ರಜ್ಞಾವಂತನ ಪಾಲಿಗೆ ಒಂದು ಮರೀಚಿಕೆಯಷ್ಟೆ ಆಗಿ ಉಳಿಯುತ್ತದೆ.
ಭಿನ್ನಮತೀಯ ಬಡವನ ಪಾಲಿಗೆ, ಅಭಿವ್ಯಕ್ತಿ ಸ್ವಾತಂತ್ರವೂ ಸೇರಿದಂತೆ, ಎಲ್ಲ ರೀತಿಯ ಸ್ವಾತಂತ್ರ ಬಲು ದುಬಾರಿ.
(bhaskarrao599@gmail.com)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)