ವಿಶ್ವಕಪ್: ನ್ಯೂಝಿಲ್ಯಾಂಡ್ ಜಯಭೇರಿ
ವಿಲಿಯಮ್ಸನ್ ದಿಟ್ಟ ಹೋರಾಟ
ಬರ್ಮಿಂಗ್ಹ್ಯಾಮ್, ಜೂ.19: ದಕ್ಷಿಣ ಆಫ್ರಿಕ ವಿರುದ್ಧದದ ವಿಶ್ವಕಪ್ನ 25ನೇ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡ 4 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿದೆ.
ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 241 ರನ್ ಗುರಿ ಪಡೆದ ಕಿವೀಸ್ 48.3 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತು.
ಕಿವೀಸ್ 2.1ನೇ ಓವರ್ನಲ್ಲಿ 12 ರನ್ ಗಳಿಸುವಷ್ಟರಲ್ಲಿ ಆರಂಭಿಕ ದಾಂಡಿಗ ಕಾಲಿನ್ ಮುನ್ರೊ(9) ರಬಾಡ ಬೌಲಿಂಗ್ನಲ್ಲಿ ರಿಟರ್ನ್ ಕ್ಯಾಚ್ ನೀಡಿ ನಿರ್ಗಮಿಸಿದರು. ಆಗ ಎರಡನೇ ವಿಕೆಟ್ಗೆ 60 ರನ್ ಸೇರಿಸಿದ ಇನ್ನೋರ್ವ ಆರಂಭಿಕ ಆಟಗಾರ ಗಪ್ಟಿಲ್(35, 59 ಎಸೆತ, 5 ಬೌಂಡರಿ) ಹಾಗೂ ನಾಯಕ ವಿಲಿಯಮ್ಸನ್(ಔಟಾಗದೆ 106, 138 ಎಸೆತ )ತಂಡಕ್ಕೆ ಆಸರೆಯಾದರು.
ಈ ಜೋಡಿಯನ್ನು ಫೆಹ್ಲುಕ್ವಾವೊ(1-21) ಬೇರ್ಪಡಿಸಿದರು. ಗಪ್ಟಿಲ್ ಔಟಾದ ಬೆನ್ನಿಗೆ ರಾಸ್ ಟೇಲರ್(1), ಲಥಾಮ್(1) ಪೆವಿಲಿಯನ್ಗೆ ಪರೇಡ್ ನಡೆಸಿದರು.
ವಿಲಿಯಮ್ಸನ್ ಹಾಗೂ ನೀಶಾಮ್(23) 4ನೇ ವಿಕೆಟ್ ಜೊತೆಯಾಟದಲ್ಲಿ 57 ರನ್ ಸೇರಿಸಿದರು. ಗ್ರಾಂಡ್ಹೊಮ್ ಅವರೊಂದಿಗೆ 5ನೇ ವಿಕೆಟ್ಗೆ 91 ರನ್ ಗಳ ಜೊತೆಯಾಟ ನಡೆಸಿದ ವಿಲಿಯಮ್ಸನ್, ಅಂತಿಮವಾಗಿ ಸ್ಯಾಂಟ್ನರ್ ಜೊತೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ದ.ಆಫ್ರಿಕದ ಪರ ಕ್ರಿಸ್ ಮೊರಿಸ್(3-49)ಯಶಸ್ವಿ ಬೌಲರ್ ಎನಿಸಿಕೊಂಡರು. ರಬಾಡ(1-42) ಹಾಗೂ ಫೆಹ್ಲುಕ್ವಾಯೊ(1-73)ತಲಾ ಒಂದು ವಿಕೆಟ್ ಪಡೆದರು.