ಪ್ರಮಾಣ ವಚನ ಸ್ವೀಕರಿಸುವ ಬದಲು ಟರ್ಕಿಯಲ್ಲಿ ಹಸೆಮಣೆ ಏರಿದ ಹೊಸ ಸಂಸದೆ !
ಹೊಸದಿಲ್ಲಿ : ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಬಸೀರ್ಹತ್ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ನಟಿ ನುಸ್ರತ್ ಜಹಾನ್ (29) ಕೊಲ್ಕತ್ತಾ ಮೂಲದ ಉದ್ಯಮಿ ನಿಖಿಲ್ ಜೈನ್ ಅವರನ್ನು ಟರ್ಕಿ ದೇಶದ ಪ್ರಕೃತಿ ರಮಣೀಯ ಬೋಡ್ರುಂ ನಗರದಲ್ಲಿ ವಿವಾಹವಾಗಿದ್ದಾರೆ. ಮದುವೆ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ತಮ್ಮ ವಿವಾಹದ ಸಂತೋಷವನ್ನು ಎಲ್ಲರ ಜತೆ ಹಂಚಿಕೊಂಡಿದ್ದಾರೆ.
ವಿವಾಹ ಸಮಾರಂಭದಲ್ಲಿ ನುಸ್ರತ್ ಅವರ ಕುಟುಂಬ ಸದಸ್ಯರು ಹಾಗೂ ಆತ್ಮೀಯ ಸ್ನೇಹಿತರು ಹಾಜರಿದ್ದರು.
ನುಸ್ರತ್ ಜೂನ್ 15ರಂದೇ ಟರ್ಕಿಗೆ ತಮ್ಮ ಆತ್ಮೀಯ ಗೆಳತಿ, ಜಾದವ್ಪುರ್ ಕ್ಷೇತ್ರದ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಜತೆ ತೆರಳಿದ್ದರು. ವಿವಾಹ ಸಮಾರಂಭ ಸಿಕ್ಸ್ತ್ ಸೆನ್ಸ್ ಕಪಲಂಕಯ ಹೋಟೆಲ್ ನಲ್ಲಿ ನಡೆದಿದೆ.
ತಮ್ಮ ವಿವಾಹದ ಫೋಟೋ ಶೇರ್ ಮಾಡಿದ ನುಸ್ರತ್ "ಟುವಡ್ರ್ಸ್ ಎ ಹ್ಯಾಪ್ಪಿಲಿ ಎವರ್ ಆಫ್ಟರ್ ವಿದ್ ನಿಖಿಲ್ ಜೈನ್,'' ಎಂದು ಟ್ವೀಟ್ ಮಾಡಿದ್ದಾರೆ.
ನುಸ್ರತ್ ಹಾಗೂ ಮಿಮಿ ಇಬ್ಬರೂ ಟರ್ಕಿಯಲ್ಲಿರುವುದರಿಂದ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಅವರಿಗೆ ಸಾಧ್ಯವಾಗಿಲ್ಲ. ಇಬ್ಬರೂ ಲೋಕಸಭಾ ಚುನಾವಣೆಯಲ್ಲಿ ಬೃಹತ್ ಅಂತರಿಂದ ಜಯ ಗಳಿಸಿದ್ದರು.
ನುಸ್ರತ್ ಬಿಜೆಪಿಯ ಸಯಂತನ್ ಘೋಷ್ ಅವರನ್ನು 3,50,369 ಮತಗಳ ಅಂತರದಿಂದ ಸೋಲಿಸಿದ್ದರೆ ಮಿಮಿ ಚಕ್ರವರ್ತಿ ಕೂಡ ಬಿಜೆಪಿ ಅಭ್ಯರ್ಥಿ ಅನುಪಮ್ ಹಝ್ರಾ ಅವರನ್ನು 2.9 ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದರು.
Towards a happily ever after with Nikhil Jain ❤️ pic.twitter.com/yqo8xHqohj
— Nusrat (@nusratchirps) June 19, 2019