varthabharthi

ವೈವಿಧ್ಯ

ಹಲ್ಲೆಗೊಳಗಾದ ವೈದ್ಯರೂ.. ಅಸ್ವಸ್ಥ ನಾಗರಿಕತೆಯೂ...

ವಾರ್ತಾ ಭಾರತಿ : 21 Jun, 2019
ನಾ. ದಿವಾಕರ

ಆಳುವ ವರ್ಗಗಳ ಮತ್ತು ಕಾರ್ಪೊರೇಟ್ ಉದ್ಯಮಿಗಳ ನಡುವಿನ ಒಡಂಬಡಿಕೆಗೆ ಒಂದೆಡೆ ವೈದ್ಯಲೋಕ ಮತ್ತು ವೈದ್ಯಕೀಯ ವೃತ್ತಿ ಬಲಿಯಾಗುತ್ತಿದ್ದರೆ ಮತ್ತೊಂದೆಡೆ ಜನಸಾಮಾನ್ಯರೂ ಬಲಿಯಾಗುತ್ತಿದ್ದಾರೆ. ತಪ್ಪೆಸಗುವವರನ್ನು ಕಾನೂನಿಗೆ ಒಪ್ಪಿಸದೆ ಜನರೇ ಥಳಿಸುವ ವಿಕೃತ ಮನೋಭಾವಕ್ಕೆ ಈ ದೇಶದ ಸಾಂಸ್ಕೃತಿಕ ರಾಜಕಾರಣ ಮತ್ತು ಆಧಿಪತ್ಯ ರಾಜಕಾರಣ ಪ್ರತ್ಯಕ್ಷವಾಗಿಯೇ ಪ್ರೋತ್ಸಾಹ ನೀಡುತ್ತಿರುವುದನ್ನು ಈ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸಬೇಕಿದೆ.

ಭಾರತದ ರಾಜಕಾರಣದ ದುರಂತ ಎಂದರೆ ಇಲ್ಲಿ ಭಾವನಾತ್ಮಕ ಅಂಶಗಳು ವಾಸ್ತವ ಬದುಕಿನ ಎಲ್ಲ ಸಂದರ್ಭಗಳನ್ನೂ ಮೆಟ್ಟಿ ನಿಂತು ಆಧಿಪತ್ಯ ರಾಜಕಾರಣದ ವಾರಸುದಾರರಿಗೆ ನೆರವಾಗುತ್ತವೆ. ರಾಜಕಾರಣದಲ್ಲಿ ಸಂವೇದನೆ ಶೂನ್ಯ ಸ್ಥಿತಿಯಲ್ಲಿರುತ್ತದೆ ಆದರೆ ಸಂವೇದನಾಶೀಲ ವಿಚಾರಗಳು ಮುನ್ನೆಲೆಗೆ ಬಂದಾಗ ರಾಜಕೀಯ ಹಿತಾಸಕ್ತಿಗಳು ಧುತ್ತೆಂದು ಪ್ರತ್ಯಕ್ಷವಾಗುತ್ತವೆ. ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಮನುಜ ಸಂವೇದನೆಯನ್ನೂ ಮಾರುಕಟ್ಟೆಯ ಸರಕಿನಂತೆ ಬಳಸಲಾರಂಭಿಸಿರುವುದು ನಾಗರಿಕ ಸಮಾಜ ಎದುರಿಸುತ್ತಿರುವ ಅತಿ ದೊಡ್ಡ ದುರಂತ ಎನ್ನಬಹುದು. ಸಂವಿಧಾನವನ್ನು ಕೊಂಚ ಕಾಲ ಬದಿಗಿಡೋಣ. ಸಾಂವಿಧಾನಿಕ ಬದ್ಧತೆ ಬೇಕಿರುವುದು ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಸಂದರ್ಭದಲ್ಲಿ. ಆದರೆ ಮೂಲತಃ ಒಂದು ಸ್ವಸ್ಥ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಈ ದೇಶದ ಸಮಸ್ತ ಪ್ರಜೆಗಳನ್ನು ಪ್ರತಿನಿಧಿಸುವವರಲ್ಲಿ ಇರಬೇಕಾದುದು ಮಾನವೀಯ ಸಂವೇದನೆ, ಜನಪರ ಕಾಳಜಿ ಮತ್ತು ನಾಗರಿಕ ಪ್ರಜ್ಞೆ. ಈ ಮೂರೂ ಅಂಶಗಳು ಇಂದು ಬಿಕರಿಯಾಗುವ ವಸ್ತುಗಳಾಗಿವೆ. ಸಂವಿಧಾನದ ಚೌಕಟ್ಟಿನಲ್ಲಿ ಜನಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸುವ ಜನನಾಯಕರು ಈ ವಸ್ತುಗಳ ಅಧಿಕೃತ ವಾರಸುದಾರರಂತೆ ವರ್ತಿಸುತ್ತಾ ಎಲ್ಲವನ್ನೂ ಹರಾಜು ಹಾಕುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದ ವೈದ್ಯರ ಮೇಲಿನ ಹಲ್ಲೆಯೂ ಸಹ ಹರಾಜು ಮಾರುಕಟ್ಟೆಯಲ್ಲಿ ಪ್ರದರ್ಶನಕ್ಕಿದೆ.
ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದಿರುವ ಹಲ್ಲೆ ಸಾರ್ವಜನಿಕರ ಆಕ್ರೋಶವನ್ನು ಬಿಂಬಿಸುವ ಒಂದು ಪ್ರಸಂಗ. ಇಂತಹ ಪ್ರಸಂಗಗಳು ದೇಶದಲ್ಲಿ ಸತತವಾಗಿ ನಡೆಯುತ್ತಲೇ ಇವೆ. ರೋಗಿಗಳನ್ನು ನಿರ್ಲಕ್ಷಿಸುವ ವೈದ್ಯರನ್ನು ನಿಯಂತ್ರಿಸುವ ಕಾನೂನಿನಂತೆಯೇ ವೈದ್ಯರನ್ನು ಇಂತಹ ಆಕ್ರಮಣಗಳಿಂದ ರಕ್ಷಿಸುವ ಕಾನೂನು ಸಹ ನಮ್ಮ ದೇಶದಲ್ಲಿ ಜಾರಿಯಲ್ಲಿದೆ. ಆದರೂ ವೈದ್ಯರ ನಿರ್ಲಕ್ಷ್ಯಕ್ಕೊಳಗಾಗಿ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಸಾರ್ವಜನಿಕರ ಆಕ್ರೋಶಕ್ಕೆ ಹಲವಾರು ವೈದ್ಯರು ತುತ್ತಾಗುತ್ತಿದ್ದಾರೆ. ಇಲ್ಲಿ ಎರಡು ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ. ತಮ್ಮ ಸಂಬಂಧಿಕರು ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಾಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವುದೇಕೆ? ಇಲ್ಲಿ ಒಂದು ಜೀವದ ಪ್ರಶ್ನೆ ಎದುರಾಗುತ್ತದೆ. ವೈದ್ಯಕೀಯ ಸೇವೆಗಳು ಮಾರುಕಟ್ಟೆಯ ಸರಕುಗಳಂತೆ ಜನಸಾಮಾನ್ಯರ ಕೈಗೆಟುಕದಂತೆ ಅಲಭ್ಯವಾಗುತ್ತಿರುವ ಸಂದರ್ಭದಲ್ಲಿ ಬಹುಪಾಲು ಬಡ ಜನತೆ ಸರಕಾರಿ ಆಸ್ಪತ್ರೆಗಳನ್ನು ಆಶ್ರಯಿಸುತ್ತಾರೆ. ಆದರೆ ಸರಕಾರಿ ಆಸ್ಪತ್ರೆಗಳಲ್ಲಿನ ದುರವಸ್ಥೆ ಅಲ್ಲಿನ ಅತ್ಯುತ್ತಮ ವೈದ್ಯರನ್ನೂ ಜನರಿಂದ ದೂರ ಮಾಡುತ್ತವೆ. ಸಹಜವಾಗಿಯೇ ಜನರು ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುತ್ತಾರೆ. ಖಾಸಗಿ ಆಸ್ಪತ್ರೆಗಳೆಂದರೆ ಹಣ ಸುಲಿಗೆ ಮಾಡುವ ವಾಣಿಜ್ಯ ದಂಧೆಯಾಗಿರುವುದು ಕಣ್ಣಿಗೆ ಕಾಣುವ ಸತ್ಯ. ತಮ್ಮ ಜೀವಿತಾವಧಿಯ ಉಳಿತಾಯವೆಲ್ಲವನ್ನೂ ಆಸ್ಪತ್ರೆಗೆ ಸುರಿದರೂ ಚಿಕಿತ್ಸೆ ಫಲಕಾರಿಯಾಗದೆ ಹೋದಾಗ ಆಕ್ರೋಶ ಹೊರಹೊಮ್ಮುತ್ತದೆ.
ಇಲ್ಲಿ ಉದ್ಭವಿಸುವ ಮತ್ತೊಂದು ಪ್ರಶ್ನೆ ವೈದ್ಯರ ನಿರ್ಲಕ್ಷ್ಯವನ್ನು ಕುರಿತದ್ದು. ಬಹುತೇಕ ಸಂದರ್ಭಗಳಲ್ಲಿ ವೈದ್ಯರ ನಿರ್ಲಕ್ಷ್ಯಕ್ಕಿಂತಲೂ ಅವರದೇ ಸಲಹೆಯ ಮೇಲೆ ನಡೆಸಲಾಗುವ ದೇಹ ತಪಾಸಣೆಯ ಫಲಿತಾಂಶಗಳಲ್ಲಿನ ವ್ಯತ್ಯಯಗಳು ರೋಗಿಗಳಿಗೆ ಮುಳುವಾಗುತ್ತವೆ. ಖಾಸಗಿ ಆಸ್ಪತ್ರೆಗಳೆಂದರೆ ಚಿಕಿತ್ಸಾ ಕೇಂದ್ರ ಎನ್ನುವುದಕ್ಕಿಂತಲೂ ತಪಾಸಣಾ ಕೇಂದ್ರದ ಮುಖ್ಯ ಕಚೇರಿಗಳು ಎಂದು ಹೇಳುವಂತಾಗಿದೆ. ಆಸ್ಪತ್ರೆಯ ಮಾಲಕರಿಗೆ ವೈದ್ಯಕೀಯ ಜ್ಞಾನ ಇರಬೇಕೆಂದೇನಿಲ್ಲ. ಇದ್ದರೂ ಸಂವೇದನೆ ಇರಬೇಕೆಂದಿಲ್ಲ. ಒಂದು ಉದ್ಯಮದ ರೀತಿಯಲ್ಲಿ ಸ್ಥಾಪನೆಯಾಗುವ ಖಾಸಗಿ ಆಸ್ಪತ್ರೆಗಳ ನಿರ್ವಹಣೆಯನ್ನು ವೈದ್ಯರ ತಂಡಕ್ಕೆ ನೀಡಲಾಗುತ್ತದೆ. ದೇಹದ ಪ್ರತಿಯೊಂದು ಭಾಗಕ್ಕೂ ಒಬ್ಬ ಸ್ಪೆಷಲಿಸ್ಟ್ ಇರುವುದರಿಂದ ಇಷ್ಟೂ ವಿಧದ ತಜ್ಞ ವೈದ್ಯರಿಗೆ ಉದ್ಯೋಗ ನೀಡುವ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಬಂಡವಾಳ ಮತ್ತು ಲಾಭ ಪ್ರಧಾನವಾಗುತ್ತದೆಯೇ ಹೊರತು ಜನಸಾಮಾನ್ಯರ ಆರೋಗ್ಯವಲ್ಲ. ಹಾಗಾಗಿ ಅಗತ್ಯವಿರಲಿ ಇಲ್ಲದಿರಲಿ ಎಕ್ಸ್‌ರೇ, ಎಂಆರ್‌ಐ, ಸ್ಕ್ಯಾನಿಂಗ್ ಮುಂತಾದ ತಪಾಸಣೆಗಳನ್ನು ನಡೆಸುವುದು ಸಾಮಾನ್ಯ ಸಂಗತಿಯಾಗಿದೆ. ಇಲ್ಲಿ ವೈದ್ಯಕೀಯ ಸೇವೆ ಮತ್ತು ವೈದ್ಯಕೀಯ ವೃತ್ತಿಯ ನಡುವೆ ಇರುವ ಸೂಕ್ಷ್ಮವ್ಯತ್ಯಾಸವನ್ನು ಗ್ರಹಿಸುವುದು ಅನಿವಾರ್ಯ.
ಜಾಗತೀಕರಣ ಮತ್ತು ನವ ಉದಾರವಾದದ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆ ಮತ್ತು ಆಡಳಿತಾರೂಢ ಸರಕಾರಗಳು ಸಾರ್ವಜನಿಕ ಕಾಳಜಿಯನ್ನು ತಮ್ಮ ಕಾರ್ಯಕ್ಷೇತ್ರದಿಂದ ಹೊರತುಪಡಿಸಿರುವ ಹಿನ್ನೆಲೆಯಲ್ಲೇ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವೆಯ ಹಲವಾರು ಕ್ಷೇತ್ರಗಳು ಕಾರ್ಪೊರೇಟ್ ವಶವಾಗಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಹತ್ತು ವರ್ಷಗಳ ವ್ಯಾಸಂಗ ಮತ್ತು ಲಕ್ಷಾಂತರ ರೂ.ಗಳ ಖರ್ಚು ವೈದ್ಯಕೀಯ ಶಿಕ್ಷಣದ ವಾಣಿಜ್ಯೀಕರಣಕ್ಕೆ ಕಾರಣವಾಗಿರುವುದನ್ನೂ ಇಲ್ಲಿ ಗಮನಿಸಬೇಕಿದೆ. ಯಾವುದೇ ವೃತ್ತಿಪರರಲ್ಲಿ ಅಪೇಕ್ಷಿಸಲಾಗುವ ಮೌಲ್ಯಗಳನ್ನು ವಾಣಿಜ್ಯ ಹಿತಾಸಕ್ತಿಗಳು ಆವರಿಸಿಕೊಂಡಾಗ ಅಲ್ಲಿ ಸಂವೇದನೆ ಮೊದಲ ಬಲಿಯಾಗುತ್ತದೆ. ಇದನ್ನು ಶಿಕ್ಷಣ ವ್ಯವಸ್ಥೆಯಲ್ಲೂ ಕಾಣಬಹುದು, ನ್ಯಾಯಾಂಗ ಕ್ಷೇತ್ರದಲ್ಲೂ ಕಾಣಬಹುದು. ವೈದ್ಯ ವೃತ್ತಿಯೂ ಇದರಿಂದ ಹೊರತಾಗಿಲ್ಲ. ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವುದ ರೊಂದಿಗೇ ಈ ಆಸ್ಪತ್ರೆಗಳಿಗೆ ಸ್ಪಂದಿಸಲು ತಪಾಸಣಾ ಕೇಂದ್ರಗಳು, ಪ್ರಯೋಗಶಾಲೆಗಳೂ ಹೆಚ್ಚಾಗುತ್ತಿರುತ್ತವೆ. ಖಾಸಗಿ ವೈದ್ಯರು ತಪಾಸಣೆಗೆಂದು ನೀಡುವ ಸಲಹೆಗಳ ಹಿಂದೆ ರೋಗಿಯ ರಕ್ಷಣೆಯ ಸದುದ್ದೇಶವೇ ಇದ್ದರೂ, ಈ ಪ್ರಕ್ರಿಯೆಯ ಹಿಂದೆ ಹಣಕಾಸಿನ ಪ್ರಭಾವ ಎದ್ದು ಕಾಣುತ್ತದೆ. ಅನಗತ್ಯ ತಪಾಸಣೆ ಎನ್ನುವುದು ಸರ್ವೇಸಾಮಾನ್ಯವಾಗಿರುವ ಈ ಸಂದರ್ಭದಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳು ರೋಗಿಗಳ ಜೇಬುಗಳನ್ನು ಹೆಗ್ಗಣಗಳಂತೆ ಕೊರೆಯುತ್ತಲೇ ಇರುತ್ತವೆ.
  60 ವರ್ಷ ದಾಟಿದ ಯಾವುದೇ ತಜ್ಞ ವೈದ್ಯರು, ಸರಕಾರಿ ಆಸ್ಪತ್ರೆಗಳಿಂದ ನಿವೃತ್ತರಾಗಿರುವ ವೈದ್ಯರು ಸಾಮಾನ್ಯವಾಗಿ ‘‘ಕಾರ್ಪೊರೇಟ್ ಆಸ್ಪತ್ರೆಗೆ ಯಾಕ್ರೀ ಹೋಗ್ತೀರ, ನಿಮಗೆ ದುಡ್ಡು ಹೆಚ್ಚಾಗಿದ್ಯಾ? ಬೇಡದ ತಪಾಸಣೆಗಳಿಗೆ ಸುಮ್ಮನೆ ಹಣ ವ್ಯರ್ಥ ಮಾಡ್ತೀರಲ್ಲಾ’’ ಎಂದು ಹೇಳುವುದನ್ನು ಕಾಣಬಹುದು. ಆದರೆ ಇಲ್ಲಿ ವೈದ್ಯರನ್ನೇ ದೂಷಿಸಲಾಗುವುದಿಲ್ಲ. ಹಲವಾರು ಸಂದರ್ಭಗಳಲ್ಲಿ ವಿದ್ಯಾವಂತರೂ ಸಹ ವೈದ್ಯಕೀಯ ಚಿಕಿತ್ಸೆಯ ಗುಣಮಟ್ಟವನ್ನು ಅಳೆಯಲು ಖಾಸಗಿ ವೈದ್ಯರನ್ನೇ ಮಾಪಕದಂತೆ ಬಳಸುವುದನ್ನು ಕಾಣಬಹುದು. ಸರಕಾರಿ ಆಸ್ಪತ್ರೆಗಳಲ್ಲಿನ ನುರಿತ, ಅನುಭವಸ್ಥ, ಹಿರಿಯ ವೈದ್ಯರನ್ನೂ ಕೇವಲ ಸರಕಾರಿ ವೈದ್ಯ ಎನ್ನುವ ಕಾರಣಕ್ಕೆ ಅಲಕ್ಷಿಸುವ ಪ್ರವೃತ್ತಿಯನ್ನು ಸುಶಿಕ್ಷಿತ ಸಮಾಜದಲ್ಲಿ ಕಾಣಬಹುದು. ಸಮಾಜದ ಮಧ್ಯಮ ವರ್ಗಗಳಲ್ಲಿ ಕಂಡುಬರುವ ಈ ಧೋರಣೆ ಕಾರ್ಪೊರೇಟ್ ಆಸ್ಪತ್ರೆಗಳಿಗೆ, ಖಾಸಗಿ ವೈದ್ಯರಿಗೆ ವರದಾನವಾಗಿ ಪರಿಣಮಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇಲ್ಲಿ ವೈದ್ಯರು ಕಾರ್ಪೊರೇಟ್ ಆಡಳಿತ ಮಂಡಳಿಗಳ ಕೈಬಂಧಿಯಾಗಿರುತ್ತಾರೆ. ಖಾಸಗಿ ಆಸ್ಪತ್ರೆಯ ಒಡೆಯರ ಮರ್ಜಿಗೆ ಒಳಗಾಗಿರುತ್ತಾರೆ. ಲಕ್ಷಾಂತರ ರೂ.ಗಳನ್ನು ವೈದ್ಯಕೀಯ ಕಾಲೇಜುಗಳಿಗೆ ಡೊನೇಷನ್ ರೂಪದಲ್ಲಿ ತೆತ್ತು ತಮ್ಮ ಪದವಿ ಪಡೆದಿರುವ ವೈದ್ಯರಿಗೆ ತಾವು ಖರ್ಚು ಮಾಡಿದ ಹಣವನ್ನು ಮರಳಿ ಪಡೆಯುವ ಆಕಾಂಕ್ಷೆ ಇರುವುದು ಅಪರಾಧವೇನಲ್ಲ ಅಲ್ಲವೇ? ಈ ಶೈಕ್ಷಣಿಕ ವೆಚ್ಚ ಹೆಚ್ಚಾಗಿರುವುದಾದರೂ ಏಕೆ? ಪುನಃ ಇಲ್ಲಿ ಕಾರ್ಪೊರೇಟ್ ಶೈಕ್ಷಣಿಕ ಸಂಸ್ಥೆಗಳ ಹಾವಳಿ ಎದುರಾಗುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ಜನಸೇವೆ ಮಾಡಿ ಜೀವ ಸವೆಸಿರುವ ಅನೇಕಾನೇಕ ವೈದ್ಯರು ಇಂದಿಗೂ ಸರಳ ಜೀವನ ನಡೆಸುತ್ತಿರುವುದನ್ನು ಕಾಣಬಹುದು. ಆದರೆ ನವ ಉದಾರವಾದ ಪೋಷಿಸಿರುವ ಮಧ್ಯಮ ವರ್ಗಗಳು ಈ ಸರಳ ಜೀವನಕ್ಕೂ ಸಜ್ಜಾಗಿಲ್ಲ, ಸೇವಾ ಕೈಂಕರ್ಯಕ್ಕೂ ಸಿದ್ಧವಾಗಿಲ್ಲ. ಒಬ್ಬ ಸರಕಾರಿ ವೈದ್ಯ ಇಡೀ ತಿಂಗಳು ದುಡಿದು ಸಂಪಾದಿಸುವಷ್ಟನ್ನು ಒಂದು ದಿನದಲ್ಲಿ ಸಂಪಾದಿಸುವ ಅವಕಾಶವನ್ನು ಕಾರ್ಪೊರೇಟ್ ವಲಯ ಒದಗಿಸುತ್ತದೆ. ಇಂತಹ ಆಮಿಷದ ನಡುವೆ ಬಲಿಯಾಗುವುದು ಜನಸಾಮಾನ್ಯರ ಆರೋಗ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯ ಎಂದು ಹೇಳಬೇಕಿಲ್ಲ ಅಲ್ಲವೇ?
ಯಾವುದೇ ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆದರೂ ಅದು ದೇಶವ್ಯಾಪಿ ಮುಷ್ಕರಕ್ಕೆ ಕಾರಣವಾಗುತ್ತದೆ. ಇದರಲ್ಲಿ ತಪ್ಪೇನಿಲ್ಲ. ವೈದ್ಯರ ನಿರ್ಲಕ್ಷ್ಯದಿಂದಲೇ ರೋಗಿಗಳಿಗೆ ನಷ್ಟವಾದರೂ ಈ ನಿರ್ಲಕ್ಷ್ಯದ ವಿರುದ್ಧ ಹೋರಾಡಲು ಕಾನೂನು ಇದೆಯಲ್ಲವೇ? ಎಲ್ಲ ಕ್ಷೇತ್ರದಲ್ಲೂ ವೈಫಲ್ಯಗಳಿಗೆ ಹಲ್ಲೆಯೇ ಪರಿಹಾರವಾದರೆ ಸಾಮಾಜಿಕ ಸ್ವಾಸ್ಥ್ಯ ಸಾಧಿಸಲು ಸಾಧ್ಯವೇ? ಮುಷ್ಕರ ನಿರತ ವೈದ್ಯರನ್ನು ದೂಷಿಸುವ ನಾಗರಿಕ ಸಮಾಜ ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ಆವರಿಸಿರುವ ಲಾಭಕೋರ ಕಾರ್ಪೊರೇಟ್ ಉದ್ಯಮಿಗಳ ವಿರುದ್ಧ ಏಕೆ ದನಿ ಎತ್ತುತ್ತಿಲ್ಲ. ಮಠ-ದೇವಾಲಯ-ಶಾಲೆ-ಕಾಲೇಜು-ವೃತ್ತಿಪರ ಶಿಕ್ಷಣ ಸಂಸ್ಥೆ-ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ರಾಜಕೀಯ ಪ್ರಾಬಲ್ಯ ಈ ಸಮೀಕರಣವನ್ನೇ ಅನುಸರಿಸಿ ನಮ್ಮ ಸಮಾಜ ಸಾಮಾಜಿಕ ಸ್ವಾಸ್ಥ್ಯಕ್ಕೆ ಅಗತ್ಯವಾದ ಎಲ್ಲ ಪರಿಕರಗಳನ್ನೂ ವಾಣಿಜ್ಯೀಕರಣಗೊಳಿಸುತ್ತಿರುವುದನ್ನು ನಾವು ಮೌನವಾಗಿ ಏಕೆ ಸಹಿಸಿಕೊಳ್ಳುತ್ತಿದ್ದೇವೆ? ಈ ಔದ್ಯಮಿಕ ಸಾಮ್ರಾಜ್ಯದಲ್ಲಿ ಸಿಲುಕುವ ಶಿಕ್ಷಕರು ಮತ್ತು ವೈದ್ಯರು ತಮ್ಮ ಸೂಕ್ಷ್ಮ ಸಂವೇದನೆಗಳನ್ನೂ ಕಳೆದುಕೊಂಡು ಧನದಾಹಿಗಳಾಗಿ ಮಾರ್ಪಡುತ್ತಿರುವುದನ್ನು ಏಕೆ ಸಹಿಸಿಕೊಳ್ಳುತ್ತಿದ್ದೇವೆ? ವೈದ್ಯ ಲೋಕದಲ್ಲಿ ಸಂಬಳಕ್ಕಾಗಿ ದುಡಿಯುವ ವೈದ್ಯರ ಸಂಖ್ಯೆಯೇ ಹೆಚ್ಚಾಗಿದೆ. ಕೇವಲ ತಜ್ಞ ವೈದ್ಯರು, ಶಸ್ತ್ರ ಚಿಕಿತ್ಸಾತಜ್ಞರು ಮಾತ್ರ ವಿಸಿಟಿಂಗ್ ಡಾಕ್ಟರ್‌ಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಇಲ್ಲಿ ಮತ್ತೊಮ್ಮೆ ಕಾರ್ಪೊರೇಟ್ ಉದ್ದಿಮೆಯ ತಂತ್ರಜಾಲಗಳು ಅದ್ಭುತವಾಗಿ ಕೆಲಸ ಮಾಡುತ್ತವೆ.
ಕಾರ್ಪೊರೇಟ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದುಡಿಯುವ ಈ ವೈದ್ಯರುಗಳಿಗೆ ಮಾಸಿಕ ಇಂತಿಷ್ಟ ತಪಾಸಣೆಗಳು, ಶಸ್ತ್ರಚಿಕಿತ್ಸೆಗಳು, ಎಂಆರ್‌ಐ, ಇಸಿಜಿ, ಇಕೋ ಹೀಗೆ ಹಲವು ಗುರಿಯನ್ನು (ಟಾರ್ಗೆಟ್) ನಿಗದಿಪಡಿಸುವುದೂ ಸಹ ಚಾಲ್ತಿಯಲ್ಲಿರುವ ಪದ್ಧತಿ. ಅಗತ್ಯವಿರಲಿ ಇಲ್ಲದಿರಲಿ ರೋಗಿಗಳನ್ನು ಇಂತಹ ತಪಾಸಣೆಗಳಿಗೆ ಒಳಪಡಿಸುವ ಒಂದು ವ್ಯವಸ್ಥಿತ ಜಾಲ ಆಸ್ಪತ್ರೆಗಳಲ್ಲಿ ಚಾಲ್ತಿಯಲ್ಲಿರುತ್ತದೆ. ಇದೊಂದು ರೀತಿ ಎಲ್ಲರಿಗೂ ತಿಳಿದಿರುವ ರಹಸ್ಯವಾಗಿದ್ದರೂ ನಾಗರಿಕ ಸಮಾಜದಲ್ಲಿ ಯಾವುದೇ ರೀತಿಯ ಪ್ರತಿರೋಧ ವ್ಯಕ್ತವಾಗುತ್ತಿಲ್ಲ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಆರೋಗ್ಯ ಕೇಂದ್ರಗಳು ಈ ರೀತಿ ಸುಲಿಗೆಯ ಕೇಂದ್ರಗಳಾದಾಗ ಸಹಜವಾಗಿಯೇ ವೈದ್ಯಕೀಯ ವೃತ್ತಿಯೂ ಸಹ ಅಪಮೌಲ್ಯಕ್ಕೊಳಗಾಗುತ್ತದೆ. ಇಲ್ಲಿ ವೈದ್ಯರಿಗಿಂತಲೂ ವೈದ್ಯ ವೃತ್ತಿಯನ್ನು ನಿಯಂತ್ರಿಸುವ ಔದ್ಯಮಿಕ ಹಿತಾಸಕ್ತಿಗಳು ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತವೆ. ದುರಂತ ಎಂದರೆ ಈ ದಂಧೆಯನ್ನು ನಿಯಂತ್ರಿಸುವ ಯಾವುದೇ ನೀತಿಗಳನ್ನು ಚುನಾಯಿತ ಸರಕಾರಗಳು ಜಾರಿಗೊಳಿಸುತ್ತಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿನ ಸೇವಾ ಸೌಲಭ್ಯಗಳ ಗುಣಮಟ್ಟವನ್ನು ಹೆಚ್ಚಿಸಿ, ವೈದ್ಯರಿಗೆ ಹೆಚ್ಚಿನ ಸಂಬಳ ಮತ್ತು ಭತ್ತೆ ನೀಡುವ ಮೂಲಕ, ಎಲ್ಲ ರೀತಿಯ ಉಪಕರಣಗಳನ್ನೂ ಸರಕಾರದ ವೆಚ್ಚದಲ್ಲಿ ಅಳವಡಿಸಿದರೆ ಬಹುಶಃ ಈ ದೇಶದ ಜನಸಾಮಾನ್ಯರು ಕಾರ್ಪೊರೇಟ್ ಉದ್ಯಮಿಗಳ ಬಲಿಪೀಠಕ್ಕೆ ಶರಣಾಗುವುದು ತಪ್ಪುತ್ತದೆ.
   ಆದರೆ ನವ ಉದಾರವಾದಿ ಆರ್ಥಿಕ ನೀತಿಯ ಅನುಸಾರ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಿಂದ ಹಿಂದೆ ಸರಿಯುತ್ತಲೇ ಇವೆ. ತಮ್ಮ ಜನಪರ ಕಾಳಜಿಯ ಮುಖವಾಡವನ್ನು ವಿಮಾ ಸೌಲಭ್ಯಗಳ ಮೂಲಕ ಪ್ರದರ್ಶಿಸುತ್ತಿವೆ. ಈ ಪರಿಸ್ಥಿತಿಯಲ್ಲೇ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಂದರ್ಭ ಎದುರಾದಾಗ ಜನಸಾಮಾನ್ಯರು ಸರಕಾರಿ ಆಸ್ಪತ್ರೆಗಳಲ್ಲಿನ ಕೊರತೆಯನ್ನು, ಲೋಪಗಳನ್ನು ಮನಗಂಡು ಖಾಸಗಿ ವೈದ್ಯರ/ಆಸ್ಪತ್ರೆಗಳ ಮೊರೆ ಹೋಗುತ್ತಾರೆ. ಕ್ಷಮತೆ, ಬದ್ಧತೆ, ಪ್ರಾಮಾಣಿಕತೆ ಮತ್ತು ಕೌಶಲ್ಯ ಇರುವ ವೈದ್ಯರೂ ಸಹ ಇಂತಹ ಸಂದರ್ಭದಲ್ಲಿ ಕಡೆಗಣಿಸಲ್ಪಡುತ್ತಾರೆ. ಭಾರತದ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಈ ಪರಿಸ್ಥಿತಿ ವ್ಯಾಪಕವಾಗಿದ್ದು, ಗ್ರಾಮೀಣ ಜನತೆಯೂ ಸಹ ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸುವುದನ್ನು ಕಾಣಬಹುದು. ವೈದ್ಯರು ಹಲ್ಲೆಗೊಳಗಾದಾಗ ವೈದ್ಯರ ಪರ ಮತ್ತು ವಿರೋಧ ವಹಿಸಿ ಮಾತನಾಡುವ ನಾಗರಿಕ ಸಮಾಜದ ಎರಡೂ ಬಣಗಳಲ್ಲಿ ಈ ಬೆಳವಣಿಗೆಗಳನ್ನು ವಿರೋಧಿಸುವ ಧೋರಣೆ ಕಂಡುಬರುವುದಿಲ್ಲ ಎನ್ನುವುದು ವಾಸ್ತವ.
ಆಳುವ ವರ್ಗಗಳ ಮತ್ತು ಕಾರ್ಪೊರೇಟ್ ಉದ್ಯಮಿಗಳ ನಡುವಿನ ಒಡಂಬಡಿಕೆಗೆ ಒಂದೆಡೆ ವೈದ್ಯಲೋಕ ಮತ್ತು ವೈದ್ಯಕೀಯ ವೃತ್ತಿ ಬಲಿಯಾಗುತ್ತಿದ್ದರೆ ಮತ್ತೊಂದೆಡೆ ಜನಸಾಮಾನ್ಯರೂ ಬಲಿಯಾಗುತ್ತಿದ್ದಾರೆ. ತಪ್ಪೆಸಗುವವರನ್ನು ಕಾನೂನಿಗೆ ಒಪ್ಪಿಸದೆ ಜನರೇ ಥಳಿಸುವ ವಿಕೃತ ಮನೋಭಾವಕ್ಕೆ ಈ ದೇಶದ ಸಾಂಸ್ಕೃತಿಕ ರಾಜಕಾರಣ ಮತ್ತು ಆಧಿಪತ್ಯ ರಾಜಕಾರಣ ಪ್ರತ್ಯಕ್ಷವಾಗಿಯೇ ಪ್ರೋತ್ಸಾಹ ನೀಡುತ್ತಿರುವುದನ್ನು ಈ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸಬೇಕಿದೆ. ತಪ್ಪಿತಸ್ಥರನ್ನು ವಿಚಾರಣೆಗೊಳಪಡಿಸದೆಯೇ ಸಾರ್ವಜನಿಕವಾಗಿ ಥಳಿಸುವ ದೃಶ್ಯಾವಳಿಗಳನ್ನು ವೈಭವೀಕರಿಸಿ, ರಂಜನೀಯವಾಗಿ ಬಿತ್ತರಿಸುವ ವಿದ್ಯುನ್ಮಾನ ಮಾಧ್ಯಮಗಳ ಧೋರಣೆಯನ್ನೂ ಪ್ರಶ್ನಿಸಬೇಕಿದೆ. ಎಲ್ಲ ತಪ್ಪಿತಸ್ಥರನ್ನೂ ಸಾರ್ವಜನಿಕರೇ ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಿ ಶಿಕ್ಷೆ ವಿಧಿಸುವುದೇ ಆದರೆ ಈ ಶಿಕ್ಷೆಗೆ ಅರ್ಹತೆ ಪಡೆಯುವುದು ಕಾರ್ಪೊರೇಟ್ ವೈದ್ಯಕೀಯ ಉದ್ಯಮ ಎಂದು ಹೇಳಬೇಕಿಲ್ಲ. ಆದರೆ ನವ ಉದಾರವಾದದ ಭ್ರಮೆಗೆ ಸಿಲುಕಿರುವ ಮಧ್ಯಮ ವರ್ಗಗಳು ಮತ್ತು ಶೋಷಿತ ವರ್ಗಗಳೂ ಸಹ ಈ ಹೆಜ್ಜೆ ಇಡಲು ಹಿಂಜರಿಯುತ್ತವೆ. ಅಪರಾಧದ ಜಗತ್ತಿನಲ್ಲೇ ತಮ್ಮ ಜೀವನ ಸವೆಸುವ ಅಸಹಾಯಕ ವೈದ್ಯರು ಹಲ್ಲೆಗೊಳಗಾಗುತ್ತಾರೆ.
ವೈದ್ಯ ವೃತ್ತಿಯನ್ನು ಹೊರತುಪಡಿಸಿ ಮತ್ತಾವುದೇ ಸಾಮಾಜಿಕ ಪಲ್ಲಟಗಳಿಗೆ ಪ್ರತಿಕ್ರಿಯಿಸದೆ ತನ್ನದೇ ಆದ ಭದ್ರಕೋಟೆಯಲ್ಲಿ ನೆಲೆಸಿರುವ ವೈದ್ಯಲೋಕವೂ ಸಹ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪ್ರಭುತ್ವದಿಂದ ಹಲ್ಲೆಗೊಳಗಾಗುವ ಬಿನಾಯಕ್ ಸೇನ್ ಅವರಂತಹ ಜನಾನುರಾಗಿ ವೈದ್ಯರು, ಕಫೀಲ್ ಖಾನ್ ಅವರಂತಹ ಪ್ರಾಮಾಣಿಕ ವೈದ್ಯರು ಆಧಿಪತ್ಯ ರಾಜಕಾರಣದ ಪ್ರಹಾರಕ್ಕೆ ಬಲಿಯಾದಾಗ ಕಿಂಚಿತ್ತೂ ಅಲುಗಾಡದ ಭಾರತೀಯ ವೈದ್ಯಕೀಯ ಸಂಘ ತನ್ನ ಧೋರಣೆಯನ್ನು ಬದಲಿಸಬೇಕಿದೆ. ವೃತ್ತಿಯಿಂದ ವೈದ್ಯರಾಗುವುದರ ಜೊತೆಗೇ ಪ್ರವೃತ್ತಿಯಿಂದ ಸಂವೇದನಾಶೀಲ ನಾಗರಿಕರಾಗಿ ಬಾಳುವುದೂ ಒಳಿತಲ್ಲವೇ ಎಂದು ವೈದ್ಯಲೋಕ ಚಿಂತಿಸಬೇಕಿದೆ. ದೇಶವ್ಯಾಪಿ ಮುಷ್ಕರ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿರುವ ವೈದ್ಯಲೋಕ ತನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಜನಸಾಮಾನ್ಯರ ಮತ್ತೊಂದು ಲೋಕವನ್ನೂ ಸಹ ಸೂಕ್ಷ್ಮವಾಗಿ ಗಮನಿಸಬೇಕಿದೆ. ಜನರ ನಾಡಿಮಿಡಿತವನ್ನು ಬಲ್ಲ ವೈದ್ಯರಿಗೆ ಸಮಾಜದ ನಾಡಿಮಿಡಿತವನ್ನು ಗ್ರಹಿಸುವುದು ಕಷ್ಟವಾಗಲಿಕ್ಕಿಲ್ಲ. ಹಾಗೆಯೇ ತಮ್ಮನ್ನು ಆವರಿಸಿರುವ ಕಾರ್ಪೊರೇಟ್ ಔದ್ಯಮಿಕ ಹಿತಾಸಕ್ತಿಯನ್ನು ಗ್ರಹಿಸುವುದೂ ಕಷ್ಟವಾಗಲಿಕ್ಕಿಲ್ಲ. ವೈದ್ಯಲೋಕದ ಮಾನವೀಯ ಕಾಳಜಿ ಎನ್ನುವುದು ಚಿಕಿತ್ಸಾ ವಿಧಾನದಿಂದ ಹೊರತಾಗಿಯೂ ವ್ಯಕ್ತವಾಗುವುದೇ ಆದಲ್ಲಿ ಸಮಾಜದ ವಿಚ್ಛಿದ್ರಕಾರಿ ಶಕ್ತಿಗಳೂ ಸಹ ಹಿಮ್ಮೆಟ್ಟುತ್ತವೆ. ದುರಂತ ಎಂದರೆ ಭಾರತದ ಸಂದರ್ಭದಲ್ಲಿ ಇದು ವಿರಳವಾದ ವಿದ್ಯಮಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕ ವೃಂದವೂ ಸಹ ಇದೇ ಹಾದಿಯನ್ನು ಅನುಸರಿಸುತ್ತಿದೆ. ನ್ಯಾಯಪೀಠವನ್ನು ಪ್ರತಿನಿಧಿಸುವ ವಕೀಲ ಸಮುದಾಯವೂ ಸಹ ಭಿನ್ನವಾಗೇನಿಲ್ಲ. ಇದು ಸಾರ್ವತ್ರಿಕ ಲಕ್ಷಣವಲ್ಲ ಎನ್ನಬಹುದಾದರೂ ಈ ಲಕ್ಷಣದ ವ್ಯಾಪ್ತಿ ಹೆಚ್ಚುತ್ತಿರುವುದು ವಾಸ್ತವ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)