varthabharthi

ನಿಮ್ಮ ಅಂಕಣ

ಐಎಂಎ ಹಗರಣ: ಈ ದುರಂತವನ್ನು ತಪ್ಪಿಸಲು ಸಾಧ್ಯವಿರಲಿಲ್ಲವೇ ಝಮೀರ್ ಅಹ್ಮದ್ ಸಾಹೇಬರೇ ?

ವಾರ್ತಾ ಭಾರತಿ : 22 Jun, 2019
ಅಬ್ದುಲ್ ಸತ್ತಾರ್ ಹೆಬ್ಬಾಳ

ಐಎಂಎ ವಂಚನೆಯ ಪ್ರಕರಣ ಬೆಳಕಿಗೆ ಬಂದ ಬೆನ್ನಿಗೆ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಬೆಚ್ಚಿಬಿದ್ದಿದ್ದಾರೆ. ಹಗರಣದಿಂದ ಸಾವಿರಾರು ಮಂದಿ ಬಡವರು, ಮಧ್ಯಮ ವರ್ಗದ ಮುಸ್ಲಿಮರು ಬೀದಿಗೆ ಬಿದ್ದಿದ್ದಾರೆ ಎಂದು ಗೊತ್ತಾಗಿ ಅವರು ತೀರಾ ಆತಂಕಿತರಾಗಿದ್ದಾರೆ. ಹಾಗಾಗಿ ರಾಜ್ಯ ಸರಕಾರದ ಅತ್ಯಂತ ಪ್ರಭಾವಿ ಸಚಿವರಾಗಿದ್ದರೂ , ಝಮೀರ್ ಅವರು   "ನೀವು ಎಲ್ಲಿದ್ದರೂ ವಾಪಸ್ ಬನ್ನಿ , ನಿಮ್ಮನ್ನು ನೋಡದೆ ನಿಮ್ಮ ಹೂಡಿಕೆದಾರರು ಕಂಗಾಲಾಗಿದ್ದಾರೆ " ಎಂದು  ಐಎಂಎ ಹಗರಣ ಕಳಂಕಿತ, ತಲೆಮರೆಸಿಕೊಂಡಿರುವ ಮನ್ಸೂರ್ ಖಾನ್ ನಲ್ಲಿ ಸಾರ್ವಜನಿಕವಾಗಿ ಬೇಡಿಕೊಂಡಿದ್ದಾರೆ. ಸಾಲದ್ದಕ್ಕೆ "ನಿಮ್ಮ ಜೊತೆ ನಾವಿದ್ದೇವೆ" ಎಂಬ ಅಭಯವನ್ನೂ ಕೊಟ್ಟಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ನಂಬಲೇಬೇಕಾದ ಪರಿಸ್ಥಿತಿಯಲ್ಲಿ ಇಂದು ಕರ್ನಾಟಕದ ಮುಸ್ಲಿಮರು ಇದ್ದಾರೆ ಎಂಬುದೇ ಅತ್ಯಂತ ನಾಚಿಕೆಗೇಡಿನ ವಿಷಯ.

ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರಕಾರ ಸಂಕಟಕ್ಕೆ ಬಿದ್ದ ಕೂಡಲೇ ಅದನ್ನು ಸರಿಪಡಿಸಲು ಎರಡೂ ಪಕ್ಷದ ವರಿಷ್ಠರು ಮೊರೆ ಹೋಗುವ ಪ್ರಮುಖ ನಾಯಕರಲ್ಲಿ ಒಬ್ಬರು ಝಮೀರ್ ಅಹ್ಮದ್ ಖಾನ್ . ಅಷ್ಟರಮಟ್ಟಿಗೆ ಅವರು ರಾಜ್ಯ ರಾಜಕೀಯದಲ್ಲಿ ಈಗ ಪವರ್ ಫುಲ್ ಸಚಿವ. ಚಾಮರಾಜಪೇಟೆಯಲ್ಲಿ ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುತ್ತಾರೆ ಎಂಬಷ್ಟು ವರ್ಚಸ್ಸು ಅವರಿಗಿದೆ. ಕಳೆದ ಸುಮಾರು ಹದಿನೈದು ವರ್ಷಗಳಿಂದ ಶಾಸಕರಾಗಿ, ಸಚಿವರಾಗಿ ಅಧಿಕಾರದಲ್ಲೇ ಇದ್ದವರು ಝಮೀರ್. ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದು ನಿಂತ ಉಳಿದವರೆಲ್ಲರೂ ಸೋತು ಸುಣ್ಣವಾದರೂ ಝಮೀರ್ ಮಾತ್ರ ಚುನಾವಣೆಯಲ್ಲಿ ಗೆದ್ದು ಪ್ರಭಾವಿ ಸಚಿವ ಹುದ್ದೆಯನ್ನೂ ಪಡೆದುಕೊಂಡು ಮೆರೆಯುತ್ತಿದ್ದಾರೆ.

ಇಂತಹ ಝಮೀರ್ ಅಹ್ಮದ್ ಅವರು ಈಗ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬನ ಬಳಿ "ನೀವು ಬಂದು ಬಿಡಿ , ನಾವೆಲ್ಲ ಕೂತು ಮಾತಾಡಿ ಸರಿ ಮಾಡೋಣ. ಜನರ ದುಡ್ಡು ವಾಪಸ್ ಕೊಡೋಣ " ಎಂದು ಅಂಗಲಾಚುತ್ತಿದ್ದಾರೆ ಅಥವಾ ಅಂಗಲಾಚುವಂತೆ ನಟಿಸುತ್ತಿದ್ದಾರೆ. ರಾಜ್ಯ ಸರಕಾರದ ಭಾಗವಾಗಿರುವ ಅವರು ಈ ವಿನಂತಿ ಮಾಡಿರುವುದು ಇನ್ನಷ್ಟು ಶೋಚನೀಯವಾಗಿದೆ. ಇಷ್ಟು ವರ್ಷ ಸಾರ್ವಜನಿಕ ಜೀವನದಲ್ಲಿದ್ದ , ಬೆಂಗಳೂರಿನಲ್ಲೇ ರಾಜಕೀಯ ಮಾಡುತ್ತಿದ್ದ, ಒಂದಲ್ಲೊಂದು ಅಧಿಕಾರದಲ್ಲಿದ್ದ , ಮುಸ್ಲಿಮರ ನಡುವೆ ಇಷ್ಟೊಂದು ಸಕ್ರಿಯವಾಗಿದ್ದ, ಸಾಮಾಜಿಕ - ಧಾರ್ಮಿಕ ಕ್ಷೇತ್ರಗಳ ಜನರ ನಡುವೆ ಬೆರೆಯುತ್ತಿದ್ದ,ಎಲ್ಲಕಿಂತ ಮುಖ್ಯವಾಗಿ ಐಎಂಎ ಮನ್ಸೂರ್ ಖಾನ್ ಜೊತೆ ವ್ಯವಹಾರವನ್ನೂ ಮಾಡುತ್ತಿದ್ದ ನಿಮಗೆ ಇಷ್ಟರವರೆಗೆ ನಿಮ್ಮ ಮೂಗಿನ ಕೆಳಗೆ ಇಂತಹದೊಂದು ಬೃಹತ್ ಹಗರಣ ರೂಪುಗೊಳ್ಳುತ್ತಿರುವುದು ಗೊತ್ತಾಗಲೇ ಇಲ್ಲವೇ?, ನಿಮ್ಮದೇ ಸಮುದಾಯದ ಸಾವಿರಾರು ಬಡವರು, ಕೆಲ ಮಧ್ಯಮ ವರ್ಗದ ಜನರು ತಮ್ಮ ಮನೆ ಮಠ , ಚಿನ್ನ ಅಡವಿಟ್ಟು ಹಣ ತಂದು ಈ ಮುಳುಗುವ ಹಡಗಿಗೆ ತುಂಬಿಸುತ್ತಿದ್ದರು ಎಂದು ನಿಮಗೆ ಸುಳಿವೇ ಸಿಗಲಿಲ್ಲವೇ ಝಮೀರ್ ಸಾಹೇಬರೇ ?.

ಇಲ್ಲ , ಗೊತ್ತಾಗಲಿಲ್ಲ ಎಂದು ನೀವು ಹೇಳಿದರೂ ನಂಬಬೇಕು. ಯಾಕೆಂದರೆ ಅಂತಹ ಪರಿಸ್ಥಿತಿಯಲ್ಲಿ ರಾಜ್ಯದ ಮುಸ್ಲಿಂ ಸಮುದಾಯವಿದೆ. ಅವರಿಗೆ ‘ಅತ್ತ ದರಿ ಇತ್ತ ಪುಲಿ’ ಎಂಬಂತಹ ಪರಿಸ್ಥಿತಿ. ಯಾರನ್ನು ನಂಬುವುದು ಯಾರನ್ನು ಬಿಡುವುದು ? ಏಕೆಂದರೆ ಅವರು ಈವರೆಗೆ ನಂಬಿಕೊಂಡು, ಬೆಳೆಸಿಕೊಂಡು ಬಂದಿರುವುದು ನಿಮ್ಮಂತಹ ನಾಯಕರನ್ನೇ. ನಿಜವಾಗಿಯೂ ನಿಮಗೆ ನಿಮ್ಮ ಸಮುದಾಯದ ಜನರ ಮೇಲೆ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ನೀವು ಇಷ್ಟು ವರ್ಷ ಐಎಂಎ ಜನರ ಹಣ ಕಬಳಿಸಲು ಬಿಡುತ್ತಿದ್ದೀರಾ ? ನೀವು ಸ್ವತಃ ( ಕನಿಷ್ಠ ) ಐದು  ಕೋಟಿ ರೊಪಾಯಿಯ ವ್ಯವಹಾರ ಮನ್ಸೂರ್ ಖಾನ್ ಜೊತೆ ಮಾಡಿದ್ದೀರಿ. ಸ್ವತಃ ಯಶಸ್ವಿ ಉದ್ಯಮಿಯಾಗಿರುವ ನಿಮಗೆ  ಅಲ್ಲಿ ಏನಾಗುತ್ತಿದೆ , ಏಕೆ ಜನರು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ದುಡ್ಡು ಹಾಕುತ್ತಿದ್ದಾರೆ ? ಇದರಲ್ಲಿ ನಾಳೆ ಏನಾದರೂ ಸಮಸ್ಯೆ ತಲೆದೋರಬಹುದಾ ?

 ಎಂಬಿತ್ಯಾದಿ ಪ್ರಶ್ನೆಗಳೇ ಮೂಡಲಿಲ್ಲವೇ ?

ನಿಮ್ಮ ಬೆಂಗಳೂರಿನ ಇಷ್ಟೊಂದು ದೊಡ್ಡ ಸಂಖ್ಯೆಯ ಜನರು ಹೀಗೆ ಒಂದು ಕಡೆ ದುಡ್ಡು ಹಾಕುತ್ತಿರುವಾಗ ಏನು ಮಾಡುತ್ತಿದ್ದೀರಿ ?, “ಸರಿಯಾಗಿ ವಿಚಾರಿಸಿದ್ದೀರಾ?” ಎಂದು ಯಾವತ್ತಾದರೂ ಯಾರಲ್ಲಾದರೂ ನೀವು ಕೇಳಿದ್ದೀರಾ ?, ನೀನು ಹೇಗೆ ಇಷ್ಟೊಂದು ದೊಡ್ಡ ಲಾಭ ಕೊಡುತ್ತೀಯಾ ಅಂತ ಮನ್ಸೂರ್ ಖಾನ್ ನಲ್ಲಿ ಯಾವತ್ತಾದರೂ ಕೇಳಿದ್ದೀರಾ ?, ಯಾವುದಾದರೂ ಸರಕಾರಿ ಇಲಾಖೆಗೆ ಪತ್ರ ಬರೆದು ಇಂತಹದೊಂದು ಸಂಸ್ಥೆ ನಡೆಯುತ್ತಿದೆ . ಸ್ವಲ್ಪ ವಿಚಾರಿಸಿ ಎಂದು ನೆನಪಿಸಿದ್ದೀರಾ ?, ಇಂತಹ ಸಂಸ್ಥೆಗಳಲ್ಲಿ ಹಣ ಹೂಡುವಾಗ ಜಾಗರೂಕರಾಗಿರಿ ಎಂದು ಜನರಿಗೆ ಹೇಳಿ ಎಂದು ಯಾವುದಾದರೂ ಧರ್ಮಗುರುಗಳಿಗೆ ಸಲಹೆ ಕೊಟ್ಟಿದ್ದೀರಾ ?, ಒಬ್ಬ ಜನಪ್ರತಿನಿಧಿಯಾಗಿ , ಸಮುದಾಯದ ಕೋಟಾದಲ್ಲಿ ಅಧಿಕಾರ ಪಡೆಯುವ ನಿಮಗೆ ಇದನ್ನೆಲ್ಲಾ ಕೇಳುವ , ನೋಡುವ , ಜನರನ್ನು ಎಚ್ಚರಿಸುವ ಜವಾಬ್ದಾರಿಯಿತ್ತು ಎಂದು ನಿಮಗೆ ಅನಿಸುವುದಿಲ್ಲವೇ ಝಮೀರ್ ಸಾಹೇಬರೇ ?

ಮುಸ್ಲಿಮರು ಸಂಘಪರಿವಾರದ ಕೋಮುವಾದವನ್ನೂ ಎದುರಿಸಬೇಕು, ಅದಕ್ಕೆ ಬೆಲೆತೆರಬೇಕು. ಅದರ ಜೊತೆಗೆ ನಿಮ್ಮಂತಹ ಜಾತ್ಯತೀತ ನಾಯಕರು, ಸಮುದಾಯದ ನಾಯಕರು ಎಂಬ ಹಣೆಪಟ್ಟಿ ಹೊತ್ತವರ ತಿಳಿಗೇಡಿತನಕ್ಕೂ ಬೆಲೆ ತೆರಬೇಕು. ಇಂತಹ ಒಂದು ಹಗರಣ ಸಾವಿರಾರು ಮಂದಿಯ ಬದುಕನ್ನು ಹೇಗೆ ಮೂರಾಬಟ್ಟೆ ಮಾಡುತ್ತದೆ ಎಂದು ನಿಮಗೆ ಗೊತ್ತಿಲ್ಲವೇ ಝಮೀರ್ ಸಾಹೇಬರೇ ? ಪ್ರಾಮಾಣಿಕವಾಗಿ ಹೇಳಿ, ನಿಮ್ಮಂತಹ ನಾಯಕರು ಮನಸ್ಸು ಮಾಡಿದ್ದರೆ , ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೆ , ಸ್ವಲ್ಪ ಜನಪರ ಕಾಳಜಿ ತೋರಿಸಿದ್ದರೆ ಈ ದುರಂತವನ್ನು ತಪ್ಪಿಸಲು ಸಾಧ್ಯವಿರಲಿಲ್ಲವೇ ?

ಹೇಳಿ ಝಮೀರ್ ಸಾಹೇಬರೇ ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)