varthabharthi

ಸುಗ್ಗಿ

ನಾಲ್ವರು ಕ್ರಿಕೆಟಿಗರ ಆತ್ಮಕತೆ

ವಾರ್ತಾ ಭಾರತಿ : 22 Jun, 2019
ಪ್ರಿಯಾಲಿ ಪ್ರಕಾಶ್

ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ ನೀವು ಕ್ರಿಕೆಟ್ ಮೈದಾನದಲ್ಲಿ ನೋಡ ಬಹುದಾದ ಅಥವಾ ನೋಡಿರಬಹುದಾದ ನಾಲ್ವರು ಆಟಗಾರರ ಆತ್ಮಕತೆಯ ಝಲಕ್ ಇಲ್ಲಿದೆ.

► ಮೊಯಿನ್- ಮೊಯಿನ್ ಅಲಿ

2018ರ ಸ್ಪೆಕ್‌ಸೇವರ್ಸ್‌ ನ್ಯಾಶನಲ್ ಬುಕ್ ಅವಾರ್ಡ್‌ಗೆ ನಾಮಕರಣಗೊಂಡಿರುವ ಮೊಯಿನ್ ಅಲಿಯ ಆತ್ಮಕತೆ 'ಮೊಯಿನ್' ಆತನ ಸಾಹಸಮಯ ಬದುಕಿನ ಸ್ಪಷ್ಟ ಚಿತ್ರಣ ನೀಡುತ್ತದೆ. ಹೆರಿಗೆಗಾಗಿ ಟ್ರಾಲಿ (ತಳ್ಳುಗಾಡಿ)ಯೊಂದರಲ್ಲಿ ತಳ್ಳಿಕೊಂಡು ಹೋಗುತ್ತಿದ್ದಾಗ ಟ್ರಾಲಿಯಲ್ಲೇ ಆತನ ತಾಯಿ ಮಗುವಿಗೆ ಜನ್ಮ ನೀಡಿದ ಕ್ಷಣದಿಂದ ಹಿಡಿದು, ಸ್ವಲ್ಪ ವಿಳಂಬವಾಗಿ ತನ್ನ 27ರ ಹರೆಯದಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾದಾರ್ಪಣ ಮಾಡುವವರೆಗಿನ ಆತನ ಬದುಕಿನ ವಿವರಗಳು ಈ ಪುಸ್ತಕದಲ್ಲಿ ದಾಖಲಾಗಿವೆ.

ತನ್ನ 15ನೇ ವಯಸ್ಸಿನಲ್ಲಿ ವಾರ್ವಿಕ್ ಶಯರ್ ತಂಡದ ಪರವಾಗಿ ಅಲಿ ತನ್ನ ಕ್ರಿಕೆಟ್ ಬದುಕನ್ನು ಆರಂಭಿಸಿದರು. 2014ರಲ್ಲಿ ಐಸಿಸಿ ವಿಶ್ವ ಟಿ20 ಪಂದ್ಯ ಬಾಂಗ್ಲಾದೇಶದಲ್ಲಿ ನಡೆದಾಗ ಅವರು ಆ ಪಂದ್ಯದಲ್ಲಿ ಆಡುವ ಮೂಲಕ ಅಂತರ್ ರಾಷ್ಟ್ರೀಯ ಕ್ರಿಕೆಟ್ ಆಟಗಾರರಾಗಿ ಮಿಂಚಿದರು.

ಕ್ರಿಕೆಟ್ ತನ್ನ ಬದುಕಿನ ಅದೃಷ್ಟ ಎನ್ನುವ ಅಲಿ, ತಾನು ಜನಿಸಿದ ದಿನ ತನ್ನ ತಂದೆ ''ತನ್ನ ನೊಸಲಿನ ಮೇಲೆ ಮಕ್ಕಳು ಆಡುವ ಒಂದು ಚಿಕ್ಕ ಬ್ಯಾಟ್‌ನಿಂದ ಉಜ್ಜಿದರು'' ಎನ್ನುತ್ತಾರೆ. ತನ್ನ ಮಕ್ಕಳು ಕ್ರಿಕೆಟ್ ಬ್ಯಾಟ್ಸ್‌ಮೆನ್ ಆಗಬೇಕೆಂದು ಬಯಸಿದ್ದ ಅವರು ಅಲಿಯ ಹಿರಿಯ ಸಹೋದರ ಕದೀರ್ ಅಲಿ ಮತ್ತು ಕಿರಿಯ ಸಹೋದರ ಉಮರ್ ಅಲಿ ಜನಿಸಿದ್ದಾಗ ಕೂಡ ಹೀಗೆ ಮಾಡಿದ್ದರಂತೆ. ಆಲಿಯ ಸಹೋದರರೆಲ್ಲ ಕ್ರಿಕೆಟ್ ಆಟಗಾರರಾಗಿದ್ದಾರೆ.

► ಜಾನಿ ಬೈರ್‌ಸ್ಟೊ.

ಇಂಗ್ಲಿಷ್ ಕ್ರಿಕೆಟಿಗ ಜೊನಾಥನ್ ಮಾರ್ಕ್ ''ಜಾನಿ'' ಬೈರ್‌ಸ್ಟೊನ ಆತ್ಮಕತೆ ''ಎ ಕ್ಲಿಯರ್ ಬ್ಲೂ ಸ್ಕೈ'' ಆತ ಬದುಕಲು ಕಲಿತ ಪ್ರಯಾಣದ ಪರಿಚಯ ಮಾಡಿಸುತ್ತದೆ. 1998ರಲ್ಲಿ ಆತನ ತಂದೆ ಆತ್ಮಹತ್ಯೆ ಮಾಡಿಕೊಂಡ. ಆತನ ಕ್ಯಾನ್ಸರ್ ಪೀಡಿತ ತಾಯಿ ಎರಡೂ ಮಕ್ಕಳನ್ನು ಸಾಕಿ ಬೆಳೆಸಿದಳು. ತಂದೆ ಸತ್ತಾಗ ಜಾನಿಗೆ ಎಂಟು ವರ್ಷ. ಬಿಕಿಗೆ ಏಳು ವರ್ಷ. ತನ್ನ ತಂದೆ ಕ್ರಿಕೆಟ್ ಬ್ಯಾಟನ್ನು ಹೇಗೆ ಹಿಡಿಯಬೇಕೆಂದು ತನಗೆ ಕಲಿಸಿದ ಕ್ಷಣಗಳನ್ನು ಬೈರ್‌ಸ್ಟೊ ಜ್ಞಾಪಿಸಿಕೊಳ್ಳುತ್ತಾನೆ: ''ನೀನದನ್ನು ಮರಕಡಿಯಲು ಎತ್ತಿಕೊಳ್ಳುವ ಒಂದು ಕೊಡಲಿಯ ಹಾಗೆ ಎತ್ತಿಕೋ'' ಆತನ ತಂದೆ ಡೇವಿಡ್ ಬೈರ್‌ಸ್ಟೊ ಕೂಡ ಯಾರ್ಕ್ ಶಯರ್ ಮತ್ತು ಇಂಗ್ಲೆಂಡ್ ತಂಡಗಳ ಕ್ರಿಕೆಟಿಗನಾಗಿದ್ದರು.

ಐರ್ಲೆಂಡ್ ವಿರುದ್ಧ ಆಡುವ ತಂಡದ ಸದಸ್ಯನಾಗಿ ಆಯ್ಕೆಯಾದಾಗ 2011ರಲ್ಲಿ ಅವರು ಇಂಗ್ಲೆಂಡ್ ತಂಡವನ್ನು ಸೇರಿಕೊಂಡರು. ಆದರೆ ಒಂದು ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆಡಲು ಅವರಿಗೆ ಮೊದಲ ಬಾರಿ ಅವಕಾಶ ದೊರಕಿದ್ದು, ಅವರು ಅದೇ ವರ್ಷ ಭಾರತದ ವಿರುದ್ಧ ಆಡಿದಾಗ.

► ಸಿಕ್ಸ್ ಮೆಷಿನ್ - ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್‌ಗೇಲ್ ಚೆಂಡನ್ನು ಬೌಂಡರಿಗೆ ಬಾರಿಸುವುದರಲ್ಲಿ ನಿಸ್ಸೀಮ. ಚೆನ್ನಾಗಿ ಎಂದರೆ ತುಂಬ ಹಾರ್ಡ್ ಆಗಿ ಬಾರಿಸುವವರು ಅವರು. ಇದಕ್ಕೆ ಅನ್ವರ್ಥವಾಗಿ 2017ರಲ್ಲಿ ಪ್ರಕಟವಾದ ಅವರ ಆತ್ಮಕತೆಯ ಶೀರ್ಷಿಕೆ ''ಸಿಕ್ಸ್ ಮೆಷಿನ್: ಐ ಡೋಂಟ್ ಲೈಕ್ ಕ್ರಿಕೆಟ್, ಐ ಲವ್ ಇಟ್'' ತನ್ನ ಆತ್ಮಕತೆಯ ಮೊದಲ ಅಧ್ಯಾಯದಲ್ಲೇ ಅವರು ಬರೆಯುತ್ತಾರೆ: ''ಐ ಹೇಟ್ ಟು ರನ್ ಆ್ಯಂಡ್ ಐ ಲವ್ ಟು ಬ್ಯಾಟ್'' (ಓಡುವುದೆಂದರೆ ನನಗಾಗದು, ಬ್ಯಾಟ್ ಮಾಡುವುದನ್ನು ನಾನು ಪ್ರೀತಿಸುತ್ತೇನೆ). ಟಿ20 ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಸಿಕ್ಸರ್ ಬಾರಿಸುವ ದಾಖಲೆ ಯಾಕೆ ಅವರ ಪಾಲಾಗಿದೆ ಎಂಬುದನ್ನು ಪ್ರಾಯಶಃ ಇದು ವಿವರಿಸುತ್ತದೆ.

ಗೇಲ್ ತನ್ನ ಪುಸ್ತಕದಲ್ಲಿ ವೈದೃಶ್ಯಗಳ ಒಂದು ಸರಣಿಯಾಗಿ ತನ್ನನ್ನು ಓದುಗರೆದುರು ತೆರೆದಿಡುತ್ತಾರೆ. ಅವರು ಬರೆಯುತ್ತಾರೆ: ''ನಿಮ್ಮನ್ನು ಸಮೀಪಿಸುವವರೆಗೆ ಜನರು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ನಾನು ಎಲ್ಲವನ್ನೂ ಹೋರಾಟದ ಮೂಲಕವೇ ಹಾದು ಬಂದಿದ್ದೇನೆ. ಚಿಕ್ಕ ವಯಸ್ಸಿನಿಂದಲೇ ನಾನು ಕ್ರಿಕೆಟ್ ಆಟದಲ್ಲಿ ಅತ್ಯಂತ ಶ್ರಮಪಟ್ಟು ದುಡಿದು ಬಂದವರಲ್ಲಿ ಒಬ್ಬ. ಇದು ನೀವು ನಂಬಲಾರದ ಆಶ್ಚರ್ಯಕರವಾದ ಸಂಗತಿ. ಹೆಚ್ಚಿನ ಜನರಿಗೆ ನಾನು ಹೀಗೆ ಅಂತ ಕೂಡ ಗೊತ್ತಿಲ್ಲ''. ಜಮೈಕಾದ ಕಿಂಗ್‌ಸ್ಟನ್‌ನಲ್ಲಿರುವ ಲ್ಯುಕಾಸ್ ಕ್ರಿಕೆಟ್ ಕ್ಲಬ್‌ಗೆ ತನ್ನ ಬದುಕಿನ ಸಾಧನೆಯ ಕೀರ್ತಿ ಸಲ್ಲಬೇಕು ಎನ್ನುತ್ತಾರೆ ಗೇಲ್. ಅವರ ಕ್ರಿಕೆಟ್ ಜೀವನ ಆರಂಭವಾದದ್ದೇ ಅಲ್ಲಿ.

► ದಿ ಜರ್ನಿ - ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್‌ನ ಆತ್ಮಕತೆ,'ದಿ ಜರ್ನಿ ಮೈ ಸ್ಟೋರಿ, ಫ್ರಮ್ ಬ್ಯಾಕ್ ಯಾರ್ಡ್ ಕ್ರಿಕೆಟ್ ಟು ಆಸ್ಟ್ರೇಲಿಯನ್ ಕ್ಯಾಪ್ಟನ್'' ಒಂದು ಪ್ರಸಂಗದ ನಿರೂಪಣೆಯೊಂದಿಗೆ ಆರಂಭವಾಗುತ್ತದೆ. ಅವರು ನೋಡಿದ ಒಂದು ಟೆನಿಸ್ ಪಂದ್ಯ ಅವರಿಗೆ ಬದುಕು ಎಂದರೇನು ಎಂಬುದನ್ನು ಕಲಿಸಿತಂತೆ. ಬದುಕು ಎಂದರೆ ''ನಿಮ್ಮ ಕಾಲುಗಳ ಮೇಲೆ ನಿಂತು ಯೋಚಿಸುವುದು, ಮತ್ತು ಸವಾಲುಗಳನ್ನು ರಸ್ತೆ ತಡೆಗಳೆಂದು ಪರಿಗಣಿಸದೆ ಅವಕಾಶಗಳೆಂದು ತಿಳಿಯುವುದು'' ಪುಸ್ತಕದಲ್ಲಿ ಅವರ ತಂದೆ ಪೀಟರ್ ಸ್ಮಿತ್ ಬರೆದ ಒಂದು ಅಧ್ಯಾಯವೂ ಇದೆ. ಸ್ಮಿತ್‌ನ ಪೋಷಕರು ಅವರ ಕ್ರಿಕೆಟಿಂಗ್ ಸಾಮರ್ಥ್ಯವನ್ನು ಹೇಗೆ ಗುರುತಿಸಿದರು ಎಂಬುದರ ವಿವರ ಅಲ್ಲಿದೆ.

ಪುಸ್ತಕದಲ್ಲಿ ಸ್ಮಿತ್‌ನ ಗೆಳೆಯ ದಿವಂಗತ ಫಿಲಿಪ್ ಹ್ಯೂಸ್ ಅರ್ಪಿಸಲ್ಪಟ್ಟಿರುವ ಒಂದು ಅಧ್ಯಾಯವೂ ಇದೆ. ಫಿಲಿಪ್ 2014ರಲ್ಲಿ ಸಿಡ್ನಿಯಲ್ಲಿ ನಡೆದ ಒಂದು ಕ್ರಿಕೆಟ್ ಪಂದ್ಯದ ವೇಳೆ ಬೌನ್ಸರ್‌ನಿಂದ ತಲೆಗೆ ಬಿದ್ದ ಏಟಿನಿಂದಾಗಿ ಮೃತಪಟ್ಟಿದ್ದರು. 2018ರಲ್ಲಿ ಬಾಲ್-ಟ್ಯಾಂಪರಿಂಗ್ ಹಗರಣವೊಂದರ ಪರಿಣಾಮವಾಗಿ ಸ್ಮಿತ್ ಹಾಗೂ ಆತನ ಸಹ ಕ್ರಿಕೆಟಿಗ ಡೇವಿಡ್ ವಾರ್ನರ್‌ಗೆ ಒಂದು ವರ್ಷದ ನಿಷೇಧ ಹೇರಲಾಯಿತು. ಸ್ಮಿತ್‌ನ ಆತ್ಮಕತೆ ಆ ಹಗರಣದ ಮೊದಲು ಪ್ರಕಟವಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)