varthabharthi

ಸುಗ್ಗಿ

ಕಾರ್ನಾಡ್ ಎಂಬ ಕನ್ನಡದ ಪವಾಡ

ವಾರ್ತಾ ಭಾರತಿ : 22 Jun, 2019
ಡಾ.ಬಿ. ಭಾಸ್ಕರ ರಾವ್

ಸತ್ಯ ಹೇಳಲು ಎಂದೂ ಹಿಂಜರಿಯದ, ಪ್ರಭುತ್ವ ಹಾಕುವ ತಾಳಕ್ಕೆ ತಕ್ಕಂತೆ ಕುಣಿಯಲು ಎಂದೂ ಒಪ್ಪದೆ ಇದ್ದ ಕಾರ್ನಾಡ್ ‘ಕನಸುಗಳೇ ಇಲ್ಲದ ದಾರಿಯಲ್ಲಿ’ ನಡೆಯಲು ನಿರಾಕರಿಸಿ, ತನ್ನ ಸಾಹಿತ್ಯಕ ಕನಸುಗಳನ್ನು ಎಲ್ಲ ಕಾಲದ ಸಾಮಾಜಿಕ, ಸಾಂಸ್ಕೃತಿಕ ವಾಸ್ತವಗಳಿಗೆ ಪ್ರಸ್ತುತವಾಗುವಂತೆ ನನಸು ಮಾಡಿದ ಅಸಾಧಾರಣ ಪ್ರತಿಭೆಯ ವಿವಾದಾಸ್ಪದ ಧೀಮಂತ.

ಸುಮಾರು 45 ವರ್ಷಗಳ ಹಿಂದೆ. ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿ ಕ್ಯಾಂಪಸ್‌ನ ಹಿಂಬದಿ ರೀಜನಲ್ ಕಾಲೇಜ್‌ಗೆ ಹೋಗುವ ರಸ್ತೆಯಲ್ಲಿ ನಡೆದು ಬರುತ್ತಿದ್ದೆ. ಒಂದು ತಿರುವಿನಲ್ಲಿ ದಿಢೀರನೆ ಶ್ರೀಕೃಷ್ಣ ಆಲನಹಳ್ಳಿ ಪ್ರತ್ಯಕ್ಷನಾದ. ಕನ್ನಡ ಕತೆಗಾರ, ಕಾದಂಬರಿಕಾರ ‘ಕಾಡು’ ಕಾದಂಬರಿಯ ಲೇಖಕ ಆಲನಹಳ್ಳಿಯ ಜತೆ ಸ್ಪುರದ್ರೂಪಿ ಯುವಕರೊಬ್ಬರಿದ್ದರು. ಅಲ್ಲಿಯವರೆಗೆ ನಾನು ಅವರನ್ನು ಕಂಡಿರಲಿಲ್ಲ. ಅವರು ನಟಿಸಿದ್ದ ಒಂದು ಸಿನೆಮಾ ನೋಡಿದ್ದೆ. ಮೈಸೂರಿನ ಲಕ್ಷ್ಮೀ ಚಿತ್ರ ಮಂದಿರದಲ್ಲಿ ಸೆಕೆಂಡ್ ಶೋ ಸಿನೆಮಾ. ಥಿಯೇಟರ್ ಖಾಲಿ ಖಾಲಿ. ಒಂದು ಹತ್ತಿಪ್ಪತ್ತು ಮಂದಿ ಇದ್ದಿರಬಹುದು. ಕನ್ನಡ ಸಾಹಿತ್ಯದ ಗಂಧಗಾಳಿ ಇಲ್ಲದ ಮೂವರು ಸ್ನಾತಕೋತ್ತರ ವಿದ್ಯಾರ್ಥಿ ಮಿತ್ರರೊಂದಿಗೆ ಸಿನೆಮಾ ನೋಡುತ್ತಿದ್ದೆ. ಸಿನೆಮಾ ಮುಗಿದರೆ ಸಾಕಪ್ಪ ಎನ್ನುವಂತೆ ಅವರು ಚಡಪಡಿಸುತ್ತಿದ್ದರು. ಇದಾಗಿ ಸುಮಾರು ಒಂದು ವರ್ಷ ಕಳೆದಿರಬೇಕು.

ಆಲನಹಳ್ಳಿ ತನ್ನ ಜತೆ ಇದ್ದವರನ್ನು ನನಗೆ ಪರಿಚಯಿಸಿದ. ‘‘ಇವರು ಗಿರೀಶ್ ಕಾರ್ನಾಡ್. ಗೊತ್ತಲ್ಲ ನಿನಗೆ? ಇವರು ಭಾಸ್ಕರ್. ಮೇಷ್ಟ್ರ ಸ್ಟೂಡೆಂಟ್’’.

ಥಟ್ಟನೆ ನೆನಪಾಯಿತು ‘ಸಂಸ್ಕಾರ’ ಸಿನೆಮಾದ ಪ್ರಾಣೇಶಾಚಾರ್ಯರು. ಒಂದು ಕ್ಷಣ ಅವಕ್ಕಾದೆ. ಕಾರ್ನಾಡ್ ಮುಗುಳ್ನಗುತ್ತಾ ನನ್ನ ಕೈಕುಲುಕಿದರು. ಅದು ಕಾರ್ನಾಡರ ನನ್ನ ಮೊದಲ ಭೇಟಿ. ಆಲನಹಳ್ಳಿ ಹೇಳಿದ ‘ಮೇಷ್ಟ್ರು’ ಯು.ಆರ್.ಅನಂತಮೂರ್ತಿ.

ಅನಂತಮೂರ್ತಿ ‘ಭಾರತಿಪುರ’ ಕಾದಂಬರಿ ಬರೆಯುತ್ತಿದ್ದಾಗ ಅವರು ಉಳಿದುಕೊಂಡಿದ್ದ ಆದಿನಾಥ ಲಾಡ್ಜ್‌ಗೆ ತನ್ನ ಬೈಕಿನ ಹಿಂದೆ ನನ್ನನ್ನು ಕುಳ್ಳಿರಿಸಿ, ‘ಮೇಷ್ಟ್ರು ಮೈಸೂರಲ್ಲೆ ಇದ್ದಾರೆ’ ಎಂದು ಆ ‘ಗುಪ್ತಸ್ಥಳ’ಕ್ಕೆ ಕರೆದುಕೊಂಡು ಹೋದವ ಅದೇ ಆಲನಹಳ್ಳಿ. ಆಲನಹಳ್ಳಿ ಮತ್ತು ನನ್ನ ನಡುವೆ ಏಕ ವಚನದ ಸಲಿಗೆ ಇತ್ತು. ಕಾರ್ನಾಡರನ್ನು ನಾನು ಭೇಟಿಯಾದ ಒಂದೆರಡು ದಿನಗಳ ನಂತರ ಮೈಸೂರಿನ ರಾಮಸ್ವಾಮಿ ಸರ್ಕಲ್‌ನಲ್ಲಿದ್ದ ಅವನ ಮನೆಗೆ ನಾನು ಹೋದಾಗ, ಆತ ತನ್ನ ‘ಕಾಡು’ ಸಿನೆಮಾ ಆಗುತ್ತದೆ ಎಂದು ತುಂಬ ಹೆಮ್ಮೆಯಿಂದ ಹೇಳಿದ, ಕಾರ್ನಾಡರು ಆ ಸಿನೆಮಾ ತಯಾರಿಯ ಕುರಿತು ಚರ್ಚಿಸಲು ಮೈಸೂರಿಗೆ ಬಂದಿದ್ದರು.

ಇದಾಗಿ ಸುಮಾರು 26 ವರ್ಷಗಳ ಬಳಿಕ, ಪರಿಸರವಾದಿ ಡಾ. ನಿ. ಮುರಾರಿ ಬಲ್ಲಾಳ್ ಅಂಬಲಪಾಡಿ ಯಲ್ಲಿ ಖ್ಯಾತ ವಿಮರ್ಶಕ ಡಿ.ಆರ್. ನಾಗರಾಜ್ ಕುರಿತು ಏರ್ಪಡಿಸಿದ್ದ ವಿಚಾರಗೋಷ್ಠಿಗೆ ಕಾರ್ನಾಡರು ಬಂದಿದ್ದರು. ಅವರನ್ನು ಸಮೀಪಿಸಿ ಶ್ರೀಕೃಷ್ಣ ಆಲನಹಳ್ಳಿಯ ಜತೆ ಭೇಟಿಯಾದ ಸಂದರ್ಭವನ್ನು ನೆನಪಿಸಿದೆ. ‘‘ಅವ ಹೋಗ್ಬಿಟ್ನಲ್ಲ’’ ಎಂದರು.

ಈಗ ಕನ್ನಡದ ಮತ್ತು ಇಂಡಿಯಾದ ಸಾಹಿತ್ಯಕ-ಸಾಂಸ್ಕೃತಿಕ ಜಗತ್ತಿನ ಒಂದು ಪವಾಡವಾಗಿದ್ದ ಕಾರ್ನಾಡರೇ ಎಂದಿಗೂ ಮರಳಿಬಾರದ ಅವ್ಯಕ್ತ ತಾಣಕ್ಕೆ ‘ಹೋಗಿ ಬಿಟ್ಟಿದ್ದಾರೆ’. ಅವರ ನಿಧನ ಅವರು ನಂಬಿದ್ದ ವೌಲ್ಯಗಳನ್ನು, ಅವರು ಬದುಕಿದ್ದ ರೀತಿಯನ್ನು, ಅವರ ನಾಟಕಗಳನ್ನು ತುಂಬ ಇಷ್ಟಪಟ್ಟು ಮೆಚ್ಚುಗೆ ವ್ಯಕ್ತಪಡಿಸಿದವರಿಗೆ, ಅವರ ಹಲವು ರಂಗಗಳ ಅಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ. ಇದೇ ವೇಳೆ, ಅವರ ಸೈದ್ಧಾಂತಿಕ ವಿರೋಧಿಗಳಿಗೆ ಅವರ ಸಾವು ಸಂಭ್ರಮದ ಸಂಕ್ರಮಣವಾಗಿದೆ. ಹೀಗೆ ಆಧುನಿಕ ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ತನ್ನ ಬರಹ ಮತ್ತು ನೇರ ನುಡಿಗಳ ಕಾರಣಕ್ಕಾಗಿ ಪ್ರಭುತ್ವದ ಕೋಪಕ್ಕೆ, ಆ ಪ್ರಭುತ್ವದ ಹಿಂದಿರುವ ಶಕ್ತಿಗಳ ಖಂಡನೆಗೆ ಗುರಿಯಾದ ಕನ್ನಡದ ಇಬ್ಬರು ಲೇಖಕರೆಂದರೆ ಅನಂತಮೂರ್ತಿ ಮತ್ತು ಕಾರ್ನಾಡ್. ಬಹು ಮುಖ ಪ್ರತಿಭೆಯ ಕಾರ್ನಾಡರ ಸಾಹಿತ್ಯದ ಸಾಧನೆಗಳನ್ನು ಹಲವರು ಈಗಾಗಲೇ ಹಲವು ರೀತಿಗಳಲ್ಲಿ ಶ್ಲಾಘಿಸಿದ್ದಾರೆ. ಅವರು ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು ಇಪ್ಪತ್ತೊಂದನೇ ಶತಮಾನದ ಕಳೆದೊಂದು ದಶಕಗಳಲ್ಲಿ ಕನ್ನಡ ಹಾಗೂ ವಿಶ್ವ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ಅತ್ಯಂತ ಸೂಕ್ತವಾದ ಶಬ್ದಗಳಲ್ಲೇ ವರ್ಣಿಸಲಾಗಿದೆ. ದೇಶದ ರಾಷ್ಟ್ರಪತಿ ಹಾಗೂ ಪ್ರಧಾನಿಯವರಿಂದ ಹಿಡಿದು ತಾಲೂಕು/ಹೋಬಳಿ ಮಟ್ಟದ ಸಾಹಿತ್ಯ ಸಂಘಗಳ ಪದಾಧಿಕಾರಿಗಳವರೆಗೆ ಎಲ್ಲರೂ ಅವರಿಗೆ ನುಡಿ ನಮನ ಸಲ್ಲಿಸಿದ್ದಾರೆ. ಭಾರತೀಯ ರಂಗಭೂಮಿಯ ದೈತ್ಯ (ಟೈಟನ್), ರಂಗ ಭೂಮಿಗೆ ಹೊಸ ಮಾರ್ಗ ತೋರಿದ ನಾಟಕಕಾರ, ನಟ, ನಿರ್ದೇಶಕ, ರಾಷ್ಟ್ರಮಟ್ಟದ ಸಂಸ್ಥೆಗಳ ದಕ್ಷ ಆಡಳಿತಗಾರ, ಅಂತರ್‌ರಾಷ್ಟ್ರೀಯ ಮಟ್ಟದ ಚಿಂತಕ, ಅನನ್ಯ ಕಲಾವಿದ ಎಂದು ಅವರ ಸಾಧನೆಗಳನ್ನು ಗುರುತಿಸಲಾಗಿದೆ. ಗಿರೀಶ್ ಕಾರ್ನಾಡರಂತಹ ಒಬ್ಬ ಸಾಂಸ್ಕೃತಿಕ ಹೀರೋವಿನ ಸಾಧನೆಗಳನ್ನು ಅಳೆಯುವಾಗ ಅವರ ಸಾಹಿತ್ಯಕ ಹಿರಿಮೆಗೆ ಹೆಚ್ಚಿನ ಒತ್ತು ನೀಡಿ ಅವರ ಸಮಾಜಮುಖಿ ಚಿಂತನೆಯನ್ನು ಅಮುಖ್ಯಗೊಳಿಸುವ ‘ಶುದ್ಧ ಸಾಹಿತಿ’ಗಳ ಪ್ರಭುತ್ವಪರ ಸಂಚನ್ನು ಗಮನಿಸಬೇಕಾಗುತ್ತದೆ. ಯಾಕೆಂದರೆ ಕಾರ್ನಾಡರ ನಾಟಕಗಳು ಭೂತಕಾಲದ ಗೂಢ ಭ್ರೂಣಗಳನ್ನು ವರ್ತಮಾನದ ವಾಸ್ತವಗಳಿಗೆ ಪ್ರಸ್ತುತವಾಗುವ ಶಿಶುಗಳಾಗುವಂತೆ ರೂಪಿಸಿ ಭವಿಷ್ಯದಲ್ಲಿ ದಾರಿದೀಪವಾಗುವಂತಹ ಅವರ ರಚನೆಗಳು ಎಷ್ಟು ಮುಖ್ಯವೋ ಸಮಕಾಲೀನ ಭಾರತಕ್ಕೆ ಇಂದಿನ ಈ ಕ್ಷಣದ ಭಾರತೀಯ ಸಮಾಜಕ್ಕೆ ಅವರು ತಾಳಿದ ರಾಜಕೀಯ ನಿಲುವು ಹಾಗೂ ಸಿದ್ಧಾಂತ ಅಷ್ಟೇ ಮುಖ್ಯ ಅಥವಾ ಅದಕ್ಕಿಂತಲೂ ಹೆಚ್ಚು ಮುಖ್ಯ.

ಯಾಕೆಂದರೆ ಕಳೆದ ಕೆಲವು ವರ್ಷಗಳಲ್ಲಿ ದೇಶವ್ಯಾಪಿಯಾಗಿ ಕಾಣಿಸಿಕೊಂಡ ಧಾರ್ಮಿಕ ಸಾಂಸ್ಕೃತಿಕ ಅಸಹಿಷ್ಣುತೆಯ ವಿರುದ್ಧ ಗಟ್ಟಿಯಾದ ಧ್ವನಿ ಎತ್ತಿದವರು ಕಾರ್ನಾಡರು. ತೀವ್ರಗಾಮಿ ಬಲಪಂಥೀಯ ಹಿಂದುತ್ವದ ವಿರೋಧಿಯಾಗಿ ಹಿಟ್‌ಲಿಸ್ಟ್‌ನಲ್ಲೂ ಸೇರ್ಪಡೆಯಾದ ಇನೊಬ್ಬ ಭಾರತೀಯ ನಾಟಕಕಾರನಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವಂತೆ ತಮಗೆ ಇಷ್ಟದ ವಿಷಯಗಳ ಬಗ್ಗೆ ಅತ್ಯಂತ ಭಾವತೀವ್ರತೆಯಿಂದ ಮಾತಾಡಿದವರು ಕಾರ್ನಾಡ್. ಪ್ರಜಾಸತ್ತಾತ್ಮಕ ವೌಲ್ಯಗಳು, ಧೀಮಂತರು ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ, ಧಾರ್ಮಿಕ ಸಹಿಷ್ಣುತೆ ಅವರ ತುಂಬಾ ಇಷ್ಟದ ವಿಷಯಗಳಾಗಿದ್ದವು. ಈ ವಿಷಯಗಳಿಗಾಗಿ ಅವರು ದೇಶದ ಎಲ್ಲಾ ಪ್ರಜ್ಞಾವಂತರ ಪರವಾಗಿ ಬೀದಿಗಿಳಿದು ಚಳವಳಿ ನಡೆಸಿದರು. ಈ ವಿಷಯಗಳ ಕುರಿತು ಮುಕ್ತವಾಗಿ ಮಾತಾಡಿದ್ದಕ್ಕಾಗಿ ‘ದೇಶದ್ರೋಹಿ’ ಎಂಬ ‘ಸನ್ಮಾನಕ್ಕೂ’ ಗುರಿಯಾದರು. ಈ ವಿಷಯಗಳಿಗಾಗಿ ಹೋರಾಡಿದ್ದಾರೆಂಬ ಕಾರಣಕ್ಕಾಗಿಯೇ ಮತಾಂಧರು ಅವರ ಸಾವನ್ನು ಸಂಭ್ರಮಿಸಿದರು. ಇಂತಹ ‘ಸಂಭ್ರಮ’ ಧಾರ್ಮಿಕ ಮತಾಂಧತೆಯ ಪ್ರವಾಹಕ್ಕೆ ಎದುರಾಗಿ ಈಜಿದ, ಈಜುವ ಎಲ್ಲಾ ಕಾಲದ ಚಿಂತಕ ರಿಗೂ ಸಿಗುವ ‘ಗೌರವ’ವಿರಬಹುದು. ಸಾಕ್ರಟಿಸ್, ಯೇಸುಕ್ರಿಸ್ತ ಮೊದಲಾದವರಿಗೆ ದೊರಕಿದ್ದ ಗೌರವ ಇದು. ಕಾರ್ನಾಡರ ಬದುಕಿನ ಈ ಸಂಭ್ರಮಕ್ಕೆ ಕಾರಣವಾದ ಮುಖವನ್ನು ಅಮುಖ್ಯಗೊಳಿಸಿ, ಅವರು ಪಶ್ಚಿಮಘಟ್ಟ ಚಳವಳಿ, ಬಾಬಾ ಬುಡಾನ್‌ಗಿರಿ ಚಳವಳಿ ಮತ್ತು ‘ಅರ್ಬನ್ ನಕ್ಸಲ್’ ಹಣೆಪಟ್ಟಿ ಅಂಟಿಸಿ ಲೇಖಕರ, ಧೀಮಂತರ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವುದರ ವಿರುದ್ಧ ನಡೆಸಿದ ಚಳವಳಿಯನ್ನು ಹಾಸಿಗೆ ಅಡಿಗೆ ತಳ್ಳುವ ಸಾಹಿತಿಗಳ ಪ್ರವೃತ್ತಿಯನ್ನು ಅನುಮಾನದಿಂದ ನೋಡಬೇಕಾಗಿದೆ.

ಅವರನ್ನು ಸಮಾಜವನ್ನು ಬದಲಿಸುವ ಸಮಾಜ ಸುಧಾರಕ ಎಂದೋ ಅಥವಾ ಸಮಾಜದ ಓರೆಕೋರೆಗಳನ್ನು ಸರಿಪಡಿಸುವ ವೈದ್ಯ ಎಂದೋ ಹೇಳಿ ಕೈತೊಳೆದುಕೊಳ್ಳುವುದು ಅಥವಾ ಸರಕಾರ ನೀಡುವ ಪ್ರಶಸ್ತಿ, ಸಾಹಿತ್ಯಕ ಸಂಸ್ಥೆಯ ಅಧ್ಯಕ್ಷಗಿರಿ ಎಲ್ಲಿ ತಪ್ಪಿ ಹೋಗುತ್ತದೋ ಎಂಬ ಆತಂಕದಲ್ಲಿ ಸುಳ್ಳಿನ ಜತೆ ರಾಜಿ ಮಾಡಿಕೊಳ್ಳುವುದು ಖಂಡಿತವಾಗಿಯೂ ಕಾರ್ನಾಡರಂತಹ ಒಬ್ಬ ಧೀಮಂತ ನಾಟಕಕಾರ ಮೆಚ್ಚುವ ಸಂಗತಿಯಲ್ಲ. ಸತ್ಯ ಹೇಳಲು ಎಂದೂ ಹಿಂಜರಿಯದ, ಪ್ರಭುತ್ವ ಹಾಕುವ ತಾಳಕ್ಕೆ ತಕ್ಕಂತೆ ಕುಣಿಯಲು ಎಂದೂ ಒಪ್ಪದೆ ಇದ್ದ ಕಾರ್ನಾಡ್ ‘ಕನಸುಗಳೇ ಇಲ್ಲದ ದಾರಿಯಲ್ಲಿ’ ನಡೆಯಲು ನಿರಾಕರಿಸಿ, ತನ್ನ ಸಾಹಿತ್ಯಕ ಕನಸುಗಳನ್ನು ಎಲ್ಲ ಕಾಲದ ಸಾಮಾಜಿಕ- ಸಾಂಸ್ಕೃತಿಕ ವಾಸ್ತವಗಳಿಗೆ ಪ್ರಸ್ತುತವಾಗುವಂತೆ ನನಸು ಮಾಡಿದ ಅಸಾಧಾರಣ ಪ್ರತಿಭೆಯ ವಿವಾದಾಸ್ಪದ ಧೀಮಂತ.

ಭವಿಷ್ಯದ ತಲೆಮಾರುಗಳು ಕಾರ್ನಾಡರ ಕೃತಿಗಳ ಚರ್ಚೆ ನಡೆಸುವಾಗ ಅವರು, ಮತಾಂಧತೆ, ಅಸಹಿಷ್ಣುತೆ, ಅಭಿವ್ಯಕ್ತಿ ಸ್ವಾತಂತ್ರದ ದಮನದಂತಹ ವಿಕೃತಿಗಳ ವಿರುದ್ಧ ನಡೆಸಿದ ಜೀವ ಪರವಾದ ಚಳವಳಿಗಳು ಅಮುಖ್ಯವಾಗದಂತೆ ನೋಡಿಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)