varthabharthi

ಸುಗ್ಗಿ

► ಬೆಳೆಯುವ ಪೈರು ► ಅಧ್ಯಯನ ಮತ್ತು ಅರಿವು

ಬರವಣಿಗೆ ಏಕೆ ಬೇಕು?

ವಾರ್ತಾ ಭಾರತಿ : 22 Jun, 2019
ಯೋಗೇಶ್ ಮಾಸ್ಟರ್

ಕಲಿಕೆಯೆಂಬ ಪ್ರಕ್ರಿಯೆ

ಭಾಗ-26

ಆದಿಮ ಕಾಲದ ಮಾನವನೂ ಕೂಡಾ ತನ್ನ ಅನುಭವವನ್ನು, ಭಯ, ಆಸೆ, ನಿರಾಸೆ, ಸಂತೋಷ, ನಂಬಿಕೆ ಮುಂತಾದ ಭಾವನೆಗಳನ್ನು, ತಾನು ಸಾಕ್ಷೀಕರಿಸಿದ ನೋವನ್ನು, ನಲಿವನ್ನು ಹಂಚಿಕೊಳ್ಳಲು ಇಷ್ಟಪಡುತ್ತಿದ್ದ. ಯಾರು ನೋಡುತ್ತಾರೋ, ತನ್ನದು ಹೆಚ್ಚು ಜನ ನೋಡಿ ಜನಪ್ರಿಯವಾಗಿ ಬಿರುದು ಬಾವಲಿಗಳು ದೊರಕುತ್ತದೋ ಎಂಬ ಯಾವುದೇ ಪ್ರತಿಫಲಗಳನ್ನು ಬಯಸದೇ ಅಥವಾ ಅವುಗಳ ಕಲ್ಪನೆಯೇ ಇಲ್ಲದೇ ತನ್ನ ಆತ್ಮ ಸಂತೋಷಕ್ಕೆ ಗುಹೆಗಳ ಗೋಡೆಗಳ ಮೇಲೆ, ಬಂಡೆಗಳ ಮೇಲೆ ಚಿತ್ರಗಳ ರೂಪದಲ್ಲೋ, ಕೊರೆಯುವ ಮೂಲಕವೋ ಅಥವಾ ಇನ್ನಾವುದೋ ರೂಪದಲ್ಲೋ ಬರೆದಿರುತ್ತಿದ್ದ. ಅವುಗಳು ದಾಖಲೆಗಳಾದವು. ಭಾಷೆಯ ಆವಿಷ್ಕಾರವೂ ಕೂಡಾ ನಿಧಾನ ಪ್ರಕ್ರಿಯೆಯಲ್ಲಿ ವಿಕಾಸ ಹೊಂದುತ್ತಾ ಬಂದು ಇಂದು ನಾವು ಈ ರೀತಿಯಲ್ಲಿ ಅಭಿವ್ಯಕ್ತಿಗೊಳಿಸುವ ಮಟ್ಟಕ್ಕೆ ಬಂದಿದ್ದೇವೆ. ಮನುಷ್ಯ ತಾನು ಸಾಕ್ಷೀಕರಿಸಿದ್ದನ್ನು, ಅನುಭವಿಸಿದ್ದನ್ನು, ಗಮನಿಸಿದ್ದನ್ನು, ವಿಮರ್ಶಿಸಿದ್ದನ್ನು, ಕಂಡುಕೊಂಡದ್ದನ್ನು, ಕೇಳಿರುವುದನ್ನು, ಹೇಳಬೇಕಾಗಿರುವುದನ್ನು, ಪ್ರಯೋಗ ಮಾಡಿರುವುದನ್ನು, ತಿಳಿದಿರುವುದನ್ನು, ಕಲಿತಿರುವುದನ್ನು, ಭಾವಿಸಿದ್ದನ್ನು, ಆಲೋಚಿಸಿದ್ದನ್ನು; ಎಲ್ಲವನ್ನೂ ದಾಖಲಿಸಿರುವ ಕಾರಣಗಳಿಂದಲೇ ಸಾಹಿತ್ಯ, ವಿಜ್ಞಾನ, ಸಮಾಜಶಾಸ್ತ್ರಗಳನ್ನು ಇಂದಿಗೂ ನಾವು ಅಧ್ಯಯನ ಮಾಡಲು ಸಾಧ್ಯವಾಗಿರುವುದು. ದಾಖಲಿಸುವಿಕೆ ಮನುಷ್ಯನ ಅತ್ಯಂತ ವೌಲಿಕ ಗುಣ. ಅದೇ ರೀತಿ ಬರವಣಿಗೆಯೂ ಕೂಡಾ ಅತ್ಯಂತ ಮಹತ್ವದ್ದು.

ಎರಡು ಬಗೆಯ ದಾಖಲೆಗಳು

ಕಲಿಕೆಯ ವಿಷಯಕ್ಕೆ ಬಂದರೆ ಎರಡು ರೀತಿಯ ದಾಖಲಿಸುವಿಕೆಯನ್ನು ಗುರುತಿಸಬೇಕಾಗುತ್ತದೆ. ಒಂದು ತಮಗೆ ಮತ್ತು ತಮ್ಮಂತಹ ಇತರರ ಅವಗಾಹನೆಗೆ, ಅಧ್ಯಯನಕ್ಕೆ ಬೇಕಾದ ಸರಕನ್ನು ಒದಗಿಸಲು ಸ್ಥೂಲರೂಪದ ಅಥವಾ ಭೌತಿಕ ರೂಪದ ದಾಖಲೆಯನ್ನು ಮಾಡುವುದಾದರೆ, ಮತ್ತೊಂದು ತನ್ನಲ್ಲಿ ದಾಖಲು ಮಾಡಿಕೊಳ್ಳುವುದು. ಸಾಪ್ಟ್ ಕಾಪಿಯನ್ನು ತನ್ನಲ್ಲಿ ಹೊಂದುವುದು. ತನ್ನಲ್ಲಿ ಸಾಪ್ಟ್ ಕಾಪಿಯನ್ನು ಹೊಂದಲು ಬರವಣಿಗೆ ಒಂದು ಹಂತಕ್ಕೆ ಮುಖ್ಯವಾಗುತ್ತದೆ. ಮಕ್ಕಳಿಗೆ ಪ್ರಾರಂಭಿಕ ಹಂತದಲ್ಲಿ ಬರೆಯುವಾಗ, ಅಕ್ಷರಗಳನ್ನು, ಪದಗಳನ್ನು ಮತ್ತು ಅವುಗಳೆಲ್ಲವನ್ನೂ ಹೊಂದಿರುವ ಭಾಷೆಯನ್ನು ಕಲಿಯಲು, ತಾನೇ ಬರೆಯುವ ಕ್ರಿಯೆಯಲ್ಲಿ ಅಭ್ಯಾಸ ಮಾಡಿದರೆ, ಹೆಚ್ಚು ಪರಿಣಾಮಕಾರಿಯಾಗುತ್ತದೆ.

ಬರವಣಿಗೆ ಎಂಬ ಕಲೆ

ವಾಸ್ತವವಾಗಿ ಬರಹವು ಲಲಿತ ಕಲೆಯು ನೀಡುವ ಆನಂದದಂತೆಯೇ ಇರಬೇಕೇ ಹೊರತು ಶಿಕ್ಷೆಯಂತೆ ಖಂಡಿತ ಅಲ್ಲ. ಕೆಲವು ಮಕ್ಕಳು ಹೇಳುವುದನ್ನು ಕೇಳಿದ್ದೇನೆ. ನನಗೆ ಬರೆಯಲು ಖುಷಿಯಾಗುತ್ತದೆ. ಹೌದು, ಖುಷಿ ಖುಷಿಯಿಂದ ಬರೆಯಲು ಶಿಕ್ಷಕರು ಪ್ರೇರೇಪಿಸಬೇಕು. ಮಕ್ಕಳು ಖುಷಿಯಿಂದ ಬರೆಯಬೇಕೆಂದರೆ ಅವರು ಬರೆಯುವ ವಿಷಯವು ಸರಳವೂ ಮತ್ತು ಚಿಕ್ಕದಾಗಿಯೂ ಇರಬೇಕು. ಅವರು ತಾವು ಏನು ಬರೆಯಬೇಕೋ ಅದರ ಗಾತ್ರವನ್ನು ನೋಡಿಯೇ ಹೆದರಿಕೊಂಡು ಬಿಟ್ಟರೆ ಬರವಣಿಗೆಯ ಬಗ್ಗೆ ಆಸಕ್ತಿಯನ್ನು ಮತ್ತು ಕುತೂಹಲವನ್ನು ಬೆಳೆಸಿಕೊಳ್ಳುವುದಿಲ್ಲ. ಮಕ್ಕಳಿಗೆ ಎರಡು ಮೂರು ಪುಟಗಳನ್ನು ತೋರಿಸಿ ಇಷ್ಟೂ ಬರೆಯಬೇಕು ಎಂದರೆ ಅವರು ಪ್ರಾರಂಭದಲ್ಲಿಯೇ ಬರೆಯುವ ಖುಷಿಯನ್ನು ಕಳೆದುಕೊಂಡು ಬಿಡುತ್ತಾರೆ. ಭಾಗಭಾಗವಾಗಿ ಎರಡೆರಡು ಸಾಲು ಅಥವಾ ನಾಲ್ಕೈದು ಸಾಲುಗಳಷ್ಟನ್ನೇ ಬರೆಸುತ್ತಾ ಹೋದರೆ ಅವರು ಖುಷಿಯಿಂದ ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಯತ್ನಿಸುತ್ತಾರೆ. ಇಲೆಕ್ಟ್ರಾನಿಕ್ ಮಾಧ್ಯಮಗಳನ್ನು ಉಪಯೋಗಿಸಿ ತಮ್ಮ ಬರಹ ಗಳನ್ನು ದಾಖಲಿಸುವುದು ಈಗಿನ ಸಾಮಾನ್ಯ ಸಂಗತಿ, ನಿಜ. ಆದರೆ, ಬರವಣಿಗೆಯನ್ನು ಕಲಾತ್ಮಕತೆಯ ರಸಿಕತೆಯಿಂದ ಬಳಸುವುದನ್ನು ರೂಢಿಸಿದರೆ, ತಾನು ಬರೆಯುವ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನೂ, ಕುತೂಹಲವನ್ನೂ, ಮುಖ್ಯವಾಗಿ ಪ್ರೀತಿ ಹಾಗೂ ಆಪ್ತತೆಯನ್ನೂ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಆಪ್ತತೆ ಮತ್ತು ಪ್ರೀತಿಯಿಂದ ಕಲಿಕೆಯು ಆಪ್ಯಾಯಮಾನವಾಗುತ್ತದೆ. ಪೆನ್ಸಿಲ್ ಅಥವಾ ಪೆನ್ನನ್ನು ಸರಿಯಾಗಿ ಹಿಡಿದುಕೊಳ್ಳುವುದು, ಅದನ್ನು ಓಡಾಡಿಸುತ್ತಾ ಬರಹಗಳನ್ನು ಕಾಗದದ ಮೇಲೆ ಮೂಡಿಸುವುದು, ಅವುಗಳನ್ನು ಗಮನಿಸುವುದು, ಸರಿ-ತಪ್ಪುಗಳನ್ನು ಗುರುತಿಸುವುದು, ಕಲಾವಿದನೊಬ್ಬ ತನ್ನ ಕೃತಿಯನ್ನು ನೋಡಿ ಸಂತೋಷಪಡುವಂತೆ ಮಕ್ಕಳು ತಾವು ಬರೆದಿರುವುದನ್ನು ತಾವೇ ನೋಡಿ ಸಂತೋಷಿಸುವುದು ಇವೆಲ್ಲವೂ ಬರವಣಿಗೆಯಲ್ಲಿ ರಸಿಕತೆ ಮತ್ತು ಪರಿಪಕ್ವತೆಯನ್ನು ಕಂಡುಕೊಳ್ಳಲು ಸಾಧ್ಯವಾಗುವುದು.

ಮೌಲಿಕ ಗಾತ್ರ ಮತ್ತು ಪ್ರಮಾಣ

ಬರವಣಿಗೆಯಲ್ಲಿ ಮುಖ್ಯವಾದ ವಿಷಯವೆಂದರೆ, ಈಗಿನ ಕಾಲದ ಅಗತ್ಯಕ್ಕೆ ತಕ್ಕಂತೆ ಬರವಣಿಗೆಯ ವೌಲಿಕ ಗಾತ್ರ ಮತ್ತು ಪ್ರಮಾಣವನ್ನು ನಿರ್ಧರಿಸಬೇಕು. ವೌಲಿಕ ಗಾತ್ರವೆಂದರೆ, ವಯಸ್ಸಿಗೆ ತಕ್ಕಂತೆ ಮತ್ತು ಅವರ ಕಲಿಕೆಗೆ ತಕ್ಕಂತೆ ವಿಷಯಗಳನ್ನು ಮತ್ತು ಪದಗಳನ್ನು ನಿರ್ಧರಿಸಬೇಕು. ಅವು ಅವರಿಗೆ ಅರ್ಥವಾಗುವಂತಹ ಪದಗಳು, ವಿಷಯಗಳಾದರೆ ಮಕ್ಕಳಿಗೆ ತಾವು ಅವುಗಳನ್ನು ಕಾಗದದ ಮೇಲೆ ಮೂಡಿಸುವುದರಲ್ಲಿ ಸಂತೋಷ ಪಡುತ್ತಾರೆ. ಒಂದುವೇಳೆ ಅದು ಕಬ್ಬಿಣದ ಕಡಲೆಯಾದರೆ ಅವರಿಗೆ ಜಗಿಯಲು ಸಾಧ್ಯವಾಗುವುದಿಲ್ಲ. ಬರೆಯಲೇ ಬೇಕೆಂಬ ಒತ್ತಡಕ್ಕೆ ಮಣಿದು ಬರೆಯುತ್ತಾರೆ. ಅದು ಒಂದು ಆನಂದದ ವಿಷಯವಾಗುವುದಿಲ್ಲ. ಬದಲಾಗಿ ಶಿಕ್ಷೆಯಾಗಿ ಪರಿಣಮಿಸುತ್ತದೆ. ಇದರಿಂದ ಬರವಣಿಗೆಯು ಯಾವ ರೀತಿಯಲ್ಲಿಯೂ ಕಲಿಕೆಗೆ ಸಹಾಯವಾಗುವುದಿಲ್ಲ. ಅದರಂತೆಯೇ ಪ್ರಮಾಣವೆಂದರೆ, ಆಯಾ ಮಗುವಿನ ವಯಸ್ಸಿನ, ತರಗತಿಯ ಅಥವಾ ಕಲಿಕೆಯ ಸಾಮರ್ಥ್ಯದ ಆಧಾರದಲ್ಲಿ ಇಂತಿಷ್ಟು ಸಾಲು, ಇಂತಿಷ್ಟು ಪುಟಗಳು ಎಂಬುದನ್ನೂ ಕೂಡಾ ನಿರ್ಧರಿಸಬೇಕು. ಆಯಾ ವಯಸ್ಸಿನ ಮಗುವಿಗೆ ಒಂದು ದಿನಕ್ಕೆ ಎಷ್ಟು ಪದಗಳು, ಎಷ್ಟು ಸಾಲುಗಳು, ಎಷ್ಟು ವಾಕ್ಯಗಳನ್ನು ಕಲಿಯಬೇಕೋ ಅಷ್ಟು ಅವರ ಪಠ್ಯ ಕ್ರಮದಲ್ಲಿರಬೇಕು. ಅದಿಲ್ಲದಿದ್ದರೆ, ಒಂದೋ ಮಗುವಿಗೆ ಕಲಿಕೆಯು ಹೊರೆಯಾಗಬಹುದು ಅಥವಾ ಕಲಿಯಬೇಕಾದಷ್ಟನ್ನು ಕಲಿಯದೇ ಹೋಗುವುದು. ಅದೂ ಕೂಡಾ ಒಂದು ಕೊರತೆಯೇ. ಮಗುವೊಂದು ತನ್ನ ವಯಸ್ಸಿನ ಸಾಮರ್ಥ್ಯಕ್ಕೆ ಸಮನಾಗಿ ಕಲಿಕೆಯನ್ನು ಪೂರೈಸುವಂತಹ ಯೋಜನೆಯನ್ನು ಪೋಷಕರು ಮತ್ತು ಶಿಕ್ಷಕರು ಹಾಕಿಕೊಳ್ಳಲೇಬೇಕು. ಮಗುವಿನ ಬರವಣಿಗೆಯ ವೌಲಿಕ ಗಾತ್ರ, ಪ್ರಮಾಣ ಮತ್ತು ಸರಳತೆಗಳ ಆಧಾರದ ಮೇಲೆ ಕಲಿಕೆಯಲ್ಲಿ ತೊಡಗಿಸಬೇಕು. ಆಗ ಬರವಣಿಗೆಯು ಒಂದು ಸಂತೋಷದ ವಿಷಯವಾಗಿ ಪರಿಣಮಿಸುವುದು. ಬರವಣಿಗೆಯು ಕಲಿಕೆಯಲ್ಲಿ ತಾದ್ಯಾತ್ಮತೆಯನ್ನು, ವಿಷಯದ ಬಗ್ಗೆ ಆಪ್ತತೆಯನ್ನು ನೀಡುವುದು. ಆದರೆ ಅದು ಎಷ್ಟು ಇರಬೇಕು, ಹೇಗಿರಬೇಕು ಎಂಬುದನ್ನು ಶಿಕ್ಷಕರು ಮತ್ತು ಪೋಷಕರು ಮನಗಾಣಬೇಕು. ಮಕ್ಕಳು ಮುಂದೆ ವಯಸ್ಕರಾದಾಗ ಈ ಬರವಣಿಗೆಯು ಉದ್ಯೋಗದಲ್ಲಿ ಅಥವಾ ಕಾರ್ಯಕ್ಷೇತ್ರದಲ್ಲಿ ಹೆಚ್ಚು ಬಳಕೆಗೆ ಬರದೇ ಇರುವುದಾದರೂ, ಕಲೆಯನ್ನು ಸಂತೋಷಿಸುವ ರೀತಿಯಲ್ಲಿ ಬರವಣಿಗೆಯನ್ನು ಆನಂದಿಸುವುದನ್ನು ರೂಢಿಸಿದರೆ ಬರವಣಿಗೆಯ ಉದ್ದೇಶವೂ ಸಾರ್ಥಕವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)