varthabharthi

ನಿಮ್ಮ ಅಂಕಣ

ಪ್ರಜಾಪ್ರಭುತ್ವ ಹಗಲು ಬೆಳಕಿನಲ್ಲಿ ಕೂಡ ಸಾಯಬಲ್ಲದು

ವಾರ್ತಾ ಭಾರತಿ : 22 Jun, 2019
ಕೃಷ್ಣ ಪ್ರಸಾದ್

ಕಳೆದ ಐದು ವರ್ಷಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಜನರ ಮನಸ್ಸುಗಳನ್ನು ಕಂಡಿಶನ್ ಮಾಡುವುದರಲ್ಲಿ, ಮಿಥ್ಯೆಗಳನ್ನು ಸೃಷ್ಟಿಸುವುದರಲ್ಲಿ, ಜನರ ಗಮನವನ್ನು ಮುಖ್ಯ ವಿಷಯಗಳಿಂದ/ಸಮಸ್ಯೆಗಳಿಂದ ಬೇರೆ ಕಡೆಗೆ ಸೆಳೆಯುವುದರಲ್ಲಿ ಅಸಾಮಾನ್ಯವಾದದ್ದನ್ನು (ಅಬ್‌ನಾರ್ಮಲ್) ನಾರ್ಮಲ್ ಆಗಿಸುವುದರಲ್ಲಿ ಮತ್ತು ಕೊಳಕ್ಕೆ ವಿಷ ಬೆರೆಸುವುದರಲ್ಲಿ ಕೆಲವು ಮಾಧ್ಯಮಗಳ ಮಂದಿ ವಹಿಸಿದ ಹಾನಿಕಾರಕ, ಅಪಾಯಕಾರಿ ಪಾತ್ರ ಸ್ಪಷ್ಟವಾಗುತ್ತದೆ.


ಭಾಗ-2

1992ರಲ್ಲಿ ಬ್ರಿಟನ್‌ನಲ್ಲಿ ಕನ್ಸರ್ವೇಟಿವ್ ಪಕ್ಷ ಅನಿರೀಕ್ಷಿತವಾಗಿ ಅಧಿಕಾರಕ್ಕೆ ಬಂದಾಗ ರೂಪರ್ಟ್ ಮರ್ಡೊಕ್‌ನ ರಾಶಿ ಮಾರಾಟ ಟ್ಯಾಬ್ಲಾಯ್ಡಾ ಪತ್ರಿಕೆ ‘ದಿ ಸನ್’ ತನ್ನ ಮುಖಪುಟದಲ್ಲಿ ಘೋಷಿಸಿತು, ‘‘ಇಟ್’ಸ್ ದಿ ಸನ್ ವೊಟ್ ವನ್ ಇಟ್’’ (ಆ ಪಕ್ಷದ ಗೆಲುವು ದಿ ಸನ್ ಪತ್ರಿಕೆಯಿಂದಾಗಿ ಸಾಧ್ಯವಾಯಿತು). ಬಿಜೆಪಿ 2019ರ ಚುನಾವಣೆಗಳನ್ನು ಸಂಪೂರ್ಣವಾಗಿ ಮೀಡಿಯಾದಿಂದಾಗಿಯೇ ಗೆದ್ದಿತು ಎಂದು ಹೇಳಲು ಸಾಧ್ಯವಾಗದಿರಬಹುದು. ಯಾಕೆಂದರೆ ಭಾರತ ಬ್ರಿಟನ್‌ಗಿಂತ ಗಾತ್ರದಲ್ಲಿ ಬಹಳ ದೊಡ್ಡದು, ಭಾರತದ ಪ್ರಜಾಪ್ರಭುತ್ವ ಹಲವು ಪದರಗಳಿರುವಂತಹದು ಮತ್ತು ಭಾರತದ ಮೀಡಿಯಾ ಏಕಮುಖವಾದುದಲ್ಲ. ಆದರೆ ಕಳೆದ ಐದು ವರ್ಷಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಜನರ ಮನಸ್ಸುಗಳನ್ನು ಕಂಡಿಶನ್ ಮಾಡುವುದರಲ್ಲಿ, ಮಿಥ್ಯೆಗಳನ್ನು ಸೃಷ್ಟಿಸುವುದರಲ್ಲಿ, ಜನರ ಗಮನವನ್ನು ಮುಖ್ಯ ವಿಷಯಗಳಿಂದ/ಸಮಸ್ಯೆಗಳಿಂದ ಬೇರೆ ಕಡೆಗೆ ಸೆಳೆಯುವುದರಲ್ಲಿ ಅಸಾಮಾನ್ಯವಾದದ್ದನ್ನು (ಅಬ್‌ನಾರ್ಮಲ್) ನಾರ್ಮಲ್ ಆಗಿಸುವುದರಲ್ಲಿ ಮತ್ತು ಕೊಳಕ್ಕೆ ವಿಷ ಬೆರೆಸುವುದರಲ್ಲಿ ಕೆಲವು ಮಾಧ್ಯಮಗಳ ಮಂದಿ ವಹಿಸಿದ ಹಾನಿಕಾರಕ, ಅಪಾಯಕಾರಿ ಪಾತ್ರ ಸ್ಪಷ್ಟವಾಗುತ್ತದೆ.

ಓರ್ವ ಪ್ರಾದೇಶಿಕ, ಪ್ರಾಂತೀಯ (ಪ್ರೊವಿನ್ಶಿಯಲ್) ನಾಯಕ ಇದನ್ನೆಲ್ಲ ಹೇಗೆ ಸಾಧಿಸುವುದು ಸಾಧ್ಯವಾಯಿತೆಂದು ನಿಖರವಾಗಿ ಹೇಳುವುದು ಕಷ್ಟ. ಖಂಡಿತವಾಗಿಯೂ, ಸುಳ್ಳು (ಬೋಗಸ್) ಎಫ್‌ಐಆರ್‌ಗಳನ್ನು ದಾಖಲಿಸುವುದು, ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವುದು, ಆದಾಯ ತೆರಿಗೆ ದಾಳಿಗಳನ್ನು ನಡೆಸುವುದು, ಕಣ್ಗಾವಲಿಡುವುದು ಇತ್ಯಾದಿ ಮನೆಯಲ್ಲೇ ಬೆಳೆಸಲಾದ (ಹೋಮ್ ಗ್ರೋನ್) ತಂತ್ರಗಳನ್ನು ಇನ್ನಷ್ಟು ಸುಧಾರಿಸಿ ಬಳಸಿಕೊಳ್ಳಲಾಯಿತು. ದ್ವೇಷ, ಪ್ರತೀಕಾರ ಸಂಬಂಧದ ತಳಪಾಯವಾಯಿತು. ಪ್ರಧಾನಿಯವರ ಕಚೇರಿಯಲ್ಲಿ ಮೀಡಿಯಾ ಮುಖಾಮುಖಿ, ಪತ್ರಿಕಾಗೋಷ್ಠಿ ಇರಲೇ ಇಲ್ಲ. ಇದ್ದದ್ದು ಕೇವಲ ಪಿಆರ್‌ಬಿ. ಪತ್ರಕರ್ತರ ಭೇಟಿ ಇರಲಿಲ್ಲ. ಎಷ್ಟು ಪತ್ರಕರ್ತರು ಸತ್ತರು ಎಂದು ಲೆಕ್ಕ ಮಾಡಲಿಲ್ಲ. ತುಂಬ ಸೂಕ್ಷ್ಮವಾದ ಹಾಗೂ ಬರ್ಬರವಾದ ರೀತಿಗಳಲ್ಲಿ ವಿಚಾರಣೆಯ, ಪರಿಶೀಲನೆಯ ಜಾಗದಲ್ಲಿ ಹೊಗಳು ಭಟ್ಟಂಗಿತನ ಇರಬೇಕೆಂಬ ಸಂದೇಶವನ್ನು ರವಾನಿಸಲಾಯಿತು ಮತ್ತು ಅದನ್ನು ಸ್ವೀಕರಿಸಲಾಯಿತು.

2014ರಲ್ಲಿ ಮೋದಿಯವರು ತನ್ನ ಸಚಿವ ಸಂಪುಟ ರಚಿಸಿದ ಬಳಿಕ, ಹಣಕಾಸು ಸಚಿವರಿಗೆ ಮಾಹಿತಿ ಮತ್ತು ಪ್ರಸಾರ ಖಾತೆಯನ್ನೂ ನೀಡಲಾಯಿತು. ಸರ್ಕಸ್‌ನ ಪ್ರಾಣಿಗಳನ್ನು ಮೇಲಿಂದ ಕೆಳಗಿನವರೆಗೆ, ಪಳಗಿಸುವುದರಲ್ಲಿ ಇದೊಂದು ಮಾಸ್ಟರ್ ಸ್ಟ್ರೋಕ್ ಎಂದು ಪ್ರಾಯಶಃ ಇತಿಹಾಸದಲ್ಲಿ ದಾಖಲಾಗುತ್ತದೆ. ಅಪ್ರಾಮಾಣಿಕ ಕಾರ್ಪೊರೇಟ್‌ಗಳು ಮತ್ತು ಮೀಡಿಯಾ ಹೌಸ್‌ಗಳು ತೆರಿಗೆ ದಾಳಿಯ ಭಯದಲ್ಲೇ ಬದುಕಿದವು. ಮೀಡಿಯಾ ಪರವಾನಿಗೆಗಳು ಹಾಗೂ ಹಸಿರು ನಿಶಾನೆಗಳು (ಕ್ಲಿಯರೆನ್ಸ್) ಸಿಗುವುದು ಕಷ್ಟವಾಯಿತು. ಪ್ರತಿಫಲ ಮತ್ತು ಶಿಕ್ಷೆಯ ಆಮಿಷ ತೋರಿಸಿ ಸುದ್ದಿಗಳ ಹರಿವಿನ ಸರ್ಕಿಟ್‌ಗಳನ್ನು ಮರುಜೋಡಣೆ ಮಾಡಲಾಯಿತು. ಯಾರ ಮೇಲೆ ದಾಳಿ ಮಾಡಬಹುದು ಮತ್ತು ಯಾರನ್ನು ಮುಟ್ಟಕೂಡದು ಎಂದು ನಿಗದಿಪಡಿಸಲಾಯಿತು. 2007-2008ರಲ್ಲಿ ಆರಂಭವಾದ ಆರ್ಥಿಕ ಕುಸಿತದಿಂದ ಇನ್ನೂ ಚೇತರಿಸಿಕೊಂಡಿರದ, ‘‘ಅಚ್ಛೇ ದಿನ್’’ಗಾಗಿ ಕಾದಿರುವ ಮೀಡಿಯಾ ಜಗತ್ತು ಶರಣಾಯಿತು.

ಆಧಾರ್‌ನಿಂದ ಇವಿಎಂ (ಮತಯಂತ್ರ)ಗಳ ವರೆಗೆ, ಡೋಕ್ಲಾಮ್‌ನಿಂದ ಪುಲ್ವಾಮವರೆಗೆ, ರಫೇಲ್ ಸೇರಿದಂತೆ ಎಲ್ಲ ಅತ್ಯಂತ ಬೃಹತ್ ಹಗರಣಗಳನ್ನು ಹೂತು ಹಾಕಲಾಯಿತು. ಅತ್ಯಂತ ಮುಖ್ಯ ವಿಷಯಗಳನ್ನು ಬದಿಗೆ ತಳ್ಳಿ ಗೀತೆ, ಧ್ವಜ, ಗೋಮಾಂಸ, ಜೆಎನ್‌ಯು, ನಗರ ನಕ್ಸಲರಂತಹ ವಿಷಯಗಳೇ ಮುಖ್ಯವಾಗಿ, ರೈತರ, ನೇಕಾರರ ಮತ್ತು ಕಾರ್ಮಿಕರ ಪ್ರತಿಭಟನೆಗಳಂತಹ ತುರ್ತು ವಿಷಯಗಳು ಅಮುಖ್ಯವಾಗಿಬಿಟ್ಟವು. ಕಾರ್ಯಸೂಚಿಯನ್ನು ನಿರ್ಧರಿಸುವ ಸ್ಟುಡಿಯೋ ಸರದಾರರು ಪ್ರತಿರಾತ್ರಿ ಅಲ್ಪಸಂಖ್ಯಾತ ಭೂತಗಳನ್ನೇ ಛೂ ಬಿಟ್ಟರು, ‘ಹಿಂದೂಗಳು ಅಪಾಯದಲ್ಲಿ’, ‘ಅಕ್ರಮ ವಲಸಿಗರು’ ಇತ್ಯಾದಿ.

ಸತ್ಯೋತ್ತರ ಜಗತ್ತಿನಲ್ಲಿ ಸಾಮಾಜಿಕ ಮಾಧ್ಯಮಗಳು ಫಿಲ್ಟರ್ ಮಾಡದೆ ಎಲ್ಲ ರೀತಿಯ ಪ್ರಚಾರವನ್ನು ನೇರವಾಗಿ ಮತದಾರರ ಕಿಸೆಯೊಳಕ್ಕೇ ಕೊಂಡೊಯ್ಯುತ್ತವೆ. ಇಂತಹ ಜಗತ್ತಿನಲ್ಲಿ ಮುಖ್ಯಧಾರೆಯ ಮೀಡಿಯಾ ಇನ್ನಷ್ಟು ಸುಮ್ಮನಾಗಿದ್ದರೆ ಚುನಾವಣಾ ಫಲಿತಾಂಶ ಬೇರೆಯೇ ಆಗಿರುತ್ತಿತ್ತು ಎನ್ನುವಂತಿಲ್ಲ. ಆದರೆ ಸುಪ್ರೀಂ ಕೋರ್ಟ್ ನ ಓರ್ವ ಮುಖ್ಯ ನ್ಯಾಯಮೂರ್ತಿ, ‘‘ತನ್ನ ಪ್ರಾಥಮಿಕ ಜವಾಬ್ದಾರಿ ಅಧಿಕಾರದಲ್ಲಿರುವವರ ಕಾವಲು ನಾಯಿಯಾಗುವುದು, ಅವರನ್ನು ರಕ್ಷಿಸುವ ರಕ್ಷಣಾ ನಾಯಿಯಾಗುವುದಲ್ಲ (ಗಾರ್ಡ್ ಡಾಗ್) ಎಂಬುದನ್ನು ಮೀಡಿಯಾ ಮರೆಯಬಾರದು’’ ಎಂದು ಹೇಳಿದ್ದನ್ನು ಗಮನಿಸಬೇಕಾಗಿದೆ. ಹಾಗೆಯೇ ಓರ್ವ ಮಾಜಿ ಮುಖ್ಯ ಚುನಾವಣಾ ಆಯುಕ್ತರು, ‘‘ನಾಲ್ಕನೆಯ ಎಸ್ಟೇಟ್ ಪ್ರಜಾಪ್ರಭುತ್ವದ 5ನೆಯ ಅಂಕಣ ಆಗಿದೆ’’ ಎಂದು ಎಚ್ಚರಿಕೆ ನೀಡಿದಾಗ ಪ್ರಜಾಪ್ರಭುತ್ವ ಆಧಾರ ಸ್ತಂಭಗಳಲ್ಲಿ ಬಿರುಕು ಬಿಟ್ಟುರುವುದು ಸ್ಟಷ್ಟವಾಗುತ್ತದೆ.

ಕೊನೆಯ ದಿನಾಂಕ ಇಲ್ಲವೆ?
ಇಂದಿರಾ ಗಾಂಧಿಯವರ 21 ತಿಂಗಳ ತುರ್ತು ಪರಿಸ್ಥಿತಿಯಲ್ಲಿ ಮಾಧ್ಯಮಗಳ ಮೇಲೆ ನಿಷೇಧ ಹೇರಲಾಯಿತು. ಆ ದಿನಗಳು ಮೀಡಿಯಾದ ಪಾಲಿಗೆ ಅತ್ಯಂತ ಕರಾಳ ದಿನಗಳು. ಆಗ ‘‘ಬಗ್ಗಲು ಹೇಳಿದಾಗ ಪತ್ರಿಕೆಗಳು ತೆವಳಿಕೊಂಡು ಹೋದವು’’ ಎಂಬ ಎಲ್. ಕೆ. ಅಡ್ವಾಣಿಯವರ ಮಾತನ್ನು ಮರೆಯುವಂತಿಲ್ಲ. ಆದರೆ ಆ ಅವಧಿಯಲ್ಲಿ ಪತ್ರಿಕೆಗಳು, ಮೀಡಿಯಾ ಒಂದು ಆರಂಭದ ದಿನಾಂಕ ಮತ್ತು ಅತ್ಯಂದ ದಿನಾಂಕವಿದ್ದ ಒಂದು ಅಧಿಕೃತ ಆಜ್ಞೆಗೆ ಆತುಕೊಂಡಿದ್ದವು. ಆದರೆ 21ನೇ ಶತಮಾನದಲ್ಲಿ ತಮ್ಮ ಮೂಲ ಪ್ರವೃತ್ತಿಗಳನ್ನು ಅಮಾನತಿನಲ್ಲಿಡಲು ‘ಕ್ರೂರ ಪಶುಗಳಿಗೆ’ ರಾಷ್ಟ್ರಪತಿಗಳು ಸಹಿ ಮಾಡಿದ ಒಂದು ಆಜ್ಞೆ ಬೇಕಾಗಲಿಲ್ಲ. ತಮ್ಮ ಎದುರು ಬರ್ಬರ ಹಿಂಸೆ ನಡೆಯುತ್ತಿರುವಾಗಲೂ ಅದನ್ನು ನೋಡದೆ ಪಕ್ಕಕ್ಕೆ ಮುಖ ತಿರುಗಿಸಿ ನಿಲ್ಲಲು, ಮೆಜಾರಿಟೇರಿಯನ್ ಜ್ವಾಲೆಗಳಿಗೆ ತುಪ್ಪ ಹೊಯ್ಯಲು, ಆಳುವ ಪಕ್ಷವನ್ನು ಪ್ರಶ್ನಿಸುವುದಕ್ಕೆ ಬದಲಾಗಿ ವಿಪಕ್ಷಗಳನ್ನೇ ನಿರ್ಭಯವಾಗಿ ಪ್ರಶ್ನಿಸಲು ಮತ್ತು ಮೋದಿ 2.0ನ್ನು ಪ್ರತಿಷ್ಠಾಪಿಸಲು ಅಧಿಕಾರಕ್ಕೆ ಮರಳಿಸಲು ಅವುಗಳಿಗೆ ಯಾವುದೇ ಆಜ್ಞೆ ಬೇಕಾಗಲಿಲ್ಲ.


ಕೃಷ್ಣಪ್ರಸಾದ್ ‘ಔಟ್‌ಲುಕ್’ ಪತ್ರಿಕೆಯ ಮಾಜಿ ಮುಖ್ಯ ಸಂಪಾದಕರು ಮತ್ತು ಭಾರತೀಯ ಪತ್ರಿಕಾ ಮಂಡಳಿಯ ಮಾಜಿ ಸದಸ್ಯರು

ಕೃಪೆ: www.thehindu.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)