varthabharthi

ವೈವಿಧ್ಯ

ಬಿಎಸ್ಸೆನ್ನೆಲ್‌ನ ಈ ದೈನ್ಯಕ್ಕೆ ಕಾರಣರಾರು?

ವಾರ್ತಾ ಭಾರತಿ : 23 Jun, 2019
ಜಗನ್ ಕನ್ನಡಕ್ಕೆ: ಕಸ್ತೂರಿ

ಸಂಸ್ಥೆಗೆ ಒದಗಿದ ಈ ದುರ್ಗತಿಯಲ್ಲಿ ಸಿಬ್ಬಂದಿ, ಉದ್ಯೋಗ ಸಂಘಗಳ ನಿರ್ಲಿಪ್ತತೆ, ಬೇಜವಾಬ್ದಾರಿಗಳ ಪಾತ್ರ ಕೂಡಾ ಇದೆ ಎಂದರೆ ಸಿಟ್ಟಾಗಬೇಕಾದ್ದಾಗಲೀ, ಹೆಗಲು ಮುಟ್ಟಿಕೊಳ್ಳಬೇಕಾದ್ದಾಗಲೀ ಬೇಕಿಲ್ಲ. ಸಂಬಳಗಳಲ್ಲಿ ಹೆಚ್ಚಳ, ಉತ್ತಮ ಸೌಕರ್ಯಗಳಿಗೋಸ್ಕರ ಮುಷ್ಕರದ ದಾರಿ ಹಿಡಿದ ಸಂಘಗಳು ಸಂಸ್ಥೆಯನ್ನು ಉಳಿಸಿಕೊಳ್ಳಬೇಕೆಂಬ ಮಹದಾಸೆಯನ್ನು ಏಕೆ ಹೆಗಲ ಮೇಲೆ ಹೊತ್ತುಕೊಳ್ಳಲಿಲ್ಲ? ಖಾಸಗಿ ಸಂಸ್ಥೆಗಳಿಗೆ ಸರಕಾರ ನೀಡುತ್ತಿರುವ ರಾಯಲ್ಟಿಗಳು, ಕಲ್ಪಿಸುತ್ತಿರುವ ಸೌಕರ್ಯಗಳು, ಕೇಳದೆಯೇ ಒದಗಿಸುತ್ತಿರುವ ಆಧುನಿಕ ಸ್ಪೆಕ್ಟ್ರಂನ್ನು ಬಿಎಸ್ಸೆನ್ನೆಲ್‌ಗೆ ಕೂಡಾ ಕೊಡಬೇಕು ಎಂದು ಏಕೆ ಸಕಾಲದಲ್ಲಿ ಡಿಮ್ಯಾಂಡ್ ಮಾಡಲಿಲ್ಲ?

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನಲ್ಲಿನ 54,000 ಮಂದಿ ಉದ್ಯೋಗಿಗಳಿಗೆ ಸದ್ಯದಲ್ಲೇ ವಿದಾಯ ಹೇಳಲಾಗುತ್ತದೆ ಎಂಬ ಸುದ್ದಿ ಕಳವಳ ಸೃಷ್ಟಿಸುತ್ತಿದೆ. ಉದ್ಯೋಗಿಗಳಿಗೆ ಅರ್ಧಚಂದ್ರ, ನಂತರ ಬಂಡವಾಳದ ಹಿಂದೆಗೆತ, ನಂತರ ಆಸ್ತಿಗಳ ಮಾರಾಟ, ಆ ಬಳಿಕ ಅಸಲು ವ್ಯವಸ್ಥೆಯೇ ಕಣ್ಮರೆ.
ನಡೆಯಲಿರುವ ಈ ಪ್ರಕ್ರಿಯೆಯನ್ನು ನೆನೆಸಿಕೊಂಡರೇನೇ ಕಳವಳ ಉಂಟಾಗುತ್ತದೆ. ಜನಸ್ನೇಹಿಯಾಗಿ ನಿಂತಿದ್ದ ಮನೆ ಫೋನು ಶಾಶ್ವತವಾಗಿ ಮೂಕವಾಗುತ್ತದೆ ಎಂದರೇನೇ ಭಯವಾಗುತ್ತದೆ, ನೋವುಂಟಾಗುತ್ತದೆ. ಸಿಬ್ಬಂದಿಯನ್ನು ನೋಡಿದರೆ ಮರುಕವಾಗುತ್ತದೆ.
25 ವರ್ಷಗಳ ಕೆಳಗಿನವರೆಗೂ ಟೆಲಿಫೋನ್ ಎಂಬುದು ಒಂದು ಸಾಮಾಜಿಕ ಅಂತಸ್ತು! ಟೆಲಿಫೋನ್ ಸಂಪರ್ಕ ಬೇಕೆಂದರೆ ವರ್ಷಾನುಗಟ್ಟಲೆ ನಿರೀಕ್ಷೆ, ದೊಡ್ಡವರ ಶಿಫಾರಸುಗಳಿದ್ದ ಹೊರತು ಸಿಕ್ಕದ ಪರಿಸ್ಥಿತಿ. ಬಿಎಸ್ಸೆನ್ನೆಲ್ ಚರಿತ್ರೆಯಲ್ಲಿ ಅದೊಂದು ಸುವರ್ಣಯುಗ. ಆ ಸ್ಥಿತಿಯಿಂದ ಸಿಬ್ಬಂದಿಗೆ ಅರ್ಧಚಂದ್ರ ಪ್ರಯೋಗಿಸುವ ದುಸ್ಥಿತಿಗೆ ಬಿಎಸ್ಸೆನ್ನೆಲ್ ಇಳಿಯುವುದಕ್ಕೆ ಕಾರಣರ್ಯಾರು? ಎನ್ನುವುದನ್ನು ಕೆದಕಿ ನೋಡಿದರೆ ಸಣ್ಣಪುಟ್ಟ ಅಂಶಗಳೆಷ್ಟೋ ಇದ್ದರೂ ಕೂಡಾ ಪ್ರಥಮ ಆರೋಪಿ ಸರಕಾರವೇ ಎಂದು ತಿಳಿಯುತ್ತದೆ.
ನೋಡ ನೋಡುತ್ತಿರುವಾಗಲೇ ಖಾಸಗಿ ಸಂಸ್ಥೆಗಳು ಟವರ್‌ಗಳ ಮೇಲೆ ಟವರ್‌ಗಳ ನಿರ್ಮಿಸುತ್ತಾ, ಒಬ್ಬರನ್ನು ಮೀರಿಸಿ ಮತ್ತೊಬ್ಬರು ಪ್ಲಾನ್ ಪ್ರಕಟಿಸುತ್ತಾ ಮಾರ್ಕೆಟ್‌ನಲ್ಲಿ ನುಗ್ಗಿಕೊಂಡು ಹೋಗುತ್ತಿದ್ದರೆ, ಭಾರತ ಜನಜೀವನ ವಾಹಿನಿಯಲ್ಲಿ ದೀರ್ಘಕಾಲ ಅಂತರ್ಭಾಗವಾಗಿದ್ದ ಟೆಲಿಫೋನ್ ಸಂಸ್ಥೆ ಈಗ ಈ ದುಸ್ಥಿತಿಯನ್ನು ಎದುರಿಸಬೇಕಾಗಿ ಬಂದಿರುವುದು ವಿಪರ್ಯಾಸವಲ್ಲದೇ ಮತ್ತೇನು? ತಿಂಗಳಾಂತ್ಯದ ದಿನದಂದು ಇಲ್ಲ ಎಂದರೆ ಮಾರನೇ ತಿಂಗಳು ‘ಒಂದನೇ ತೇದಿಗೆ’ ಠಣ್ ಅಂತ ಸಂಬಳ ನೀಡುತ್ತಿದ್ದ ಟೆಲಿಫೋನ್ ಇಲಾಖೆ ಮೊದಲ ಬಾರಿಗೆ 2019ರ ಫೆಬ್ರವರಿ ಸಂಬಳ ಕೊಡಲಾರದೇ ಕೈ ಎತ್ತಿದೆಯಂತೆ! ಎಷ್ಟು ನಾಚಿಕೆಗೇಡು! ಸ್ಪರ್ಧೆಯಲ್ಲಿ ಗೆಲ್ಲಲಾರದೇ ಹೋಗುವುದು, ಬರುವ ಆದಾಯಕ್ಕೂ ಸಿಬ್ಬಂದಿ ಸಂಬಳಗಳ ಖರ್ಚಿಗೆ ಹೊಂದಾಣಿಕೆ ಕುದುರದೇ ಹೋಗಿರುವುದು ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ. ಖಾಸಗಿ ಮೊಬೈಲ್ ಕಂಪೆನಿಗಳು ಬಂದ ಬಳಿಕ ಕೂಡಾ ಬಿಎಸ್ಸೆನ್ನೆಲ್ ಲಾಭಗಳ ದಾರಿಯಲ್ಲೇ ನಡೆದಿತ್ತು.
2005-2010ರ ಮಧ್ಯಕಾಲದಲ್ಲಿ ಈ ಸಂಸ್ಥೆ ರೂ.30,000 ಕೋಟಿಗಳಷ್ಟು ಲಾಭ ಗಳಿಸಿತ್ತು ಎಂದು ಅಂದಾಜು. 2004-05 ರಲ್ಲೇ ಸಂಸ್ಥೆಯ ಲಾಭ ರೂ.10,000 ಕೋಟಿಗೂ ಮಿಗಿಲಾಗಿದ್ದು, ಒಎನ್‌ಜಿಸಿ ಬಳಿಕ ಇಷ್ಟೊಂದು ಲಾಭ ಗಳಿಸಿದ ಸರಕಾರಿ ಸಂಸ್ಥೆ ಇನ್ನೊಂದಿಲ್ಲ. ಅಂಥದ್ದು 2018-19ರಲ್ಲಿ ಸಂಸ್ಥೆಯ ನಷ್ಟ ರೂ.50,000 ಕೋಟಿಗಳಿಗೂ ಹೆಚ್ಚೇ ಎಂದು ಅಂದಾಜು. ಐದು ವರ್ಷಗಳಲ್ಲಿ ಇಷ್ಟೊಂದು ಭಾರೀ ನಷ್ಟಗಳು ಏಕೆ ಉಂಟಾದವು? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದಕ್ಕೆ ದೊಡ್ಡದಾಗಿ ಕಷ್ಟ ಪಡುವ ಅಗತ್ಯವಿಲ್ಲ.
ಸಂಸ್ಥೆಗೆ ಒದಗಿದ ಈ ದುರ್ಗತಿಯಲ್ಲಿ ಸಿಬ್ಬಂದಿ, ಉದ್ಯೋಗ ಸಂಘಗಳ ನಿರ್ಲಿಪ್ತತೆ, ಬೇಜವಾಬ್ದಾರಿಗಳ ಪಾತ್ರ ಕೂಡಾ ಇದೆ ಎಂದರೆ ಸಿಟ್ಟಾಗಬೇಕಾದ್ದಾಗಲೀ, ಹೆಗಲು ಮುಟ್ಟಿಕೊಳ್ಳಬೇಕಾದ್ದಾಗಲೀ ಬೇಕಿಲ್ಲ. ಸಂಬಳಗಳಲ್ಲಿ ಹೆಚ್ಚಳ, ಉತ್ತಮ ಸೌಕರ್ಯಗಳಿಗೋಸ್ಕರ ಮುಷ್ಕರದ ದಾರಿ ಹಿಡಿದ ಸಂಘಗಳು ಸಂಸ್ಥೆಯನ್ನು ಉಳಿಸಿಕೊಳ್ಳಬೇಕೆಂಬ ಮಹದಾಸೆಯನ್ನು ಏಕೆ ಹೆಗಲ ಮೇಲೆ ಹೊತ್ತುಕೊಳ್ಳಲಿಲ್ಲ? ಖಾಸಗಿ ಸಂಸ್ಥೆಗಳಿಗೆ ಸರಕಾರ ನೀಡುತ್ತಿರುವ ರಾಯಲ್ಟಿಗಳು, ಕಲ್ಪಿಸುತ್ತಿರುವ ಸೌಕರ್ಯಗಳು, ಕೇಳದೆಯೇ ಒದಗಿಸುತ್ತಿರುವ ಆಧುನಿಕ ಸ್ಪೆಕ್ಟ್ರಂನ್ನು ಬಿಎಸ್ಸೆನ್ನೆಲ್‌ಗೆ ಕೂಡಾ ಕೊಡಬೇಕು ಎಂದು ಏಕೆ ಸಕಾಲದಲ್ಲಿ ಡಿಮ್ಯಾಂಡ್ ಮಾಡಲಿಲ್ಲ? ಈ ಸ್ಪರ್ಧಾ ಜಗತ್ತಿನಲ್ಲಿ ಉಳಿವಿಗೋಸ್ಕರ ಅಷ್ಟಾದರೂ ಜವಾಬ್ದಾರಿ ತೆಗೆದುಕೊಳ್ಳಬೇಕೆಂಬ ಪ್ರಜ್ಞೆ ಉದ್ಯೋಗಿ ಸಂಘಗಳಿಗೆ ಏಕೆ ಇಲ್ಲದೇ ಹೋಯಿತು? ಗ್ರಾಹಕರಿಗೆ ಒದಗಿಸುವ ಸೇವೆಗಳ ವಿಷಯದಲ್ಲಿ ಕೂಡಾ ಸಿಬ್ಬಂದಿಯ ಧೋರಣೆ ಮೊನ್ನೆ ಮೊನ್ನೆಯವರೆಗೂ ಹೇಗಿರುತ್ತಿತ್ತೆಂಬುದೂ ಎಲ್ಲರಿಗೂ ಅನುಭವವೆ.
 ವರ್ಷಗಳ ಕಾಯುವಿಕೆ ನಂತರ ಮಂಜೂರಾಗುವ ಫೋನ್ ಕನೆಕ್ಷನ್ ಕೊಡಬೇಕು ಅಂದ್ರೆ ಮಾಮೂಲು ಕೊಡಬೇಕಾದ್ದೆ. ಅದೇ ಖಾಸಗಿ ಫೋನ್ ಆದ್ರೆ ಚಿಟಿಕೆಯಲ್ಲಿ ಕನೆಕ್ಷನ್ ಕ್ಷಿಪ್ರದಲ್ಲೇ ಕನೆಕ್ಟಿವಿಟಿ! ಇಷ್ಟೊಂದು ‘ಕ್ಷಿಪ್ರ’ವಾದ ಸೇವೆ ಬಿಎಸ್ಸೆನ್ನೆಲ್‌ನಲ್ಲಿ ಲಭ್ಯ. ಹಾಗಾಗಿಯೇ ಈ ಮಹಾಸಂಸ್ಥೆಯನ್ನು ಎಷ್ಟು ಬೇಗನೆ ಮುಚ್ಚಿಸಬೇಕೋ ಅಷ್ಟು ಒಳ್ಳೆಯದೆಂದು ಸರಕಾರಕ್ಕೆ ಸಲಹೆ ನೀಡುವ ಅರ್ಥ ಶಾಸ್ತ್ರಜ್ಞರು, ತಜ್ಞರು ಬಹಳ ಮಂದಿ ತಯಾರಾದರು. ಕೆಲವರಂತೂ ಬಿಎಸ್ಸೆನ್ನೆಲ್ ಆಸ್ತಿಗಳೆಲ್ಲವೂ ವ್ಯರ್ಥ ಎಂದೂ, ಅವನ್ನು ಚೂರು ಚೂರಾಗಿಸಿ ಮಾರಿ ದರೆ ಅಷ್ಟೋ ಇಷ್ಟೋ ಸಂಪಾದಿಸಿಕೊಳ್ಳಬಹುದು ಎಂದು ಸಹ ಸರಕಾರಕ್ಕೆ ಸೂಚಿಸುತ್ತಿದ್ದಾರೆ.
ತಮ್ಮ ಸುಭಾಷಿತಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಇವರು ವಿಚಿತ್ರ ವಾದಗಳನ್ನು ತೆರೆ ಮೇಲೆ ತರುತ್ತಿದ್ದಾರೆ. ಉದಾಹರಣೆಗೆ ಕೆಲವು ವರ್ಷಗಳ ಕೆಳಗೆ ಬಿಎಸ್ಸೆನ್ನೆಲ್ ತಮ್ಮ ಭವಿಷ್ಯ ಉತ್ತಮಗೊಳಿಸಬೇಕು ಎಂದು ಕೇಂದ್ರ ಮಂತ್ರಿಗಳೊಂದಿಗೆ ಕೂಡಿದ ಒಂದು ತಂಡಕ್ಕೆ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಕೊಟ್ಟಿತು. 2012-13ರಲ್ಲಿ ಸಿಬ್ಬಂದಿ ವೇತನಗಳಡಿಯಲ್ಲಿ ಸಂಸ್ಥೆ ರೂಪಾಯಿ ಆದಾಯದಲ್ಲಿ 53 ಪೈಸೆ ಖರ್ಚು ಮಾಡುತ್ತಿದ್ದೇವೆ ಎಂದು ಅದರಲ್ಲಿ ಅವರು ತಿಳಿಸಿದರು. ಆಳುವವರು ತುಸು ದಯೆ ತಾಳಿದರೆ ಸಂಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತೇವೆ ಎನ್ನುವುದು ಆ ಮನವಿಯ ಸಾರಾಂಶ.
ಇಲ್ಲೇ ತಜ್ಞರು ಪಾಯಿಂಟ್ ಎಳೆದರು. ಪ್ರೈವೇಟ್ ಆಪರೇಟರ್‌ಗಳಲ್ಲಿ ರೂಪಾಯಿಗೆ ಹತ್ತು ಪೈಸೆಗಳಿಗಿಂತ ಕಡಿಮೆ ಖರ್ಚು ಇಡುತ್ತಿರುವಾಗ ಈ ಸಂಸ್ಥೆ ಏಕೆ 53 ಪೈಸೆ ಖರ್ಚು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಆದರೆ ಅಷ್ಟರಲ್ಲೇ ಸಂಸ್ಥೆ ರೂಪಾಯಿಗೆ 47 ಪೈಸೆ ಲಾಭ ಗಳಿಸುತ್ತಿರುವ ವಾಸ್ತವವನ್ನು ಅವರು ಬೇಕೆಂದೇ ಮರೆ ಮಾಚಿದರು. ಆಗಲೇ ಬಿಎಸ್ಸೆನ್ನೆಲ್ ರೂ.15,000 ಕೋಟಿ ಕೊಡಿರಿ, 2018ರ ಕಾಲಕ್ಕೆ ಈ ಪರಿಸ್ಥಿತಿಯನ್ನು ಸುಧಾರಿಸುತ್ತೇವೆ ಎಂದು ಹೇಳಿತು. ಆದರೆ ಸಹಾಯ ಮಾಡಬಾರದು ಎನ್ನುವವರು ಮಾತ್ರ ‘‘ತೆರಿಗೆ ರೂಪದಲ್ಲಿ ಪ್ರಜೆಗಳು ಸಲ್ಲಿಸುವ ಹಣವನ್ನು ಇವರಿಗೆ ಕೊಡುತ್ತೀರಾ?’’ ಎಂಬ ವಾದ ಮಂಡಿಸಿದರು.


ಕೇಂದ್ರ ಸರಕಾರ ಖಾಸಗಿ ಸಂಸ್ಥೆಗಳಿಗೆ ಕೋಟಿಗಟ್ಟಲೆ ಪ್ರಜಾಧನ ಸುರಿಸುವ ವಾಸ್ತವಗಳು, ಅವನ್ನು ತೆಗೆದುಕೊಂಡು ಓಡಿಹೋಗುವ ಮಲ್ಯ, ನೀರವ್ ಮೋದಿಗಳು ಇವರಿಗೆ ಕಾಣಿಸರು. ಎಷ್ಟೋ ಖಾಸಗಿ ಕಂಪೆನಿಗಳು ತಾವು ಪೂರಾ ಮುಳುಗಿ, ಪ್ರಜೆಗಳನ್ನು ಮುಳುಗಿಸಿ, ಕೋಟ್ಯಂತರ ಸರಕಾರಿ ನೆರವು ಪಡೆಯುತ್ತಿರುವುದರಲ್ಲಿ ಇವರಿಗೆ ಸುಸಂಬದ್ಧತೆ ಕಾಣಿಸುತ್ತದೆ. ಸರಕಾರಿ ಸಂಸ್ಥೆಯೊಂದು ತನ್ನ ಉಳಿವಿಗೋಸ್ಕರ ಮಾಡುವ ಮನವಿಯಲ್ಲಿ ಮಾತ್ರ ನ್ಯಾಯ ಕಾಣಿಸದು.
ನಿಜಕ್ಕೂ ಬಿಎಸ್ಸೆನ್ನೆಲ್ ಕೇಳಿದ ರೂ.15,000 ಕೋಟಿಗಳಲ್ಲಿ ಸುಮಾರು ರೂ.6,275 ಕೋಟಿಗಳು ಬ್ರಾಡ್‌ಬ್ಯಾಂಡ್ ವೈರ್‌ಲೆಸ್ ಏಕ್ಸೆನ್‌ನ ಕೇಂದ್ರಕ್ಕೆ ಒಪ್ಪಿಸಿದ್ದಕ್ಕೆ ಕೊಡಬೇಕಾದ ಮೊತ್ತವೇ. 3ಜಿ ಬ್ರಾಡ್‌ಬ್ಯಾಂಡ್ ವೈರ್‌ಲೆಸ್ ಏಕ್ಸೆನ್‌ಗಳನ್ನು ಕೊಂಡದ್ದರಿಂದ ಬಿಎಸ್ಸೆನ್ನೆಲ್ ಸುಮಾರು ರೂ.18,500 ಕೋಟಿ ಖರ್ಚು ಮಾಡಬೇಕಾಗಿ ಬಂದಿತು. ಆ ಬಳಿಕ ಸಂಸ್ಥೆಯ ಭಾರವೆಲ್ಲಾ ಹೆಚ್ಚಾಗಿ ಮಣಭಾರವಾಯಿತು.
3ಜಿ ಕ್ಷಿಪ್ರದಲ್ಲೇ ಹಳೇ ಹುಣಸೇಕಾಯಿ ಪಚ್ಚಡಿಯಾಗಿ ಬದಲಾಗಿ ಹೋಗುತ್ತದೆ ಎಂದು ಗ್ರಹಿಸಿದರೂ ಯಾರೂ ಬಿಎಸ್ಸೆನ್ನೆಲ್‌ನ ಪರಿಸ್ಥಿತಿಯನ್ನು ಲಕ್ಷಿಸಲಿಲ್ಲ. ಅಪಾರವಾದ ವೇಗದಿಂದ ಬದಲಾಗಿ ಹೋಗುತ್ತಿರುವ ಟೆಲಿಕಾಂ ಉದ್ದಿಮೆಯಲ್ಲಿ ಆ ಸಂಸ್ಥೆಯನ್ನು ಬಲಗೊಳಿಸುವುದಕ್ಕೆ 4ಜಿಗೆ ಸಂಬಂಧಿಸಿದ ಇನ್‌ಪ್ರಾಸ್ಟ್ರಕ್ಚರ್ ಮಂಜೂರು ಮಾಡುತ್ತೇವೆ ಎಂದು ಕೇಂದ್ರ ಪ್ರಕಟಿಸಿ ವರ್ಷದ ಮೇಲೇ ಆಯಿತು. ಈಗ ಅದರ ಸುಳಿವಿಲ್ಲ.
ಮೂರು ವರ್ಷಗಳ ಹಿಂದೆಯೇ ಜಿಯೋ 4ಜಿ ಯೊಂದಿಗೆ ಮುನ್ನುಗ್ಗತೊಡಗಿದರೆ ಬಿಎಸ್ಸೆನ್ನೆಲ್ ಮೂಲ ಸೌಕರ್ಯಗಳಿಲ್ಲದೇ ‘ಎಲ್ಲಿ ಹಾಕಿದ ಕಂಬಳಿ ಅಲ್ಲೇ’ ಎಂಬಂತೆ ಇದ್ದು ಹೋಗಿದೆ. ರಿಲಯನ್ಸ್ ಜಿಯೋಗೆ ಎಲ್ಲಾ ಅನುಮತಿಗಳನ್ನು ಜೆಟ್‌ಸ್ಪೀಡಿನಲ್ಲಿ ಜಾರಿ ಮಾಡಿ ಕೊನೆಗೆ ಚಾರ್ಜುಗಳ ವಿಷಯದಲ್ಲಿ 2003ರ ಕಾಲದ ನಿರ್ವಚನವನ್ನು ಸಹ ಗಾಳಿ ತೂರಿದ ಕೇಂದ್ರ ಸರಕಾರ ಬಿಎಸ್ಸೆನ್ನೆಲ್‌ನ್ನು ಬೇಕೆಂದೇ ನಷ್ಟದ ಪಾಲಾಗಿಸಿದೆ ಎಂದು ಆ ಸಂಸ್ಥೆಯ ಕಾರ್ಮಿಕ ನಾಯಕ ಸ್ವಪನ್ ಚಕ್ರವರ್ತಿ ದೂರಿದ್ದಾರೆ.
ಟೆಲಿಕಾಂ ರಂಗದಲ್ಲಿ ಎಲ್ಲಕ್ಕಿಂತ ಕಡಿಮೆ ಸಾಲಭಾರ ಇರುವ ಸಂಸ್ಥೆ ಬಿಎಸ್ಸೆನ್ನೆಲ್ ಒಂದೇ. ಇದರ ಒಟ್ಟು ಸಾಲ 13,900 ಕೋಟಿಗಳು. ಆದರೆ ಏರ್‌ಟೆಲ್ ಸಾಲ ರೂ.1.18 ಲಕ್ಷ ಕೋಟಿ, ವೊಡಾಫೋನ್ ಸಾಲ ರೂ.1.2ಲಕ್ಷ ಕೋಟಿ. ಇನ್ನು ಜಿಯೋ ಸಾಲಗಳಂತೂ ಒಟ್ಟು ರೂ. 2ಲಕ್ಷ ಕೋಟಿ ಎಂದು ಚಕ್ರವರ್ತಿ ದಿಗ್ಭ್ರಾಂತಿ ಉಂಟಾಗಿಸುವ ಅಂಕಿಅಂಶ ತಿಳಿಸಿದ್ದಾರೆ.
ಸ್ಪರ್ಧಾ ಜಗತ್ತಿನಲ್ಲಿ ಕೌಶಲ ಹೆಚ್ಚಿಸಿಕೊಳ್ಳಬೇಕೆಂದು ಒಂದು ಕಡೆ, ಮತ್ತೊಂದು ಕಡೆ ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ಸಹಾ ಮಂಜೂರು ಮಾಡದೇ ಬಿಎಸ್ಸೆನ್ನೆಲ್ ಕಥೆ ಮುಗಿದು ಹೋಯಿತು ಎನ್ನುವುದು ಏನನ್ನು ತೋರಿಸುತ್ತೆ? ಜಿಯೋಗೆ ಕೇಂದ್ರ ಸರಕಾರ ಅಪಾರ ಒಳಿತು ಮಾಡಿದ್ದಾಗಿ ಕಾಗ್ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಕ್ಷಿಪ್ರದಲ್ಲೇ ನಮ್ಮ ದೇಶದಲ್ಲಿ ಟೆಲಿಕಾಂ ರಂಗ 5ಜಿ ತಂತ್ರ ಜ್ಞಾನವನ್ನು ಆವಿಸ್ಕರಿಸಲಿದೆ. ಆದರೆ ಬಿಎಸ್ಸೆನ್ನೆಲ್ ಗೆ ಇದುವರೆಗೆ 4ಜಿ ಎಂಬುದೇ ದಕ್ಕಿಲ್ಲ.
  ಈಗೊಂದು ಚಾರಿತ್ರಿಕ ಘಟನೆಯನ್ನು ನೆನಪು ಮಾಡಿಕೊಳ್ಳಬೇಕು. ಟೆಲಿಫೋನ್ ವ್ಯವಸ್ಥೆಯನ್ನು ಭಾರತದಲ್ಲಿ ಆರಂಭಿಸುವುದಕ್ಕೋಸ್ಕರ ಎರಡು ಬ್ರಿಟಿಷ್ ಕಂಪೆನಿಗಳು ವಿನಂತಿಸಿದಾಗ ಆಗಿನ ಬ್ರಿಟಿಷ್ ಪಾಲಕರು ಅದನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದ್ದಲ್ಲದೆ ಆ ಕೆಲಸವನ್ನು ನಾವೇ ಇಲ್ಲಿ ಮಾಡುವ ಅಂದರು. ಆಗೊಬ್ಬ ಬ್ರಿಟಿಷ್ ಅಧಿಕಾರಿ ತಕ್ಷಣ ನಡುಬಿಗಿದು ದೇಶದಲ್ಲಿ ಟೆಲಿಫೋನ್ ವ್ಯವಸ್ಥೆಗೆ ಜೀವ ತುಂಬಿಸಿದರು. ವಿದೇಶೀ ಪಾಲಕರು ಮಾಡಿದ್ದನ್ನು ಸ್ವದೇಶಿ ಪಾಲಕರು ಮಾಡಲಾರದೆ ಹೋಗಿರುವುದೇ ಇಲ್ಲಿ ನಾವು ಗಮನಿಸಬೇಕಾದ ಅಂಶ.
ಸೆಲ್‌ಫೋನ್ ಬಂದ ಮೇಲೆ ಇಬ್ಬರು ವ್ಯಕ್ತಿಗಳ ಮಧ್ಯೆ ಸಂಭಾಷಣೆ ಎನ್ನುವುದು ಡಾಟಾ ಆಗಿ ಬದಲಾಗಿ ಹೋಗಿರುವುದು. ಮೊಬೈಲ್ ಫೋನ್ ಬಂದ ಮೇಲೆ ಇಡೀ ಟೆಲಿಕಮ್ಯೂನಿಕೇಶನ್ ಜನ ಸಾಮಾನ್ಯರ ಹಸ್ತ ಭೂಷಣ ಆಗಿರುವುದು ಒಂದು ಅನಿವಾರ್ಯ ತಂತ್ರಜ್ಞಾನದ ವಿಕಾಸದ ಪ್ರತಿ ಬಿಂಬ. ಮೊಬೈಲ್ ಫೋನ್ ಬಂದ ಮೇಲೆ ಲ್ಯಾಂಡ್ ಫೋನ್‌ಗೆ ಬೇಡಿಕೆ ತಗ್ಗಿದ ಮಾತು ನಿಜವೆ. ಆದರೆ ಪ್ರೈವೇಟ್ ಮೊಬೈಲ್ ಫೋನ್ ಮಾರ್ಕೆಟ್‌ನಲ್ಲಿ ಪ್ರತ್ಯಕ್ಷ ಆಗುತ್ತಲೇ ಬಿಎಸ್ಸೆನ್ನೆಲ್ ಸಹ ಮೊಬೈಲ್‌ನತ್ತ ಏಕೆ ಸರಿಯಲಿಲ್ಲ ಎಂಬುದು ಅಸಲೀ ಪ್ರಶ್ನೆ. ಯಾವ ರಾಜಕೀಯ ಹಿತಾಸಕ್ತಿಗಳಿಗೆ ಒತ್ತೆ ಇಟ್ಟಿದೆ ಎಂಬುದು ಉತ್ತರ ಸಿಗದ ಪ್ರಶ್ನೆ.
ಉದ್ಯೋಗಿಗಳ ನಿರ್ಗಮನ ಅನಿವಾರ್ಯ ಎಂಬ ಸುದ್ದಿ ಹೊರಬಿದ್ದ ತಕ್ಷಣವೇ ಬಿಎಸ್ಸೆನ್ನೆಲ್ ಸಿಎಂಡಿ ಅನುಪಂ ಶ್ರೀವಾಸ್ತವ್ ಟ್ವೀಟ್ ಮಾಡುತ್ತಾ ಅದರಲ್ಲಿ ಸತ್ಯವಿಲ್ಲ ಎನ್ನುತ್ತಲೇ ಸಂಸ್ಥೆ ಉಳಿಸುವುದಕ್ಕೆ ಬಹಳಷ್ಟು ವ್ಯೆಹಗಳ ಸಿದ್ಧಗೊಳಿಸುತ್ತಿದ್ದೇವೆಂದೂ, ಆಕರ್ಷಕವಾದ ವಾಲಂಟರಿ ರಿಪೈರ್‌ಮೆಂಟ್ ಸ್ಕೀಂ ಸಹಾ ಇದೆ ಎಂದು ಸ್ಪಷ್ಟಪಡಿಸಿದರು. ಉದ್ಯೋಗಿಗಳನ್ನು ರಾತ್ರೋರಾತ್ರಿ ಹೋಗೆನ್ನುವುದಿಲ್ಲ. ಇಷ್ಟಪಟ್ಟವರನ್ನಷ್ಟೇ ಗೌರವದಿಂದ ಹಣ ನೀಡಿ ಸಾಗ ಹಾಕುತ್ತೇವೆ ಅನ್ನುತ್ತಿದ್ದಾರೆ. ಸಂಸ್ಥೆಯಲ್ಲಿನ ಸಿಬ್ಬಂದಿಯಲ್ಲಿ ಶೇ. 30ರಷ್ಟು ಉದ್ಯೋಗಿಗಳನ್ನು ಅವರ ಇಷ್ಟಾನುಸಾರ ಅಥವಾ ಇಷ್ಟವನ್ನು ಆಪಾದಿಸಿ ಹೊರಗೆ ಅಟ್ಟುವ ಅಪಾಯ ಇದೆ. ಆ ಆಪಾಯವನ್ನು ನಿವಾರಿಸಬೇಕೆಂದರೆ ಮೊದಲಿಗೆ ಜವಾಬ್ದಾರಿಯನ್ನು ಬಿಎಸ್ಸೆನ್ನೆಲ್ ಒಳಗಿನವರೇ ತೆಗೆದುಕೊಳ್ಳಬೇಕು. ಪ್ರಜೆಗಳು ಕೂಡಾ ಸ್ಪಂದಿಸಬೇಕು.
 ಏಕೆಂದರೆ ಭವಿಷ್ಯದಲ್ಲಿ ಬಿಎಸ್ಸೆನ್ನೆಲ್ ಕಣ್ಮರೆಯಾದ ಬಳಿಕ ಈ ಪ್ರೈವೇಟ್ ಆಪರೇಟರ್‌ಗಳು ಒಬ್ಬರಿಗಿಂತ ಒಬ್ಬರು ಈಗ ನೀಡುತ್ತಿರುವ ರಿಯಾಯಿತಿಗಳನ್ನು ಕೊಡುವುದಿಲ್ಲ. ಪರಸ್ಪರರ ದಮನ ಕ್ರೀಡೆ ಬಳಿಕ ಯಾರೋ ಒಬ್ಬರೇ ಟೆಲಿಕಾಂ ಆಪರೇಟರ್ ಉಳಿಯುತ್ತಾರೆ. ಅವರು ಬಲಿಷ್ಠರಾಗುತ್ತಾರೆ. ಆಗ ಫೋನ್ ಎಂಬುದು ಸಾಮಾನ್ಯರಿಗೆ ತಲೆಗೆ ಮೀರಿದ ಭಾರ ಆಗುತ್ತದೆ. ಈಗ ಮೊಬೈಲ್ ಚಾರ್ಜುಗಳು ಕಮ್ಮಿ. ಹಾಗಾಗಿ ದೇಶದ ನಾಲ್ಕು ಮೂಲೆಗಳಲ್ಲೂ ಸೆಲ್‌ಫೋನ್‌ಗಳು ಗುಣಗಣಿಸುತ್ತಿವೆ. ಏನು ಮಾತಾಡುತ್ತಿದ್ದೇವೆ ಎಂದಾಗಲೀ, ಎಷ್ಟು ಹೊತ್ತು ಮಾತಾಡುತ್ತಿದ್ದೇವೆ ಎಂದಾಗಲೀ ಈಗ ಆಲೋಚಿಸುವ ಅಗತ್ಯ ಇಲ್ಲದಷ್ಟು ವಿಪುಲವಾಗಿ ಸೆಲ್‌ಫೋನ್ ಬಳಸುತ್ತಿದ್ದೇವೆ. ಬಿಎಸ್ಸೆನ್ನೆಲ್ ಇಲ್ಲದ ದಿನ ಪರಿಸ್ಥಿತಿ ತಲೆಕೆಳಗಾಗುತ್ತದೆ. ಹಾಗಾಗಿ ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.
(ಕೃಪೆ:ಆಂಧ್ರಜ್ಯೋತಿ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)