varthabharthi

ವೈವಿಧ್ಯ

ಪುಲಿಕೇಶಿಯ ನಾಡಿನಲ್ಲಿ ಹುಯೆನ್ ತ್ಸಾಂಗ್

ವಾರ್ತಾ ಭಾರತಿ : 23 Jun, 2019
ರವಿ ಹಂಜ್

ಕನ್ನಡ ಮಾತಿನ ಪುಲಿಕೇಶಿ ತನ್ನ ರಾಷ್ಟ್ರವನ್ನು ಮಹಾನ್ ಎಂಬರ್ಥದಲ್ಲಿ ‘ಮಹಾರಾಷ್ಟ್ರ’ವೆಂದು ಕರೆದುಕೊಂಡಿದ್ದನು. ಕನ್ನಡದ ಪದವಾದ ‘ಮಹಾ ಹೋರಾಟಗಾರ’ ಎಂಬ ಪದ ಅಪಭ್ರಂಶವಾಗಿ ‘ಮಹಾರಾಠ’ವಾಗಿ ಕ್ರಮೇಣ ಮರಾಠವಾಯಿತು. ಪುಲಿಕೇಶಿಯ ಆ ಕೆಚ್ಚು ಆತನ ನಂತರ ಕೂಡಾ ಮುಂದುವರಿದಿದ್ದರೆ ಇಂದು ಕರ್ನಾಟಕ ಕಾವೇರಿಯಿಂದ ಗೋದಾವರಿಯವರೆಗೆ ಇರುತ್ತಿದ್ದು, ಮರಾಠಿ ಎಂಬ ಭಾಷೆ ಇರುತ್ತಿರಲೇ ಇಲ್ಲವೇನೋ!

ಸಿಂಹಳದಿಂದ ದ್ರಾವಿಡ ರಾಜ್ಯವನ್ನು ಸೇರಿದ ಹುಯೆನ್ ತ್ಸಾಂಗನು ಎಪ್ಪತ್ತು ಸಿಂಹಳೀಯ ಬೌದ್ಧ ಸನ್ಯಾಸಿಗಳೊಡನೆ ಚಾಲುಕ್ಯ ಸಾಮ್ರಾಜ್ಯದ ಮಹಾರಾಷ್ಟ್ರ ಪ್ರದೇಶಕ್ಕೆ ಬರುತ್ತಾನೆ. ತನ್ನ ಎಂದಿನ ಶೈಲಿಯಲ್ಲಿ ಸಾಮ್ರಾಜ್ಯ, ಭೂಪ್ರದೇಶಗಳನ್ನು ವರ್ಣಿಸುವ ತ್ಸಾಂಗನು, ದ್ರಾವಿಡ ರಾಜ್ಯದ ಬಗೆಗೆ ಏನನ್ನೂ ಹೇಳಿಲ್ಲದಿರುವುದು ಕುತೂಹಲವಾಗಿದೆ. ‘‘ಕನ್ನಡ ಭಾಷೆಯನ್ನು ಮಾತನಾಡುವ ಮಹಾರಾಷ್ಟ್ರ ಜನತೆ ಎತ್ತರವೂ ಸದೃಢರೂ ಮತ್ತು ಸ್ವಾಮಿನಿಷ್ಠೆ ಪರಿಪಾಲಕರೂ ಆಗಿದ್ದಾರೆ. ಇಲ್ಲಿನ ಪ್ರಭುವು ಎರಡನೇ ಪುಲಿಕೇಶಿ. ಅತ್ಯಂತ ಬಲಶಾಲಿ ಸಾಮ್ರಾಜ್ಯವನ್ನು ಕಟ್ಟಿರುವ ಇವನು ಹುಟ್ಟಿನಿಂದ ಕ್ಷತ್ರಿಯನಾಗಿದ್ದು, ವೀರನೂ ಪರಾಕ್ರಮಿಯೂ ಆಗಿದ್ದಾನೆ. ತನ್ನ ತೋಳ್ಬಲದ ಪರಾಕ್ರಮದ ಅಭಿಮಾನಿಯಾಗಿರುವ ಈತನ ಸಾಮಂತರೆಲ್ಲಾ ಮಹಾ ಸ್ವಾಮಿನಿಷ್ಠರು. ನಿಷ್ಠೆಗೆ ಯಾರಾದರೂ ಧಕ್ಕೆ ತೋರಿದರೆ ಅವರನ್ನು ಅತ್ಯಂತ ಉಗ್ರ ಶಿಕ್ಷೆಗೆ ಗುರಿಪಡಿಸುತ್ತಿದ್ದನು. ಯುದ್ಧಗಳಲ್ಲಿ ತನ್ನ ಸೇನಾಧಿಕಾರಿಗಳೇನಾದರೂ ಪರಾಕ್ರಮವನ್ನು ಮೆರೆಯದೇ ಸೋತಿದ್ದರೆ ಅಂತಹವರಿಗೆ ಯಾವ ಕಠಿಣ ಶಿಕ್ಷೆಯನ್ನು ನೀಡದೇ ಕೇವಲ ಹೆಣ್ಣಿನ ವೇಷವನ್ನು ಹಾಕಿಸುತ್ತಿದ್ದನು. ಹೆಣ್ಣಿನ ವೇಷದ ಅವಮಾನಕ್ಕೆ ನೊಂದು ಆ ಅಧಿಕಾರಿಗಳು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದರು. ರಾಜ ಹರ್ಷನಂತೆಯೇ ಪುಲಿಕೇಶಿ ಕೂಡಾ ನೂರಾರು ಆನೆಗಳ ಪಡೆಯೊಂದನ್ನು ಹೊಂದಿದ್ದನು. ಹರ್ಷನ ಸೈನ್ಯದ ಮಾದರಿಯಲ್ಲೇ ಇಲ್ಲಿಯೂ ಕೂಡ ಆನೆಗಳಿಗೆ ಮದ್ಯವನ್ನು ಕುಡಿಸಿ ಶತ್ರುಗಳ ಮೇಲೆ ನುಗ್ಗಿಸುತ್ತಿದ್ದರು. ಈತನ ಯುದ್ಧಕೌಶಲ್ಯ, ತಂತ್ರಗಾರಿಕೆಗಳಿಂದಾಗಿ ಶತ್ರುಗಳು ಭಯಭೀತರಾಗುತ್ತಿದ್ದರು. ಪುಲಿಕೇಶಿಯ ಕೀರ್ತಿ ಬಹುದೂರದವರೆಗೆ ಹಬ್ಬಿತ್ತು.’’
‘‘ಶಿಲಾದಿತ್ಯನು (ಹರ್ಷ) ಪಶ್ಚಿಮದಿಂದ ಪೂರ್ವದವರೆಗೆ ದೂರದ ರಾಜ್ಯಗಳನ್ನು ಗೆದ್ದು ತನ್ನ ಆಡಳಿತಕ್ಕೊಳಪಡಿಸಿಕೊಂಡಿದ್ದರೂ, ಚಾಲುಕ್ಯ ಸಾಮ್ರಾಜ್ಯವನ್ನು ಮಾತ್ರ ಗೆಲ್ಲಲಾಗಿಲ್ಲ. ರಾಜ ಪುಲಿಕೇಶಿ ಹಿಂದೂ ರಾಜನಾಗಿದ್ದರೂ ಆತನ ಸಾಮ್ರಾಜ್ಯದಲ್ಲಿ ನೂರು ಬೌದ್ಧವಿಹಾರಗಳಿರುವವು’’ ಎಂದು ಚಾಲುಕ್ಯ ಸಾಮ್ರಾಟನನ್ನು ವರ್ಣಿಸಿದ್ದಾನೆ.


ಕನ್ನಡ ಮಾತಿನ ಪುಲಿಕೇಶಿ ತನ್ನ ರಾಷ್ಟ್ರವನ್ನು ಮಹಾನ್ ಎಂಬರ್ಥದಲ್ಲಿ ‘ಮಹಾರಾಷ್ಟ್ರ’ವೆಂದು ಕರೆದುಕೊಂಡಿದ್ದನು. ಕನ್ನಡದ ಪದವಾದ ‘ಮಹಾ ಹೋರಾಟಗಾರ’ ಎಂಬ ಪದ ಅಪಭ್ರಂಶವಾಗಿ ‘ಮಹಾರಾಠ’ವಾಗಿ ಕ್ರಮೇಣ ಮರಾಠವಾಯಿತು. ಪುಲಿಕೇಶಿಯ ಆ ಕೆಚ್ಚು ಆತನ ನಂತರ ಕೂಡಾ ಮುಂದುವರಿದಿದ್ದರೆ ಇಂದು ಕರ್ನಾಟಕ ಕಾವೇರಿಯಿಂದ ಗೋದಾವರಿಯವರೆಗೆ ಇರುತ್ತಿದ್ದು, ಮರಾಠಿ ಎಂಬ ಭಾಷೆ ಇರುತ್ತಿರಲೇ ಇಲ್ಲವೇನೋ! ಮರಾಠಿ ಭಾಷೆ ಎಂಟನೇ ಶತಮಾನದಿಂದ ವೃದ್ಧಿಯಾ ಗುತ್ತಾ ಸಾಗಿಬಂದಿತು. ಹಾಗೆಯೇ ಕನ್ನಡ ಮಾತನಾಡುವ ಮಹಾರಾಷ್ಟ್ರದೊಂದಿಗೆ ಈಗಿನ ಕರ್ನಾಟಕವೂ ಸೇರಿ ಕನ್ನಡ ಮಾತನಾಡುವ ಎರಡು ರಾಜ್ಯಗಳಿರುತ್ತಿದ್ದವೆನಿಸುತ್ತದೆ.
ಆಚಾರ್ಯ ದಿಜ್ಞಾನನು ಇಲ್ಲಿನ ಶಿಲಾಗವಿ ಬೌದ್ಧವಿಹಾರಗಳಲ್ಲಿ ಸಾಕಷ್ಟು ಸಮಯವನ್ನು ಕಳೆದಿರುವನೆನ್ನುತ್ತಾ ‘‘ಎತ್ತರದ ಶಿಲಾಬೆಟ್ಟ ಪ್ರದೇಶಗಳಿಂದ ಕೂಡಿದ ಬೆಟ್ಟವೊಂದನ್ನು ಕೊರೆದು ಬೌದ್ಧವಿಹಾರವನ್ನು ಸೃಷ್ಟಿಸಲಾಗಿದೆ. ನೂರು ಅಡಿ ಎತ್ತರದ ಬೌದ್ಧಮಂದಿರವೊಂದನ್ನು ಕಟ್ಟಿ ಅದರಲ್ಲಿ ಎಪ್ಪತ್ತು ಅಡಿಗಳ ಬುದ್ಧನ ವಿಗ್ರಹವನ್ನು ಸ್ಥಾಪಿಸಿರುವರು. ವಿಗ್ರಹದ ಮೇಲೆ ಯಾವುದೇ ಆಧಾರ ಸ್ತಂಭಗಳಿಲ್ಲದೇ ಕಟ್ಟಿರುವ ಏಳು ಛಾವಣಿಗಳು ಅದ್ಭುತವಾಗಿವೆ. ಈ ಬೌದ್ಧಮಂದಿರದ ಗೋಡೆಯ ಮೇಲೆ ಬುದ್ಧನು ಬೋಧೀಸತ್ವನಾಗುವ ವರ್ಣನೆಯ ಶಿಲ್ಪರೂಪಕಗಳು, ಬುದ್ಧನಿಗೆ ನಿರ್ವಾಣ ಪ್ರಾಪ್ತಿ ಮತ್ತು ಬುದ್ಧನ ಅಂತಿಮ ಯಾತ್ರೆಯ ಶಿಲ್ಪವರ್ಣನೆಗಳಿವೆ’’ ಎಂದಿದ್ದಾನೆ. ಈ ಎಲ್ಲಾ ವರ್ಣನೆಗಳೂ ಅಜಂತಾದ ಗುಹಾಂತರ ಬೌದ್ಧವಿಹಾರ ಮತ್ತು ಅಲ್ಲಿನ ಕಲ್ಲಿನ ದೇವಾಲಯಗಳ ವರ್ಣನೆಯಾದರೂ ಅದರ ಹೆಸರನ್ನು ಉಚ್ಚರಿಸಿಲ್ಲ!
ಭಾರತದಂತೆಯೇ ಚೀನಾದಲ್ಲಿಯೂ ಕೂಡಾ ಸಾಕಷ್ಟು ಗುಹಾಂತರ, ಬೆಟ್ಟಗುಡ್ಡಗಳ ಮೇಲೆ ಬೌದ್ಧವಿಹಾರಗಳಿದ್ದವು. ಸಾಮಾನ್ಯವಾಗಿ ಯಾತ್ರಿಗಳು, ವ್ಯಾಪಾರಿಗಳು ಸಂಚರಿಸುತ್ತಿದ್ದ ಮಾರ್ಗಗಳ ಬದಿಯಲ್ಲಿರುತ್ತಿದ್ದ ಬೆಟ್ಟಗುಡ್ಡ, ಗುಹೆಗಳಲ್ಲಿ ಬೌದ್ಧಶಾಲೆ, ವಿಹಾರಗಳನ್ನು ನಿರ್ಮಿಸುತ್ತಿದ್ದರು. ಹುಯೆನ್ ತ್ಸಾಂಗನು ತನ್ನ ಯಾತ್ರೆಗೆ ಈ ವ್ಯಾಪಾರಿಗಳು ಸಾಗುವ ಹಾದಿಯನ್ನೆ ಆಯ್ದುಕೊಂಡಿದ್ದರಿಂದ ಈ ಎಲ್ಲಾ ಬೌದ್ಧವಿಹಾರಗಳನ್ನು ಸಂದರ್ಶಿಸುವ ಸುಯೋಗ ಅವನಿಗೊದಗಿತ್ತೆನ್ನಬಹುದು. ಚಾಲುಕ್ಯರ ನಾಸಿಕ್ ಪಟ್ಟಣದಿಂದ ಉಜ್ಜೈನಿ ಮಾರ್ಗವಾಗಿ ಭರೂಕುಚದೆಡೆಗೆ ಈ ವ್ಯಾಪಾರೀ ಮಾರ್ಗಗಳಲ್ಲಿಯೇ ಸಾಗುವ ಮಾರ್ಗಮಧ್ಯೆ ಈ ಶಿಲಾಗವಿ (ಅಜಂತಾ) ವಿಹಾರದಲ್ಲಿ ಉಳಿದಿದ್ದನು. ನಂತರ ಮಾಳವ ಸಾಮ್ರಾಜ್ಯವನ್ನು ತಲುಪಿದ ಹುಯೆನ್ ತ್ಸಾಂಗನು ಮಾಳ್ವರನ್ನು ಮಗದಕ್ಕೆ ಹೋಲಿಸುತ್ತಾನೆ. ಇಲ್ಲಿನ ಪ್ರಜೆಗಳು ಸುಸಂಸ್ಕೃತ ನಾಗರಿಕರಲ್ಲದೇ ಸಾಕಷ್ಟು ಪಾಂಡಿತ್ಯ ಪ್ರವೀಣರು. ಇಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಬೌದ್ಧಭಿಕ್ಷುಗಳು ನೂರಾರು ಬೌದ್ಧವಿಹಾರಗಳಲ್ಲಿರುವರು. ಇಲ್ಲಿನ ಭಾಷೆ ಸ್ಪಷ್ಟವಾಗಿದ್ದು ಕೇಳಲು ಮಧುರವಾಗಿದೆ. ಆರನೇ ಶತಮಾನದ ಹೆಸರಾಂತ ಸಂಸ್ಕೃತ ಕವಿ ಕಾಳಿದಾಸನು ಇದೇ ಪ್ರಾಂತದವನೆನ್ನುತ್ತಾನೆ. ಅಂದಿನ ಮಾಳವ ಪ್ರದೇಶವೇ ಇಂದಿನ ಮಧ್ಯಪ್ರದೇಶ.


ತನ್ನ ಯಾತ್ರೆಯನ್ನು ಮುಂದುವರಿಸುತ್ತ ಕಥಿಯಾವಾಡಕ್ಕೆ ಬರುತ್ತಾನೆ. ಕಥಿಯಾವಾಡವು ಇಂದಿನ ಗುಜರಾತಿನ ಸೌರಾಷ್ಟ್ರ ಪ್ರಾಂತವಾಗಿದ್ದಿತು. ಕಥಿಯಾವಾಡವನ್ನು ವರ್ಣಿಸುತ್ತ ‘‘ಈ ಪ್ರದೇಶದಲ್ಲಿ ಎಲ್ಲಾ ಐದು ಭಾರತ ಪ್ರದೇಶಗಳಿಗಿಂತ ಇಲ್ಲಿ ಹೆಚ್ಚಿನ ಜನರು ವ್ಯಾಪಾರಿಗಳಾಗಿದ್ದಾರೆ. ಇದೇ ಪ್ರಥಮ ಬಾರಿಗೆ ಒಂದು ರಾಜ್ಯದ ಹೆಚ್ಚು ಪ್ರಜೆಗಳು ಕೃಷಿಗಿಂತ ಹೆಚ್ಚಾಗಿ ವಾಣಿಜ್ಯೋದ್ಯಮದಲ್ಲಿ ತೊಡಗಿರುವುದನ್ನು ಕಾಣುತ್ತಿದ್ದೇನೆ. ಇಲ್ಲಿನ ಪ್ರಜೆಗಳು ಶ್ರೀಮಂತರೂ ನಾಗರಿಕರೂ ಆಗಿದ್ದಾರೆ. ಕೃಷಿಗಾಗಿ ಏತ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ಬುದ್ಧಿವಂತರು! ಈ ಪ್ರದೇಶವು ಚಿನ್ನ, ಬೆಳ್ಳಿ, ತಾಮ್ರಗಳಲ್ಲದೇ ಬೆಲೆಬಾಳುವ ಮುತ್ತು ರತ್ನಗಳನ್ನು ಉತ್ಪಾದಿಸುತ್ತದೆ. ಅಲ್ಲಿಯ ನೇಕಾರರು ರೇಶ್ಮೆ, ಉಣ್ಣೆಯ ಕಲಾತ್ಮಕ ಉಡುಗೆಗಳನ್ನು ತಯಾರಿಸುತ್ತಾರೆ. ಹಾಗೆಯೇ ರತ್ನಗಂಬಳಿಯನ್ನು ಕೂಡಾ ಹೆಣೆಯುತ್ತಾರೆ. ಇಲ್ಲಿ ಮೂರು ಬೌದ್ಧ ವಿಹಾರಗಳಿದ್ದು, ಇನ್ನೂರು ಬೌದ್ಧಭಿಕ್ಷುಗಳು ಅಲ್ಲಿ ಹಿನಾಯಾನವನ್ನು ಪಾಲಿಸುತ್ತಿರುವರು’’ ಎಂದಿದ್ದಾರೆ.
ಕಥಿಯಾವಾಡ, ವಲ್ಲಭಿಯಿಂದ ಹುಯೆನ್ ತ್ಸಾಂಗನು ಮೊರಸಾಂಪುರುವಿನ ಮುಲ್ತಾನ್ ನಗರಕ್ಕೆ ಬರುತ್ತಾನೆ. ಮೂಲಸ್ಥಾನದ ಅಪಭ್ರಂಶವೇ ಮುಲ್ತಾನ್ ಸೂರ್ಯವಂಶೀ ಸೂರ್ಯೋಪಾಸಕರ ಮೂಲಸ್ಥಾನವಾಗಿದ್ದ ಇಲ್ಲಿ ಒಂದು ಬೃಹತ್ ಸೂರ್ಯಮಂದಿರವಿದ್ದಿತು. ಈ ಮಂದಿರವನ್ನು ವರ್ಣಿಸುತ್ತಾ, ‘‘ಬೃಹದಾಕಾರದ ಈ ಮಂದಿರವನ್ನು ಬೆಲೆಬಾಳುವ ಮುತ್ತುರತ್ನಗಳಿಂದ ಅಲಂಕರಿಸಿರುವರು. ಬಂಗಾರದಲ್ಲಿ ಎರಕ ಹೊಯ್ದ ಸೂರ್ಯನ ಪ್ರತಿರೂಪಕ್ಕೆ ವೈಡೂರ್ಯಗಳಿಂದ ಅಲಂಕರಿಸಿರುವರು. ಎಲ್ಲಾ ಐದು ಭಾರತಗಳ ಪ್ರಭುಗಳು ಪ್ರತಿ ವರ್ಷ ಇಲ್ಲಿಗೆ ಬಂದು ಸೂರ್ಯದೇವನಿಗೆ ಹರಕೆಯನ್ನು ಸಲ್ಲಿಸುವರು. ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ಕೊಡುವ ಈ ಮಂದಿರದ ಸಮೀಪವೇ ದೊಡ್ಡ ಛತ್ರವಿದ್ದು ಯಾತ್ರಿಕ ಭಕ್ತರಿಗೆ ಊಟ, ವಸತಿಯ ಸೌಲಭ್ಯಗಳಿರುವವು. ಅಲ್ಲದೆ ಬಡವರಿಗಾಗಿ ಉಚಿತ ಊಟ, ವಸತಿಯ ಸೇವೆಯೊಂದಿಗೆ ಆರೋಗ್ಯಸೇವೆ, ಔಷಧಿಯನ್ನೂ ನೀಡುವರು. ದೇವಸ್ಥಾನದ ಸುತ್ತ ಸುಂದರ ಕೊಳಗಳು, ಪುಷ್ಪೋದ್ಯಾನ, ಕಲಾತ್ಮಕ ಹೆಂಚುಗಳ ನೆಲಹಾಸು ಆಕರ್ಷಣೀಯ ಮರಗಳು ಮತ್ತು ಮೆಟ್ಟಿಲುಗಳೊಂದಿಗೆ ಶೃಂಗರಿಸಿರುವುದು ವಾತಾವರಣವನ್ನು ಆಹ್ಲಾದಕರವಾಗಿಸಿವೆ’’ ಎಂದು ದಾಖಲಿಸಿದ್ದಾನೆ. ಇಂತಹ ಸುಂದರ ಮುಲ್ತಾನ್ ಮುಂದೆ ಬಿಸಿಲು, ಧೂಳಿನ, ನಿರ್ಗತಿಕ, ಸ್ಮಶಾನಗಳಿಂದ ಸುತ್ತುವರಿದ ಪಟ್ಟಣವೆಂದು ಕರೆಯಲ್ಪಟ್ಟಿತು!
ಪರ್ಷಿಯಾದ ಜೊರಾಷ್ಟ್ರೀಯ ಸೂರ್ಯೋಪಾಸಕತ್ವ ಅಂದು ಉಚ್ಛ್ರಾಯ ಪರ್ವದಲ್ಲಿದ್ದಿತು. ಅದಲ್ಲದೆ ಹಿಂದೂಗಳು ಕೂಡಾ ಸೂರ್ಯೋಪಾಸಕರಾಗಿದ್ದರು. ಹುಯೆನ್ ತ್ಸಾಂಗನು ಭಾರತವನ್ನು ಐದು ಭಾರತವೆನ್ನುತ್ತಾನೆ. ಆತನ ಪ್ರಕಾರ ಭಾರತವೆಂಬುದು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಮಧ್ಯ ಭಾರತವೆಂಬ ಐದು ಭಾರತ ದೇಶಗಳು ಸೂರ್ಯ ದೇವನಿಗೆ ಈ ಎಲ್ಲಾ ದೇಶಗಳ ಪ್ರಭುತ್ವಗಳು ತಪ್ಪದೇ ಹರಕೆಯಾಗಿ ಪ್ರತಿ ವರ್ಷ ವಜ್ರವೈಡೂರ್ಯಗಳನ್ನು ಸಲ್ಲಿಸುತ್ತಿದ್ದರು. ಸೂರ್ಯದೇವನಿಗೆ ಬಲಿ ಅರ್ಪಿಸುವುದು ಕೂಡಾ ನಡೆಯುತ್ತಿತ್ತು ಎಂದಿದ್ದಾನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)