ಸೂಪರ್ಕಾಪ್ ಅನುಷ್ಕಾ
ಬಹಳ ಸಮಯದ ಬಳಿಕ ಅನುಷ್ಕಾ ಶರ್ಮಾ ಆ್ಯಕ್ಷನ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಎನ್ಎಚ್17 ಚಿತ್ರದ ಬಳಿಕ ಆಕೆ ಹೆಚ್ಚಾಗಿ ಸಾಮಾಜಿಕ ಹಾಗೂ ಕಾಮಿಡಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಆಕೆ, ಗಂಭೀರ ಕಥಾವಸ್ತುವಿನ ಚಿತ್ರವೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಅನುಷ್ಕಾ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.ಚಿತ್ರದ ಸ್ಕ್ರಿಪ್ಟ್ ತಯಾರಿಕೆ ಪೂರ್ಣಗೊಳ್ಳುವ ಹಂತದಲ್ಲಿದೆ. ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳಲ್ಲಿ ಪಾಲ್ಗೊಳ್ಳಬೇಕಿರುವುದರಿಂದ ಅನುಷ್ಕಾ ತೀವ್ರವಾದ ಪೂರ್ವಭಾವಿ ತರಬೇತಿಯಲ್ಲಿ ತೊಡಗಿದ್ದಾರೆ.
ಆನಂದ್ ಎಲ್.ರಾಯ್ ನಿರ್ದೇಶನದ ಝೀರೋ , ಅನುಷ್ಕಾ ಅವರ ಇತ್ತೀಚಿನ ಚಿತ್ರವಾಗಿದೆ. ಝೀರೋ , ಬಾಕ್ಸ್ಆಫೀಸ್ನಲ್ಲಿ ಮುಗ್ಗರಿಸಿತಾದರೂ ಚಿತ್ರದಲ್ಲಿ ಮೆದುಳಿನ ಪಾರ್ಶ್ವಘಾತ (ಸಿರೆಬ್ರಲ್ ಪಾಲ್ಸಿ) ಕಾಯಿಲೆಗೆ ತುತ್ತಾದ ವಿಜ್ಞಾನಿಯ ಪಾತ್ರದಲ್ಲಿ ಆಕೆಯ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.