varthabharthi


ಆರೋಗ್ಯ

ಹಣ್ಣಿನ ರಸ ಮತ್ತು ಇಡೀ ಹಣ್ಣು ಇವುಗಳಲ್ಲಿ ಯಾವುದು ಒಳ್ಳೆಯದು?

ವಾರ್ತಾ ಭಾರತಿ : 23 Jun, 2019

ಹಣ್ಣಿನ ರಸದ ಸೇವನೆ ಮತ್ತು ಇಡಿಯ ಹಣ್ಣನ್ನು ತಿನ್ನುವುದು.....ಇವುಗಳ ನಡುವೆ ಯಾವುದು ಒಳ್ಳೆಯದು ಎಂಬ ಪ್ರಶ್ನೆ ಹೆಚ್ಚಿನವರಿಗೆ ಕಾಡಿರಲಿಕ್ಕಿಲ್ಲ,ಏಕೆಂದರೆ ಅವರಿಗೆ ಅವುಗಳ ನಡುವಿನ ವ್ಯತ್ಯಾಸಗಳು ಗೊತ್ತಿರುವುದಿಲ್ಲ. ರಸದ ಸೇವನೆಗೆ ಹೋಲಿಸಿದರೆ ಇಡಿಯ ಹಣ್ಣನ್ನು ತಿನ್ನುವುದು ಆರೋಗ್ಯಕರ ಎನ್ನುವುದನ್ನು ಹಲವಾರು ಅಧ್ಯಯನಗಳು ಬೆಟ್ಟುಮಾಡಿವೆ. ಬೆಳಿಗ್ಗೆ ಒಂದು ಹಣ್ಣನ್ನು ತಿಂದರೆ ಇಡೀ ದಿನ ಚೇತೋಹಾರಿಯಾಗಿರುತ್ತದೆ. ಆದರೆ ಇಂದು ಹೆಚ್ಚೆಚ್ಚು ಜನರು ಇಡಿಯ ಹಣ್ಣನ್ನು ತಿನ್ನುವುದರ ಬದಲು ರಸದ ಸೇವನೆಯನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಹಣ್ಣಿನ ರಸದ ಬದಲು ಇಡಿಯ ಹಣ್ಣು ತಿನ್ನುವುದು ಒಳ್ಳೆಯ ಅಭ್ಯಾಸವೇ ಅಥವಾ ಹಣ್ಣಿನ ಬದಲಿಗೆ ರಸವನ್ನು ಸೇವಿಸುವುದು ಒಳ್ಳೆಯದೇ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.....

ಇಡಿಯ ಹಣ್ಣು ಮತ್ತು ಹಣ್ಣಿನ ರಸದ ನಡುವೆ ವ್ಯತ್ಯಾಸಗಳು

ಹಣ್ಣುಗಳು ನೈಸರ್ಗಿಕ ವಿರೇಚಕ ಮತ್ತು ಮೂತ್ರವರ್ಧಕಗಳಾಗಿದ್ದು,ಶರೀರದಲ್ಲಿಯ ಹೆಚ್ಚಿನ ಕೊಬ್ಬನ್ನು ನಿವಾರಿಸುತ್ತವೆ. ಅವು ನಾರು,ವಿಟಾಮಿನ್‌ಗಳು,ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಸಮೃದ್ಧವಾಗಿ ಒಳಗೊಂಡಿದ್ದು, ಶರೀರಕ್ಕೆ ಅಗತ್ಯ ಶಕ್ತಿಯನ್ನು ನೀಡುತ್ತವೆ. ಅವುಗಳಲ್ಲಿ ಪ್ರೋಟಿನ್,ಕಾರ್ಬೊಹೈಡ್ರೇಟ್‌ಗಳು ಮತ್ತು ಕೊಬ್ಬುಗಳನ್ನು ವಿಭಜಿಸಲು ನೆರವಾಗುವ ಜೀರ್ಣ ಕಿಣ್ವಗಳಂತಹ ಪ್ರಮುಖ ಕಿಣ್ವಗಳೂ ಇರುತ್ತವೆ.

ಇಂದಿನ ಅವಸರದ ಜಗತ್ತಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸಲು ರಸ ಅನುಕೂಲಕರ ವಿಧಾನವಾಗಿದೆ. ಹಣ್ಣಿನ ರಸದ ಸೇವನೆಯು ಸುಲಭ,ರಗಳೆಯಿಲ್ಲ ಮತ್ತು ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಅದನ್ನು ಸವಿಯಬಹುದು ಎನ್ನುವುದು ಅದರ ಮುಖ್ಯ ಧನಾತ್ಮಕ ಅಂಶವಾಗಿದೆ. ಅದು ತುಲನಾತ್ಮಕವಾಗಿ ಹೀರಿಕೊಳ್ಳಲೂ ಸುಲಭವಾಗಿದೆ. ನೀವು ಒಂದು ಗ್ಲಾಸ್ ರಸವನ್ನು ಸೇವಿಸಿದರೆ ನಿಮ್ಮ ಶರೀರವು ಅದರಲ್ಲಿಯ ಎಲ್ಲ ಪೋಷಕಾಂಶಗಳನ್ನು ತ್ವರಿತವಾಗಿ ಹೀರಿಕೊಳ್ಳುತ್ತದೆ. ಬಿರುಬಿಸಿಲಿನ ದಿನಗಳಲ್ಲಿ ನಿಮಗೆ ದಿಢೀರ್ ಶಕ್ತಿಯ ಅಗತ್ಯವಿದ್ದಾಗ ಹಣ್ಣಿನ ರಸದ ಸೇವನೆಯು ಒಳ್ಳೆಯದು. ಆದರೆ ರಸ ಸಂಪೂರ್ಣವಾಗಿ ಇಡಿಯ ಹಣ್ಣಿನಂತಲ್ಲ,ಏಕೆಂದರೆ ಅದರಲ್ಲಿ ಇತರ ಪಾನೀಯಗಳಲ್ಲಿ ಇರುವಷ್ಟೇ ಸಕ್ಕರೆಯಿರುತ್ತದೆ. ಜೊತೆಗೆ ಅದರಲ್ಲಿ ಕ್ಯಾಲರಿಗಳೂ ಅಧಿಕವಾಗಿರುತ್ತವೆ. ಅಲ್ಲದೆ ರಸವನ್ನು ಶರೀರವು ಕೂಡಲೇ ಹೀರಿಕೊಳ್ಳುವುದರಿಂದ ಅದು ಹೊಟ್ಟೆಯನ್ನು ತುಂಬಿಸುವುದಿಲ್ಲ ಮತ್ತು ಇನ್ನಷ್ಟು ಬೇಕು ಎಂಬ ತುಡಿತವುಂಟಾಗುತ್ತದೆ.

 ರಸದಲ್ಲಿ ಕಡಿಮೆ ಪ್ರಮಾಣದಲ್ಲಿ ನಾರು ಮತ್ತು ಹೆಚ್ಚು ಪ್ರಮಾಣದಲ್ಲಿ ಸಕ್ಕರೆ ಇರುವುದರಿಂದ ಇವು ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟದ್ದನ್ನೇ ಮಾಡುತ್ತವೆ. ಇಡಿಯ ಹಣ್ಣು ತಿಂದಾಗ ತಿರುಳಿನ ಹೊರಪದರ ಮತ್ತು ಸಿಪ್ಪೆಯಲ್ಲಿರುವ ನಾರನ್ನು ಕೂಡ ನಾವು ಸೇವಿಸಿರುತ್ತೇವೆ ಮತ್ತು ಇದು ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ರಸವು ಸಿಪ್ಪೆಗಳಲ್ಲಿರುವ ಅಗತ್ಯ ಪೋಷಕಾಂಶಗಳನ್ನು ಮತ್ತು ನಾರನ್ನು ಕಳೆದುಕೊಂಡಿರುತ್ತದೆ.

ಕ್ಯಾನ್‌ಗಳಲ್ಲಿ ಮತ್ತು ಬಾಟಲ್‌ಗಳಲ್ಲಿ ಲಭ್ಯವಿರುವ ಹಣ್ಣಿನ ರಸದ ಜೀವಿತಾವಧಿಯನ್ನು ಹೆಚ್ಚಿಸಲು ಅದರಲ್ಲಿ ಪ್ರಿಸರ್ವೇಟಿವ್ ಅಥವಾ ಸಂರಕ್ಷಕಗಳನ್ನು ಸೇರಿಸಲಾಗುತ್ತದೆ ಮತ್ತು ಇವು ನಮ್ಮ ಶರೀರಕ್ಕೆ ಅಷ್ಟೇನೂ ಆರೋಗ್ಯಕರವಲ್ಲ.

ಇಡಿಯ ಹಣ್ಣುಗಳು ಸಮೃದ್ಧ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಹಣ್ಣಿನಲ್ಲಿರುವ ಎಲ್ಲ ಪೋಷಕಾಂಶಗಳೂ ನಮ್ಮ ಶರೀರಕ್ಕೆ ಲಭಿಸುತ್ತವೆ. ಹಣ್ಣುಗಳಲ್ಲಿರುವ ಹೆಚ್ಚಿನ ಪೋಷಕಾಂಶಗಳು ಹಾಗೂ ವಿಟಾಮಿನ್‌ಗಳು ಉಷ್ಣತೆ ಮತ್ತು ಸಂಸ್ಕರಣೆಗೆ ಸಂವೇದನಾಶೀಲವಾಗಿರುತ್ತವೆ. ಇದೇ ಕಾರಣದಿಂದ ರಸವು ಇವುಗಳನ್ನು ಕಳೆದುಕೊಂಡಿರುತ್ತದೆ ಮತ್ತು ರಸವನ್ನು ಸೇವಿಸುವುದರಿಂದ ನಮ್ಮ ಶರೀರವು ಇವುಗಳಿಂದ ವಂಚಿತವಾಗುತ್ತದೆ.

ಇಡಿಯ ಹಣ್ಣು ನಮ್ಮ ಶರೀರಕ್ಕೆ ತನ್ನಲ್ಲಿರುವ ಎಲ್ಲ ಕರಗಬಲ್ಲ ಮತ್ತು ಕರಗದ ನಾರನ್ನು ಒದಗಿಸುತ್ತದೆ. ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಮಟ್ಟದಲ್ಲಿ ಇಳಿಕೆ,ಹೆಚ್ಚಿನ ಇನ್ಸುಲಿನ್ ಸಂವೇದನಾಶೀಲತೆ,ಹಸಿವು ನಿಯಂತ್ರಣ,ಕಡಿಮೆ ಜೀರ್ಣ ಸಮಸ್ಯೆಗಳು ಮತ್ತು ಕಡಿಮೆ ಬೊಜ್ಜು ಇವು ಈ ನಾರುಗಳು ನೀಡುವ ಲಾಭಗಳಾಗಿವೆ. ಇಡಿಯ ಹಣ್ಣುಗಳಲ್ಲಿರುವ ನಾರು ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ,ಹಸಿವು ಕಾಡುವುದಿಲ್ಲ.

ಇಡಿಯ ಹಣ್ಣುಗಳಲ್ಲಿರುವ ನೈಸರ್ಗಿಕ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದು. ಅವುಗಳಲ್ಲಿ ಹೆಚ್ಚುವರಿ ಸಕ್ಕರೆ ಮತ್ತು ಸಂರಕ್ಷಕಗಳು ಇರುವುದಿಲ್ಲ,ಹೀಗಾಗಿ ಕ್ಯಾಲರಿಗಳ ಪ್ರಮಾಣವೂ ಕಡಿಮೆಯಿರುತ್ತದೆ. ಹಣ್ಣುಗಳನ್ನು ತಿನ್ನುವುದರಿಂದ ರಕ್ತದಲ್ಲಿಯ ಗ್ಲುಕೋಸ್ ಮಟ್ಟದಲ್ಲಿ ತಕ್ಷಣದ ಏರಿಕೆಯಾಗುವುದಿಲ್ಲ ಮತ್ತು ನಿಧಾನವಾಗಿ ಜೀರ್ಣಗೊಳ್ಳುತ್ತದೆ. ಹೀಗಾಗಿ ರಸಕ್ಕೆ ಹೋಲಿಸಿದರೆ ಇಡಿಯ ಹಣ್ಣು ಉತ್ತಮ ಆಯ್ಕೆಯಾಗುತ್ತದೆ.

ರಸಕ್ಕೆ ಹೋಲಿಸಿದರೆ ಇಡಿಯ ಹಣ್ಣಿನ ಅನಾನುಕೂಲತೆ ಎಂದರೆ ಅದನ್ನು ತಿನ್ನಲು ಹೆಚ್ಚು ಸಮಯ ಮತ್ತು ಪ್ರಯತ್ನ ಬೇಕಾಗುತ್ತದೆ. ಆದರೆ ಇಡಿಯ ಹಣ್ಣು ನೀಡುವ ಅಸಂಖ್ಯಾತ ಲಾಭಗಳನ್ನು ಪರಿಗಣಿಸಿದರೆ ಈ ಅನಾನುಕೂಲ ಹೆಚ್ಚಲ್ಲ.

ನಮಗೆ ಸಮಯಾವಕಾಶವಿಲ್ಲ,ಆದರೆ ಹಣ್ಣಿನ ಲಾಭಗಳು ಬೇಕೆಂದಾಗ ರಸ ಪರ್ಯಾಯವಾಗಿರುತ್ತದೆ ಅಷ್ಟೇ.ನೀವು ಕಚೇರಿಗೆ ಇಡಿಯ ಹಣ್ಣನ್ನು ಒಯ್ದು ಊಟದ ಸಮಯದಲ್ಲಿ ಅದನ್ನು ತಿನ್ನಬಹುದು. ಹಣ್ಣುಗಳನ್ನು ಹೋಳುಗಳನ್ನಾಗಿ ಮಾಡಿ ಕೆಲವು ಗಂಟೆಗಳ ನಂತರ ತಿಂದರೆ ಅವುಗಳಲ್ಲಿಯ ಕೆಲವು ಪೋಷಕಾಂಶಗಳು ನಷ್ಟವಾಗುತ್ತವೆ ಎನ್ನುವುದು ನೆನಪಿರಲಿ. ಹೀಗಿದ್ದರೂ ರಸವು ಹಣ್ಣಿಗಿಂತ ಒಳ್ಳೆಯ ಆಯ್ಕೆಯಾಗುವುದಿಲ್ಲ.

ಹಣ್ಣಿನ ರಸಕ್ಕಿಂತ ಇಡಿಯ ಹಣ್ಣು ಒಳ್ಳೆಯ ಆಯ್ಕೆ ಎನ್ನುವುದನ್ನು ಅಧ್ಯಯನಗಳೂ ಸಾಬೀತು ಮಾಡಿವೆ. ಹೀಗಾಗಿ ರಸವನ್ನು ಸೇವಿಸುವುದಕ್ಕಿಂತ ಇಡಿಯ ಹಣ್ಣನ್ನು ತಿನ್ನುವುದು ಒಳ್ಳೆಯದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)