varthabharthi

ವಿಶೇಷ-ವರದಿಗಳು

ಈ ಜನರು ಸತ್ತವರ ನಡುವೆ ಬದುಕುತ್ತಿದ್ದಾರೆ !

ವಾರ್ತಾ ಭಾರತಿ : 23 Jun, 2019

ಸಾಂಪ್ರದಾಯಿಕವಾಗಿ ಸ್ಮಶಾನಗಳು ಸತ್ತವರ ಪಾಲಿಗೆ ಶಾಶ್ವತ ಶಾಂತಿಯ ತಾಣಗಳಾಗಿರಬಹುದು,ಆದರೆ ಕಾಂಬೋಡಿಯಾದ ರಾಜಧಾನಿ ನಾಮ್ ಪೆನ್ ನಗರದಲ್ಲಿಯ ಈ ಸ್ಮಶಾನದಲ್ಲಿ ಜನರು ಸತ್ತವರ ನಡುವೆ ಬದುಕುತ್ತಿದ್ದಾರೆ. ನಿರಂತರ ಅಭಿವೃದ್ಧಿಯ ಹೆಸರಿನಲ್ಲಿ ಸಮುದಾಯಗಳು ನಾಶಗೊಂಡು ಮನೆಗಳನ್ನು ಕಳೆದುಕೊಂಡಿರುವ ಈ ಜನರಿಗೆ ಇದು ಅನಿವಾರ್ಯದ ಬದುಕಾಗಿದೆ.

‘‘ನನ್ನ ವಿವಾಹದ ಬಳಿಕ ಸ್ಮಾರ್ ಸ್ಯಾನ್ ಸಿಮೆಟ್ರಯು ನನ್ನ ಮನೆಯಾಗಲಿದೆ ಎನ್ನುವುದು ಗೊತ್ತಾದಾಗ ನಾನು ಮೂಕಳಾಗಿಬಿಟ್ಟಿದ್ದೆ, ನಾನು ಇಲ್ಲಿ ಬದುಕಬಹುದು ಎಂದು ಸ್ವತಃ ನಾನೇ ನಂಬಿರಲಿಲ್ಲ. ಆದರೆ ಈಗ ನಾನು ಈ ಬದುಕಿಗೆ ಒಗ್ಗಿಕೊಂಡಿದ್ದೇನೆ ’’ ಎನ್ನುತ್ತಾಳೆ 42ರ ಹರೆಯದ ನಾಲ್ವರು ಮಕ್ಕಳ ತಾಯಿ ಮಾ ನಿತ್. ಆಕೆ ಈ ಮಾತು ಹೇಳುವಾಗ ಆಕೆಯ ಪುಟ್ಟ ಮಗ ಅಲ್ಲಿಯ ಸಮಾಧಿಯ ಮೇಲೆ ಹತ್ತಿ ಆಟವಾಡುತ್ತಿದ್ದ. ಅಂದ ಹಾಗೆ ನಿತ್ ಕಳೆದ 16 ವರ್ಷಗಳಿಂದಲೂ ಈ ಸ್ಮಶಾನದಲ್ಲಿ ಬದುಕುತ್ತಿದ್ದಾಳೆ.

ದಶಕಗಳ ನಾಗರಿಕ ಯುದ್ಧ ಮತ್ತು ಖಾಸಗಿ ಆಸ್ತಿಗಳನ್ನು ರದ್ದುಗೊಳಿಸಿದ್ದ ಹಾಗೂ 1975-79ರ ಅವಧಿಯಲ್ಲಿ ದೇಶದ ಕಾಲುಭಾಗದಷ್ಟು ಜನರನ್ನು ಕೊಂದಿದ್ದ ತೀವ್ರ ಮಾವೊವಾದಿ ಖ್ಮೇರ್ ರೋಗ್ ಆಳ್ವಿಕೆ ಅಂತ್ಯಕೊಂಡ ಬಳಿಕ ಕಾಂಬೋಡಿಯಾ ಕ್ಷಿಪ್ರ ಆರ್ಥಿಕ ಬೆಳವಣಿಗೆಗೆ ಸಾಕ್ಷಿಯಾಗಿದೆ. ಆದರೆ ಗಗನಚುಂಬಿ ಕಟ್ಟಡಗಳು ಕೊಳಗೇರಿಗಳನ್ನು ಅಳಿಸಿಬಿಟ್ಟಿವೆ. ಕಾಂಬೋಡಿಯಾದ ಶೇ.14ರಷ್ಟು ಜನರು ಬಡತನದ ರೇಖೆಗಿಂತ ಕೆಳಗಿನ ಜೀವನವನ್ನು ಸಾಗಿಸುತ್ತಿದ್ದಾರೆ ಮತ್ತು ಇಂತಹವರಿಗೆ ತಾವು ಎಲ್ಲಿ ವಾಸವಿರಬೇಕು ಎನ್ನುವುದನ್ನು ನಿರ್ಧರಿಸಲು ಯಾವುದೇ ಆಯ್ಕೆಗಳೂ ಇಲ್ಲ.

  ನಿತ್ ವಾಸವಿರುವ ಸ್ಮಾರ್ ಸ್ಯಾನ್ ಸ್ಮಶಾನದಲ್ಲಿಯ ಬಣ್ಣಬಣ್ಣಗಳ ಸಮಾಧಿಗಳ ನಡುವೆ ತಾತ್ಕಾಲಿಕ ಜೋಪಡಿಗಳಲ್ಲಿ ಸುಮಾರು 130 ಕುಟುಂಬಗಳು ವಾಸವಾಗಿವೆ. ಹೆಚ್ಚಿನ ನಿವಾಸಿಗಳು 1990ರ ದಶಕದಲ್ಲಿ ಇಲ್ಲಿ ತಮ್ಮ ‘ಮನೆ’ಗಳನ್ನು ನಿರ್ಮಿಸಿಕೊಂಡಿದ್ದಾರೆ ಮತ್ತು ಆಗಿನಿಂದಲೂ ತಲೆಯ ಮೇಲೊಂದು ಸೂರು ಹುಡುಕಿಕೊಂಡು ಈ ಸ್ಮಶಾನಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಈ ಪೈಕಿ ಕೆಲವರು ತಮ್ಮ ನದಿತೀರದಲ್ಲಿನ ಮನೆಗಳನ್ನು ಬಸಾಕ್ ನದಿಯು ಆಹುತಿ ಪಡೆದ ಬಳಿಕ ಈ ಸ್ಮಶಾನದಲ್ಲಿ ನೆಲೆ ಕಂಡುಕೊಂಡಿದ್ದರೆ,ಇತರರನ್ನು ಹೊಸ ಮಾರುಕಟ್ಟೆಯ ನಿರ್ಮಾಣಕ್ಕಾಗಿ ಸಮೀಪದ ಸ್ಥಳದಿಂದ ಒಕ್ಕಲೆಬ್ಬಿಸಲಾಗಿತ್ತು.

ತಮ್ಮ ಪಾಲಿಗೆ ಸ್ಮಶಾನವೇ ಅತ್ಯುತ್ತಮ ಆಯ್ಕೆಯಾಗಿದೆ ಎನ್ನುತ್ತಾರೆ ಇಲ್ಲಿಯ ನಿವಾಸಿಗಳು.

ಬೌದ್ಧರು ಬಹುಸಂಖ್ಯಾಕರಾಗಿರುವ ಕಾಂಬೋಡಿಯಾದಲ್ಲಿ ಸತ್ತವರ ಶವಗಳನ್ನು ಸುಡುತ್ತಾರೆ,ಆದರೆ ಈ ಸಿಮೆಟ್ರಿಯಲ್ಲಿನ ಸಮಾಧಿಗಳಡಿ ಇರುವವರು ಹೆಚ್ಚಾಗಿ ಜನಾಂಗೀಯ ವಿಯೆಟ್ನಾಮಿಗಳಾಗಿದ್ದಾರೆ ಮತ್ತು ಈ ಸಮುದಾಯವು ಸತ್ತವರ ಶವಗಳನ್ನು ದಫನ್ ಮಾಡುತ್ತದೆ.

 ಈಗ ಸ್ಮಶಾನದಲ್ಲಿ ಬದುಕಿರುವವರ ಬಗ್ಗೆ ಸಮಾಧಿಗಳಡಿಯಲ್ಲಿರುವ ಸತ್ತವರ ಆಕ್ಷೇಪವಿಲ್ಲವಾದರೂ ಅವರ ಬಂಧುಗಳಿಗೆ ಸತ್ತ ತಮ್ಮ ಪ್ರೀತಿಪಾತ್ರರ ಬಗ್ಗೆ ಕಾಳಜಿಯಿದೆ. ಸ್ಮಶಾನವಾಸಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಕೆಲವರು ತಮ್ಮ ಪ್ರೀತಿಪಾತ್ರರ ಸಮಾಧಿಗಳನ್ನು ಅಗೆದು ಅವಶೇಷಗಳನ್ನು ಬೇರೆ ಕಡೆಗೊಯ್ದು ದಫನ್ ಮಾಡುತ್ತಿದ್ದಾರೆ.

ಇಲ್ಲಿಯ ನಿವಾಸಿ,63ರ ಹರೆಯದ ಪೀನ್ ಮ್ಯೂನ್ ಹೇಳುವಂತೆ ಆಕೆ 19 ವರ್ಷಗಳ ಹಿಂದೆ ಇಲ್ಲಿ ವಾಸವಾಗಿರಲು ಬಂದಾಗ 300ಕ್ಕೂ ಅಧಿಕ ಸಮಾಧಿಗಳಿದ್ದವು. ಈಗ ಸುಮಾರು 110 ಸಮಾಧಿಗಳು ಉಳಿದುಕೊಂಡಿವೆ. 500 ಜನರು ಇಲ್ಲಿ ವಾಸವಾಗಿದ್ದು,ಸಮಾಧಿಯಲ್ಲಿ ಮಲಗಿರುವವರಿಗಿಂತ ಇವರ ಸಂಖ್ಯೆ ಹೆಚ್ಚಿದೆ.

ಈ ಸ್ಮಶಾನದಲ್ಲಿ ವಾಸವಾಗಿರುವುದು ಸುರಕ್ಷಿತ ಎನ್ನುತ್ತಾನೆ ಅಮ್ ಸೋಖಾ. ಸಮಾಧಿಗಳ ಮೇಲೆ ಸತ್ತವರಿಗಾಗಿ ಇಡುವ ಆಹಾರ ಪದಾರ್ಥಗಳನ್ನು ಕೆಲವೊಮ್ಮೆ ತಾನು ಸೇವಿಸುವದನ್ನು ಆತ ಮುಲಾಜಿಲ್ಲದೆ ಒಪ್ಪಿಕೊಂಡಿದ್ದಾನೆ. ಇಂತಹವರು ಇಲ್ಲಿ ಹಲವರಿದ್ದಾರೆ. ‘ಈ ಸ್ಥಳ ಮಾರುಕಟ್ಟೆಗಳಿಗೆ ಸಮೀಪದಲ್ಲಿದೆ,ನಮಗೆ ವಿದ್ಯುತ್ ಮತ್ತು ನೀರಿನ ಪೂರೈಕೆಯೂ ಇದೆ. ಬಾಡಿಗೆಯಂತೂ ಇಲ್ಲವೇ ಇಲ್ಲ ’ಎನ್ನುತ್ತಾನೆ ಸೋಖಾ.

ಆದರೆ ಸ್ಮಶಾನದಲ್ಲಿ ದೆವ್ವ-ಭೂತಗಳ ಕಾಟ ಇದೆಯಿದೆ ಎಂಬ ವದಂತಿಗಳನ್ನು ಆತ ತಳ್ಳಿಹಾಕಿದ್ದಾನೆ. ರಾತ್ರಿಯಾಗುತ್ತಿದ್ದಂತೆ ಇಲ್ಲಿಯ ನಿವಾಸಿಗಳು ಬಿಯರ್ ಏರಿಸತೊಡಗುತ್ತಾರೆ ಮತ್ತು ಮಕ್ಕಳು ಯಾವುದೇ ಹೆದರಿಕೆಯಿಲ್ಲದೆ ಸಮಾಧಿಗಳ ಸುತ್ತ ಆಟವಾಡಿಕೊಂಡಿರುತ್ತಾರೆ.

ಸುಮ್ಮನೆ ಜನರನ್ನು ಹೆದರಿಸಲು ದೆವ್ವ-ಭೂತಗಳ ಕಥೆಗಳನ್ನು ಹೇಳಲಾಗುತ್ತಿದೆ. ಆದರೆ ಬದುಕಲು ಸ್ಥಳವೇ ಇಲ್ಲದ ಸ್ಥಿತಿಯ ಮುಂದೆ ಇಂತಹ ಭೀತಿ ಏನೇನೂ ಅಲ್ಲ ಎನ್ನುತ್ತಾನೆ ಸೋಖಾ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)