varthabharthiಸಂಪಾದಕೀಯ

ಬಾಲ್ಯವಿವಾಹಕ್ಕೆ ಕೊನೆಯೆಂದು?

ವಾರ್ತಾ ಭಾರತಿ : 24 Jun, 2019

ಬಂಡವಾಳಶಾಹಿ ಅಭಿವೃದ್ಧಿ ಮಾರ್ಗದಲ್ಲಿ ದಾಪುಗಾಲಿಡುತ್ತಿರುವ ಭಾರತದಲ್ಲಿ ಈಗ ಎಲ್ಲೆಡೆ ವಿಶ್ವಗುರುವಾಗುವ ಸಂಭ್ರಮ ಎದ್ದು ಕಾಣುತ್ತಿದೆ. ಈ ಸಂಭ್ರಮಕ್ಕೆ ಹೆಮ್ಮೆ ಪಡೋಣ. ಇತ್ತೀಚೆಗೆ ಇಲ್ಲಿ ರಾಷ್ಟ್ರಭಕ್ತಿಯ ಆವೇಶವೂ ಎಲ್ಲೆಡೆ ಕಂಡು ಬರುತ್ತಿದೆ. ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲೂ ಈ ಹುಸಿ ರಾಷ್ಟ್ರೀಯತೆ ಮಹತ್ವದ ಪಾತ್ರ ವಹಿಸಿತು. ಇದೆಲ್ಲಾ ಇರಲಿ, ವಿಶ್ವಗುರುವಾಗಲು ಹೊರಟ ಭಾರತದಲ್ಲಿ ನಾವು ನಾಚಿಕೆಯಿಂದ ತಲೆ ತಗ್ಗಿಸಬೇಕಾದ ಕೆಲ ಸಂಗತಿಗಳಿವೆ. ಇಲ್ಲಿ ಇಂದಿಗೂ ತಾಂಡವವಾಡುತ್ತಿರುವ ಬಡತನ, ನಿರುದ್ಯೋಗ ಮಾತ್ರವಲ್ಲ ಅಸ್ಪಶ್ಯತೆ, ಅಸಮಾನತೆ ಅಲ್ಲದೆ ಭ್ರೂಣಹತ್ಯೆ, ಬಾಲ್ಯವಿವಾಹಗಳಿಗಾಗಿ ನಾವು ಜಗತ್ತಿನ ಎದುರು ತಲೆ ತಗ್ಗಿಸಿ ನಿಲ್ಲಬೇಕಾಗಿದೆ.

ದೇಶಕ್ಕೆ ಸ್ವಾತಂತ್ರ ಬಂದು ಏಳು ದಶಕಗಳು ದಾಟಿದವು. ಭಾರತವನ್ನು ಉದ್ಧಾರ ಮಾಡಲು ಅವತರಿಸಿದವರು ಮತ್ತೆ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದಾರೆ. ಬಾಲ್ಯವಿವಾಹದಂಥ ಅನಿಷ್ಟ ಪದ್ಧತಿಯನ್ನು ನಿಷೇಧಿಸಿ ವರ್ಷಗಳೇ ಗತಿಸಿದವು. ಆದರೂ ಈ ಭವ್ಯ ಭಾರತದಲ್ಲಿ ಬಾಲ್ಯ ವಿವಾಹಗಳು ಕಾನೂನಿನ ಚಾಪೆಯ ಕೆಳಗೆ ನುಸುಳಿ ಹಾಡ ಹಗಲೇ ನಡೆಯುತ್ತಿವೆ. ಈ ಅನಿಷ್ಟ ಪದ್ಧತಿಯ ನಿವಾರಣೆಗೆ ಸರಕಾರ ಕೈಗೊಂಡ ಯಾವ ಕ್ರಮವೂ ಫಲಪ್ರದವಾಗಿಲ್ಲ. ಮಂತ್ರಿ ಮಾಗಧರು, ಧರ್ಮಗುರುಗಳು ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲೂ ಈ ಬಾಲ್ಯವಿವಾಹಗಳು ಯಾರಿಗೂ ಗೊತ್ತಾಗದಂತೆ ನಡೆಯುತ್ತವೆ.

ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯ ಜೊತೆ ಲೈಂಗಿಕ ಸಂಪರ್ಕ ಹೊಂದುವುದು ಅತ್ಯಾಚಾರವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪು ಗಮನಾರ್ಹ. ಆದರೂ ಬಾಲ್ಯವಿವಾಹಗಳು ನಡೆಯುತ್ತಲೇ ಇವೆ. ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಬೀದರ್, ಕೋಲಾರ ಜಿಲ್ಲೆಗಳಲ್ಲಿ 2018 ರಲ್ಲಿ 3,117 ಬಾಲ್ಯವಿವಾಹಗಳು ನಡೆದಿರುವ ಸಂಗತಿ ಚೈಲ್ಡ್ ರೈಟ್ ಟ್ರಸ್ಟ್ ನಡೆಸಿರುವ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ರಾಜ್ಯದ ಕೆಲವೆಡೆ ಹದಿಮೂರರಿಂದ ಹದಿನೇಳು ವರ್ಷದ ಮಕ್ಕಳನ್ನು ವಿವಾಹದ ಹೆಸರಿನಲ್ಲಿ ಬಂಧನಕ್ಕೆ ತಳ್ಳಲಾಗಿದೆ. ಅವರಲ್ಲಿ ಕೆಲವರು ಈಗಾಗಲೇ ವಿಧವೆಯರೂ ಆಗಿದ್ದಾರೆ.ಇದಕ್ಕಿಂತ ಆಘಾತಕಾರಿ ಸಂಗತಿಯೆಂದರೆ ಅನೇಕರನ್ನು ವೇಶ್ಯಾವಾಟಿಕೆಗಳಿಗೆ ತಳ್ಳಲಾಗಿದೆ. ಇದಕ್ಕೆ ಒಂದೆರಡಲ್ಲ ಅನೇಕ ಕಾರಣಗಳಿವೆ. ಕಡು ಬಡತನ, ನಿರಕ್ಷರತೆ, ಆರ್ಥಿಕ ದುರವಸ್ಥೆ, ಹೆಣ್ಣುಮಕ್ಕಳ ಬಗೆಗಿನ ತಿರಸ್ಕಾರ ಇವೆಲ್ಲವೂ ಇದಕ್ಕೆ ಕಾರಣ.

ನಮ್ಮ ಸಮಾಜದ ಅನೇಕ ಕುಟುಂಬಗಳಲ್ಲಿ ಮನೆ ತುಂಬಮಕ್ಕಳು, ಜೊತೆಗೆ ಮಕ್ಕಳನ್ನು ಸಾಕಲಾಗದ ಕಡು ದಾರಿದ್ರ, ಇಂಥ ಕುಟುಂಬಗಳಲ್ಲಿ ಜನಿಸುವ ಹೆಣ್ಣುಮಕ್ಕಳ ಪರಿಸ್ಥಿತಿ ಅತ್ಯಂತ ಶೋಚನೀಯ. ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವ ಬಗ್ಗೆ ನಿರಾಸಕ್ತಿ, ಬೇರೆಯವರ ಮನೆಗೆ ಹೋಗುವ ಹೆಣ್ಣಿಗೇಕೆ ವಿದ್ಯೆ ಎಂಬ ಉಪೇಕ್ಷೆಯ ಮನೋಭಾವ ಹೀಗೆ ಹಲವಾರು ಕಾರಣಗಳಿಂದಾಗಿ ಬಾಲ್ಯವಿವಾಹಗಳು ನಡೆಯುತ್ತಿವೆ. ಕೆಲ ಬಾಲ್ಯವಿವಾಹಗಳು ಕದ್ದು ಮುಚ್ಚಿ ನಡೆದರೆ ಇನ್ನು ಕೆಲವು ಕಾನೂನಿನ ಕಣ್ಣಿಗೆ ಮಣ್ಣೆರಚಿ ನಡೆಯುತ್ತಿವೆ. ಇದು ಕರ್ನಾಟಕದ ಕಥೆ ಮಾತ್ರವಲ್ಲ ಇಡೀ ಭಾರತದ ವ್ಯಥೆಯಾಗಿದೆ.
ಈ ಸಮಾಜದಲ್ಲಿ ಹೆಣ್ಣುಮಗು ಒಂದು ಹೊರೆ ಎಂಬ ನಂಬಿಕೆ ಇನ್ನೂ ಇದೆ. ಮಹಿಳೆ ದೇಶದ ಪ್ರಧಾನಿಯಾಗಿ, ರಾಷ್ಟ್ರಪತಿಯಾಗಿ, ನ್ಯಾಯಾಧೀಶೆಯಾಗಿ, ವೈದ್ಯೆಯಾಗಿ, ವಿಜ್ಞಾನಿಯಾಗಿ ತನ್ನ ಸಾಮರ್ಥ್ಯವನ್ನು ತೋರಿಸಿದರೂ ಕೂಡ ಪುರುಷಾಧಿಪತ್ಯದ ಮೌಲ್ಯಗಳು ಈ ಸಮಾಜವನ್ನು ಇಂದಿಗೂ ನಿಯಂತ್ರಿಸುತ್ತಿವೆ. ಹೀಗಾಗಿ ಬಾಲ್ಯವಿವಾಹದಂಥ ಕರಾಳ ಪದ್ಧತಿಗಳು ಇಂದಿಗೂ ಉಳಿದುಕೊಂಡಿವೆ.
‘ಹೆಣ್ಣು ಮಗು ಮನೆಯ ಬೆಳಕು’ ಎಂಬುದು ಬರೀ ಘೋಷ ವಾಕ್ಯವಾಗಬಾರದು. ಮಗಳಿಗೆ ಆರೋಗ್ಯ, ಶಿಕ್ಷಣ, ಸ್ವಾವಲಂಬಿ ಬದುಕನ್ನು ಕಲ್ಪಿಸುವ ಬದಲಾಗಿ ಆಕೆಗೆ ಹದಿನೆಂಟು ವರ್ಷ ತುಂಬುವ ಮೊದಲೇ ಮದುವೆ ಮಾಡಿ ಗಂಡನ ಮನೆಗೆ ದಬ್ಬುವುದು ಅಮಾನವೀಯವಾಗುತ್ತದೆ.ಆಕೆಯ ಅಭಿಪ್ರಾಯವನ್ನು ಕಡೆಗಣಿಸಿ ತಿಳುವಳಿಕೆ ಇಲ್ಲದಾಗಲೇ ನಡೆಯುವ ಇಂಥ ಮದುವೆಗಳನ್ನು ಕಾನೂನಿನಿಂದ ಮಾತ್ರ ತಡೆಯಲು ಸಾಧ್ಯವಿಲ್ಲ.ಸಮಾಜವೂ ಇಂಥ ಮದುವೆಯನ್ನು ಬಹಿಷ್ಕರಿಸಬೇಕು.
 ಬಾಲ್ಯವಿವಾಹದ ಬಳಿಕ ಗಂಡನ ಮನೆಯಲ್ಲಿ ನಾನಾ ಚಿತ್ರಹಿಂಸೆ ಅನುಭವಿಸುವ ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಮೊರೆ ಹೋದ ದಾರುಣ ಘಟನೆಗಳು ನಡೆಯುತ್ತವೆ. ಅಂಥವರನ್ನು ಗುರುತಿಸಿ ಕತ್ತಲ ಕೂಪದಿಂದ ಪಾರು ಮಾಡಬೇಕಾಗಿದೆ. ಇಂಥ ಹೆಣ್ಣುಮಕ್ಕಳ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಗೊತ್ತಿದ್ದರೂ ಅವರು ಮಾಹಿತಿ ನೀಡದೆ ಮೌನ ವಹಿಸುತ್ತಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಈ ಮನೋಭಾವ ಸರಿಯಲ್ಲ.
 ಬಾಲ್ಯವಿವಾಹ, ವರದಕ್ಷಿಣೆ ಮತ್ತು ಸ್ತ್ರೀ ಭ್ರೂಣಹತ್ಯೆಯಂಥ ಅನಿಷ್ಟಗಳ ಬಗ್ಗೆ ಸಮಾಜದಲ್ಲಿ ಜನ ಜಾಗೃತಿ ಉಂಟು ಮಾಡುವ ಕಾರ್ಯ ನಡೆಯಬೇಕು. ಸ್ವಯಂ ಸೇವಾ ಸಂಸ್ಥೆಗಳು, ಜನಪರ ಸಂಘಟನೆಗಳು ಮಾತ್ರವಲ್ಲ ಸಮಾಜದ ಇತರ ಜನವರ್ಗಗಳು ಈ ಅನಿಷ್ಟದ ವಿರುದ್ಧ ದನಿಯೆತ್ತಬೇಕು. ಮುಖ್ಯವಾಗಿ ಮಠಾಧೀಶರು, ಧರ್ಮ ಗುರುಗಳು ಬಾಲ್ಯವಿವಾಹದಂತಹ ಕರಾಳ ಸಂಪ್ರದಾಯದ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು. ಈ ಅನಿಷ್ಟ ಪದ್ಧತಿಯನ್ನು ತೊಲಗಿಸದಿದ್ದರೆ ಜಗತ್ತಿನ ಎದುರು ನಮ್ಮ ದೇಶ ತಲೆ ತಗ್ಗಿಸಿ ನಿಲ್ಲಬೇಕಾಗುತ್ತದೆ. ಹೆಣ್ಣುಮಕ್ಕಳನ್ನು ನೋಡುವ ಸಮಾಜದ ದೃಷ್ಟಿಕೋನ ಮೊದಲು ಬದಲಾಗಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)