varthabharthi

ವೈವಿಧ್ಯ

ಕುಣಿತ ನಿಲ್ಲಿಸಿದ ಗೊರವರ ಗಾರುಡಿಗ ಪುಟ್ಟಮಲ್ಲೇಗೌಡ

ವಾರ್ತಾ ಭಾರತಿ : 24 Jun, 2019
ಸಿ.ಎಂ.ನರಸಿಂಹಮೂರ್ತಿ ಅಂತರ್‌ರಾಷ್ಟ್ರೀಯ ಜಾನಪದ ಕಲಾವಿದ

ಇತ್ತೀಚೆಗೆ ಅಂದರೆ ಜೂ.10ರಂದು ಜಾನಪದಶ್ರೀ ಪ್ರಶಸ್ತಿ ಪುರಸ್ಕೃತ, ಜಾನಪದ ಕಲಾವಿದ ಚಾಮರಾಜನಗರ ಜಿಲ್ಲೆಯ ರಾಮಸಮುದ್ರದ ಹಿರಿಯ ಅಜ್ಜ ಪುಟ್ಟಮಲ್ಲೇಗೌಡ (95) ಅವರು ವಯೋಸಹಜ ಕಾಯಿಲೆಯಿಂದ ನಮ್ಮನ್ನೆಲ್ಲ ಅಗಲಿದ್ದು, ಜಾನಪದ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಗಡಿನಾಡು ಚಾಮರಾಜನಗರದ ಪರಿಸರದಲ್ಲಿ ‘ಗೊರವರ ಕುಣಿತ’ ಬಹು ಜನಪ್ರಿಯ ಕಲೆ. ಚಾಮರಾಜನಗರ ಜಿಲ್ಲೆಯ ರಾಮಸಮುದ್ರದಲ್ಲಿ ಹುಟ್ಟಿ ಬೆಳೆದ ಪುಟ್ಟಮಲ್ಲೇಗೌಡ ಅವರು ‘ಗೊರವರ ಕುಣಿತ’ದಂತಹ ಜಾನಪದ ನೃತ್ಯ ಕಲೆಯನ್ನು 12ನೇ ವಯಸ್ಸಿಗೆ ಕಲಿತು ಕರಗತ ಮಾಡಿಕೊಂಡವರು. ಅವರು ಬಡತನದ ಬೇಗೆಯಲ್ಲಿ ಬೆಂದು ಅರಳಿದ ಅದ್ಭುತ ಜಾನಪದ ಕಲಾವಿದ, ಗೊರವರ ಕುಣಿತದ ಗಾರುಡಿಗ.
 ಆಗಿನ ಕಾಲದಲ್ಲೇ ‘ಮಲ್ಲಿಕಾರ್ಜುನಸ್ವಾಮಿ ಜಾನಪದ ಕಲಾ ತಂಡ’ ಎಂಬ ಇಪ್ಪತ್ತು ಜನರ ತಂಡವನ್ನು ಕಟ್ಟಿಕೊಂಡು ದೇಶ ಸುತ್ತಿದರು. ಅಂಡಮಾನ್ ನಿಕೋಬಾರ್, ದಿಲ್ಲಿ, ಮುಂಬೈ, ಕೋಲ್ಕತಾ, ಪಾಂಡಿಚೇರಿ, ರಾಜಸ್ಥಾನ, ಆಂಧ್ರಪ್ರದೇಶ, ಭೂಪಾಲ್ ಹೀಗೆ ಹಲವಾರು ನಗರ, ದೇಶಗಳಲ್ಲಿ ‘ಗೊರವರ ಕುಣಿತ’ದ ಪ್ರದರ್ಶನ ನೀಡಿ ಸೈ ಎನಿಸಿಕೊಂಡರು. ಕರ್ನಾಟಕದ ಸರಕಾರಿ ಉತ್ಸವಗಳಲ್ಲದೆ, ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲೂ ‘ಗೊರವರ ಕುಣಿತ’ದ ಕಲಾ ಪ್ರದರ್ಶನ ನೀಡುವ ಮೂಲಕ ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿದರು. ಇಷ್ಟು ಮಾತ್ರವಲ್ಲದೆ, ‘ಗೊರವರ ಕುಣಿತ’ದಂತಹ ಜಾನಪದ ನೃತ್ಯಕ್ಕೆ ರಾಷ್ಟ್ರೀಯ ಮನ್ನಣೆ ತಂದು ಕೊಟ್ಟ ಕೀರ್ತಿ ಜಾನಪದ ಚೇತನ ಪುಟ್ಟಮಲ್ಲೇಗೌಡರದು.


ಪುಟ್ಟಮಲ್ಲೇಗೌಡರ ತಂದೆ ಗಿರಿಗೌಡ, ತಾಯಿ ಅಕ್ಕಿಯಮ್ಮ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಮೂರು ಜನ ಗಂಡು ಮಕ್ಕಳ ಪೈಕಿ ಪುಟ್ಟಮಲ್ಲೇಗೌಡರೇ ಹಿರಿಯರು. ಎರಡನೆಯವರು ಮಾದೇಗೌಡ ಮತ್ತು ಮೂರನೆಯವರು ದೊಡ್ಡಮಲ್ಲೇಗೌಡ. ಇವರಲ್ಲಿ ಪುಟ್ಟಮಲ್ಲೇಗೌಡ ಮತ್ತು ಮಾದೇಗೌಡ ಇಬ್ಬರೂ ‘ಗೊರವರ ಕುಣಿತ’ದ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದ ಹಿರಿಮೆಯುಳ್ಳವರು. ಮಲೆಮಹದೇಶ್ವರ, ಮಂಟೇಸ್ವಾಮಿಯಂಥ ಸಾಧುಸಂತರು ಬಂದು ನೆಲೆಸಿ ಈ ನೆಲವನ್ನು ಪವಿತ್ರವಾಗಿಸಿದ್ದಾರೆ. ಇಂತಹ ಪವಿತ್ರ ನೆಲದಲ್ಲಿ ‘ಗೊರವರ ಕುಣಿತ’ ಎಂಬ ವಿಶಿಷ್ಟ ಜಾನಪದ ಕಲೆ ದೇಶ, ವಿದೇಶದೆಲ್ಲೆಡೆ ಹೆಸರು ವಾಸಿಯಾಗುವಲ್ಲಿ ಪುಟ್ಟಮಲ್ಲೇಗೌಡರ ಪಾತ್ರ ಬಹುದೊಡ್ಡದು.
ಜಾನಪದ ಜಾತ್ರೆಯ ರೂವಾರಿ ಶ್ರೀನಿವಾಸ ಜಿ.ಕಪ್ಪಣ್ಣ ಅವರನ್ನು ಕಂಡರೆ ಪುಟ್ಟಮಲ್ಲೇಗೌಡರಿಗೆ ಎಲ್ಲಿಲ್ಲದ ಪ್ರೀತಿ, ವಿಶ್ವಾಸ. ಸಾಯುವ ಕೊನೆ ಘಳಿಗೆಯಲ್ಲಿಯೂ ಕಪ್ಪಣ್ಣ ಅವರನ್ನು ನೋಡಬೇಕೆಂದು ಗೌಡರು ಕನವರಿಸುತ್ತಿದ್ದರು.
ಪುಟ್ಟಮಲ್ಲೇಗೌಡರು ಗೊರವಪ್ಪನ ದೀಕ್ಷೆ ಪಡೆದು, ಹಲವಾರು ಗೊರವಪ್ಪಗಳಿಗೆ ದೀಕ್ಷೆಕೊಟ್ಟಿದ್ದಾರೆ. ಅಲ್ಲದೆ, ಗೊರವರ ಪದ ಹೇಳಿಕೊಟ್ಟಿದ್ದಾರೆ ಮತ್ತು ‘ಗೊರವರಕುಣಿತ’ ಕಲಿಸಿದ್ದಾರೆ. ಗೊರವರ ಕಲೆಯ ಪರಂಪರೆಯ ಪ್ರತೀಕವಾಗಿ ನೂರಾರು ಕಲಾವಿದರನ್ನು ಹುಟ್ಟುಹಾಕಿರುವ ಹಿರಿಮೆಗೂ ಪಾತ್ರರಾಗಿದ್ದರು.

ನನಸಾಗದ ಸ್ವಂತ ಸೂರಿನ ಕನಸು
ಸ್ವಂತ ಮನೆಯಲ್ಲಿ ಜೀವ ಬಿಡಬೇಕೆಂದು ಕನಸು ಹೊತ್ತಿದ್ದ ‘ಗೊರವರ ಕುಣಿತ’ದ ಗಾರುಡಿಗ ಪುಟ್ಟಮಲ್ಲೇಗೌಡ, ಆಶ್ರಯ ಮನೆಗಾಗಿ ಮುಖ್ಯಮಂತ್ರಿಯವರೆಗೂ ಸತತ 28 ವರ್ಷಗಳ ಕಾಲ ಮನವಿ ಮಾಡುತ್ತಾ ಬಂದಿದ್ದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಆಶ್ರಯ ಮನೆ ಕೊಡದಿದ್ದರೂ ಪರವಾಗಿಲ್ಲ, 50 ಮಂದಿ ‘ಗೊರವರ ಕುಣಿತ’ ಅಭ್ಯಾಸ ನಡೆಸಲು ಸಾಧ್ಯವಾಗುವಂತಹ ತಮಗೊಂದು ಸ್ಥಳ (ಸಂಘಕ್ಕೆ ನಿವೇಶನ) ನೀಡುವಂತೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವ ಸರಕಾರವೂ ಇವರ ಮನವಿಗೆ ಸ್ಪಂದಿಸಲೇ ಇಲ್ಲ. ಹೀಗಾಗಿ ಅವರ ಸ್ವಂತ ಸೂರಿನ ಕನಸು ನನಸಾಗಲೇ ಇಲ್ಲ.
ನಮ್ಮ ನಾಡಿನ ಹಿರಿಮೆಯನ್ನು ಎಲ್ಲೆಡೆ ಸಾರುವ ಸಾಂಸ್ಕೃತಿಕ ರಾಯಭಾರಿಗಳಾದ ಕಲಾವಿದರ ಬದುಕಿಗೆ ಸರಕಾರಗಳು ಒಂದಿಷ್ಟು ಆಸರೆಯಾಗಬೇಕು. ಕಲಾವಿದರ ಕನಸುಗಳಿಗೆ ಒತ್ತಾಸೆಯಾಗಿ ನಿಲ್ಲಬೇಕು. ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದ ಕಲಾವಿದನಿಗೆ ಎಷ್ಟೇ ಪ್ರಶಸ್ತಿಗಳು ಸಂದರೂ, ಜೀವನದ ಸಂಧ್ಯಾಕಾಲದಲ್ಲಿ ವಾಸಿಸಲು ಪುಟ್ಟದಾದ ಮನೆಯೊಂದ ನಿರ್ಮಿಸಿಕೊಳ್ಳಲು ಸರಕಾರಗಳು ನೆರವು ನೀಡದೇ ಹೋದದ್ದು ನೋವಿನ ಸಂಗತಿ. ಕಲಾವಿದರ ಆರೋಗ್ಯ ಹದಗೆಟ್ಟಾಗ ಚಿಕಿತ್ಸೆ ಪಡೆಯಲು ವಿಮೆಯಂತಹ ಯೋಜನೆಯ ಅಗತ್ಯವಿದೆ.


ಗೊರವರ ಅಜ್ಜನ ವೇಷಭೂಷಣ
ಮುಡುಕುತೊರೆ ಮಲ್ಲಿಕಾರ್ಜುನಸ್ವಾಮಿ ಮತ್ತು ಪಾರ್ವತಿ ದೇವಿಯ ಒಕ್ಕಲಿನವರಾದ ಪುಟ್ಟಮಲ್ಲೇಗೌಡರು, ಬಿಳಿ ಧೋತಿ, ಕಚ್ಚೆಪಂಚೆ, ಬಿಳಿ ಮುಂಗೈ ಇರುವ ಅಂಗಿ ಧರಿಸುತ್ತಿದ್ದರು. ಅಂಗಿಯ ಮೇಲೆ ಕರಿಕಂಬಳಿಯನ್ನು ಕತ್ತು ಬಳಸಿ ಇಳಿ ಬಿಟ್ಟು, ಸೊಂಟಕ್ಕೊಂದು ನಡುಪಟ್ಟಿ, ಕವಡೆಗಳಿಂದ ಅಲಂಕೃತಗೊಂಡ ಕೆಂಪು ಬಣ್ಣದ ಬನಾತು, ಕೊರಳಲ್ಲಿ ರುದ್ರಾಕ್ಷಿಮಾಲೆ, ತಲೆಗೆ ರುಮಾಲು, ರುಮಾಲಿನ ಮೇಲೆ ಹದಿನೈದು ಇಂಚು ಉದ್ದ ಮತ್ತು ಹನ್ನೆರಡು ಇಂಚು ಅಗಲದ ಕರಡಿ ಚರ್ಮದ ಕುಲಾವಿ, ನೊಸಲಲ್ಲಿ ಮೂರು ಪಟ್ಟಿಯ ವಿಭೂತಿ, ಎಡ ಬಗ್ಗುಲಲ್ಲಿ ಜೋಳಿಗೆ, ಎಡಗೈಯಲ್ಲಿ ಬಿದರಿನ ಪಿಳ್ಳಂಗೋವಿ. ಬಲಗೈಯಲ್ಲಿ ಮೇಕೆ ಚರ್ಮದಿಂದ ತಯಾರಿಸಿದ ಡಮರುಗ ಹಿಡಿದು ಗೊರವಯ್ಯನ ವೇಷಧರಿಸಿ ನರ್ತಿಸಿದರೆ ಆ ಸೊಬಗ ವರ್ಣಿಸಲು ಪದಗಳಿಗೆ ನಿಲುಕದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)