varthabharthi

ವೈವಿಧ್ಯ

ಮೊದಲ ಭಾರತೀಯ ಇಂಗ್ಲಿಷ್ ನಟ ಸಾಬು ದಸ್ತಗೀರ್

ಮೈಸೂರು ಮಾವುತನ ಮಗನ ಹಾಲಿವುಡ್ ಯಾತ್ರೆ!

ವಾರ್ತಾ ಭಾರತಿ : 24 Jun, 2019
ನಿಖಿಲ್ ಕೋಲ್ಪೆ

ಸಾಬು ದಸ್ತಗೀರ್

ಒಟ್ಟು 23 ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿರುವ ಸಾಬು ದಸ್ತಗೀರ್ ಅವರಿಗೆ ಒಂದೇ ಒಂದು ಭಾರತೀಯ ಚಿತ್ರದಲ್ಲಿ ನಟಿಸಲು ಆಗಲೇ ಇಲ್ಲ. 1957ರಲ್ಲಿ ಮೆಹಬೂಬ್ ಖಾನ್ ಅವರ ಪ್ರಖ್ಯಾತ ‘ಮದರ್ ಇಂಡಿಯಾ’ ಚಿತ್ರದಲ್ಲಿ ದಿಲೀಪ್ ಕುಮಾರ್ ಮಾಡಿರುವ ಪಾತ್ರದಲ್ಲಿ ನಟಿಸಲು ಸಾಬೂ ಅವರನ್ನು ಆಯ್ಕೆ ಮಾಡಲಾಗಿತ್ತಂತೆ. ಆದರೆ ಅವರಿಗೆ ವರ್ಕ್ ಪರ್ಮೀಟ್ ಸಿಗದ ಕಾರಣ ಭಾರತಕ್ಕೆ ಬಂದು ನಟಿಸಲಾಗಲಿಲ್ಲ! ಒಂದೊಮ್ಮೆ ಆದು ಸಾಧ್ಯವಾಗಿದ್ದರೆ ದಿಲೀಪ್ ಕುಮಾರ್ ಎಲ್ಲಿರುತ್ತಿದ್ದರೋ, ಸಾಬು ದಸ್ತಗೀರ್ ಎಲ್ಲಿರುತ್ತಿದ್ದರೋ ಹೇಳುವುದು ಕಷ್ಟ.

ಇಂಗ್ಲಿಷ್ ಚಿತ್ರವೊಂದರಲ್ಲಿ ನಟಿಸಿದ ಮೊತ್ತ ಮೊದಲ ಭಾರತೀಯ ವ್ಯಕ್ತಿ ಮೈಸೂರಿನ ಮಾವುತನೊಬ್ಬನ ಮಗ ಎಂಬುದು ತೀರಾ ಹೊಸ ವಿಷಯವೇನಲ್ಲ. ಆದರೆ, ಬಹುತೇಕರಿಗೆ ಇದು ಗೊತ್ತಿರದೇ ಇರುವುದು ಮತ್ತು ಯಾಕೋ ಜಾಲತಾಣಗಳಲ್ಲಿ ಕೂಡಾ ಈ ವಿಷಯ ಮೂಲೆಗೆ ಸರಿದಿರುವುದೋ, ಸರಿಸಲಾಗಿರುವುದೋ ನಡೆದಿರುವುದೇ ಇದನ್ನು ಬರೆಯಲು ಕಾರಣ.
ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿದ ಮೊದಲ ಭಾರತೀಯ ನಟ ಯಾರೆಂದು ಸರ್ಚ್ ಕೊಟ್ಟರೆ ಶಶಿ ಕಪೂರ್ ಅವರ ಹೆಸರು ಎಲ್ಲೆಲ್ಲೂ ಕಂಡುಬರುತ್ತದೆ. 1963ರಲ್ಲಿ ಇಸ್ಮಾಯೀಲ್ ಮರ್ಚೆಂಟ್ ಅವರ ‘ಮರ್ಚೆಂಟ್ ಐವರಿ ಪ್ರೊಡಕ್ಷನ್ಸ್’ನ ಚೊಚ್ಚಲ ಹಾಲಿವುಡ್ ಚಿತ್ರ ‘ಹೌಸ್ ಹೋಲ್ಡರ್’ನಲ್ಲಿ ಅವರು ನಟಿಸಿದ್ದರು. ಆದರೆ, ಇದು ಯಾವ ಕಾರಣಕ್ಕೂ ನಿಜವಲ್ಲ. ನಿಜವಾಗಿಯೂ ಆ ಶ್ರೇಯಸ್ಸಿಗೆ ಪಾತ್ರರಾಗಿರಬೇಕಾದವರು ಅದೇ ವರ್ಷ ಮೃತಪಟ್ಟಿದ್ದರೆಂದರೆ ಈ ವಿಷಯದ ಚರಿತ್ರೆ ಹಿಂದಕ್ಕೆ ಹೋಗಲೇಬೇಕು.
ಬ್ರಿಟಿಷರ ಅಧೀನದಲ್ಲಿದ್ದ ಮೈಸೂರು ಸಂಸ್ಥಾನದಲ್ಲಿ ಹುಟ್ಟಿದ ಮಾವುತನೊಬ್ಬನ ಮಗ ಸಾಬು (ಹುಟ್ಟು ಹೆಸರು ಸೆಲಾರ್ ಸಾಬು/ಕಾನೂನು ಪ್ರಕಾರ ಸಾಬು ದಸ್ತಗೀರ್) ತನ್ನ 13ನೇ ವಯಸ್ಸಿನಲ್ಲಿಯೇ ‘ಎಲಿಫೆಂಟ್ ಬಾಯ್’ ಎಂಬ ಪ್ರಸಿದ್ಧ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಇದು ಹಾಲಿವುಡ್ ಚಿತ್ರವಲ್ಲ; ಬದಲಾಗಿ ಬ್ರಿಟಿಷ್ ನಿರ್ಮಾಣದ ಚಿತ್ರ. ಪ್ರಖ್ಯಾತ ಇಂಗ್ಲಿಷ್ ಲೇಖಕ ರಡ್ಯಾರ್ಡ್ ಕಿಪ್ಲಿಂಗ್ ಅವರ 1894ರ ಅತ್ಯಂತ ಜನಪ್ರಿಯ ಪುಸ್ತಕ ‘ಜಂಗಲ್ ಬುಕ್’ನಲ್ಲಿ ಬರುವ ‘ತೂಮಾಯ್ ಆಫ್ ಎಲಿಫೆಂಟ್ಸ್’ ಕತೆ ಆಧರಿಸಿದ ಈ ಚಿತ್ರ 1937ರಲ್ಲಿ, ಅಂದರೆ ಶಶಿ ಕಪೂರ್ ಇಂಗ್ಲಿಷ್ ಚಿತ್ರರಂಗಕ್ಕೆ ಕಾಲಿಡುವುದಕ್ಕೆ ಕಾಲು ಶತಮಾನ ಮೊದಲೇ ಬಿಡುಗಡೆಯಾಗಿ ಭಾರೀ ಜನಪ್ರಿಯತೆ ಪಡೆದಿತ್ತು.
Elephant Boy ಬಹುತೇಕ ಮೈಸೂರು ಪ್ರಾಂತದಲ್ಲಿ ಮತ್ತು ಕೆಲದೃಶ್ಯಗಳು ಲಂಡನ್ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡ ಈ ಚಿತ್ರದ ಕತೆಯೂ ಸ್ವಾರಸ್ಯಕರವಾಗಿದೆ. ಮೂಲತಃ ಸಾಕ್ಷಚಿತ್ರಗಳನ್ನು ತಯಾರಿಸುತ್ತಿದ್ದ ರಾಬರ್ಟ್ ಜೆ. ಪ್ಲಾಹರ್ಟಿ ಅವರು ವನ್ಯಜೀವಿಗಳು, ಮೈಸೂರಿನ ಅರಣ್ಯ ಮತ್ತು ಪರಿಸರ, ಜನರು, ಆನೆಗಳು, ಖೆಡ್ಡಾ ಇತ್ಯಾದಿಗಳ ಅದ್ಭುತವೆನಿಸುವ ದೃಶ್ಯಾವಳಿಗಳನ್ನು ತೆಗೆದಿದ್ದರು. ಇವು ಕಿಪ್ಲಿಂಗ್ ಅವರ ಕತೆಗೆ ಸೂಕ್ತವಾಗಿ ಹೊಂದುತ್ತಿದ್ದವು. ವಾಸ್ತವವಾಗಿ ಇದರ ಕಥಾಭಾಗದ ಚಿತ್ರೀಕರಣವನ್ನು ನಿರ್ದೇಶಿಸಿದವರು ಪ್ರಸಿದ್ಧ ನಿರ್ದೇಶಕ ರೆಲ್ಟನ್ ಕೋರ್ಡಾ. ಇದರ ಸಂಕಲನ ಎಷ್ಟು ಸುಂದರವಾಗಿದೆಯೆಂದರೆ ವ್ಯತ್ಯಾಸವೇ ಗೊತ್ತಾಗುವುದಿಲ್ಲ. ಕತೆಯ ಕಾಲದ ಮೈಸೂರಿಗೇ ಹೋದಂತೆನಿಸುತ್ತದೆ. (ಚಿತ್ರ ನೋಡಬಯಸುವವರು ಯೂಟ್ಯೂಬ್‌ನಲ್ಲಿ ಎಂದು ಸರ್ಚ್ ಕೊಡಬಹುದು)
ಈ ಕತೆ ಮಾವುತನ ಮಗನೊಬ್ಬನ ಕನಸಿನ ಮತ್ತು ಸಂಘರ್ಷದ ಬಗ್ಗೆ ಇರುವುದರಿಂದ ಮತ್ತು ಆನೆಗಳ ಜೊತೆ ತೀರಾ ಹತ್ತಿರದ ಒಡನಾಟ ಇರಬೇಕಾದುದರಿಂದ ಯಾವುದೇ ಬೇರೆ ಮಕ್ಕಳು ಈ ಪಾತ್ರ ಮಾಡುವುದು ಸಾಧ್ಯವೇ ಇರಲಿಲ್ಲ ಎಂಬುದು ಚಿತ್ರ ನೋಡಿದಾಗ ಸ್ಪಷ್ಟವಾಗುತ್ತದೆ. ಭಾರೀ ಗಾತ್ರದ ಆನೆಯ ಜೀವದ ಗೆಳೆಯನೆಂಬಂತೆ (ಬಹುಶಃ ನಿಜಕೂಡ) ಅದರ ಮೇಲೆ ಲೀಲಾಜಾಲವಾಗಿ ಹತ್ತಿಳಿದು, ಸೊಂಡಿಲಲ್ಲಿ ತೂಗಾಡಿ ಬೆರಗಾಗಿಸುವ ಸಾಬು ತುಂಬಾ ಆಪ್ತವಾಗುತ್ತಾರೆ. ಅರಳು ಹುರಿದಂತೆ ಮಾತನಾಡುವ ಮುದ್ದಾದ-ಆನೆಗಳ ಜೊತೆಗೇ ಬೆಳೆದ ದಷ್ಟಪುಷ್ಪ ಬಾಲಕ ಸಾಬುವಿಗೆಂದೇ ಕಿಪ್ಲಿಂಗ್ ಈ ಕತೆಯನ್ನು ಬರೆದಂತಿತ್ತು. ಚಿತ್ರಕ್ಕೆ ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯೂ ಬಂದುದರಿಂದ ಸಾಬು ಮತ್ತೆ ಹಿಂದಿರುಗಿ ನೋಡಲಿಲ್ಲ.
ಜನವರಿ 27, 1924ರಲ್ಲಿ ಮೈಸೂರಿನ ಕರಪುರ ಎಂಬಲ್ಲಿ ಹುಟ್ಟಿದ ಸಾಬು, ಕೇವಲ 39 ವರ್ಷಗಳ ಕಾಲ ಮಾತ್ರ ಬದುಕಿ, ಡಿಸೆಂಬರ್ 2, 1963ರಲ್ಲಿ ಯುಎಸ್‌ಎಯ ಲಾಸ್‌ಏಂಜಲೀಸ್‌ನಲ್ಲಿ ಏಕಾಏಕಿಯಾಗಿ ನಿಧನರಾಗುವ ತನಕ ಹಲವಾರು ಬ್ರಿಟಿಷ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಪ್ರಖ್ಯಾತರಾದರು.
‘ಎಲಿಫೆಂಟ್ ಬಾಯ್’ ಯಶಸ್ಸಿನಿಂದ ಪ್ರೇರಿತರಾದ ನಿರ್ಮಾಪಕ ಅಲೆಕ್ಸಾಂಡರ್ ಕೋರ್ಡಾ ಸಾಬುವಿಗಾಗಿಯೇ ವಿಶೇಷವಾಗಿ ‘ದಿ ಡ್ರಮ್’ ಎಂಬ ಚಿತ್ರಕ್ಕೆ ಕತೆ ಬರೆಸಿದರು. 1938ರಲ್ಲಿ ಬಿಡುಗಡೆಯಾದ ಈ ಚಿತ್ರ ಸಾಕಷ್ಟು ಯಶಸ್ವಿಯಾಗಿ ನಾಯಕ ಪ್ರಿನ್ಸ್ ಅಝೀಮ್ ಪಾತ್ರ ಸಾಬು ಅವರಿಗೆ ಇನ್ನಷ್ಟು ಹೆಸರು ತಂದುಕೊಟ್ಟಿತು. ಆದರೆ ಭಾರತ, ಕಾಡು ಮತ್ತು ಸಾಹಸವನ್ನಾಧರಿಸಿದ ಚಿತ್ರಗಳಿಗೇ ಸಾಬು ಸೀಮಿತವಾಗಬೇಕಾಯಿತು. ಹೆಚ್ಚಿನ ಚಿತ್ರಗಳಲ್ಲಿ ಅವರು ಮುಸ್ಲಿಂ ಪಾತ್ರಗಳನ್ನೇ ಮಾಡಬೇಕಾಯಿತು.
ಇಷ್ಟಿದ್ದರೂ, ಅವರಿಗೆ ಮೊದಲಿಗೆ ಸಿಕ್ಕಿದ ಪಾತ್ರಗಳು ವಿಶ್ವದಾದ್ಯಂತ ಪ್ರಸಿದ್ಧವಾದ ಕಥಾಪಾತ್ರಗಳು. 1940ರ ‘ತೀಫ್ ಆಫ್ ಬಗ್ದಾದ್’ನಲ್ಲಿ ಅಬೂ, 1942ರಲ್ಲಿ ಕಿಪ್ಲಿಂಗ್ ಅವರ ‘ಜಂಗಲ್ ಬುಕ್’ನ ಮೋಗ್ಲಿ ಪಾತ್ರಗಳು ತೀರಾ ಜನಪ್ರಿಯವಾದವು. ಅದರಲ್ಲಿ ‘ಮೋಗ್ಲಿ’ ಈಗಲೂ ಬೇರೆಬೇರೆ ಅವತಾರಗಳನ್ನು ಎತ್ತುತ್ತಲೇ ಇದ್ದಾನೆ. ಅದೇ ವರ್ಷ ವಿಶ್ವಜನಪ್ರಿಯ ’ಅರೇಬಿಯನ್ ನೈಟ್ಸ್’ ಬಿಡುಗಡೆಯಾಯಿತು. ಅದರಲ್ಲಿ ಅವರದ್ದು ಅಲಿ ಬಿನ್ ಅಲಿ ಪಾತ್ರ. 1943ರಲ್ಲಿ ‘ವೈಟ್ ಸ್ಯಾವೇಜ್’ ಚಿತ್ರದಲ್ಲಿ ಒರಾಂಗೋ ಪಾತ್ರವನ್ನು ಅವರು ವಹಿಸಿದರು. ಇವುಗಳಲ್ಲಿ ಕೊನೆಯ ಮೂರು ಹಾಲಿವುಡ್ ಚಿತ್ರಗಳು.


1944ರಲ್ಲಿ ಯುಎಸ್‌ಎಯಲ್ಲಿಯೇ ನೆಲೆಸಬೇಕಾಗಿ ಬಂದಿದ್ದ ಸಾಬು ಅಲ್ಲಿನ ಪೌರತ್ವ ಪಡೆದರು. ಅವರು ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಎರಡನೇ ಮಹಾಯುದ್ಧ ಬಂತು. ಅವರು ಅಲ್ಲಿನ ವಾಯುಪಡೆ ಸೇರಿದರು. ಅವರು ‘ಬಿ-24 ಲಿಬರೇಟರ್’ ಬಾಂಬರ್ ವಿಮಾನದಲ್ಲಿ ಟೈಲ್ ಗನ್ನರ್ ಆಗಿ ಹಲವು ಬಾಂಬಿಂಗ್ ಹಾರಾಟಗಳಲ್ಲಿ ಭಾಗಿಯಾದರು. ‘307th ಬಾಂಬ್ ಗ್ರೂಪ್’ಗೆ ಸೇರಿದ ‘307th  ಬೊಂಬಾರ್ಡ್ ಮೆಂಟ್ ಸ್ಕ್ವಾಡ್ರನ್’ ಸದಸ್ಯರಾಗಿದ್ದರು. ಅವರ ಸಾಹಸಕ್ಕಾಗಿ ‘ಡಿಸ್ಟಿಂಗ್ವಿಷ್ಡ್ ಫ್ಲೈಯಿಂಗ್ ಕ್ರಾಸ್’ ಪಡೆದರು. ಹೀಗೆ ಚಿತ್ರಗಳಲ್ಲಿ ಮಾತ್ರವಲ್ಲ, ನಿಜಜೀವನದಲ್ಲೂ ಸಾಹಸ ಮೆರೆದರು.
ಯುದ್ಧದ ಬಳಿಕ ಆರ್ಥಿಕ ಹಿಂಜರಿಕೆಯ ಕಾರಣದಿಂದ ಅವರಿಗೆ ಹಾಲಿವುಡ್ ಚಿತ್ರಗಳು ಕಡಿಮೆಯಾದವು. ನಡುವೆ ಅವು ಅನೇಕ ಐರೋಪ್ಯ ಚಿತ್ರಗಳಲ್ಲಿ ನಟಿಸಿದರೂ ಇಂಗ್ಲಿಷ್ ಮತ್ತು ಹಾಲಿವುಡ್ ನೀಡಿದ ಪಾತ್ರಗಳಿಗೆ ಸಮನಾದ ಪಾತ್ರಗಳು ಸಿಗಲಿಲ್ಲ. ಅವು ಹಾಲಿವುಡ್ ಶ್ರೇಣಿಯಲ್ಲಿ ಯಶಸ್ವಿಯಾಗಲಿಲ್ಲ. ನಂತರದ ಚಿತ್ರಗಳಲ್ಲಿ ಭಾರತೀಯರ ಮಟ್ಟಿಗೆ ಗಮನಾರ್ಹವಾದದ್ದು, ಜಿಮ್ ಕಾರ್ಬೆಟ್ ಅವರ ಪ್ರಸಿದ್ಧ ಕಥನ ‘ಮ್ಯಾನ್ ಈಟರ್ ಆಫ್ ಕುಮಾವ್’ ಆಧರಿಸಿದ 1948ರ ಚಿತ್ರ. ಅದರಲ್ಲಿ ಅವರು ನಾರಾಯಣನ ಪಾತ್ರ ವಹಿಸಿದ್ದರು.
ಅದೇ ವರ್ಷ ಅವರು ಅಷ್ಟೇನೂ ಪ್ರಸಿದ್ಧವಲ್ಲದ ನಟಿ ಮರ್ಲಿನ್ ಕೂಪರ್ ಎಂಬಾಕೆಯನ್ನು ಮದುವೆಯಾದರು. ಅವರ ಮರಣದ ತಕ್ಷಣವೇ ಬಿಡುಗಡೆಯಾದ ‘ಎ ಟೈಗರ್ ವಾಕ್ಸ್’ ಚಿತ್ರದ ರಾಮ್ ಸಿಂಗ್ ಪಾತ್ರವೇ ಅವರ ಕೊನೆಯ ಪಾತ್ರ. ಅವರ ಸಾವು ದಿಢೀರನೇ ಬಂತು. ಅವರ ಪತ್ನಿ ಹೇಳಿರುವಂತೆ ಅವರು ಎರಡು ದಿನಗಳ ಮೊದಲಷ್ಟೇ ವೈದ್ಯಕೀಯ ಪರೀಕ್ಷೆಗೆ ಹೋದಾಗ ವೈದ್ಯರು ಹೇಳಿದ್ದರಂತೆ- ಎಲ್ಲರೂ ನಿಮ್ಮಷ್ಟೇ ಆರೋಗ್ಯವಾಗಿದ್ದರೆ ನಾವು ಕೆಲಸವಿಲ್ಲದೆ ಕೂರಬೇಕಾಗುತ್ತಿತ್ತು!
ಒಟ್ಟು 23 ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿರುವ ಸಾಬು ದಸ್ತಗೀರ್ ಅವರಿಗೆ ಒಂದೇ ಒಂದು ಭಾರತೀಯ ಚಿತ್ರದಲ್ಲಿ ನಟಿಸಲು ಆಗಲೇ ಇಲ್ಲ. 1957ರಲ್ಲಿ ಮೆಹಬೂಬ್ ಖಾನ್ ಅವರ ಪ್ರಖ್ಯಾತ ‘ಮದರ್ ಇಂಡಿಯಾ’ ಚಿತ್ರದಲ್ಲಿ ದಿಲೀಪ್ ಕುಮಾರ್ ಮಾಡಿರುವ ಪಾತ್ರದಲ್ಲಿ ನಟಿಸಲು ಸಾಬೂ ಅವರನ್ನು ಆಯ್ಕೆ ಮಾಡಲಾಗಿತ್ತಂತೆ. ಆದರೆ ಅವರಿಗೆ ವರ್ಕ್ ಪರ್ಮೀಟ್ ಸಿಗದ ಕಾರಣ ಭಾರತಕ್ಕೆ ಬಂದು ನಟಿಸಲಾಗಲಿಲ್ಲ! ಒಂದೊಮ್ಮೆ ಆದು ಸಾಧ್ಯವಾಗಿದ್ದರೆ ದಿಲೀಪ್ ಕುಮಾರ್ ಎಲ್ಲಿರುತ್ತಿದ್ದರೋ, ಸಾಬು ದಸ್ತಗೀರ್ ಎಲ್ಲಿರುತ್ತಿದ್ದರೋ ಹೇಳುವುದು ಕಷ್ಟ.
ಆ ಕಾಲದಲ್ಲಿಯೇ ಮಾವುತನ ಮಗನಾಗಿ ಹುಟ್ಟಿ, ಅಷ್ಟು ಚಿಕ್ಕ ಪ್ರಾಯದಲ್ಲಿ ಇಂಗ್ಲಿಷ್ ಕಲಿತು, ತನ್ನ ಪ್ರತಿಭೆಯಿಂದಲೇ ಅದ್ಭುತ ಸಾಧನೆ ಮಾಡಿದ ಅವರ ಹೆಸರನ್ನು ಮೂಲೆಗುಂಪು ಮಾಡಿರುವುದಕ್ಕೆ ಕಾರಣವೇನಿರಬಹುದು? ಅವರ ಬಗ್ಗೆ ಗೊತ್ತಿಲ್ಲದೆಯೇ? ಅವರು ನಂತರ ವಿದೇಶಿ ಪ್ರಜೆಯಾದದ್ದಕ್ಕಾಗಿಯೇ... ಅಥವಾ ಬೇರೇನಾದರೂ ಕಾರಣವಿರಬಹುದೇ? ಓದುಗರು ಯೋಚಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)