varthabharthi

ಬೆಂಗಳೂರು

ಐಎಂಎ ವಂಚನೆ ಪ್ರಕರಣ

ಮನ್ಸೂರ್ ಖಾನ್ ಜೊತೆ ಯಾವುದೇ ಸಂಬಂಧವಿಲ್ಲ: ಡಾ.ಕೆ.ರಹ್ಮಾನ್‌ ಖಾನ್

ವಾರ್ತಾ ಭಾರತಿ : 24 Jun, 2019

ಬೆಂಗಳೂರು, ಜೂ.24: ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮುಹಮ್ಮದ್ ಮನ್ಸೂರ್ ಖಾನ್ ಯಾವ ಕಾರಣಕ್ಕಾಗಿ ನನ್ನ ಹೆಸರನ್ನು ಉಲ್ಲೇಖಿಸಿದ್ದಾನೆ ಅನ್ನೋದು ಗೊತ್ತಿಲ್ಲ. ಆತನ ಜೊತೆ ನನಗೆ ವೈಯಕ್ತಿಕವಾಗಿ ಅಥವಾ ವ್ಯವಹಾರಿಕವಾಗಿ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಡಾ.ಕೆ.ರಹ್ಮಾನ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಐಎಂಎ ಸಂಸ್ಥೆಯ ಪತನಕ್ಕೆ ರಹ್ಮಾನ್ ಖಾನ್ ಸೇರಿದಂತೆ ಇನ್ನಿತರ ವ್ಯಕ್ತಿಗಳೇ ಕಾರಣ ಎಂದು ಆರೋಪಿಸಿ ರವಿವಾರ ಮನ್ಸೂರ್ ಖಾನ್ ಬಿಡುಗಡೆ ಮಾಡಿದ್ದ ವಿಡಿಯೋ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಐಎಂಎ ಕಂಪೆನಿಯ ವ್ಯವಹಾರ ಸರಿಯಿಲ್ಲ ಎಂದು ನಾವು ಜನರಿಗೆ ಹೇಳುತ್ತಿದ್ದೆವು. ಅದಕ್ಕಾಗಿ ಆತ ನನ್ನ ಹೆಸರು ಬಳಸಿರಬಹುದು. ಲಂಚ ಕೊಟ್ಟು ಐಎಂಎ ಸಂಸ್ಥೆಯನ್ನು ಕಟ್ಟುವಂತೆ ಆತನಿಗೆ ಹೇಳಿದವರು ಯಾರು? ಮನ್ಸೂರ್ ಭಾರತಕ್ಕೆ ಬರಲಿ, ಪೊಲೀಸರು ಆತನಿಗೆ ರಕ್ಷಣೆ ನೀಡುತ್ತಾರೆ ಎಂದು ಅವರು ಹೇಳಿದರು.

ಎಸ್‌ಐಟಿಯವರು ಈ ಪ್ರಕರಣದ ಕುರಿತು ನನಗೆ ವಿಚಾರಣೆಗೆ ಕರೆದರೆ ಹೋಗುತ್ತೇನೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಈ ಪ್ರಕರಣವನ್ನು ಯಾವುದೋ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಬೇಡ, ಆತನಿಂದ ಎಲ್ಲರಿಗೂ ವಂಚನೆಯಾಗಿರುತ್ತದೆ ಎಂದು ಅವರು ಹೇಳಿದರು.

ನಾನು ಆರಂಭದಿಂದಲೂ ಆತನ ಸಂಸ್ಥೆಯ ವಿರುದ್ಧವಾಗಿದ್ದೆ. ನಮ್ಮ ಸಮಾಜದ ಒಂದು ಕಾರ್ಯಕ್ರಮ ಬಿಟ್ಟರೆ ಬೇರೆ ಎಲ್ಲೂ ಆತನನ್ನು ನಾನು ಭೇಟಿಯಾಗಿಲ್ಲ. ಮಾಜಿ ಸಚಿವ ರೋಷನ್ ಬೇಗ್, ಒಮ್ಮೆ ಆತನನ್ನು ಪರಿಚಯಿಸಲು ನನ್ನ ಬಳಿ ಕರೆ ತಂದಿದ್ದರು ಎಂದು ಅವರು ಹೇಳಿದರು.

ರಿಯಲಯ್ಸ್ ನಂತಹ ದೊಡ್ಡ ಸಂಸ್ಥೆಗಳೇ ಇವತ್ತು ತಮ್ಮ ಗ್ರಾಹಕರಿಗೆ ಲಾಭ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಈತ ಎಲ್ಲಿಂದ ಅಷ್ಟೊಂದು ಪ್ರಮಾಣದಲ್ಲಿ ಲಾಭ ನೀಡಲು ಸಾಧ್ಯ ಎಂದು ನನ್ನ ಆಪ್ತರ ಬಳಿ ಹಲವಾರು ಬಾರಿ ಚರ್ಚೆ ಮಾಡಿದ್ದೇನೆ. ಬ್ಯಾಂಕುಗಳಿಂದಲೇ ಶೇ.10ರಷ್ಟು ಬಡ್ಡಿ ಕೊಡಲು ಸಾಧ್ಯವಿಲ್ಲದಿರುವಾಗ, ಈತ ಹೇಗೆ ಶೇ.20, 30ರಷ್ಟು ಲಾಭ ಕೊಡಲು ಸಾಧ್ಯ ಎಂದು ಅವರು ಹೇಳಿದರು.

ಸರಕಾರ, ಆದಾಯ ತೆರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರಿಗೆ ಈತ ಜನಸಾಮಾನ್ಯರನ್ನು ಮೋಸ ಮಾಡುತ್ತಿದ್ದಾನೆ ಎಂದು ಗೊತ್ತಿದ್ದರೂ ಯಾವ ಕಾರಣಕ್ಕೆ ಕಣ್ಣುಮುಚ್ಚಿ ಕುಳಿತುಕೊಂಡಿದ್ದರೋ ಗೊತ್ತಾಗುತ್ತಿಲ್ಲ. ವಿಡಿಯೋದಲ್ಲಿ 12 ಸಾವಿರ ಕೋಟಿ ರೂ.ಗಳನ್ನು ಹೂಡಿಕೆದಾರರಿಗೆ ಲಾಭಾಂಶ ನೀಡಿರುವುದಾಗಿ ಹೇಳಿದ್ದಾನೆ. ಅದಕ್ಕೆ ತೆರಿಗೆ ಪಾವತಿಸಿದ್ದಾನಾ? ಈಗ ತನ್ನನ್ನು ಸತ್ಯವಂತ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ರಹ್ಮಾನ್ ಖಾನ್ ಆಕ್ರೋಶ ವ್ಯಕ್ತಪಡಿಸಿದರು.

ಐಎಂಎ ಸಂಸ್ಥೆಯನ್ನು ಬೆಳೆಸಲು, ಜನಸಾಮಾನ್ಯರ ವಿಶ್ವಾಸವನ್ನು ಗಳಿಸಲು ಮುಖ್ಯಮಂತ್ರಿ ಸೇರಿದಂತೆ ಅನೇಕ ಗಣ್ಯರನ್ನು ತನ್ನ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದ್ದ. ಅವನೊಬ್ಬ ಕಳ್ಳ, ವಂಚಕ. ಆತನ ಮಾತುಗಳಿಗೆ ಸಾರ್ವಜನಿಕರಾಗಲಿ, ಮಾಧ್ಯಮದವರಾಗಲಿ ಸೊಪ್ಪು ಹಾಕಬಾರದು ಎಂದು ರಹ್ಮಾನ್ ಖಾನ್ ಮನವಿ ಮಾಡಿದರು.

ಮೈತ್ರಿ ಬಗ್ಗೆ ಅಪಸ್ಪರ ಅಪ್ರಸ್ತುತ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರಿಂದ ಸೋಲಾಗಿದೆ ಎಂದು ಹೇಳುವುದು ಈಗ ಅಪ್ರಸ್ತುತ. ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ನಡುವೆ ಹೊಂದಾಣಿಕೆ ಕೊರತೆಯಿಂದ ನಮ್ಮ ಅಭ್ಯರ್ಥಿಗಳಿಗೆ ಸೋಲಾಗಿರಬಹುದು ಎಂದು ಅವರು ಹೇಳಿದರು.

1967ರಲ್ಲಿ ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿ ಸೋತಿತ್ತು. ಆನಂತರ ಮತ್ತೆ ಗೆದ್ದು ಬಂದಿದೆ. ನರೇಂದ್ರಮೋದಿಯಿಂದ ಕಾಂಗ್ರೆಸ್ ಮುಗಿಸಲು ಸಾಧ್ಯವಿಲ್ಲ. ದೇಶದಲ್ಲಿ ಜನರ ಪಾಲಿಗೆ ಪರ್ಯಾಯ ಶಕ್ತಿ ಕಾಂಗ್ರೆಸ್. ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ರಹ್ಮಾನ್ ಖಾನ್ ತಿಳಿಸಿದರು.

ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಸಮನ್ವಯತೆ ಕೊರತೆ ಎದ್ದು ಕಾಣಿಸುತ್ತಿದೆ. ಸಮ್ಮಿಶ್ರ ಸರಕಾರ ಹೇಗೆ ನಡೆಸಬೇಕು ಎಂಬುದನ್ನು ಯುಪಿಎ ಅಧಿಕಾರಾವಧಿಯನ್ನು ನೋಡಿ ಕಲಿಯಲಿ. ಮನಮೋಹನ್ ಸಿಂಗ್ ನೇತೃತ್ವದಲ್ಲಿ ಹತ್ತು ವರ್ಷ ಆಡಳಿತ ನಡೆಸಿದೆವು. ಅದನ್ನು ನೋಡಿ ಮುಖ್ಯಮಂತ್ರಿ ಹಾಗೂ ಸಿದ್ದರಾಮಯ್ಯ ಸರಕಾರದಲ್ಲಿ ಸಮನ್ವಯತೆ ಸಾಧಿಸಲಿ ಎಂದು ಅವರು ಸಲಹೆ ನೀಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)