varthabharthi

ನಿಮ್ಮ ಅಂಕಣ

ತೋರಿಕೆಯ ಮಾತುಗಳು

ವಾರ್ತಾ ಭಾರತಿ : 24 Jun, 2019
-ಕೆ.ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,

ಇತ್ತೀಚಿನ ದಿನಗಳಲ್ಲಿ ರಾಜ್ಯದ ಬರ ಪರಿಸ್ಥಿತಿ ನಮ್ಮ ಹೆಚ್ಚಿನ ರಾಜಕಾರಣಿಗಳಿಗೆ ತೋರಿಕೆಯ ಮಾತಷ್ಟೇ ಆಗಿದೆ. ಆದರೆ ಯಾವುದೇ ಒಬ್ಬ ರಾಜಕಾರಣಿಯೂ ಸಹ ಬರ ಬಂದಿದೆ ಎಂದು ತಮ್ಮ ಕುಟುಂಬದ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸುತ್ತಿಲ್ಲ. ಇವರ ಮನೆಯ ಕಾರ್ಯಕ್ರಮಗಳು ಅದ್ದೂರಿಯಾಗಿ ಪಂಚತಾರ ಹೋಟೆಲ್‌ಗಳಲ್ಲಿ ಮತ್ತು ಅರಮನೆ ಮೈದಾನಗಳಲ್ಲಿ ಕೋಟಿ-ಕೋಟಿ ರೂಪಾಯಿಗಳ ಲೆಕ್ಕದಲ್ಲಿ ನಡೆಯುತ್ತಿವೆ. ನಮ್ಮ ಯಾವ ನಾಯಕರೂ ಬರಗಾಲ ಬಂದಿದೆ ಎಂದು ಸರಳ ಜೀವನವನ್ನೂ ನಡೆಸುವುದಿಲ್ಲ. ತಮ್ಮ ಸ್ವಂತದ್ದಾದ ಬಿಡಿಗಾಸನ್ನೂ ಯಾರಿಗೂ ನೀಡುವುದಿಲ್ಲ. ಒಂದು ಮುಷ್ಟಿ ಹುಲ್ಲನ್ನೂ ದನಗಳಿಗೆ ಕೊಡುವುದಿಲ್ಲ. ತಾವು ಮಾತ್ರ ಬಿಸ್ಲ್ಲೆರಿ ನೀರನ್ನು ಕುಡಿಯುತ್ತಾ, ಬರದ ಚರ್ಚೆಯ ಸಭೆಗಳಲ್ಲಿ ದುಬಾರಿ ಹೋಟೆಲ್‌ಗಳ ಊಟವನ್ನೇ ಮಾಡುತ್ತಾರೆ. ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಬಿಸಿಲಿನ ಬೇಗೆಯಲ್ಲಿ ಬೇಯುವ ಜನರ ಬಗ್ಗೆ ಮಾತನಾಡುತ್ತಾರೆ.
ಇನ್ನು ಸರಕಾರಿ ಶಾಲೆಗಳ ಬಗ್ಗೆ ಮಾತಾಡುವುದೆಂದರೆ ಎಲ್ಲ ನಾಯಕರಿಗೂ ಪ್ರೀತಿ. ಆದರೆ ತಮ್ಮ ಮನೆಯ ಮಕ್ಕಳನ್ನು ಮಾತ್ರ ಅಲ್ಲಿಗೆ ಕಳುಹಿಸುವುದಿಲ್ಲ. ಶಾಲಾ ವಾರ್ಷಿಕೋತ್ಸವ ಸಮಾರಂಭ ಅಥವಾ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಕ್ಕೆ ಕರೆದಾಗ ಮಾತ್ರ ನಮ್ಮ ನಾಯಕರು ಸರಕಾರಿ ಶಾಲೆಗೆ ಹೋಗಿ ಭಾಷಣ ಬಿಗಿಯುತ್ತಾರೆ. ಬೇರೆ ವೇಳೆಯಲ್ಲಿ ಒಮ್ಮೆಯೂ ಇಣುಕಿ ನೋಡುವುದಿಲ್ಲ. ಕುಡಿಯುವ ನೀರಿಲ್ಲದ, ಶೌಚಾಲಯವಿಲ್ಲದ, ಆಟದ ಮೈದಾನವಿಲ್ಲದ, ಗ್ರಂಥಾಲಯವಿಲ್ಲದ, ಸುವ್ಯವಸ್ಥಿತ ಕೊಠಡಿಗಳಿಲ್ಲದ, ಕುಳಿತುಕೊಳ್ಳಲು ಬೆಂಚ್‌ಗಳಿಲ್ಲದ, ಗಾಳಿ-ಬೆಳಕು ಇಲ್ಲದ ಪರಿಸ್ಥಿತಿ ಇವರಿಗೆ ಅರಿವೇ ಇರುವುದಿಲ್ಲ. ಇನ್ನು ಸರಕಾರಿ ಆಸ್ಪತ್ರೆಗಳ ಬಗ್ಗೆಯೂ ಇವರು ಮಾತನಾಡುತ್ತಾರೆ. ಮೂಳೆ ಮುರಿದರೆ, ತಲೆನೋವು ಬಂದರೆ, ಗಂಟಲು ಬೇನೆ ಬಂದರೆ ಸಹ ಇವರು ಮತ್ತು ಇವರ ಮನೆಮಂದಿ ಐಶಾರಾಮಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇನ್ನು ಮಾರಣಾಂತಿಕ ರೋಗಗಳು ಬಂದರೆ, ನಮ್ಮ ದೇಶದ ಆಸ್ಪತ್ರೆಯೂ ಇವರಿಗೆ ಬೇಕಿಲ್ಲ, ನಮ್ಮ ದೇಶದ ವೈದ್ಯರ ಮೇಲೆಯೂ ನಂಬಿಕೆ ಇಲ್ಲ, ಸರಕಾರದ ಲೆಕ್ಕದಲ್ಲಿ ವಿದೇಶಕ್ಕೆ ಹಾರಿ ಬಿಡುತ್ತಾರೆ. ಜೀವಮಾನದಲ್ಲಿ ಒಮ್ಮೆಯೂ ಸಹ ಸರಕಾರಿ ಆಸ್ಪತ್ರೆಯ ಚಿಕಿತ್ಸೆಯನ್ನು ಪಡೆದಿರುವುದಿಲ್ಲ, ಅಲ್ಲಿನ ಪರಿಸ್ಥಿತಿಯ ಅರಿವೂ ಇರುವುದಿಲ್ಲ. ಆದರೆ, ಸರಕಾರಿ ಆಸ್ಪತ್ರೆಗಳ ಪರಿಸ್ಥಿತಿಯ ಬಗ್ಗೆ ಭಾಷಣಗಳಲ್ಲಿ ಮಾತ್ರ ಸಾಕಷ್ಟು ಕೊರೆಯುತ್ತಾರೆ. ಸರಕಾರದ ವ್ಯವಸ್ಥೆಯಲ್ಲಿ ಸರಕಾರದ ಭಾಗವಾಗಿರುವವರಿಗೇ ನಂಬಿಕೆ ಇಲ್ಲ, ಇನ್ನು ಜನರಿಗೆ ಎಲ್ಲಿ ನಂಬಿಕೆ ಬರಬೇಕು? ರಾಜಕೀಯ ನಾಯಕರೇ, ಎಲ್ಲಾ ಸಂದರ್ಭದಲ್ಲೂ ತೋರಿಕೆಯ ಮಾತುಗಳನ್ನು ಆಡುವುದನ್ನು ಬಿಟ್ಟು ನಿಮ್ಮ ಬದುಕನ್ನು ಸರಳಗೊಳಿಸಿಕೊಂಡು ಜನ ಸಾಮಾನ್ಯರಂತೆ ಬದುಕುವುದನ್ನು ಕಲಿಯದಿದ್ದರೆ, ನಿಮ್ಮ ಮಾತುಗಳೆಲ್ಲವೂ ನಾಟಕದ ಮಾತಾಗಿರುತ್ತದೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)