varthabharthiಸಂಪಾದಕೀಯ

ಹಿಂದುತ್ವದ ಪೊಳ್ಳನ್ನು ಬಹಿರಂಗಪಡಿಸಿದ ಸದಾನಂದ ಗೌಡರ ‘ಗೌಡ’ತನ

ವಾರ್ತಾ ಭಾರತಿ : 25 Jun, 2019

‘‘ನನ್ನ ಹೆಸರಿನ ಮುಂದಿರುವ ‘ಗೌಡ’ ಜಾತಿಯ ಕಾರಣದಿಂದಾಗಿಯೇ ನನಗೆ ಮುಖ್ಯಮಂತ್ರಿ ಹುದ್ದೆ, ಕೇಂದ್ರದಲ್ಲಿ ಮಹತ್ವದ ಸಚಿವ ಸ್ಥಾನಗಳು ದೊರಕುವುದಕ್ಕೆ ಕಾರಣವಾಯಿತು. ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ’’ ಎಂದು ಮಾಜಿಮುಖ್ಯಮಂತ್ರಿ, ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಹೇಳಿದ್ದಾರೆ. ಈ ಹಿಂದೆಯೂ ಇದೇ ಹೇಳಿಕೆಯನ್ನು ಅವರು ಸಾರ್ವಜನಿಕವಾಗಿ ನೀಡಿದ್ದು, ಅದನ್ನು ಈಗ ಪುನರುಚ್ಚರಿಸಿದ್ದಾರೆ. ಅಂದರೆ ಅವರು ತಾನು ಹಿಂದೂ ಎನ್ನುವುದಕ್ಕಿಂತಲೂ ಅವರಿಗೆ ಸ್ಥಾನ ಮತ್ತು ಮಾನವನ್ನು ತಂದುಕೊಟ್ಟ ‘ಗೌಡ’ನಾಗಿ ಗುರುತಿಸುವುದಕ್ಕೆ ಹೆಮ್ಮೆಪಟ್ಟಿದ್ದಾರೆ. ಅದು ಸಹಜವೂ ಹೌದು. ಸಾರ್ವಜನಿಕವಾಗಿ ‘ಹಿಂದುತ್ವ’ದ ಹೆಸರಲ್ಲಿ ಬಿಜೆಪಿ ಮತಯಾಚಿಸುತ್ತಾ ಬಂದಿದೆದೆೆಯಾದರೂ, ಅಧಿಕಾರ ಹಂಚುವ ಸಂದರ್ಭದಲ್ಲಿ ಜಾತಿಯೇ ಪ್ರಮುಖವಾಗುತ್ತದೆ ಎನ್ನುವುದನ್ನು ನಾವು ಕೇಂದ್ರ ಸರಕಾರದಲ್ಲಿ ಉನ್ನತ ಸಚಿವ ಸ್ಥಾನಗಳನ್ನು ಪಡೆದವರ ಜಾತಿಯನ್ನು ಅಧ್ಯಯನ ಮಾಡಿದರೆ ಗೊತ್ತಾಗಿ ಬಿಡುತ್ತದೆ. ಸಂಖ್ಯೆಯಲ್ಲಿ ಅತಿ ಕಡಿಮೆಯಿರುವ ಬ್ರಾಹ್ಮಣರು ಅತ್ಯಧಿಕ ಸ್ಥಾನಗಳನ್ನು ಯಾಕೆ ತಮ್ಮದಾಗಿಸಿಕೊಂಡಿದ್ದಾರೆ ಎನ್ನುವುದಕ್ಕೆ ಉತ್ತರ ಸದಾನಂದ ‘ಗೌಡ’ರ ಮಾತಿನಲ್ಲಿದೆ. ಸಾರ್ವಜನಿಕವಾಗಿ ಹಿಂದೂ ಎಂದು ಹೇಳಿಕೊಳ್ಳುತ್ತಲೇ, ಬಿಜೆಪಿಯೊಳಗೆ ತನ್ನ ಲಿಂಗಾಯತ ಸಮುದಾಯದ ಹೆಸರನ್ನು ಬಳಸಿಕೊಂಡು ಯಡಿಯೂರಪ್ಪ ಪಕ್ಷದ ನಾಯಕರಾಗಿದ್ದಾರೆ. ಅವರು ಮುಖ್ಯಮಂತ್ರಿಯಾದದ್ದೂ ಲಿಂಗಾಯತ ಎನ್ನುವ ಜಾತಿಯ ಬಲದಿಂದ. ಯಡಿಯೂರಪ್ಪರನ್ನು ಮುಖ್ಯಮಂತ್ರಿಯಾಗದಂತೆ ತಡೆಯಲು ಸಾಕಷ್ಟು ಹುನ್ನಾರಗಳು ನಡೆಯಿತಾದರೂ, ಲಿಂಗಾಯತರು ಸಿಟ್ಟಾಗಬಹುದು ಎನ್ನುವ ಭಯ ಆರೆಸ್ಸೆಸ್ ಸಂಚನ್ನು ವಿಫಲಗೊಳಿಸಿತು. ಇಂದಿಗೂ ಯಡಿಯೂರಪ್ಪ ಪಕ್ಷದ ಮುಖಂಡರಾಗಿ ಬಿಜೆಪಿಯೊಳಗೆ ಮುಂದುವರಿಯುತ್ತಿರುವುದು ‘ಹಿಂದುತ್ವ’ದ ಕಾರಣಕ್ಕಾಗಿಯಲ್ಲ, ‘ಲಿಂಗಾಯತ’ ಎನ್ನುವ ಕಾರಣಕ್ಕೆ.

ಹಾಗೆ ನೋಡಿದರೆ ಸದಾನಂದ ಗೌಡ ಮತ್ತು ಹಾಸನದ ಗೌಡರಿಗೆ ಭಾಷೆ, ಸಂಸ್ಕೃತಿಯಲ್ಲಿ ತುಂಬಾ ವ್ಯತ್ಯಾಸವಿದೆ. ಹಾಸನ, ಮಂಡ್ಯದಲ್ಲಿ ಲಿಂಗಾಯತರ ಬಳಿಕ ಪ್ರಬಲ ಜಾತಿಯಾಗಿ ಗೌಡ ಸಮುದಾಯ ಗುರುತಿಸಲ್ಪಡುತ್ತದೆ. ಸುಳ್ಯದ ಗೌಡರಿಗೂ ಹಾಸನದ ಗೌಡರಿಗೂ ಅಜಗಜಾಂತರ. ಅರೆಭಾಷೆಯನ್ನಾಡುವ ಸುಳ್ಯದ ಗೌಡರ ಬೇರು ಕೊಡಗಿನಲ್ಲಿದೆ. ಈ ಗೌಡರು, ಹಾಸನದ ಗೌಡರಷ್ಟು ಪ್ರಬಲರೂ ಅಲ್ಲ. ಕರಾವಳಿಯಲ್ಲಿ ಬಂಟ ಸಮುದಾಯಕ್ಕೆ ಹೋಲಿಸಿದರೆ ಗೌಡ ಸಮುದಾಯ ದುರ್ಬಲ ಸಮುದಾಯವೆಂದೇ ಹೇಳಬೇಕು. ಆದರೆ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಸುಳ್ಯ ಮತ್ತು ಕೊಡಗಿನ ಈ ಅರೆಭಾಷೆ ಗೌಡರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಬ್ರಿಟಿಷರು ಮತ್ತು ಅವರ ಒಕ್ಕಲಾಗಿದ್ದ ಕೊಡವರ ವಿರುದ್ಧ ದಂಗೆಯೆದ್ದ ಇತಿಹಾಸ ಗೌಡರಿಗಿದೆ. ಬಹುಶಃ ಬ್ರಿಟಿಷರ ವಿರುದ್ಧ ನಿಂತ ಕಾರಣಕ್ಕಾಗಿಯೇ ಈ ಅರೆಭಾಷೆ ಗೌಡರು ಸಾಕಷ್ಟು ನಾಶ, ನಷ್ಟಗಳನ್ನು ಎದುರಿಸಬೇಕಾಯಿತು. ಇಲ್ಲವಾದರೆ ಇವರೂ ಜಮೀನ್ದಾರಿ ಸಮುದಾಯವಾಗಿ ಗುರುತಿಸಿಕೊಳ್ಳುತ್ತಿದ್ದರು. ಗೌಡ ಸಮುದಾಯದ ನೇತೃತ್ವದಲ್ಲಿ ನಡೆದ ‘ಅಮರ ಸುಳ್ಯ ದಂಗೆ’ ಚರಿತ್ರೆಯಲ್ಲಿ ಕೆಂಪು ಅಕ್ಷರಗಳಲ್ಲಿ ದಾಖಲಾಗಿದೆ. ಕೊಡಗಿನಲ್ಲಿ ಪ್ರತ್ಯೇಕ ರಾಜ್ಯದ ಕೂಗೆದ್ದಾಗ, ಅದನ್ನು ಒಂದಾಗಿ ನಿಂತು ಪ್ರತಿರೋಧಿಸಿದ್ದು ಅರೆಭಾಷೆ ಗೌಡರು. ಇಂತಹ ಇತಿಹಾಸವಿದ್ದರೂ ಗೌಡರು ಕರಾವಳಿಯಲ್ಲಿ ಪ್ರಬಲವಾಗಿರುವುದು ಸುಳ್ಯ ಮತ್ತು ಪುತ್ತೂರು ಭಾಗದಲ್ಲಿ ಮಾತ್ರ.

ಸದಾನಂದ ಗೌಡರು ರಾಜ್ಯ ರಾಜಕೀಯದಲ್ಲಿ ಗುರುತಿಸುವುದಕ್ಕೆ ಮುಖ್ಯ ಕಾರಣ, ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುವ ಪ್ರಬಲ ನಾಯಕರು ಇಲ್ಲದೇ ಇರುವುದು. ದೇವೇಗೌಡರು ಗೌಡ ಸಮುದಾಯವನ್ನು ಮುಂದಿಟ್ಟು ರಾಜಕೀಯ ನಡೆಸುತ್ತಿರುವಾಗ, ಬಿಜೆಪಿಯೊಳಗೂ ಒಬ್ಬ ಗೌಡ ಪ್ರತಿನಿಧಿ ಇರುವುದು ಅತ್ಯಗತ್ಯವಾಗಿತ್ತು. ಆ ಸಂದರ್ಭದಲ್ಲಿ, ಬಿಜೆಪಿಗೆ ಸದಾನಂದ ಗೌಡರು ಆಶಾದಾಯಕವಾಗಿ ಗೋಚರಿಸಿದರು. ಇಂದಿಗೂ ಸದಾನಂದ ಗೌಡರನ್ನು ಹಾಸನ, ಮಂಡ್ಯದ ಒಕ್ಕಲಿಗರು ಪೂರ್ಣವಾಗಿ ತಮ್ಮ ಸಮುದಾಯದ ಪ್ರತಿನಿಧಿಯೆಂದು ಭಾವಿಸುವುದಿಲ್ಲ. ‘ಮಾಂಜಿ ಇಲ್ಲದ ಊರಿನಲ್ಲಿ ಕುರ್ಚಿಮೀನು ಹೋಗಿ ಮಾಂಜಿ ಮೀನಾಯಿತು’ ಎಂಬ ಗಾದೆ ಕರಾವಳಿಯಲ್ಲಿದೆ. ಅದರಂತೆಯೇ ಬಿಜೆಪಿಯೊಳಗೆ ಸದಾನಂದ ಗೌಡರು ಒಕ್ಕಲಿಗ ಸಮುದಾಯದ ನಾಯಕನಾಗಿ ಬಿಂಬಿತರಾದರು ಮತ್ತು ಗೌಡ ಎನ್ನುವ ಆ ಪದವೇ ಸದಾನಂದ ಗೌಡರಿಗೆ ಸಿಗಬೇಕಾದ ಅತ್ಯುನ್ನತ ಸ್ಥಾನಗಳಿಗೆ ಶಿಫಾರಸಾಯಿತು.

 ಬಿಜೆಪಿಯೊಳಗೆ ಅಧಿಕಾರ ಸಿಗಬೇಕಾದರೆ ‘ಹಿಂದುತ್ವ’ವಾದಿಯಾಗುವುದಕ್ಕಿಂತಲೂ ಪ್ರಬಲ ಜಾತಿಗೆ ಸೇರಿದವನಾಗಿರುವುದು ಅತ್ಯಗತ್ಯ ಎನ್ನುವ ‘ವಿಮರ್ಶೆಯೂ, ಟೀಕೆಯೂ ’ ಸದಾನಂದ ಗೌಡರ ಮಾತಿನ ಒಳಗಿದೆ. ಆಳದಲ್ಲಿ ಇದೊಂದು ಅಸಮಾಧಾನವೂ ಆಗಿರಬಹುದು. ಹೇಗೆ ಹಿಂದುತ್ವವನ್ನು ಬಳಸಿಕೊಂಡು ಮೊಗವೀರ, ಬಿಲ್ಲವ ಮೊದಲಾದ ಶೋಷಿತ ಜಾತಿಗಳಿಂದ ಮತಗಳನ್ನು ಕೀಳಲಾಗುತ್ತದೆ ಮತ್ತು ಅಧಿಕಾರ, ಸ್ಥಾನಮಾನಗಳ ಹಂಚಿಕೆಯ ಸಂದರ್ಭದಲ್ಲಿ ಅವರನ್ನು ವಂಚಿಸಲಾಗುತ್ತದೆ ಎನ್ನುವುದನ್ನು ಅವರು ಪರೋಕ್ಷವಾಗಿ ಹೇಳಲು ಪ್ರಯತ್ನಿಸಿದಂತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಲ್ಲವರು, ಮೊಗವೀರರು, ದಲಿತರು ಬಿಜೆಪಿಯೊಳಗೆ ಅತ್ಯುನ್ನತ ಸ್ಥಾನಗಳನ್ನು ಪಡೆಯಲು ಯಾಕೆ ವಿಫಲರಾಗಿದ್ದಾರೆ ಎನ್ನುವುದಕ್ಕೂ ಅವರ ಮಾತಿನಲ್ಲಿ ಉತ್ತರವಿದೆ. ಕರಾವಳಿಯಲ್ಲಿ ಬಂಟರು ಪ್ರಬಲ ಜಾತಿಯವರಾಗಿದ್ದರೂ ರಾಜ್ಯಮಟ್ಟದಲ್ಲಿ ಲಿಂಗಾಯತ , ಗೌಡ ಸಮುದಾಯದ ಮುಂದೆ ದುರ್ಬಲ ಜಾತಿಯಾಗಿ ಪರಿಗಣಿಸಲ್ಪಟ್ಟಿದ್ದಾರೆ. ಆ ಕಾರಣಕ್ಕೆ ಅವರೂ ಬಿಜೆಪಿಯೊಳಗೆ ನಿರ್ಲಕ್ಷಕ್ಕೊಳಗಾಗಿದ್ದಾರೆ. ಹಿಂದುತ್ವ ಹೆಸರಿನಲ್ಲಿ ಕೋಮುಗಲಭೆ ನಡೆಸಿ ಜೈಲಿಗೆ ಹೋಗುವವರಲ್ಲಿ ಹೆಚ್ಚಿನವರು ಮೊಗವೀರ, ಬಿಲ್ಲವ, ದಲಿತ ಸಮುದಾಯಕ್ಕೆ ಸೇರಿದ ಜನರು ಎನ್ನುವುದು ಈಗಾಗಲೇ ಮಾಧ್ಯಮಗಳ ವರದಿಗಳಿಂದ ಬಹಿರಂಗವಾಗಿದೆ. ಇದೇ ಸಂದರ್ಭದಲ್ಲಿ ಅವರು ಮೊಗವೀರ, ಬಿಲ್ಲವರಾಗಿರುವ ಕಾರಣಕ್ಕಾಗಿಯೇ ಬಿಜೆಪಿಯಲ್ಲಿ ಅಧಿಕಾರ, ಸ್ಥಾನಮಾನಗಳಿಂದ ವಂಚಿತರಾಗಿದ್ದಾರೆ ಎನ್ನುವುದು ಸದಾನಂದ ಗೌಡರ ಮಾತಿನಿಂದ ಬೆಳಕಿಗೆ ಬಂದಿದೆ.

ಜಾತಿ ಈ ದೇಶದ ವಾಸ್ತವ. ‘ನಾವು ಹಿಂದೂ-ನಾವೆಲ್ಲ ಒಂದು’ ಎಂದು ಸಾರ್ವಜನಿಕವಾಗಿ ಘೋಷಿಸುವುದು ದುರ್ಬಲ ಜಾತಿಗಳನ್ನು ವಂಚಿಸಿ, ಅವರಿಂದ ಮತಗಳನ್ನು ಕೀಳುವುದಕ್ಕಾಗಿ. ಮದುವೆ ಸಂಬಂಧಗಳಲ್ಲಿ, ದೇವಸ್ಥಾನಗಳಲ್ಲಿ ಮಾತ್ರವಲ್ಲ, ಸಚಿವ ಸಂಪುಟಗಳಲ್ಲಿ ಸ್ಥಾನ ಹಂಚುವಾಗಲೂ ಜಾತಿಯೇ ಮುಖ್ಯವಾಗುತ್ತದೆ ಎನ್ನುವ ಅಂಶ ಸದಾನಂದಗೌಡರ ಮಾತಿನಿಂದ ಗೊತ್ತಾಗುತ್ತದೆ. ಕರಾವಳಿಯೂ ಸೇರಿದಂತೆ ರಾಜ್ಯದ, ದೇಶದ ತಳಸ್ತರದ ಜನರು ಇದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಹಿಂದೂ ಎನ್ನುವ ಭ್ರಮೆಯಿಂದ ಕಳಚಿ ತಮ್ಮ ತಮ್ಮ ಜಾತಿ, ಸಂಸ್ಕೃತಿಯ ಮೂಲಕ ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆದ್ದು ನಿಲ್ಲುವ ಕಡೆಗೆ ಅವರು ಯೋಚಿಸುವುದಕ್ಕೆ ಸದಾನಂದ ಗೌಡರ ಮಾತುಗಳು ಪ್ರೇರಣೆಯಾಗಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)