varthabharthi

ನಿಮ್ಮ ಅಂಕಣ

ಶುದ್ಧ ನೀರಿನ ಘಟಕಗಳಲ್ಲಿ ಪೋಲಾಗುತ್ತಿರುವ ನೀರು

ವಾರ್ತಾ ಭಾರತಿ : 25 Jun, 2019
-ಕಾವೇರಿದಾಸ್ ಲಿಂಗನಾಪುರ

ಮಾನ್ಯರೇ,

ರಾಜ್ಯದ ಹಲವಾರು ಕಡೆಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಇದು ಒಳ್ಳೆಯ ಉದ್ದೇಶಕ್ಕಾಗಿ ನಿರ್ಮಿತವಾಗಿದ್ದರೂ ಈ ನೀರಿನ ಘಟಕಗಳಲ್ಲಿ ಅಶುದ್ಧ ನೀರೆಂದು ಹೆಚ್ಚು ಪ್ರಮಾಣದ ನೀರನ್ನು ಪೋಲು ಮಾಡಲಾಗುತ್ತಿದೆ. ಹೆಚ್ಚಿನ ಪ್ರಮಾಣದ ನೀರು ಹೀಗೆ ವ್ಯರ್ಥವಾಗಿ ಒಳಚರಂಡಿಯಲ್ಲಿ ಹರಿದು ಹೋಗುತ್ತಿರುವುದನ್ನು ಯಾರೂ ಮನಗಂಡಂತೆ ಕಾಣುತ್ತಿಲ್ಲ.
ರಾಜ್ಯದ ಹಲವೆಡೆ ನೀರಿಲ್ಲದೆ ಬರಗಾಲವನ್ನು ನಾವು ನೋಡುತ್ತಿದ್ದೇವೆ ಮತ್ತು ಅನುಭವಿಸುತ್ತಿದ್ದೇವೆ. ನೀರು ಇಂದು ಕಾಪಾಡಲೇ ಬೇಕಾದ ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದೆ. ನೀರನ್ನು ಸಂರಕ್ಷಿಸುವ ಬಗ್ಗೆ ರಾಜ್ಯ ಮಾತ್ರವಲ್ಲ, ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಚರ್ಚೆ ನಡೆಯುತ್ತಿದೆ. ಒಂದಿಷ್ಟು ನೀರು ಉಳಿಸುವುದರಿಂದಲೇ ಮುಂದಿನ ಪೀಳಿಗೆ ಬದುಕಲು ಸಾಧ್ಯವಾಗುತ್ತದೆ.
ಇಂತಹ ವಾಸ್ತವ ಸತ್ಯಗಳ ಮಧ್ಯೆ ಜೀವಿಸುತ್ತಿರುವ ನಾವು ನೀರನ್ನು ಸುಮ್ಮನೆ ಪೋಲು ಮಾಡುವುದು ಎಷ್ಟರ ಮಟ್ಟಿಗೆ ಸರಿ? ರಾಜ್ಯದಲ್ಲಿ ನಿರ್ಮಿಸಲಾದ ಸುಮಾರು ಶುದ್ಧ ನೀರಿನ ಘಟಕಗಳಲ್ಲಿ ಅಶುದ್ಧ ನೀರೆಂದು ಹೊರಗೆ ಚೆಲ್ಲಲಾಗುವ ನೀರು ಶುದ್ಧ ನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಚರಂಡಿ ಸೇರುತ್ತಿದೆ. ಅ ನೀರನ್ನು ಯಾವುದೇ ವಿಧದಲ್ಲಿ ಮರು ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ. ಅದನ್ನು ಮತ್ತೆ ಮರು ಶುದ್ಧೀಕರಿಸುವ ಕೆಲಸವೂ ಆಗುತ್ತಿಲ್ಲ. ಈ ರೀತಿ ಪೋಲಾಗುತ್ತಿರುವ ನೀರಿನ ಕುರಿತಾಗಿ ಸಂಬಂಧಿಸಿದವರು ಗಮನ ಹರಿಸದೇ ಇರುವುದು ವಿಷಾದನೀಯ. ಇನ್ನಾದರೂ ಶುದ್ಧ ನೀರಿನ ಘಟಕಗಳಲ್ಲಿ ಪೋಲಾಗುತ್ತಿರುವ ಭಾರೀ ಪ್ರಮಾಣದ ನೀರನ್ನು ಉಳಿಸಿ ಅದನ್ನು ಸಮರ್ಪಕವಾಗಿ ಮರುಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಿಕೊಳ್ಳಬೇಕಾಗಿದೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)