varthabharthi

ನಿಮ್ಮ ಅಂಕಣ

ನಾನು ಕಂಡಂತೆ ವಿ.ಪಿ.ಸಿಂಗ್

ವಾರ್ತಾ ಭಾರತಿ : 25 Jun, 2019
ಪ್ರೊ. ರವಿವರ್ಮ ಕುಮಾರ್

ಆ ಒಂದು ದೃಢ ಹೆಜ್ಜೆ ಇಟ್ಟ ಕಾರಣಕ್ಕೆ ವಿ.ಪಿ.ಸಿಂಗ್ ಇಡೀ ರಾಷ್ಟ್ರದ ಮೇಲ್ಜಾತಿಗಳ ಸಿಟ್ಟಿಗೊಳಗಾಗಿ ಪ್ರಧಾನಿ ಪಟ್ಟದಿಂದ ಕೆಳಗಿಳಿಯುವಂತಾಯಿತು. ಮಂಡಲ್ ರಾಜಕೀಯ ಕಮಂಡಲಕ್ಕೆ ವರದಾನವಾಯಿತು. ಆದರೆ ಶಾಶ್ವತವಾಗಿ ಹಿಂದುಳಿದ ಜಾತಿಗಳಿಗೆ ಶಿಕ್ಷಣ, ಉದ್ಯೋಗ ಕ್ಷೇತ್ರಗಳ ದಿಡ್ಡಿಬಾಗಿಲು ತೆರೆಯಿತು.


ನಿನ್ನೆ ‘ವಾರ್ತಾಭಾರತಿ’ಯಲ್ಲಿ ಪ್ರಕಟವಾದ ಮರೆತುಹೋದ ವಿ.ಪಿ.ಸಿಂಗ್ ಲೇಖನ ಭಾರತೀಯರಿಗೆ ಗೊತ್ತಿಲ್ಲದ ಒಂದು ಅಪರೂಪದ ಸಂಗತಿಯನ್ನು ಹೊರಹಾಕಿದೆ. ಅಂದು ಎಂಟು ವರ್ಷದವನಿದ್ದ, ವಿ.ಪಿ.ಸಿಂಗ್‌ರ ಮೊಮ್ಮಗ ಇಂದ್ರಶೇಖರ್ ಸಿಂಗ್ ಸುಮಾರು ಮೂರು ದಶಕಗಳ ನಂತರ ತನ್ನ ಮನೆಯಂಗಳದ ರಣರಂಗವನ್ನು ಪ್ರಸ್ತಾಪಿಸುತ್ತ ‘‘ನಾವು ಕ್ಷತ್ರಿಯರಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಅಧಿಕಾರವನ್ನು ನಿರಾಕರಿಸಿ ಐದು ಸಹಸ್ರ ವರ್ಷಗಳು ಅವರನ್ನು ತುಳಿದಿದ್ದ ಹಿನ್ನೆಲೆಯಲ್ಲಿ ಇಂದು ಅವರಿಗೆ ಶಿಕ್ಷಣ ಮತ್ತು ಅಧಿಕಾರ ಕೊಡುವಂತಹ ಸಾಮಾಜಿಕ ನ್ಯಾಯದ ಅನಿವಾರ್ಯತೆಯನ್ನು ವಿ.ಪಿ. ಸಿಂಗ್ ಅವರು ತಮ್ಮ ಹೆಂಡತಿ ಮತ್ತು ಮಕ್ಕಳಿಗೆ ನೇರವಾಗಿ, ಸ್ಪಷ್ಟವಾಗಿ ಹೇಳುತ್ತಾರೆ. ಅಷ್ಟೇ ಅಲ್ಲ, ಮಂಡಲ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಿದ್ದನ್ನು ಸಮರ್ಥಿಸಿಕೊಳ್ಳುತ್ತಾರೆ’’ ಎಂಬ ಚಾರಿತ್ರಿಕ ಸತ್ಯವನ್ನು ಪ್ರಸ್ತಾಪಿಸಿರುವುದು ಚಿಂತನೆಗೆ ಹಚ್ಚುವಂತಿದೆ. ವಿ.ಪಿ.ಸಿಂಗ್‌ರನ್ನು ನೆನಪು ಮಾಡಿಕೊಳ್ಳಲಿಕ್ಕೆ ಅನುವು ಮಾಡಿಕೊಟ್ಟಿದೆ.

ಕರ್ನಾಟಕದಲ್ಲಿ ಹಾವನೂರು ಆಯೋಗವನ್ನು ಜಾರಿ ಮಾಡಿದ ದೇವರಾಜ ಅರಸು ಹಾಗೂ ಕೇಂದ್ರದಲ್ಲಿ ಮಂಡಲ್ ಆಯೋಗವನ್ನು ಜಾರಿ ಮಾಡಿದ ವಿ.ಪಿ.ಸಿಂಗ್- ಇಬ್ಬರೂ ಕ್ಷತ್ರಿಯರಾಗಿರುವುದು ಕಾಕತಾಳೀಯವೋ ಅಥವಾ ಕ್ಷತ್ರಿಯ ಔದಾರ್ಯದ ಸಾಕ್ಷಾತ್ಕಾರವೋ ಎಂಬುದು ನನ್ನ ಜಿಜ್ಞಾಸೆ. ಯಾಕೆಂದರೆ, ದೇವರಾಜ ಅರಸರು ಹಾವನೂರು ಆಯೋಗವನ್ನು ಜಾರಿ ಮಾಡುವ ಸಂದರ್ಭದಲ್ಲಿ ಹಾಗೂ ವಿ.ಪಿ.ಸಿಂಗ್ ಪ್ರಧಾನಿ ಪದವಿಯಿಂದ ಕೆಳಗಿಳಿದ ಮೇಲೆ ಸಾಮಾಜಿಕ ನ್ಯಾಯದ ಹೋರಾಟಗಳಲ್ಲಿ ಅವರಿಬ್ಬರನ್ನು ಹತ್ತಿರದಿಂದ ಕಂಡಿದ್ದೆ. ಅವರೊಂದಿಗೆ ಒಡನಾಟವಿಟ್ಟುಕೊಂಡಿದ್ದೆ. ವಿ.ಪಿ.ಸಿಂಗ್ ಅವರು ಅನೇಕ ಸಭೆ ಸಮಾರಂಭಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದ ನಿಜವಾದ ಸಾಮಾಜಿಕ ನ್ಯಾಯದ ಹರಿಕಾರ. ಅವರ ತತ್ವನಿಷ್ಠೆ ಅವರ ಜೀವನದುದ್ದಕ್ಕೂ ಜೊತೆಗೂಡಿತ್ತು. ಭೂದಾನ ಚಳವಳಿಯಲ್ಲಿ ಅವರ ಜಮೀನನ್ನು ಹಂಚಿದ್ದು ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ನಿರಂತರವಾಗಿ ಆಡಳಿತಯಂತ್ರದ ಪ್ರಾಮಾಣಿಕ ಶುದ್ಧೀಕರಣ ಮಾಡುತ್ತಾ ಹೋಗಿದ್ದು, ಆ ಮೂಲಕ ಭ್ರಷ್ಟರ ಕೆಂಗಣ್ಣಿಗೆ ಗುರಿಯಾಗಿದ್ದು ಪುಟ್ಟ ಬಾಲಕ ಇಂದ್ರಶೇಖರ್ ಸಿಂಗ್‌ಗೆ ತಿಳಿದಿರಲಾರದು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ, ಕೇಂದ್ರ ಸರಕಾರದ ವಾಣಿಜ್ಯ ಮಂತ್ರಿಯಾಗಿ, ತದನಂತರ ಹಣಕಾಸು ಸಚಿವರಾಗಿ ಅವರು ತೆಗೆದುಕೊಂಡ ಕ್ರಮಗಳು ಇಡೀ ಭಾರತ ಸರಕಾರದ ಪ್ರಾಮಾಣಿಕ ಮುಖವಾಣಿಯಾಗಿ ವಿ.ಪಿ.ಸಿಂಗ್‌ರನ್ನು ಪರಿಚಯಿಸಿತ್ತು. ರಾಷ್ಟ್ರನಾಯಕರನ್ನಾಗಿ ಘೋಷಿಸಿತ್ತು.

ಇಂದಿರಾ ಗಾಂಧಿ ಹತ್ಯೆಯಾದ ನಂತರ ರಾಜೀವ್ ಗಾಂಧಿ ಸರಕಾರದಲ್ಲಿ ವಿ.ಪಿ.ಸಿಂಗ್ ಅತ್ಯದ್ಭುತವಾಗಿ ಕೆಲಸ ಮಾಡಿದ್ದು ಮರೆಯಲಾಗದು. ಆದರೆ ವಿತ್ತ ಸಚಿವರಾಗಿ ತೆರಿಗೆ ವಂಚಕರ ವಿರುದ್ಧ ಚಾಟಿ ಬೀಸಿದ ಪ್ರಸಂಗಗಳು, ವಂಚಕರನ್ನು ಜೈಲಿಗೆ ಕಳಿಸುವ ಬದಲು ವಿ.ಪಿ.ಸಿಂಗ್‌ರನ್ನು ರಕ್ಷಣಾ ಇಲಾಖೆಗೆ ದೂಡುವಂತೆ ಮಾಡಿದ್ದು ವಿಪರ್ಯಾಸಕರ ಸಂಗತಿ. ರಕ್ಷಣಾ ಇಲಾಖೆಯಲ್ಲೂ ಅತ್ಯಂತ ಗಂಭೀರವಾದ ಮದ್ದುಗುಂಡು ಖರೀದಿ ವಿಚಾರದಲ್ಲಿ ರಾಷ್ಟ್ರದ್ರೋಹದ ಅವ್ಯವಹಾರಗಳನ್ನು ಪತ್ತೆ ಹಚ್ಚಿ, ಇನ್ನೇನು ಕ್ರಮ ಜರುಗಿಸಲಾಗುವುದು ಎನ್ನುವ ವೇಳೆಗೆ, ಅವರೇ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಪಕ್ಷದಿಂದ ಹೊರದೂಡಲ್ಪಟ್ಟರು. ಇದು ನನ್ನ ಪ್ರಕಾರ, ಭಾರತದಲ್ಲಿ ಪ್ರಾಮಾಣಿಕ ರಾಜಕಾರಣ ಅವನತಿಯ ಹಾದಿ ಹಿಡಿದ ಸಂಕೇತ. ವಿ.ಪಿ.ಸಿಂಗ್ ರಾಜೀವ್ ಗಾಂಧಿ ಸರಕಾರದಿಂದ ಹೊರ ನಡೆದದ್ದು ಉತ್ತಮ ಆಡಳಿತಗಾರರಿಗೆ ನೆಲೆ-ಬೆಲೆ ಇಲ್ಲವಾಗುತ್ತಿರುವ ಸೂಚನೆಯಂತೆಯೂ ಕಾಣತೊಡಗಿತು. ಕಾಂಗ್ರೆಸ್ ಪಕ್ಷದಿಂದ ಹೊರದೂಡಲ್ಪಟ್ಟಿದ್ದೇ ವರದಾನವಾಗಿ ಅತ್ಯದ್ಭುತವಾಗಿ ಒಂದು ಡಜನ್ ವಿರೋಧಪಕ್ಷಗಳನ್ನು ಒಗ್ಗೂಡಿಸಿ 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕುವಂತೆ ಮಾಡಿ, ರಾಷ್ಟ್ರದ ಪ್ರಧಾನಮಂತ್ರಿಗಳಾಗುವ ಮೂಲಕ ದೇಶದ ಚುಕ್ಕಾಣಿ ಹಿಡಿದರು. ಹಾಗೆಯೇ ಅತಿ ಕಡಿಮೆ ಅವಧಿಯ ಪ್ರಧಾನಮಂತ್ರಿ ಆಗಿದ್ದರೂ ಯಾವುದೇ ಪೂರ್ಣಾವಧಿಯ ಪ್ರಧಾನಿ ಮಾಡದಷ್ಟು ಉತ್ತಮ ಕೆಲಸಗಳನ್ನು ಮಾಡಿ ಜನಮಾನಸದಲ್ಲಿ ನೆಲೆಯೂರಿದರು.

ಅದರಲ್ಲೂ ಅವರ ಮಂಡಲ್ ಆಯೋಗದ ಜಾರಿಯಂತೂ ಕ್ರಾಂತಿಕಾರಕ ಹೆಜ್ಜೆಯಾಗಿ ದಾಖಲಾಯಿತು. ಕೋಟ್ಯಂತರ ವಂಚಿತ ಸಮುದಾಯಗಳ ಯುವಕರಿಗೆ ಉದ್ಯೋಗವನ್ನು ರೂಪಿಸಿಕೊಡುವ ಮೂಲಕ ಹಿಂದುಳಿದ ಜಾತಿಗಳಿಗೆ ನ್ಯಾಯಯುತವಾಗಿ ಸಲ್ಲಬೇಕಾಗಿದ್ದ ಸಾಮಾಜಿಕ ನ್ಯಾಯವನ್ನು ಕೊಡಮಾಡಿದ ಕೀರ್ತಿ ವಿ.ಪಿ.ಸಿಂಗ್‌ರ ಖಾತೆಗೆ ಜಮೆಯಾಗಿತ್ತು. ಆ ಒಂದು ದೃಢ ಹೆಜ್ಜೆ ಇಟ್ಟ ಕಾರಣಕ್ಕೆ ವಿ.ಪಿ.ಸಿಂಗ್ ಇಡೀ ರಾಷ್ಟ್ರದ ಮೇಲ್ಜಾತಿಗಳ ಸಿಟ್ಟಿಗೊಳಗಾಗಿ ಪ್ರಧಾನಿ ಪಟ್ಟದಿಂದ ಕೆಳಗಿಳಿಯುವಂತಾಯಿತು. ಮಂಡಲ್ ರಾಜಕೀಯ ಕಮಂಡಲಕ್ಕೆ ವರದಾನವಾಯಿತು. ಆದರೆ ಶಾಶ್ವತವಾಗಿ ಹಿಂದುಳಿದ ಜಾತಿಗಳಿಗೆ ಶಿಕ್ಷಣ, ಉದ್ಯೋಗ ಕ್ಷೇತ್ರಗಳ ದಿಡ್ಡಿಬಾಗಿಲು ತೆರೆಯಿತು. ಅಷ್ಟೇ ಅಲ್ಲ, ವಿಶೇಷವಾಗಿ ಉತ್ತರ ಭಾರತದಲ್ಲಿ ಹಿಂದುಳಿದ ವರ್ಗಕ್ಕೆ ರಾಜಕೀಯ ಅಧಿಕಾರವನ್ನು ಹಸ್ತಾಂತರಿಸಿತು. ವಿ.ಪಿ.ಸಿಂಗ್ ಅವರೊಂದಿಗೆ ನನ್ನದು ಹತ್ತು ವರ್ಷಗಳ ಒಡನಾಟ. ಅವರು ರಾಜ್ಯ ರಾಜಕಾರಣದ ಬಗ್ಗೆಯೂ ಅತೀವ ಆಸಕ್ತಿ ತೋರಿಸುತ್ತಿದ್ದರು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆಯುತ್ತಿದ್ದ ಅಹಿಂದ ಚಳವಳಿಯ ಬೆಳವಣಿಗೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಫೆಬ್ರವರಿ 6, 2005ರಂದು ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಬೃಹತ್ ಅಹಿಂದ ಸಮ್ಮೇಳನ ಆಯೋಜಿಸಿದಾಗ, ಮುಖ್ಯ ಅತಿಥಿಯಾಗಿ ವಿ.ಪಿ.ಸಿಂಗ್ ಆಗಮಿಸುವುದಾಗಿ ಹೇಳಿದ್ದರು. ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಮಂಡಲ್ ಆಯೋಗದ ಜಾರಿಗೆ ಒತ್ತಾಯ ಮಾಡುವುದಾಗಿಯೂ ಈ ಬಗ್ಗೆ ಸಿದ್ದರಾಮಯ್ಯನವರೊಡನೆ ಮಾತನಾಡಿರುವುದಾಗಿಯೂ, ಅದನ್ನು ಸಮ್ಮೇಳನದಲ್ಲಿ ಪ್ರಕಟ ಮಾಡಬೇಕೆಂದೂ ನನ್ನ ಬಳಿ ಹೇಳಿಕೊಂಡಿದ್ದರು. ಸಮ್ಮಿಶ್ರ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪಕ್ಷಾತೀತ ಸಂಘಟನೆಯಾದ ಅಹಿಂದದಲ್ಲಿ ವಿ.ಪಿ.ಸಿಂಗ್ ಭಾಗವಹಿಸುವುದರ ಬಗ್ಗೆ ಸಿದ್ದರಾಮಯ್ಯನವರು ಒಲವು ತೋರಿಸಲಿಲ್ಲ. ಹಾಗಾಗಿ ಆ ಸಮ್ಮೇಳನ ಕೈಗೂಡಲಿಲ್ಲ. ನಾನು ಅವರನ್ನು ಕೊನೆಯದಾಗಿ ಭೇಟಿಯಾದದ್ದು ದಿಲ್ಲಿಯಲ್ಲಿ. ಅಂದು ವಿ.ಪಿ.ಸಿಂಗ್ ನನ್ನೊಡನೆ ಹೇಳಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಗುಂಯ್‌ಗುಡುತ್ತಿವೆ.

‘‘ರವಿ, ನನ್ನ ಆರೋಗ್ಯ ನಿಮಿತ್ತ ವಾರದಲ್ಲಿ ಮೂರು ದಿನ ಡಯಾಲಿಸಿಸ್ ಅನಿವಾರ್ಯತೆ ಇರುವುದರಿಂದ ಏಳು ದಿನಗಳು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನುಳಿದ ನಾಲ್ಕು ದಿನಗಳು ರಾಷ್ಟ್ರದ ಯಾವ ಮೂಲೆಗೆ ನನ್ನ ಅವಶ್ಯಕತೆ ಇದ್ದರೂ ಹೋಗುತ್ತೇನೆ. ಹೋದ ಸ್ಥಳದಲ್ಲಿಯೇ ಡಯಾಲಿಸಿಸ್ ವ್ಯವಸ್ಥೆ ಇದ್ದಲ್ಲಿ ಎಷ್ಟು ದಿನ ಬೇಕಾದರೂ ಅಲ್ಲೇ ಕೆಲಸ ಮಾಡುತ್ತೇನೆ, ನನ್ನ ಜೀವನವೇ ರಾಷ್ಟ್ರಸೇವೆಗೆ ಮುಡಿಪು’’ ಎಂದಿದ್ದರು. ವಾರ್ತಾಭಾರತಿಯಲ್ಲಿ ಪ್ರಕಟವಾದ ವಿ.ಪಿ.ಸಿಂಗ್‌ರ ಮೊಮ್ಮಗನ ಲೇಖನ ಓದಿ ಇದೆಲ್ಲ ನೆನಪಾಯಿತು.

(ಲೇಖಕರು ಹಿರಿಯ ಸಂವಿಧಾನ ತಜ್ಞರು ಹಾಗೂ ರಾಜ್ಯದ ಮಾಜಿ ಅಡ್ವೊಕೇಟ್ ಜನರಲ್)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)