varthabharthi

ನಿಮ್ಮ ಅಂಕಣ

ನಿಖಿಲ್ ಕೋಲ್ಪೆ

ನ್ಯಾ.ಕುರೇಶಿ-ಸಂಜೀವ್ ಭಟ್ ನಡುವೆ ಸಾಮ್ಯವೇನು?

ವಾರ್ತಾ ಭಾರತಿ : 26 Jun, 2019

ಇವೆರಡು ಪ್ರಕರಣಗಳು ಯಾವ ಸಂದೇಶ ನೀಡುತ್ತವೆ ಅಥವಾ ನೀಡುವ ಉದ್ದೇಶ ಹೊಂದಿವೆ? ಭಟ್ ಪ್ರಕರಣದಲ್ಲಿ ಅದು ಅಧಿಕಾರಿಗಳಿಗೆ ನೀಡುವ ಸಂದೇಶ ಸ್ಪಷ್ಟವಾಗಿದೆ. ಅದೆಂದರೆ, ತೆಪ್ಪಗೆ ನಾವೆಂದಂತೆ ಕೇಳಿಕೊಂಡು, ಮಾಡಿಕೊಂಡಿರಿ. ನಮ್ಮ ವಿರುದ್ಧ ಹೋಗಿ ಬಾಲ ಬಿಚ್ಚಿದಿರೋ, ಸಂಜೀವ ಭಟ್‌ಗೆ ಆದ ಗತಿ ನಿಮಗೂ ಆಗುತ್ತದೆ!. ಸಂಜೀವ ಭಟ್ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಗಳ ಸಂಘದ ಮೌನ ಈ ಸಂದೇಶ ತಲುಪಿರುವುದರ ಸೂಚಿಯಾಗಿದೆ. ಇನ್ನು ನ್ಯಾ. ಕುರೇಶಿ ಅವರ ಪ್ರಕರಣದಲ್ಲೂ ಸಂದೇಶ ಇದೇ ಆಗಿದೆ. ನಮ್ಮ ವಿರುದ್ಧ ಹೋದರೆ ತೊಂದರೆಯಾದೀತು!.


ತೀರಾ ಪ್ರಶ್ನಾರ್ಹವಾದ ಚುನಾವಣೆಯಲ್ಲಿ ಮರಳಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರವು ಪ್ರಜಾಪ್ರಭುತ್ವದ ಸ್ವಾಯತ್ತ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಾ, ಅವುಗಳನ್ನು ವಿರೋಧಿಗಳ ಮೇಲೆ ಅಸ್ತ್ರಗಳಂತೆ ಬಳಸುತ್ತಾ, ಹಿಂಬಾಗಿಲ ಮೂಲಕ ಸರ್ವಾಧಿಕಾರವನ್ನು ತರುವ ಪ್ರಯತ್ನಗಳನ್ನು ಇನ್ನಷ್ಟು ತೀವ್ರಗೊಳಿಸಿದೆಯೇ?

ಮೊದಲ ಅವಧಿಯಲ್ಲಿಯೇ ಇಂತಹ ಹಲವಾರು ಪ್ರಯತ್ನಗಳು ನಡೆದಿದ್ದವು. ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ಗವರ್ನರ್ ಒಬ್ಬರ ರಾಜೀನಾಮೆ, ಮೊದಲ ಬಾರಿಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರುಗಳು ಬಹಿರಂಗ ಸುದ್ದಿಗೋಷ್ಠಿ ನಡೆಸಿದ್ದು, ರಾಷ್ಟ್ರೀಯ ತನಿಖಾ ತಂಡ, ಜಾರಿ ನಿರ್ದೇಶನಾಲಯ ಸಹಿತ ಆದಾಯ ತೆರಿಗೆ ಇಲಾಖೆಯನ್ನು ಆಯ್ದ ವಿರೋಧಿಗಳ ಮೇಲೆ ಛೂಬಿಟ್ಟು ಬಗ್ಗುಬಡಿಯುವ, ಸುಮ್ಮನಾಗಿಸುವ, ಇಲ್ಲವೇ ಸೆಳೆಯುವ ಯತ್ನ, ‘ಅರ್ಬನ್ ನಕ್ಸಲ’ರೆಂಬ ಹಣೆಪಟ್ಟಿ ಕಟ್ಟಿ ಬುದ್ಧಿಜೀವಿಗಳನ್ನು ಬಂಧಿಸಿ, ದೇಶದ್ರೋಹದಂತಹ ಕರಾಳ ಪ್ರಕರಣಗಳನ್ನು ದಾಖಲಿಸಿರುವುದು, ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗದ ಸಂಶಯಾಸ್ಪದ, ನಾಚಿಕೆಗೇಡಿನ, ಬೇಜವಾಬ್ದಾರಿ ವರ್ತನೆ ಇತ್ಯಾದಿಯಾಗಿ ಹಲವಾರು ಉದಾಹರಣೆಗಳನ್ನು ನೀಡಬಹುದು.

ಇದೀಗ ಮೋದಿ ಸರಕಾರವು ಹಿರಿಯ ಹೈಕೋರ್ಟ್ ನ್ಯಾಯಾಧೀಶ ನ್ಯಾ. ಅಕಿಲ್ ಕುರೇಶಿ ಅವರ ಭಡ್ತಿಗೆ ಅಡ್ಡಗಾಲು ಹಾಕಿ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಲಪ್ರದರ್ಶನ ಮಾಡುವ ಕೀಳು ಮಟ್ಟಕ್ಕೆ ಇಳಿದಿರುವುದು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅಲುಗಾಡಿಸುವ ಪ್ರಯತ್ನಕ್ಕೆ ಕನ್ನಡಿಯಾಗಿದೆ.
ಈ ಪ್ರಕರಣದಲ್ಲಿ ನಡೆದಿರುವುದೇನು? ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ, ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಮತ್ತು ಎನ್.ವಿ. ರಮಣ ಅವರನ್ನು ಒಳಗೊಂಡ ಕೊಲಿಜಿಯಂ ನಾಲ್ವರು ಹೈಕೋರ್ಟ್ ನ್ಯಾಯಾಧೀಶರ ಹೆಸರನ್ನು ಭಡ್ತಿಗಾಗಿ ಶಿಫಾರಸು ಮಾಡಿತ್ತು.

ಈ ನಾಲ್ವರಲ್ಲಿ ನ್ಯಾ. ವಿ. ರಾಮಸುಬ್ರಹ್ಮಣ್ಯಂ ಅವರನ್ನು ಹಿಮಾಚಲ ಪ್ರದೇಶದ ಮುಖ್ಯನ್ಯಾಯಾಧೀಶರಾಗಿ ಮತ್ತು ಆರ್.ಎಸ್. ಚೌಹಾಣ್ ಅವರನ್ನು ತೆಲಂಗಾಣದ ಮುಖ್ಯ ನ್ಯಾಯಾಧೀಶರಾಗಿ ಜೂನ್ 19ರಂದು ನೇಮಕ ಮಾಡಲಾಗಿದೆ. ಜೂನ್ 22ರಂದು ನ್ಯಾ. ಡಿ.ಎನ್. ಪಟೇಲ್ ಅವರನ್ನು ದಿಲ್ಲಿ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ. ಆದರೆ, ಇನ್ನೊಬ್ಬ ಹಿರಿಯ ನ್ಯಾಯಾಧೀಶ ನ್ಯಾ. ಅಕಿಲ್ ಕುರೇಶಿ ಅವರ ಹೆಸರನ್ನು ಕೇಂದ್ರ ಸರಕಾರ ತಡೆ ಹಿಡಿದು ತೆಪ್ಪಗೆ ಕೂತಿದೆ.

ನ್ಯಾಯಮೂರ್ತಿ ಅಕಿಲ್ ಕುರೇಶಿಯವರಿಗೆ ಅನ್ಯಾಯ ಆಗಿರುವುದು ಇದು ಮೊದಲ ಬಾರಿಯೇನಲ್ಲ. 2018ರ ನವೆಂಬರ್‌ನಲ್ಲಿ ಗುಜರಾತ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಆರ್. ಸುಭಾಷ್ ರೆಡ್ಡಿ ಅವರಿಗೆ ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ಭಡ್ತಿ ದೊರೆತಿತ್ತು. ಆಗ ಅಲ್ಲಿ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದವರು ಅಕಿಲ್ ಕುರೇಶಿ. ಅವರಿಗೆ ಸಹಜವಾಗಿ ಗುಜರಾತ್ ಹೈಕೋರ್ಟಿನ ಪ್ರಭಾರ ನ್ಯಾಯಾಧೀಶರಾಗಿ ಭಡ್ತಿ ದೊರೆಯಬೇಕಿತ್ತು. ಆದರೆ, ಹಾಗಾಗಲಿಲ್ಲ. ಅಕಾರಣವಾಗಿ ಮತ್ತು ಏಕಾಏಕಿಯಗಿ ಅವರನ್ನು ಮುಂಬೈ ಹೈಕೋರ್ಟಿಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿತ್ತು. ಇದರಿಂದ ಅವರಿಗೆ ಭಡ್ತಿ ತಪ್ಪಿತ್ತು.

ಅಕಿಲ್ ಕುರೇಶಿ ಅವರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟಿಸಿ ಗುಜರಾತ್ ಹೈಕೋರ್ಟಿನ ವಕೀಲರು ಮುಷ್ಕರವನ್ನೂ ನಡೆಸಿದ್ದಾರೆ. ಇದಕ್ಕೂ ಮೋದಿ ಸರಕಾರ ಯಾವುದೇ ಪ್ರತಿಕ್ರಿಯೆ ನೀಡದೆ, ಅಸಡ್ಡೆ ತೋರಿದೆ.
ಗುಜರಾತ್ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಯತೀನ್ ಓಝಾ ಹೀಗೆ ಹೇಳಿದ್ದಾರೆ: ‘‘ಭಾರತ ಸರಕಾರವು ಇಷ್ಟರ ಮಟ್ಟದ ದ್ವೇಷಸಾಧನೆ ಮಾಡುತ್ತಿರುವುದು ದುರದೃಷ್ಟಕರ. ಇದು ಭಾರತದ ಸಂವಿಧಾನವನ್ನು ಸಂಪೂರ್ಣ ಬುಡಮೇಲು ಮಾಡುವ ಯತ್ನ.’’ ಮೋದಿ ಮತ್ತು ಶಾ ಅವರಿಗೆ ನ್ಯಾ. ಅಕಿಲ್ ಕುರೇಶಿ ಇಷ್ಟವಿಲ್ಲ. ಅಷ್ಟಕ್ಕೂ ನ್ಯಾ. ಕುರೇಶಿಯವರು ಮಾಡಿದ ಮಹಾ ಅಪರಾಧವಾದರೂ ಏನು?

ಇನ್ನೊಂದು ಕಡೆಯಲ್ಲಿ ಗುಜರಾತಿನ ಹಿರಿಯ ಐಪಿಎಸ್ ಅಧಿಕಾರಿಯಗಿದ್ದ ಸಂಜೀವ ಭಟ್ ಅವರಿಗೆ 2009ರ ಹಳೆಯ ಲಾಕಪ್ ಸಾವಿನ ಪ್ರಕರಣವೊಂದರಲ್ಲಿ ಜಾಮನಗರ ಸೆಶನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ವಿರುದ್ಧ ಅವರು ಹೈಕೋರ್ಟಿನ ಮೊರೆಹೋಗಲು ಅವಕಾಶವಿದೆ. ಸರಕಾರ ಅವರ ಬೆನ್ನುಬಿದ್ದು ದ್ವೇಷಸಾಧನೆ ಮಾಡಲು ಮತ್ತು ಈ ತೀರ್ಪಿಗೆ ಮೊದಲೇ ಬಂಧನದಲ್ಲಿದ್ದ ಅವರ ಜಾಮೀನನ್ನು ತೀವ್ರವಾಗಿ ವಿರೋಧಿಸಿ ಜೈಲಿನಲ್ಲಿ ಕಷ್ಟ ಅನುಭವಿಸುವಂತೆ ಮಾಡಲು ಅವರು ಮಾಡಿದ ಮಹಾಪರಾಧವಾದರೂ ಏನು? ನ್ಯಾ. ಅಕಿಲ್ ಕುರೇಶಿಯವರು ಮಾಡಿದ ಮಹಾಪರಾಧವೇನೆಂದರೆ, 2010ರಲ್ಲಿ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಮುಖ್ಯ ಆರೋಪಿ ಮತ್ತು ಈಗ ಕೇಂದ್ರ ಗೃಹಸಚಿವರಾಗಿರುವ ಅಮಿತ್ ಶಾ ಅವರಿಗೆ ಎರಡು ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದ್ದು. ಅಷ್ಟು ಮಾತ್ರವಲ್ಲದೆ, 2011ರಲ್ಲಿ ನ್ಯಾ. ಆರ್. ಎ. ಮೆಹ್ತಾ ಅವರನ್ನು ಗುಜರಾತಿನ ಲೋಕಪಾಲರಾಗಿ ನೇಮಕಾತಿ ಮಾಡಿದ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದದ್ದು. ಈ ನೇಮಕಾತಿಯನ್ನು ತೀವ್ರವಾಗಿ ವಿರೋಧಿಸಿದ್ದ ಆಗಿನ ಮೋದಿ ನೇತೃತ್ವದ ಗುಜರಾತ್ ಸರಕಾರ ಈ ನೇಮಕಾತಿ ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆಹೋಗಿತ್ತು. ಇದರಿಂದ ಮೋದಿ ಸರಕಾರ ತೀವ್ರ ಮುಖಭಂಗ ಅನುಭವಿಸಿತ್ತು.

ಇನ್ನು ಸಂಜೀವ ಭಟ್ ಮಾಡಿದ ಮಹಾಪರಾಧವಾದರೂ ಏನು? 2009ರಲ್ಲಿ ಅವರು ಮತ್ತು ಆರು ಪೊಲೀಸರ ಮೇಲೆ ಲಾಕಪ್ ಡೆತ್ ಆರೋಪ ಬಂದಿತ್ತು. ಇದನ್ನು ಕೈಬಿಡುವಂತೆ ಹಿಂದೊಮ್ಮೆ ಸರಕಾರ ಮನವಿ ಸಲ್ಲಿಸಿತ್ತು. 2002ರ ಗುಜರಾತ್ ನರಮೇಧ ಪ್ರಕರಣದಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕೈವಾಡ ಇದೆಯೆಂದು ಭಟ್ ಅವರು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದರು. 2011ರಲ್ಲಿ ಲಾಕಪ್ ಡೆತ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾದ ಅವರು, ಗೃಹ ಸಚಿವರಾಗಿದ್ದ ಹರೇನ್ ಪಾಂಡ್ಯ ಅವರ ಕೊಲೆಯಲ್ಲಿ ಸಾಕ್ಷ್ಯ ನಾಶ ಮಾಡುವಂತೆ ಆಗಿನ ಗುಜರಾತ್ ಗೃಹ ಸಚಿವ ಅಮಿತ್ ಶಾ ಒತ್ತಡ ಹೇರಿದ್ದರು ಎಂಬ ಆರೋಪ ಮಾಡಿದ್ದರು. 2012ರಲ್ಲಿ ಭಟ್ ಮತ್ತು ಆರು ಪೊಲೀಸರನ್ನು ಕೊಲೆ ಆರೋಪ ಹೊರಿಸಿ ಬಂಧಿಸಲಾಗಿತ್ತು. ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

ವಿಶೇಷವೆಂದರೆ ಕಳೆದ ಹತ್ತು ವರ್ಷಗಳಲ್ಲಿ ಗುಜರಾತಿನಲ್ಲಿ 200ರಷ್ಟು ಲಾಕಪ್ ಕೊಲೆಗಳು ನಡೆದಿದ್ದು, ಭಟ್ ಹೊರತುಪಡಿಸಿದರೆ ಬೇರಾರಿಗೂ ಶಿಕ್ಷೆ ಆಗಿಲ್ಲ ಎಂದು ಕೆಲವು ವರದಿಗಳು ಹೇಳುತ್ತವೆ. ಇದು ಕೇವಲ ಕಾಕತಾಳೀಯವೇ? ಕೇರಳದಲ್ಲಿ ಪೊಲೀಸರಿಗೆ ಮರಣದಂಡನೆ ವಿಧಿಸಿದಂತಹ ಕೆಲವು ಅಪರೂಪದ ಪ್ರಕರಣಗಳನ್ನು ಬಿಟ್ಟರೆ, ಲಾಕಪ್ ಸಾವಿನ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಶಿಕ್ಷೆ ಆಗುವುದಿಲ್ಲ. ಕಾರಣವೆಂದರೆ, ಇಂತಹ ಪ್ರಕರಣಗಳಲ್ಲಿ ಸಹೋದ್ಯೋಗಿ ಪೊಲೀಸರೇ ಪ್ರಮುಖ ಸಾಕ್ಷಿಗಳಾಗಿದ್ದು, ಪೊಲೀಸರು ತಮ್ಮವರನ್ನು ಬಿಟ್ಟು ಹಾಕುವುದಿಲ್ಲ. ಆದರೆ, ಸರಕಾರ ಬಯಸಿದಲ್ಲಿ ಅವರ ಮೇಲೆ ಒತ್ತಡ ಹೇರಿ ಸಾಕ್ಷ್ಯ ಹೇಳಿಸುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಸಂಜೀವ ಭಟ್ ಪ್ರಕರಣದಲ್ಲಿ ಹಾಗಾಗಿದೆಯೇ ಎಂದು ಹೇಳಲು ಸಾಧ್ಯವಿಲ್ಲ.

ಇವೆರಡು ಪ್ರಕರಣಗಳು ಯಾವ ಸಂದೇಶ ನೀಡುತ್ತವೆ ಅಥವಾ ನೀಡುವ ಉದ್ದೇಶ ಹೊಂದಿವೆ? ಭಟ್ ಪ್ರಕರಣದಲ್ಲಿ ಅದು ಅಧಿಕಾರಿಗಳಿಗೆ ನೀಡುವ ಸಂದೇಶ ಸ್ಪಷ್ಟವಾಗಿದೆ. ಅದೆಂದರೆ, ತೆಪ್ಪಗೆ ನಾವೆಂದಂತೆ ಕೇಳಿಕೊಂಡು, ಮಾಡಿಕೊಂಡಿರಿ. ನಮ್ಮ ವಿರುದ್ಧ ಹೋಗಿ ಬಾಲ ಬಿಚ್ಚಿದಿರೋ, ಸಂಜೀವ ಭಟ್‌ಗೆ ಆದ ಗತಿ ನಿಮಗೂ ಆಗುತ್ತದೆ!. ಸಂಜೀವ ಭಟ್ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಗಳ ಸಂಘದ ಮೌನ ಈ ಸಂದೇಶ ತಲುಪಿರುವುದರ ಸೂಚಿಯಾಗಿದೆ. ಇನ್ನು ನ್ಯಾ. ಕುರೇಶಿ ಅವರ ಪ್ರಕರಣದಲ್ಲೂ ಸಂದೇಶ ಇದೇ ಆಗಿದೆ. ನಮ್ಮ ವಿರುದ್ಧ ಹೋದರೆ ತೊಂದರೆಯಾದೀತು!. ಇಂತಹವರಿಗೇ ಹೀಗಾದರೆ, ಜನಸಾಮಾನ್ಯರ ಪಾಡೇನು? ದೇಶದ ಪ್ರಜಾಪ್ರಭುತ್ವಕ್ಕೆ ಇದಕ್ಕಿಂತ ಅಪಾಯಕಾರಿ ಇನ್ನೇನು? ಸಂಜೀವ ಭಟ್ ಅವರ ಪತ್ನಿ ಶ್ವೇತಾ ಭಟ್ ಹೇಳುವಂತೆ ಮಾಡದ ತಪ್ಪಿಗಾಗಿ ಶಿಕ್ಷೆ ಅನುಭವಿಸುವಂತೆ ಮಾಡುವ ಮೂಲಕ ಈ ದ್ವೇಷಸಾಧಕ ಸರಕಾರ ಕೂಡಾ ಇನ್ನಷ್ಟು ನೈತಿಕ ಪತನವನ್ನು ಹೊಂದುವುದು ಸಾಧ್ಯವಿಲ್ಲ. ಇದು ಎಲ್ಲಾ ಪ್ರಜಾಪ್ರಭುತ್ವವಾದಿಗಳಿಗೆ ಎಚ್ಚರಿಕೆಯ ಗಂಟೆ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)