varthabharthi


ಸಂಪಾದಕೀಯ

ತುರ್ತುಪರಿಸ್ಥಿತಿ: ಸ್ಮರಣೆಯೊಂದೇ ಸಾಲದು

ವಾರ್ತಾ ಭಾರತಿ : 26 Jun, 2019

ಜೂನ್ 25ನ್ನು ತುರ್ತು ಪರಿಸ್ಥಿತಿಯ ಕರಾಳ ದಿನವನ್ನು ಸ್ಮರಿಸುವುದಕ್ಕಾಗಿ ಬಳಸಲಾಗುತ್ತದೆ. ಮಾಜಿ ಪ್ರಧಾನಿ ದಿ. ಶ್ರೀಮತಿ ಇಂದಿರಾಗಾಂಧಿಯವರು 70ರ ದಶಕದಲ್ಲಿ ಈ ದೇಶದ ಮೇಲೆ ಹೇರಿದ್ದ ‘ತುರ್ತು ಪರಿಸ್ಥಿತಿ’ ಹೇಗೆ ಮಾನವ ಹಕ್ಕುಗಳನ್ನು ದಮನ ಮಾಡಿತು; ಪತ್ರಕರ್ತರು, ಸಾಮಾಜಿಕ ಹೋರಾಟಗಾರರ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಕಡಿವಾಣ ಹಾಕಿತು ಎನ್ನುವುದನ್ನು ಈ ದಿನ ನಾವು ಸ್ಮರಿಸಿದ್ದೇವೆ. ಹಾಗೆಯೇ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ, ಸರಕಾರದಿಂದ ದೌರ್ಜನ್ಯಕ್ಕೀಡಾದ ಮಹನೀಯರಿಗೂ ಗೌರವ ಅರ್ಪಿಸಿದ್ದೇವೆ. ಎಂದಿನಂತೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂಡ ತುರ್ತುಪರಿಸ್ಥಿತಿಯ ದಿನಗಳಿಗಾಗಿ ಮರುಗಿದ್ದಾರೆ. ಅಷ್ಟೇ ಅಲ್ಲ, ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸಿದ ನಾಯಕರನ್ನು ‘ಯೋಧ’ರು ಎಂದು ಬಣ್ಣಿಸಿದ್ದಾರೆ. ಈ ದೇಶದ ಆತ್ಮಕ್ಕೆ ತುರ್ತುಪರಿಸ್ಥಿತಿ ಭಾರೀ ದಕ್ಕೆಯನ್ನು ತಂದ ಕುರಿತಂತೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರಜಾಸತ್ತಾತ್ಮಕ ದೇಶದ ಕುರಿತಂತೆ ಪ್ರಧಾನಿಯ ಈ ಕಾಳಜಿ ನಿಜಕ್ಕೂ ಅಭಿನಂದನಾರ್ಹವಾಗಿದೆ. ಇನ್ನೊಮ್ಮೆ ಈ ದೇಶ ತುರ್ತು ಪರಿಸ್ಥಿತಿಯ ತೆಕ್ಕೆಗೆ ಸಾಗಬಾರದು ಎಂದಾದರೆ ನಾವು ಅಂದಿನ ಕರಾಳ ದಿನಗಳನ್ನು ಪದೇ ಪದೇ ನೆನಪಿಸಿಕೊಳ್ಳಬೇಕಾಗುತ್ತದೆ. ಆ ಮೂಲಕ ಪ್ರಜಾಪ್ರಭುತ್ವ ನಮಗೆ ನೀಡಿರುವ ಅಪಾರ ಅವಕಾಶಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ಮನವರಿಕೆ ಮಾಡಬೇಕಾಗಿದೆ.

ತುರ್ತುಪರಿಸ್ಥಿತಿಯನ್ನು ಕಾಂಗ್ರೆಸ್‌ನ ನಾಯಕಿ ಇಂದಿರಾಗಾಂಧಿ ಹೇರಿದ ಕಾರಣಕ್ಕಾಗಿಯಷ್ಟೇ ಮೋದಿಯವರು ಖಂಡಿಸಿದ್ದರೆ, ಅಂತಹ ಖಂಡನೆ ಈ ದೇಶ ಮತ್ತೊಮ್ಮೆ ತುರ್ತು ಪರಿಸ್ಥಿತಿಯ ಕರಾಳ ಬಂಧಕ್ಕೊಳಗಾಗುವುದನ್ನು ತಡೆಯಲಾರದು. ತುರ್ತುಪರಿಸ್ಥಿತಿಯ ಬಳಿಕ ಇಂದಿರಾಗಾಂಧಿ ಜೈಲು ಸೇರಿದರು. ಆದರೆ ಆ ಬಳಿಕ ಆರಿಸಿಬಂದ ಮೈತ್ರಿ ಸರಕಾರ ಈ ದೇಶದ ಜನರ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ ಮಾತ್ರವಲ್ಲ, ಜನರು ಮತ್ತೆ ಇಂದಿರಾಗಾಂಧಿಯನ್ನು ಭರ್ಜರಿ ಬಹುಮತದಿಂದ ಆರಿಸಿದರು ಎನ್ನುವುದನ್ನೂ ನಾವು ಸ್ಮರಿಸಬೇಕಾಗಿದೆ. ಇಂದಿರಾಗಾಂಧಿ ಇಂದು ಗುರುತಿಸಿಕೊಳ್ಳುತ್ತಿರುವುದು ತುರ್ತುಪರಿಸ್ಥಿತಿಯ ಕಾರಣಕ್ಕಾಗಿ ಮಾತ್ರವಲ್ಲ. ಅವರು ಪ್ರಧಾನಿಯಾಗಿ ಈ ದೇಶದ ತಳಸ್ತರದ ಜನರಿಗೆ ನೀಡಿದ ಕೊಡುಗೆ, ದೇಶವನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಸಿದ ರೀತಿ ಇಂದಿರಾರನ್ನು ಸ್ಮರಣೀಯವಾಗಿಸಿದೆ. ಬ್ಯಾಂಕ್‌ಗಳ ಖಾಸಗೀಕರಣ, ಭೂಸುಧಾರಣಾ ಕಾಯ್ದೆಯಂತಹ ಜನಪರ ಕಾರ್ಯಕ್ರಮಗಳನ್ನು ನೀಡಿದವರು ಇಂದಿರಾಗಾಂಧಿಯೇ ಆಗಿದ್ದಾರೆ. ಅವರ ಅವಧಿಯಲ್ಲಿಯೇ ಭಾರತ ಹಸಿರು ಕ್ರಾಂತಿಯನ್ನು ಸಾಧಿಸಿತು.

ವಿಜ್ಞಾನ, ತಂತ್ರಜ್ಞಾನ, ಕೃಷಿ ಇತ್ಯಾದಿ ಕ್ಷೇತ್ರಗಳು ವಿಸ್ತಾರಗೊಳ್ಳುವುದಕ್ಕೂ ಅವರು ಕಾರಣವಾದರು. ಆದರೆ ಅದಕ್ಕಾಗಿ ಇಂದಿರಾಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಗೆ ವಿನಾಯಿತಿ ನೀಡಬೇಕಾಗಿಲ್ಲ. ಯಾಕೆಂದರೆ ನೂರಾರು ವರ್ಷಗಳ ಸುದೀರ್ಘ ಹೋರಾಟದ ಬಳಿಕ ಈ ದೇಶಕ್ಕೆ ಸಿಕ್ಕಿದ ಸ್ವಾತಂತ್ರ ಕೆಲ ಕಾಲವಾದರೂ ಅಮಾನತಿಗೊಳಗಾದುದು ಪ್ರಜಾಸತ್ತಾತ್ಮಕ ದೇಶವೊಂದರ ಪಾಲಿಗೆ ಅಳಿಸಲಾಗದ ಕಳಂಕ. ನಾವಿಂದು ತುರ್ತುಪರಿಸ್ಥಿತಿಯನ್ನು ಖಂಡಿಸಬೇಕಾದುದು, ಅದನ್ನು ಪದೇ ಪದೇ ನೆನೆಯಬೇಕಾದುದು ಮುಂದೆಂದೂ ಅಂತಹ ಸ್ಥಿತಿ ಈ ದೇಶಕ್ಕೆ ಬರಬಾರದು ಎನ್ನುವ ಕಾರಣಕ್ಕಾಗಿ. ತುರ್ತು ಪರಿಸ್ಥಿತಿಯ ದಿನವನ್ನು ಸ್ಮರಿಸುತ್ತಾ ‘ಈ ದೇಶವನ್ನು ಎಂದಿಗೂ ಅಂತಹ ಸ್ಥಿತಿಯ ಕಡೆಗೆ ಕೊಂಡೊಯ್ಯಲಾರೆ’ ಎನ್ನುವ ಭರವಸೆಯನ್ನು ಪ್ರಧಾನಿ ಮೋದಿ ದೇಶಕ್ಕೆ ನೀಡಬೇಕಾಗಿದೆ.

 ಆದರೆ ಘೋಷಿತ ತುರ್ತುಪರಿಸ್ಥಿತಿಗಿಂತಲೂ ಅಪಾಯಕಾರಿಯಾದುದು ಅಘೋಷಿತ ತುರ್ತು ಪರಿಸ್ಥಿತಿ. ದೇಶ ಇಂದು ಅಂತಹ ಸನ್ನಿವೇಶಕ್ಕೆ ಮುಖಾಮುಖಿಯಾಗಿ ನಿಂತಿದೆ. ಅಧಿಕೃತವಾಗಿ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾಗಿಲ್ಲ ಎನ್ನುವುದನ್ನು ಹೊರತು ಪಡಿಸಿದರೆ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಏನೆಲ್ಲ ಸಂಭವಿಸಿದೆಯೋ ಅವೆಲ್ಲವುಗಳಿಗೆ ದೇಶ ಸಾಕ್ಷಿಯಾಗುತ್ತಿದೆ. ಈ ದೇಶದ ತನಿಖಾ ಸಂಸ್ಥೆಗಳೆಲ್ಲ ಸರಕಾರದ ಕೈಗೊಂಬೆಗಳಾಗಿವೆ. ಸಿಬಿಐಯ ರೆಕ್ಕೆ ಪುಕ್ಕಗಳನ್ನೆಲ್ಲ ಕತ್ತರಿಸಿ ಹಾಕಲಾಗಿದೆ. ಸರಕಾರದ ಧೋರಣೆಗಳನ್ನು ಟೀಕಿಸುವ, ಖಂಡಿಸುವ ಮಾಧ್ಯಮಗಳ ವಿರುದ್ಧ ದಾಳಿಗಳು ನಡೆಯುತ್ತವೆ. ಪತ್ರಕರ್ತರನ್ನು ಪೊಲೀಸ್ ಅಧಿಕಾರಿಗಳೇ ಸಾರ್ವಜನಿಕವಾಗಿ ಥಳಿಸುತ್ತಿದ್ದಾರೆ. ಗುಜರಾತ್ ಹತ್ಯಾಕಾಂಡದ ಕುರಿತಂತೆ ಸತ್ಯ ಹೇಳಿದ ಕಾರಣಕ್ಕಾಗಿಯೇ ಮಾಜಿ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಜೀವಾವಧಿ ಶಿಕ್ಷೆಯಾಯಿತು. ಸಾಮಾಜಿಕ ತಾಣಗಳಲ್ಲಿ ಮುಖ್ಯಮಂತ್ರಿಗಳನ್ನು, ಪ್ರಧಾನಮಂತ್ರಿಯನ್ನು ಟೀಕಿಸಿದ ಯುವಕರನ್ನು ಯಾವ ಕಾರಣವೂ ನೀಡದೆ ಜೈಲಿಗೆ ತಳ್ಳಲಾಗುತ್ತಿದೆ. ಸರಕಾರವನ್ನು ಟೀಕಿಸಿದರೆ ದೇಶವನ್ನು ಟೀಕಿಸಿದಂತೆ ಎಂಬ ಭಯದ ವಾತಾವರಣ ಸೃಷ್ಟಿಯಾಗಿದೆ. ಆದಿವಾಸಿಗಳ ಮತ್ತು ದಲಿತರ ಪರವಾಗಿ ಸಾರ್ವಜನಿಕವಾಗಿ ಹೋರಾಟ ನಡೆಸಿದ ಸಾಮಾಜಿಕ ಕಾರ್ಯಕರ್ತರು ‘ನಗರ ನಕ್ಸಲ್’ ಆರೋಪದಲ್ಲಿ ಜೈಲು ಸೇರುತ್ತಿದ್ದಾರೆ. ಮಗದೊಂದೆಡೆ ದೇಶಾದ್ಯಂತ ಗುಂಪು ಥಳಿತ, ಹತ್ಯೆ ಘಟನೆಗಳು ಹೆಚ್ಚುತ್ತಿವೆ. 2019ರಲ್ಲಿ ಅಂದರೆ ಈ ವರ್ಷದ ಆರು ತಿಂಗಳಲ್ಲಿ ಹನ್ನೊಂದು ಗುಂಪು ಥಳಿತ ಪ್ರಕರಣಗಳು ನಡೆದಿವೆ. ನಾಲ್ಕು ಜನರು ಸತ್ತಿದ್ದು 22 ಮಂದಿಗೆ ಗಂಬೀರ ಗಾಯಗಳಾಗಿವೆ. ಪ್ರಧಾನಿ ಮೋದಿಯವರು ಈ ಬಗ್ಗೆ ಯಾವ ಹೇಳಿಕೆಯನ್ನೂ ನೀಡಿಲ್ಲ. ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡಿದ ನಾಯಕರನ್ನು ‘ಯೋಧರು’ ಎಂದು ಕರೆದ ಪ್ರಧಾನಿ, ಸರಕಾರದ ನೀತಿಯ ವಿರುದ್ಧ ಪ್ರತಿಭಟನೆ ನಡೆಸಿ ಜೈಲು ಸೇರಿದವರನ್ನು ಅದೇ ರೀತಿಯಲ್ಲಿ ಕರೆಯುವುದಕ್ಕೆ ಸಿದ್ಧರಿದ್ದಾರೆಯೇ? ಬರೇ ಕಾಂಗ್ರೆಸನ್ನು ಟೀಕಿಸುವುದಕ್ಕಾಗಿ ತುರ್ತುಪರಿಸ್ಥಿತಿಯ ಕುರಿತಂತೆ ಮೊಸಳೆ ಕಣ್ಣೀರು ಸುರಿಸುವ ಪ್ರಧಾನಿ ಸದ್ಯ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನದ ಬಗ್ಗೆ ಯಾಕೆ ವೌನವಾಗಿದ್ದಾರೆ?

ಇಂದಿರಾಗಾಂಧಿಯ ತುರ್ತುಪರಿಸ್ಥಿತಿ ಅಂದಿನ ತಳಸ್ತರದ ಬಡವರಿಗೆ ಅನುಭವಕ್ಕೆ ಬರಲಿಲ್ಲ. ರಾಜಕಾರಣಿಗಳು, ಮಾನವ ಹಕ್ಕು ಹೋರಾಟಗಾರರು, ಪತ್ರಕರ್ತರೇ ಅದರ ನೇರ ಗುರಿಯಾಗಿದ್ದರು. ಇದೇ ಸಂದರ್ಭದಲ್ಲಿ ಜಮೀನ್ದಾರರ ಕೈಯಿಂದ ಭೂಮಿಯನ್ನು ಕಿತ್ತು ಉಳುವವನಿಗೆ ನೀಡಲು ತುರ್ತುಪರಿಸ್ಥಿತಿ ಸಾಕಷ್ಟು ಸಹಾಯ ಮಾಡಿತ್ತು. ಭೂಸುಧಾರಣೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ತುರ್ತುಪರಿಸ್ಥಿತಿಯನ್ನು ದೇವರಾಜ ಅರಸರು ಪೂರಕವಾಗಿ ಬಳಸಿಕೊಂಡಿದ್ದರು. ಆದರೆ ಮೋದಿಯ ಅಘೋಷಿತ ತುರ್ತುಪರಿಸ್ಥಿತಿಯ ಪರಿಣಾಮವಾಗಿ ಈ ದೇಶದ ಸಹಸ್ರಾರು ಜನರು ತಮ್ಮದೇ ಹಣಕ್ಕಾಗಿ ಬ್ಯಾಂಕಿನ ಮುಂದೆ ಸಾಲು ನಿಲ್ಲಬೇಕಾಯಿತು. ಸಾವಿರಾರು ಉದ್ದಿಮೆಗಳು ನಾಶವಾದವು. ನೋಟು ನಿಷೇಧದಿಂದ ಭಾರತದ ಆರ್ಥಿಕತೆ ಜರ್ಜರಿತವಾಯಿತು. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿವೆ. ಆರ್‌ಬಿಐ ತತ್ತರಿಸಿ ಕೂತಿದೆ.

ಅಭಿವೃದ್ಧಿಯಲ್ಲಾಗುತ್ತಿರುವ ಹಿನ್ನಡೆಯನ್ನು ಮುಚ್ಚಿ ಹಾಕಲು ಜನರನ್ನು ಸರಕಾರ ಭಾವನಾತ್ಮಕವಾಗಿ ಕೆರಳಿಸುತ್ತಿದೆ. ಶ್ರೀರಾಮ, ಗೋಮಾತೆ ಎಂಬಿತ್ಯಾದಿ ಪದಗಳನ್ನು ಜನರ ಮುಂದಿಟ್ಟು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಹೊರಟಿದೆ. ಪ್ರಶ್ನಿಸಿದವರನ್ನು, ಟೀಕಿಸಿದವರನ್ನು ಜೈಲಿಗೆ ದಬ್ಬುತ್ತಿದೆ. ಸದ್ಯಕ್ಕೆ ಪರಿಸ್ಥಿತಿ ಹೀಗೆ ಮುಂದುವರಿದರೆ ಈ ಅಘೋಷಿತ ತುರ್ತುಪರಿಸ್ಥಿತಿ ಘೋಷಿತ ತುರ್ತುಪರಿಸ್ಥಿತಿಯಾಗಲು ಹೆಚ್ಚು ಸಮಯ ಬೇಕಾಗಿಲ್ಲ. ಇಂದಿರಾಗಾಂಧಿ ಎಂದಿಗೂ ಧರ್ಮ-ಧರ್ಮಗಳ ನಡುವೆ ಕಿಚ್ಚು ಹಚ್ಚಿ ರಾಜಕೀಯ ನಡೆಸಿರಲಿಲ್ಲ. ಆದರೆ ಮೋದಿಯ ಭಾರತದಲ್ಲಿ ಕೋಮು ವಿಷ ಉಲ್ಬಣಿಸಿದೆ. ಆದುದರಿಂದಲೇ ಭವಿಷ್ಯದ ತುರ್ತುಪರಿಸ್ಥಿತಿ ಇಂದಿರಾಗಾಂಧಿಯ ತುರ್ತುಪರಿಸ್ಥಿತಿಗಿಂತ ಭೀಕರವಾಗಿ ದೇಶವನ್ನು ಸರ್ವನಾಶದೆಡೆಗೆ ಕೊಂಡೊಯ್ಯಬಹುದು. ಅದಕ್ಕೆ ಮೊದಲು ಪ್ರಜಾಸತ್ತೆಯ ಮೇಲೆ ನಂಬಿಕೆಯಿರುವವರೆಲ್ಲ ಒಂದಾಗಿ ಅದನ್ನು ತಡೆಯಲು ಕಾರ್ಯಯೋಜನೆಯನ್ನು ರೂಪಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)