varthabharthi


ಅನುಗಾಲ

ಕನ್ನಗಿಯ ಶಾಪ

ವಾರ್ತಾ ಭಾರತಿ : 27 Jun, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ವಿರೋಧ ಪಕ್ಷದವರು ಆಡಳಿತ ಪಕ್ಷದ ಧೋರಣೆಗಳನ್ನು ಟೀಕಿಸುವುದು ಸಹಜವೇ. ಆದರೆ ಈಕೆ ಭಾಜಪದ ಬಹುಮತವನ್ನು ಗೌರವಿಸುತ್ತಲೇ ಭಿನ್ನಮತವು ಪ್ರಜಾತಂತ್ರದ ಜೀವಾಳವೆಂದಳು. ಲೋಕಸಭೆಯಲ್ಲಿ ಸಹಜವಾದ ನಿಯಂತ್ರಣಗಳು ಅಥವಾ ಮೌಲ್ಯಮಾಪನಗಳಿಲ್ಲದಿರುವುದರಿಂದ ಇವು ಬಹು ಮುಖ್ಯವೆಂದಳು. ಆದ್ದರಿಂದ ತಮಗೆ ನೀಡಲಾದ ಎಲ್ಲ ಅವಕಾಶವನ್ನೂ ಬಳಸಿಕೊಳ್ಳುವುದಾಗಿ ಹೇಳಿದಳು. ಬಹುಮತಕ್ಕೆ ವಿರೋಧವಾದ ಅಲ್ಪಮತದ ಧ್ವನಿಯನ್ನು ಕೇಳಿಸುವುದು ಮತ್ತು ಕೇಳುವುದು ಅಗತ್ಯವಾಗಿದೆಯೆಂದಳು. ‘ಅಚ್ಛೇದಿನ್’ ಎಂಬ ಭ್ರಮಾಜಗತ್ತನ್ನು ಸೃಷ್ಟಿಸಿ ಮತ್ತು ಭಾಜಪದ ಭಾರತ ಸಾಮ್ರಾಜ್ಯದಲ್ಲಿ ಸೂರ್ಯ ಮುಳುಗನೆಂದು ಹೇಳಿದರೂ ಕಣ್ಣು ತೆರೆದರೆ ಇವಕ್ಕೆ ವ್ಯತಿರಿಕ್ತವಾದ ಸಂಕೇತಗಳು ಕಾಣುತ್ತಿವೆಯೆಂದಳು.


ದೇಶ ಮತ್ತೆ ಭಾಜಪದ 5 ವರ್ಷಗಳ ಆಡಳಿತಕ್ಕೆ ಒಳಗಾಗಿದೆ. ಎಲ್ಲ ರಾಜಕೀಯ ವಿಶ್ಲೇಷಕರ ಅಭಿಪ್ರಾಯಗಳನ್ನು ತಲೆಕೆಳಗು ಮಾಡಿದ ಚುನಾವಣೆ ಇದು. ಇದರ ಪರಿಣಾಮ ಈಗಾಗಲೇ ಗೊತ್ತಾಗಲು ಆರಂಭವಾಗಿದೆ. ಬಹುಮತದ ಅಭಿಪ್ರಾಯ ಅಂತಿಮ ಸತ್ಯವಾಗಿರಬೇಕಾಗಿಲ್ಲ ಎಂಬುದನ್ನು ವಿಶ್ವದ ಬಹುತೇಕ ಎಲ್ಲ ಪ್ರಜಾಪ್ರಭುತ್ವಗಳು ಸಾಬೀತುಮಾಡಿವೆ. ಹಾಗೆಂದು ಇದನ್ನು ಬದಲಾಯಿಸಿ ಏಕವ್ಯಕ್ತಿ ಚಕ್ರಾಧಿಪತ್ಯ ಇಲ್ಲವೇ ಒಂದು ವ್ಯೆಹದೊಳಗಣ ಮಂದಿ ಇಡೀ ದೇಶವನ್ನು ತಮ್ಮ ಆಡಳಿತಕ್ಕೊಳಪಡಿಸು ವುದು ದಾರುಣ ದರಿದ್ರಾವಸ್ಥೆಗೆ ಮಾರಣ-ಕಾರಣವಾಗಬಲ್ಲುದು ಎಂಬ ಅರಿವಿದ್ದೇ ಜನರು ಪ್ರಜಾಪ್ರಭುತ್ವಕ್ಕೆ ಅಂಟಿ ನಿಂತಿದ್ದಾರೆ/ಕುಳಿತಿದ್ದಾರೆ. (ಕುಳಿತವರೇ ಹೆಚ್ಚು!)

ಮೊನ್ನೆ ಕಳೆದ ಜೂನ್ 25ನೇ ದಿನ 44 ವರ್ಷಗಳ ಹಿಂದೆ ತುರ್ತುಸ್ಥಿತಿಯನ್ನು ದೇಶದ ಮೇಲೆ ಹೇರಿದ ದಿನ. ಇದನ್ನು ನೆನಪಿಸಿಕೊಳ್ಳಬೇಕು-ದೇಶದ ಮುನ್ನಡೆಗಾಗಿ ಮತ್ತು ಇಂತಹ ದುರ್ಘಟನೆ ಮತ್ತೆ ಬಾರದಿರಲಿ ಎಂಬ ಕಾರಣಕ್ಕಾಗಿ. ಆದರೆ ಅದನ್ನು ರಾಜಕೀಯ ಕಾರಣಗಳಿಗಾಗಿ ನೆನಪಿಸುವುದು ಅಷ್ಟೇ ದುರ್ಘಟನೆ. 1984ರ ಸಿಖ್ ಹತ್ಯಾಕಾಂಡ, 2002ರ ಗುಜರಾತ್ ಹತ್ಯಾಕಾಂಡ ಇವು ಜಲಿಯನ್‌ವಾಲಾಬಾಗ್ ಹತ್ಯಾಕಾಂಡಕ್ಕಿಂತ ಕಡಿಮೆ ದುರಂತಗಳೇನೂ ಅಲ್ಲ. ಇವನ್ನು ಮಾನವೀಯ ಮೌಲ್ಯಗಳಿಗಾಗಿಯಷ್ಟೇ ನೆನಪಿಸಿಕೊಳ್ಳಬೇಕೇ ವಿನಾ ರಾಜಕೀಯ ಲಾಭಕ್ಕಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ನಡೆಯುತ್ತಿರುವ ಮತಾಂಧತಾ ಕಾರಣವಾದ ಸಮೂಹ ಥಳಿತ/ಕೊಲೆ, ಸದ್ಯದ ರಾಜಕೀಯದ ಭಾಗವಾಗಿರುವುದರಿಂದ ಇದನ್ನು ವಿಪಕ್ಷ ರಾಜಕಾರಣಿಗಳು ಪ್ರಶ್ನೆಮಾಡುವುದು ಪ್ರಜಾತಂತ್ರಕ್ಕನುಗುಣವಾಗಿ ಸಹಜವಾಗಿದೆ. ಆದರೆ ಇದಕ್ಕೆ ಸಮರ್ಪಕವಾದ ಮತ್ತು ಹೊಣೆಗಾರಿಕೆಯ ಉತ್ತರವನ್ನು ನೀಡುವುದಕ್ಕೆ ಬದಲಾಗಿ ಆಳುವ ಸರಕಾರ ಹಳೆಯದನ್ನೇ ವೈಭವೀಕರಿಸಿ ವಿರೋಧಪಕ್ಷಗಳ ಬಾಯಿಮುಚ್ಚಿಸಲು ಹೊರಟಿದೆ.

ಚರಿತ್ರೆಯಲ್ಲಿ ಆಗಿರುವ ಅನೇಕ ಅನ್ಯಾಯಗಳನ್ನು ಸರಿಪಡಿಸಲು ಯಾರಿಗೂ ಸಾಧ್ಯವಿಲ್ಲ. ಹಾಗೆಂದು ಅದನ್ನೇ ಅಜ್ಜಿಯ ಅರಿವೆಯ ಚಿಂತೆಯಾಗಿ ಮಾರ್ಪಡಿಸಿ ಅಮಾಯಕರನ್ನು ಹಾದಿ ತಪ್ಪಿಸುವುದು ಭವಿಷ್ಯದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ನಿಲ್ಲಬಲ್ಲುದು ಎಂಬ ಪರಿವೆಯೇ ಆಳುವವರಿಗಿಲ್ಲದಂತೆ ಕಾಣಿಸುತ್ತದೆ. ಒಂದೆರಡು ಆಕರ್ಷಕ ಮತ್ತು ಆಸಕ್ತಿಪೂರ್ಣ (ಹೀಗೆಂದಾಕ್ಷಣ ಅವು ಒಳ್ಳೆಯವೆಂದೇನೂ ಅಲ್ಲ!) ಬೆಳವಣಿಗೆಗಳು ಈ ದೇಶದ ಸದ್ಯದ ಗತಿ-ಸ್ಥಿತಿಯನ್ನು ಬಯಲು ಮಾಡುತ್ತವೆ. ಮೊದಲನೆಯದು, ಬಹುತೇಕ ಮಾಧ್ಯಮಗಳು ತಮ್ಮ ಮಾನಸಿಕ ಮತ್ತು ಬೌದ್ಧಿಕ ಸ್ವಾತಂತ್ರ್ಯವನ್ನು ಆಳುವವರ ಜೋಳಿಗೆಗೆ ಅಡವಿಟ್ಟು ಗುಲಾಮಗಿರಿಗೆ ಶರಣಾದದ್ದು. ಇಂದು ಬಹುತೇಕ ಮಾಧ್ಯಮಗಳು ಆಳುವವರ ಧ್ವನಿವರ್ಧಕಗಳಂತೆ, ತುತ್ತೂರಿಗಳಂತೆ, ವಂದಿ-ಮಾಗಧರಂತೆ ಭೋ ಪರಾಕ್ ಎನ್ನುತ್ತವೆಯೇ ವಿನಾ ತಮಗೆ ಪ್ರಜಾತಂತ್ರ ನೀಡಿದ ಹೊಣೆಗಾರಿಕೆಯನ್ನು ನಿರ್ವಹಿಸಲು ವಿಫಲವಾಗಿವೆ.

ಅವರು ರಾಜಕಾರಣಿಗಳನ್ನು ಪ್ರಶ್ನಿಸಲು ವಿಫಲರಾಗಿದ್ದಾರೆ. ಕೇವಲ ಶೀಘ್ರಲಿಪಿಕಾರರಂತೆ ಇಲ್ಲವೇ ಈಗಾಗಲೇ ಸಿದ್ಧಪಡಿಸಿದ ಉತ್ತರಪತ್ರಿಕೆಗಳಿಗೆ ಸರಿಯಾದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವವರಂತೆ ವರ್ತಿಸುತ್ತಾರೆ. ಇದು ಅನಿವಾರ್ಯವೇನೋ ಎಂಬಂತಹ ಪರಿಸ್ಥಿತಿ ಹೀಗೆ ವರ್ತಿಸಿದ ಮಾಧ್ಯಮಗಳದ್ದು. ಆಳುವವರನ್ನು ಟೀಕಿಸಿದರೆ ಅಪಾಯ ಕಟ್ಟಿಟ್ಟದ್ದು ಎಂಬ ಹಾಗೆ ಪರಿಸ್ಥಿತಿಯಿದೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಅಥವಾ ಹಂಚಿದ ಟೀಕೆಗಳನ್ನು ಇಂದು ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವ ಆಳುವವರೂ ಸಹಿಸುವುದಿಲ್ಲ. (ವಿವಿಧ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗುವ ಪರಿಯನ್ನು ಗಮನಿಸಿದರೆ ದೇಶಕ್ಕೆ ಒಂದೇ ಪಕ್ಷ ಸಾಕು ಮತ್ತು ಅದಕ್ಕೆ ಕಾಂಗ್ರೆಸ್, ಭಾಜಪ, ಎಸ್ಪಿ, ಬಿಎಸ್ಪಿ ಇಂತಹ ಕೃತಕ ಎಡ-ಬಲ ಹೆಸರುಗಳನ್ನು ತೊರೆದು ‘ಆಳುವ ಪಕ್ಷ’ ಎಂದು ಹೆಸರಿಡಬಹುದು ಎಂಬಂತಿದೆ!) ಇನ್ನು ಮುಂದೆ ಈ ದೇಶದಲ್ಲಿ ‘ಆಳುವವರು’ ಮತ್ತು ‘ಅಳುವವರು’ ಎಂಬ ಎರಡೇ ವರ್ಗಗಳಿರಬಹುದೆಂದು ಅನ್ನಿಸುತ್ತದೆ!

ಸದ್ಯ ಆಳುವವರು ಬಹುವಾಗಿ ಟೀಕಿಸುವ ನೆಹರೂ ಯುಗದಲ್ಲಿ ಟೀಕೆಗಳನ್ನು ನೋಡಿ ರಾಜಕಾರಣಿಗಳು ನಾಚಿಕೊಳ್ಳದಿದ್ದರೂ ನಕ್ಕು ಅವನ್ನು ಅಳ್ಳಕಮಾಡುತ್ತಿದ್ದರು. ಅಂತರಂಗದಲ್ಲಿ ಮುಂದೆ ಇಂತಹ ವ್ಯಂಗ್ಯಕ್ಕೆ ತುತ್ತಾಗದಂತೆ ಜಾಗ್ರತೆ ವಹಿಸುತ್ತಿದ್ದರು. ಇಂದು ಹಾಗಲ್ಲ: ಯಾರೇ ಕೂಗಾಡಲಿ ಊರೇ ಹಾರಾಡಲಿ ನಿನ್ನ ನೆಮ್ಮದಿಗೆ ಭಂಗವಿಲ್ಲ ಎಂದು (ಸಂಪತ್ತಿಗೆ ಸವಾಲ್ ಎಂಬ ಕನ್ನಡ ಚಲನ ಚಿತ್ರದಲ್ಲಿ ಎಮ್ಮೆಗೆ ಹೇಳುವ ಮಾತನ್ನು) ಇಂದಿನ ಬಹುಪಾಲು ರಾಜಕಾರಣಿಗಳಿಗೆ ಹೇಳಬಹುದಾಗಿದೆ. ಎಮ್ಮೆಗಿಂತಲೂ ದಪ್ಪದ ಚರ್ಮದ ನಮ್ಮ ಜನಪ್ರತಿನಿಧಿಗಳು ಕೆಸರಿನಲ್ಲಿ ಮಲಗಿದರೆ ತಮ್ಮ ಆರೋಗ್ಯಕ್ಕೆ ಒಳಿತು ಮಾತ್ರವಲ್ಲ ತಮ್ಮ ಚರ್ಮ ಇನ್ನಷ್ಟು ದಪ್ಪವಾಗಿ ತಾವೆಲ್ಲರೂ ಮಣ್ಣಿನ ಮಕ್ಕಳಂತೆ ಕಾಣಿಸುತ್ತೇವೆಂಬ ನಿರುಪಾಧಿಕ ಹೆಮ್ಮೆಯಿಂದ ಬದುಕುತ್ತಾರೆ. ಇದು ನಮ್ಮ ಮಾಧ್ಯಮಗಳಿಗೆ ಅನುಕೂಲಕರ ವಾತಾವರಣವನ್ನು ಒದಗಿಸಿದೆ.

ಇದಕ್ಕೆ ಪರ್ಯಾಯವಾಗಿ ಸ್ವತಂತ್ರವಾಗಿ ಇಲ್ಲವೇ ಮಾಧ್ಯಮನೀತಿಯ ಹೊಣೆಗಾರಿಕೆಯಲ್ಲೊಂದಾದ ವಿರೋಧಪಕ್ಷದಂತೆ ವರ್ತಿಸುವ ಮಾಧ್ಯಮಗಳು ಸಾಕಷ್ಟು ತೊಂದರೆಯನ್ನನುಭವಿಸುತ್ತಾರೆ. ಈ ಬಾರಿ ಭಾರೀ ಬಹುಮತ ಪಡೆದ ಭಾಜಪವು ತನಗಾಗದವರನ್ನು ಪಳಗಿಸಲು ಇಲ್ಲವೆ ಖೆಡ್ಡಾಕ್ಕೆ ಇಳಿಸಲು ಬೇಕಷ್ಟು ವ್ಯೆಹಗಳನ್ನು ಸಿದ್ಧಪಡಿಸಿದೆ. ಈ (ಕು)ತಂತ್ರಗಳಲ್ಲಿ ಕೇಂದ್ರ ಸರಕಾರದ ಅನೇಕ ‘ಸ್ವಾಯತ್ತ’ (ಸಿಬಿಐ, ಆರ್‌ಬಿಐ, ಎನ್‌ಐಎ, ಇಡಿ, ಚುನಾವಣಾ ಆಯೋಗ ಮುಂತಾದ) ಸಂಸ್ಥೆಗಳು ನೇರವಾಗಿ ಮತ್ತು ನೋಟಕರು ಬೆರಗಾಗುವಂತೆ ಭಾಗವಹಿಸುತ್ತಿರುವುದು ವಿಷಾದನೀಯ ಬೆಳವಣಿಗೆ. ನಮ್ಮ ಸರಕಾರದ ಪ್ರಸಾರ ಭಾರತಿಯಂತೂ ‘ಕೇಂದ್ರ ಸರಕಾರದಲ್ಲಿ ಆಳುವ ಪಕ್ಷದ’ ಗುಲಾಮಗಿರಿಯನ್ನು ಒಪ್ಪಿಕೊಂಡು ವರುಷಗಳೇ ಸಂದಿವೆ.

ಅದರ ಅಧ್ಯಕ್ಷರು ತಮ್ಮ ಪದವಿಯ ಲಜ್ಜೆಯನ್ನೂ ಬಿಟ್ಟು ವಿರೋಧ ಪಕ್ಷಗಳನ್ನು ಟೀಕಿಸಲು ಬಳಸುವ ಆಧಾರರಹಿತ ಆಪಾದನೆಗಳನ್ನು ಮತ್ತು ಅವುಗಳನ್ನು ಪ್ರಕಟಿಸುವ ನಮ್ಮ ಸರ್ವಸ್ವತಂತ್ರ ಮಾಧ್ಯಮಗಳನ್ನು ಗಮನಿಸಿದರೆ, ಯಾಕೆ ಜನರು ಇಂತಹ ಕೇಂದ್ರಾಡಳಿತ ಮಾಧ್ಯಮಗಳನ್ನು ಬರಿಯ ಸಂಗೀತ/ಸಿನೆಮಾ ಹಾಡುಗಳನ್ನು ಮತ್ತು ಇತರ ಚಿಲ್ಲರೆ ಮನರಂಜನೆಗಳನ್ನು ಅಥವಾ ತಮ್ಮದೇ ಮತ್ತು ತಮ್ಮ ಬಂಧು-ಮಿತ್ರರ ಹೆಸರುಗಳನ್ನು ಕೇಳಲು ಬಳಸಿಕೊಳ್ಳುತ್ತಾರೆಂಬುದು ಅರ್ಥವಾಗಬಹುದು. ಗಂಭೀರವಾದ ಮತ್ತು ಸಂವೇದನಾಶೀಲ ಅನುಭವಗಳು ಅಪವಾದಗಳಂತೆ ಅದೂ ಕೆಲವು ಸೃಜನಶೀಲ ನೌಕರರ ಪ್ರಯತ್ನಗಳಿಂದಷ್ಟೇ ಪ್ರಸಾರವಾಗುತ್ತವೆ. ಭವಿಷ್ಯದಲ್ಲಿ ಇವೆಲ್ಲವೂ ‘ಮನ್ ಕೀ ಬಾತ್’ನೊಳಗೆ ಸಮಾಧಿಯಾಗಬಹುದೇನೋ?

ಆದರೂ ಪ್ರಜಾತಂತ್ರದಲ್ಲಿ ವಿರೋಧಪಕ್ಷಗಳು ಇನ್ನೂ ಜೀವಂತವಾಗಿವೆಯೆಂಬುದೇ ಆಶಾದಾಯಕ ವಾತಾವರಣವನ್ನುಳಿಸಿದೆ. ಮೊನ್ನೆಯಷ್ಟೇ ಆರಂಭವಾದ ಸಂಸತ್ತಿನಲ್ಲಿ ವಿರೋಧ ಪಕ್ಷ ತೀರಾ ಅಲ್ಪಸಂಖ್ಯಾತವೆಂಬುದು ಎಲ್ಲರಿಗೂ ಅರಿವಿದೆ. ಯಾವುದೇ ಮಸೂದೆಯನ್ನು ಅಂಗೀಕರಿಸುವ ಇಲ್ಲವೇ ನಿರಾಕರಿಸುವ ಶಕ್ತ ಬಹುಮತವನ್ನು ಆಳುವ ಪಕ್ಷ ಹೊಂದಿದೆ. ಇಂತಹ ಸಂದರ್ಭದಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರ ಬಗ್ಗೆ ಅಪೂರ್ವ ಸೌಜನ್ಯವನ್ನು ಹೊಂದಿರಬೇಕಾದ್ದು ಮನುಷ್ಯತ್ವದ ಘನತೆ. ಆದರೆ ಈ ಬಹುಮತವನ್ನು ರಾಕ್ಷಸೀಯ ಅಟ್ಟಹಾಸದಿಂದ ಪ್ರಕಟಿಸುವುದು ಪ್ರಜಾತಂತ್ರದ ಅಣಕ. ಏಕೆಂದರೆ ಕೆಲವೇ ಮತಗಳಿಂದ ಗೆದ್ದವರೂ ಉಳಿಕೆ ಮತಗಳನ್ನು ನಗಣ್ಯವಾಗಿಸುವ ವ್ಯವಸ್ಥೆ (ಅವಸ್ಥೆ!) ನಮ್ಮಲ್ಲಿದೆ. ಪ್ರಧಾನಿಯವರು ಎಲ್ಲ ಸಂಸದೀಯರ ಮಾತುಗಳೂ ಪರಿಗಣನೆಗೆ ಅರ್ಹವೆಂಬ ವೇದಾಂತವನ್ನು ಹೇಳಿದರೂ ಅವರಿಗೆ ಮತ್ತು ಅವರ ಬೆಂಬಲಿಗರಿಗೆ/ಅನುಯಾಯಿಗಳಿಗೆ ಈ ಮಾತು ಕಂಠದಲ್ಲಷ್ಟೇ ಉಳಿಯುವ ವಿಷವೆಂಬುದು ಈಗಾಗಲೇ ವಿದಿತವಾಗಿದೆ. ಒಂದು ಚಿಕ್ಕ ನಿದರ್ಶನವನ್ನು ಈ ಅಭಿಪ್ರಾಯದ ಸಮರ್ಥನೆಗಾಗಿ ನೀಡಿ ಈ ಚರ್ಚೆಯನ್ನು ಮುಗಿಸಬಹುದು:

ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮಿತ್ರ. ಕೋಲ್ಕ್ಕತಾ ಮತ್ತು ಅಸ್ಸಾಮಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ಈಕೆ ಅಮೆರಿಕದಲ್ಲಿ ಪದವಿ ಮತ್ತು ಉನ್ನತ ಶಿಕ್ಷಣವನ್ನು ಪಡೆದು ಅಲ್ಲೇ ಪ್ರತಿಷ್ಠಿತ ಜೆಪಿ ಮಾರ್ಗನ್ ಸಂಸ್ಥೆಯ ಉಪಾಧ್ಯಕ್ಷೆಯಾಗಿ ದುಡಿದವಳು. 2008ರಲ್ಲಿ ಭಾರತಕ್ಕೆ ಮರಳಿ ರಾಜಕೀಯವನ್ನು ಪ್ರವೇಶಿಸಿದವಳು. (ಈಕೆಯ ಶಿಕ್ಷಣದ ದಾಖಲೆಗಳು ಲಭ್ಯವಿವೆ!) ಮೊದಲಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯಾಗಿದ್ದ ಈಕೆ ಬಳಿಕ ತೃಣಮೂಲ ಕಾಂಗ್ರೆಸ್ ಸೇರಿದಳು. 43 ವರ್ಷ ವಯಸ್ಸಿನ ಈಕೆ ಪಶ್ಚಿಮ ಬಂಗಾಳದ ಕರೀಮ್‌ಪುರದ ಶಾಸನಸಭಾ ಕ್ಷೇತ್ರದ ಶಾಸಕಿಯಾಗಿದ್ದವಳು. ಈ ಬಾರಿಯ ಮಹಾ ಚುನಾವಣೆಯಲ್ಲಿ ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದವಳು. ಶಾಸನ ಸಭೆಯ ಅನುಭವವಿದ್ದರೂ ಲೋಕಸಭೆಗೆ ಮೊದಲ ಪ್ರವೇಶ. ಆದರೆ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದದ ನಿಲುವಿನ ವಿರೋಧವಾಗಿ ಮಾಡಿದ ತನ್ನ ಮೊದಲ ಪ್ರತಿಕ್ರಿಯಾ ಭಾಷಣದಲ್ಲೇ ಸಂಸತ್ ಬೆರಗಾಗುವಂತೆ ಅಸ್ಖಲಿತವಾದ ಮೇಲ್ಮಟ್ಟದ ಇಂಗ್ಲಿಷ್‌ನಲ್ಲಿ (ಶಶಿ ತರೂರ್ ಕೂಡಾ ಬೆರಗಾಗುವಂತೆ) ಮಾತನಾಡಿದಳು. ಪಕ್ಷ ಯಾವುದೇ ಇರಲಿ, ಆಕೆಯ ಗುಣಾತ್ಮಕ ಟೀಕೆಗಳನ್ನು ಗೌರವಿಸೋಣ. 

ವಿರೋಧ ಪಕ್ಷದವರು ಆಡಳಿತ ಪಕ್ಷದ ಧೋರಣೆಗಳನ್ನು ಟೀಕಿಸುವುದು ಸಹಜವೇ. ಆದರೆ ಈಕೆ ಭಾಜಪದ ಬಹುಮತವನ್ನು ಗೌರವಿಸುತ್ತಲೇ ಭಿನ್ನಮತವು ಪ್ರಜಾತಂತ್ರದ ಜೀವಾಳವೆಂದಳು. ಲೋಕಸಭೆಯಲ್ಲಿ ಸಹಜವಾದ ನಿಯಂತ್ರಣಗಳು ಅಥವಾ ಮೌಲ್ಯಮಾಪನಗಳಿಲ್ಲದಿರುವುದರಿಂದ ಇವು ಬಹು ಮುಖ್ಯವೆಂದಳು. ಆದ್ದರಿಂದ ತಮಗೆ ನೀಡಲಾದ ಎಲ್ಲ ಅವಕಾಶವನ್ನೂ ಬಳಸಿಕೊಳ್ಳುವುದಾಗಿ ಹೇಳಿದಳು. ಬಹುಮತಕ್ಕೆ ವಿರೋಧವಾದ ಅಲ್ಪಮತದ ಧ್ವನಿಯನ್ನು ಕೇಳಿಸುವುದು ಮತ್ತು ಕೇಳುವುದು ಅಗತ್ಯವಾಗಿದೆಯೆಂದಳು. ‘ಅಚ್ಛೇದಿನ್’ ಎಂಬ ಭ್ರಮಾಜಗತ್ತನ್ನು ಸೃಷ್ಟಿಸಿ ಮತ್ತು ಭಾಜಪದ ಭಾರತ ಸಾಮ್ರಾಜ್ಯದಲ್ಲಿ ಸೂರ್ಯ ಮುಳುಗನೆಂದು ಹೇಳಿದರೂ ಕಣ್ಣು ತೆರೆದರೆ ಇವಕ್ಕೆ ವ್ಯತಿರಿಕ್ತವಾದ ಸಂಕೇತಗಳು ಕಾಣುತ್ತಿವೆಯೆಂದಳು. ಇಷ್ಟೇ ಅಲ್ಲದೆ ಫ್ಯಾಶಿಸಂನ (ಸರ್ವಾಧಿಕಾರದ) ಸಂಕೇತಗಳಾದ ಏಳು ಅಂಶಗಳನ್ನು ಪಟ್ಟಿಮಾಡಿ ಉದಾಹರಣೆಗಳೊಂದಿಗೆ ವಿವರಿಸಿದಳು.

ಇವನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು:

1. ಅಧಿಕ ರಾಷ್ಟ್ರೀಯತೆ ಜನರನ್ನು ಒಗ್ಗೂಡಿಸುವ ಬದಲು ತುಂಡಾಗಿಸುತ್ತಿದೆ; ಮತ್ತು ಪರಿಣಾಮವಾಗಿ ಸಂವಿಧಾನ ಆತಂಕದಲ್ಲಿದೆ, ವಲಸೆವಿರೋಧೀ ಕಾನೂನುಗಳು ಮತ್ತು ನಾಗರಿಕ ಮಸೂದೆಗಳು ಅಲ್ಪಸಂಖ್ಯಾತರ ಅದರಲ್ಲೂ ಮುಖ್ಯವಾಗಿ ಮುಸ್ಲಿಮ್ ವಿರೋಧಿಯಾಗಿದೆ, ಕಳೆದ 50 ವರ್ಷಗಳಿಂದ ದೇಶದಲ್ಲಿರುವ ಅಲ್ಪಸಂಖ್ಯಾತರನ್ನು ಹೊರದೂಡುವ ಸಂಚು ನಡೆಯುತ್ತಿದೆ.

2. ದ್ವೇಷ ಎಲ್ಲ ಕಡೆ ಹಬ್ಬುತ್ತಿದೆ, ಶಾಂತಿ ಕಾಣದಾಗಿದೆ, 2017ರಲ್ಲಿ ರಾಜಸ್ಥಾನದಲ್ಲಿ ನಡೆದ ಪೆಹ್ಲೂ ಖಾನ್‌ನಿಂದ ಆರಂಭವಾಗಿ ಕಳೆದ ವಾರ ಜಾರ್ಖಂಡ್‌ನಲ್ಲಿ ನಡೆದ ತಬ್ರೇಝ್ ಅನ್ಸಾರಿಯ ವರೆಗೆ ಮತಾಂಧರ ಗುಂಪು ಥಳಿತದ ವರೆಗೆ ಪಟ್ಟಿ ಬೆಳೆಯುತ್ತಿದೆೆ.
 
3. ಮಾಧ್ಯಮಗಳನ್ನು ಉಸಿರುಕಟ್ಟಿಸಲಾಗುತ್ತಿದೆ ಇಲ್ಲವೇ ನಿಯಂತ್ರಿಸಲಾಗುತ್ತಿದೆ, ಎಲ್ಲ ವಿರೋಧ ಪಕ್ಷಗಳ ವಿರುದ್ಧ ವ್ಯವಸ್ಥಿತ ಅಪಪ್ರಚಾರವನ್ನು ಸರಕಾರೀ ವೆಚ್ಚದಲ್ಲಿ ಹಬ್ಬಿಸಲಾಗುತ್ತಿದೆ, ಗೋಬೆಲ್ಸ್ ಪ್ರಮೇಯದಂತೆ ಸುಳ್ಳುಗಳನ್ನು ಪದೇಪದೇ ಹೇಳಿ ಸತ್ಯವೆಂದು ಬಿಂಬಿಸಲಾಗುತ್ತಿದೆ, ಕಾಂಗ್ರೆಸಿನ ವಂಶಪಾರಂಪರ್ಯ ಆಡಳಿತವನ್ನು ಟೀಕಿಸುತ್ತಲೇ ಕಾಂಗ್ರೆಸ್ 36 ಅಂತಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆೆ ಭಾಜಪವು 31 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

4. ದೇಶದ ಸುರಕ್ಷತೆ ಅಪಾಯದಲ್ಲಿದೆಯೆಂಬ ಗುಮ್ಮನನ್ನು ಸೃಷ್ಟಿಸಿ ಜನರನ್ನು ತಪ್ಪುದಾರಿಗಿಳಿಸಲಾಗುತ್ತದೆ, ಸೇನೆಯ ಸಾಧನೆಗಳನ್ನು ಪ್ರಧಾನಿಯ ಸಾಧನೆಯೆಂದು ಬಿಂಬಿಸಲಾಗುತ್ತದೆ, ಕಾಶ್ಮೀರದಲ್ಲಿ ಕಳೆದ 5 ವರ್ಷಗಳಲ್ಲಿ ಸತ್ತ ಯೋಧರ ಸಂಖ್ಯೆಯಲ್ಲಿ ಶೇ. 106 ಹೆಚ್ಚಳವಾಗಿದೆ.

5. ದೇಶದ ಧರ್ಮನಿರಪೇಕ್ಷತೆಯು ಸಾಯುತ್ತಲಿದೆ, ದೇಶದ 80 ಕೋಟಿ ಎಕರೆ ಭೂಮಿಗಿಂತ ಅಯೋಧ್ಯೆಯ 2.77 ಎಕರೆ ಮುಖ್ಯವಾಗುತ್ತಲಿದೆ.

6.ಚಿಂತನೆ ಮತ್ತು ಕಲೆಯ ಕತ್ತನ್ನು ಪೂರ್ಣಪ್ರಮಾಣದಲ್ಲಿ ಹಿಚುಕಲಾಗುತ್ತಿದೆ; ಚರಿತ್ರೆಯನ್ನು ವಿಕೃತವಾಗಿ ಚಿತ್ರಿಸಲಾಗುತ್ತಿದೆ, ಆಳುವವರೊಂದಿಗೆ ಭಿನ್ನಾಭಿಪ್ರಾಯ ಬಿಡಿ, ಪ್ರಶ್ನಿಸಿದರೂ ಜೈಲು ಸೇರುವ ಸಾಧ್ಯತೆಯಿದೆ.

7. ಚುನಾವಣಾ ವ್ಯವಸ್ಥೆಯನ್ನೇ ತಮಗನುಕೂಲವಾಗುವಂತೆ ಕೇಂದ್ರವು ತಿರುಚುತ್ತಿದೆ, ಚುನಾವಣಾ ವೆಚ್ಚದ ಅರ್ಧಭಾಗದಷ್ಟು ಅಂದರೆ ಸುಮಾರು 27 ಸಾವಿರ ಕೋಟಿ ವೆಚ್ಚವನ್ನು ಭಾಜಪವು ಮಾಡಿದರೂ ಚುನಾವಣಾ ಆಯೋಗವು ಸುಮ್ಮನಿದೆ.

ತನ್ನ ಭಾಷಣವನ್ನು ಕೊನೆಗೊಳಿಸುತ್ತ ಆಕೆ ಅಮೆರಿಕದಲ್ಲಿ ಪ್ರಕಟವಾದ, ಫ್ಯಾಶಿಸಂನ ಅಪಾಯದ ಆರಂಭಿಕ ಸೂಚನೆಗಳ ಒಂದು ಫಲಕವನ್ನು ಓದಿದಳು.
ಇವನ್ನು ಒಪ್ಪಬಹುದು, ಇಲ್ಲವೇ ನಿರಾಕರಿಸಬಹುದು. ಆದರೆ ಆಕೆ ಎತ್ತಿದ ಪ್ರಶ್ನೆಗಳು ಬಹು ಗಂಭೀರವಾದವು. ಆತಂಕದ ವಿಚಾರವೆಂದರೆ ಒಬ್ಬ ವಿದ್ಯಾವಂತ, ಚಿಂತನಶೀಲ ಮಹಿಳೆ ಹೀಗೆ ಮಾತನಾಡುತ್ತಿದ್ದಾಗ ಅದು ಇತರ ಸಂಸದರಿಗೆ ಕೇಳದಂತೆ ಆಳುವ ಪಕ್ಷದ ಸದಸ್ಯರು ಕಿರುಚುತ್ತ ಗಲಭೆ-ಗದ್ದಲವನ್ನೆಬ್ಬಿಸುತ್ತಿದ್ದದ್ದು. ಇದು ಸಂಸತ್ತಿಗೆ ಅಪಚಾರವಷ್ಟೇ ಅಲ್ಲ, ಯಾವ ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಹೆಗ್ಗುರುತುಗಳೆಂದು ಭಾಜಪ ಹೇಳುತ್ತಿದೆಯೋ ಅಂತಹ ಮಹಿಳೆಯರ ಗೌರವಕ್ಕೆ ಸಂದ ಅಪಮಾನ. ಇದನ್ನೂ ಪ್ರಜ್ಞಾವಂತರು ಖಂಡಿಸದಿದ್ದರೆ, ಅವಕಾಶವಾದದ ಅಲೆಗಳ ಮೇಲೆ ಓಲಾಡಿ ಸಂಭ್ರಮಿಸಿದರೆ ಎಂದೋ ಕನ್ನಗಿ ಮಧುರೆಗೆ ಶಾಪ ನೀಡಿ ಅದು ಸುಟ್ಟುಹೋದಂತೆ ದೇಶಕ್ಕೆ ಶಾಪ ತಟ್ಟುವುದು ಖಂಡಿತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)