varthabharthi

ನಿಮ್ಮ ಅಂಕಣ

‘ಗ್ರಾಮ ವಾಸ್ತವ್ಯ’ ಸಾರ್ಥಕವಾಗಲಿ

ವಾರ್ತಾ ಭಾರತಿ : 27 Jun, 2019
-ಶೃತಿ ಡಿ. ಯಡೂರು, ತೀರ್ಥಹಳ್ಳಿ

ಮಾನ್ಯರೇ,

ರೈತರ ಹಾಗೂ ಗ್ರಾಮದ ಬಡಜನರ ಮೂಲಭೂತ ಸಮಸ್ಯೆಯನ್ನು ಅರಿಯಲು ರಾಜ್ಯದ ಮುಖ್ಯಮಂತ್ರಿಗಳು ಹಮ್ಮಿಕೊಂಡ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸ್ವಾಗತಾರ್ಹ. ಸರಕಾರಗಳು ಈ ಹಿಂದೆ ರೈತರಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ನೀಡಿದ ಸೌಲಭ್ಯಗಳು ಎಷ್ಟೋ ಫಲಾನುಭವಿಗಳಿಗೆ ತಲುಪಿಯೇ ಇಲ್ಲ. ಜಿಲ್ಲೆ ಹಾಗೂ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ತಪ್ಪಿನಿಂದ ಬಡ ರೈತ ಕುಟುಂಬಗಳು ಸೌಲಭ್ಯಗಳಿಂದ ವಂಚಿತವಾಗುತ್ತಿವೆ.

ಗ್ರಾಮಗಳ ರಸ್ತೆಯ ಕಾಮಗಾರಿ, ಕುಡಿಯುವ ನೀರು, ವಿದ್ಯುತ್, ಶೌಚಾಲಯಗಳು ಸೇರಿ ಇನ್ನೂ ಇತರ ಮೂಲಭೂತ ಸೌಲಭ್ಯಗಳಿಗೆ ಸರಕಾರ ನೀಡಿದ ಅನುದಾನದ ಬಗ್ಗೆ ಗ್ರಾಮದ ಬಡಜನರಿಗೆ ಮಾಹಿತಿಯೇ ತಿಳಿಯುವುದಿಲ್ಲ. ಗ್ರಾಮಮಟ್ಟದಲ್ಲಿನ ಅಧಿಕಾರಿಗಳ ನಿರ್ಲಕ್ಷ ಹಾಗೆಯೇ ರಾಜಕೀಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳಿಂದ ಸೌಲಭ್ಯಗಳ ಬಗ್ಗೆ ಮಾಹಿತಿ ಹಾಗೂ ಹಂಚಿಕೆಯ ಬಗ್ಗೆ ತಿಳಿಯದೆ ರೈತರು, ಬಡಜನರು ಇಂದು ಪರದಾಡುತ್ತಿದ್ದಾರೆ. ಇನ್ನು ಕೆಲವೊಂದು ಗ್ರಾಮಗಳಲ್ಲಿ ಬಡಕುಟುಂಬ ಗಳಿಗೆಂದೇ ಬಾವಿ, ವಿದ್ಯುತ್, ರಸ್ತೆ ಸೌಲಭ್ಯ, ವಸತಿ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡುವಂತೆ ಸರಕಾರ ಗ್ರಾಮಪಂಚಾಯತ್‌ಗಳಿಗೆ ಅನುದಾನ ನೀಡಿರುತ್ತದೆ. ಇಲ್ಲಿ ಕೆಲವು ಮಧ್ಯವರ್ತಿ ಅಧಿಕಾರಿಗಳು ರಾಜಕೀಯ ನಾಯಕರ ಜೊತೆಗೂಡಿ ಕೋಟಿ-ಕೋಟಿ ಹಣ ಪಂಗನಾಮ ಹಾಕುವುದು ರಾಜ್ಯದ ಎಷ್ಟೋ ಗ್ರಾಮೀಣ ಪ್ರದೇಶದಲ್ಲಿ ನಡೆದಿದೆ. ಇದು ಕೂಡ ರಾಜ್ಯದಲ್ಲಿ ರೈತರ ಸಮಸ್ಯೆ ಬಗೆಹರಿಸಲಾಗದೆ ಇರುವುದಕ್ಕೆ ಕಾರಣವಾಗಿದೆ.

ಮುಖ್ಯ ಮಂತ್ರಿಯವರು ಗ್ರಾಮವಾಸ್ತವ್ಯದಲ್ಲಿ ತೊಡಗಿರುವಾಗ ರಾಜ್ಯದಲ್ಲಿ ಜಿಲ್ಲೆ, ತಾಲೂಕು, ಗ್ರಾಮಮಟ್ಟದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಅಧಿಕಾರಿಗಳ ಕಾರ್ಯವೈಖರಿ, ಸರಕಾರವು ಜನತೆಗೆ ನೀಡಿರುವ ಸೌಲಭ್ಯಗಳು ಎಷ್ಟರ ಮಟ್ಟಿಗೆ ದೊರೆತಿದೆ? ಕಾಮಗಾರಿಗೆ ನೀಡಿದ ಅನುದಾನವು ಸರಿಯಾಗಿ ಬಳಕೆಯಾಗಿದೆಯೇ, ಆ ಕಾಮಗಾರಿ ಗುಣಮಟ್ಟವುಳ್ಳದ್ದೇ ಅಥವಾ ಅನುದಾನಕ್ಕಿಂತ ಕಡಿಮೆ ಹಣ ವೆಚ್ಚ ಮಾಡಿ ಕಳಪೆ ಕಾಮಗಾರಿ ಮಾಡಲಾಗಿದೆಯೇ ಎಂಬುವುದರ ಬಗ್ಗೆ ಸರಿಯಾದ ಮಾಹಿತಿ ಪಡೆಯಬೇಕು. ಅಲ್ಲದೆ ಮಾಹಿತಿ ನೀಡದೆ ಇರುವ ಅಥವಾ ಮಾಹಿತಿಯನ್ನು ನಿರಾಕರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಹೀಗಾದಾಗ ಮಾತ್ರ ಗ್ರಾಮ ವಾಸ್ತವ್ಯಕ್ಕೆ ಸಾರ್ಥಕತೆ ಬಂದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)