varthabharthi

ನಿಮ್ಮ ಅಂಕಣ

‘ಏಕಕಾಲಕ್ಕೆ ಚುನಾವಣೆ’ ಭಾಜಪದ ಹಳೆಯ ಅಜೆಂಡಾ

ವಾರ್ತಾ ಭಾರತಿ : 28 Jun, 2019
ಕು. ಸ. ಮಧುಸೂದನ, ರಂಗೇನಹಳ್ಳಿ

ಇದರಲ್ಲಿರುವ ಒಂದು ವಿಶೇಷವೇನೆಂದರೆ ಯಾವಾಗೆಲ್ಲ ಭಾಜಪ ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತದೆಯೋ ಆಗೆಲ್ಲ ಈ ಏಕಕಾಲಕ್ಕೆ ಚುನಾವಣೆ ನಡೆಸುವ ವಿಚಾರ ಚರ್ಚೆಗೆ ಬರುವುದಾಗಿದೆ. 1999ರಲ್ಲಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದಾಗಲೂ ಕೇಂದ್ರ ಕಾನೂನು ಸಚಿವಾಲಯ ಇಂತಹ ಪ್ರಸ್ತಾವನೆಯನ್ನು ಮುಂದಿಟ್ಟುಕೊಂಡು, 1962ಕ್ಕೂ ಮುಂಚೆ ಇದ್ದ ವ್ಯವಸ್ಥೆಗೆ ಅನುಗುಣವಾಗಿಯೇ ಚುನಾವಣೆಗಳು ನಡೆಯಬೇಕೆಂದು ಅಭಿಪ್ರಾಯ ಪಟ್ಟಿತ್ತು.


ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ದಿಲ್ಲಿಯ ಗದ್ದುಗೆ ಹಿಡಿದಾಕ್ಷಣ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಬೇಕೆನ್ನುತ್ತಾ ಭಾಜಪದ ಹಳೆಯ ಗುಪ್ತಕಾರ್ಯಸೂಚಿಗೆ ಮತ್ತೆ ಜೀವ ತುಂಬಿದ್ದಾರೆ.

ಭಾಜಪದ ಈ ಕಾರ್ಯತಂತ್ರ ಹೊಸತೇನಲ್ಲ. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಕೆಲವೇ ತಿಂಗಳಲ್ಲಿ ಕೇಂದ್ರ ಕಾನೂನು ಸಚಿವಾಲಯ ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಸುವುದು ಸೂಕ್ತವೆಂಬ ಸಲಹೆ ನೀಡಿತ್ತು. ನಂತರದ ಕೆಲವೇ ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗವು ಸಹ ಕಾನೂನು ಇಲಾಖೆಯ ಈ ಸೂಚನೆಗೆ ಸಹಮತ ಸೂಚಿಸುತ್ತ, ಸರಕಾರ ಕಾನೂನು ತಿದ್ದುಪಡಿ ಮಾಡಿ ಹಸಿರು ನಿಶಾನೆ ತೋರಿಸಿದಲ್ಲಿ ತನಗೇನು ಅಭ್ಯಂತರವಿಲ್ಲವೆಂದು ಹೇಳಿತ್ತು. ಆನಂತರದಲ್ಲಿ ಪ್ರಧಾನಿಯವರು ಸಹ ಏಕಕಾಲಕ್ಕೆ ಚುನಾವಣೆ ನಡೆಸಲು ತಾವು ಇಚ್ಛಿಸುವುದಾಗಿ ಸಾರ್ವಜನಿಕವಾಗಿ ಹೇಳುವುದರೊಂದಿಗೆ ಒಂದಷ್ಟು ಚರ್ಚೆಗೆ ನಾಂದಿ ಹಾಡಿದ್ದರು.

ಇದರಲ್ಲಿರುವ ಒಂದು ವಿಶೇಷವೇನೆಂದರೆ ಯಾವಾಗೆಲ್ಲ ಭಾಜಪ ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತದೆಯೋ ಆಗೆಲ್ಲ ಈ ಏಕಕಾಲಕ್ಕೆ ಚುನಾವಣೆ ನಡೆಸುವ ವಿಚಾರ ಚರ್ಚೆಗೆ ಬರುವುದಾಗಿದೆ. 1999ರಲ್ಲಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದಾಗಲೂ ಕೇಂದ್ರ ಕಾನೂನು ಸಚಿವಾಲಯ ಇಂತಹ ಪ್ರಸ್ತಾವನೆಯನ್ನು ಮುಂದಿಟ್ಟುಕೊಂಡು, 1962ಕ್ಕೂ ಮುಂಚೆ ಇದ್ದ ವ್ಯವಸ್ಥೆಗೆ ಅನುಗುಣವಾಗಿಯೇ ಚುನಾವಣೆಗಳು ನಡೆಯಬೇಕೆಂದು ಅಭಿಪ್ರಾಯ ಪಟ್ಟಿತ್ತು. ಹೀಗೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ವಿಷಯ ಚರ್ಚೆಗೆ ಬಂದಿದ್ದು ಕೇಂದ್ರದಲ್ಲಿ ಭಾಜಪದ ಸರಕಾರಗಳು ಇದ್ದಾಗಲೇ ಎನ್ನುವುದು ಗಮನಾರ್ಹ! ಹೀಗಾಗಿಯೇ ಈ ಚರ್ಚೆಗೆ ಒಂದು ರಾಜಕೀಯ ಬಣ್ಣ ಬಂದಿರುವುದು. 1968ರವರೆಗೂ ರಾಷ್ಟ್ರದ ಸಂಸತ್ತು ಹಾಗೂ ವಿಧಾನಸಭೆಗಳಿಗೂ ಏಕಕಾಲಕ್ಕೆ ಚುನಾವಣೆಗಳು ನಡೆಯುತ್ತಿದ್ದು, ಆ ಕಾಲಘಟ್ಟದಲ್ಲಿ ನಡೆದ ರಾಜಕೀಯ ವಿದ್ಯಮಾನಗಳು ನಮ್ಮ ಚುನಾವಣಾ ವ್ಯವಸ್ಥೆಯನ್ನೇ ಬದಲಾಯಿಸಿಬಿಟ್ಟವು.

1967ರ ಹೊತ್ತಿಗೆ ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಸತತವಾಗಿ ಆಡಳಿತ ನಡೆಸುತ್ತ ಬಂದಿದ್ದ ಕಾಂಗ್ರೆಸ್‌ನ ಬಗ್ಗೆ ಜನರಿಗೆ ಏಕತಾನತೆ ಮೂಡಿತ್ತು. ಇದೇ ಸಮಯದಲ್ಲಿ ಸಮಾಜವಾದಿ ಚಿಂತನೆಗಳು ರಾಷ್ಟ್ರಾದ್ಯಂತ ತೀವ್ರವಾಗಿ ಹಬ್ಬುತ್ತಾ ದಿ. ರಾಮಮನೋಹರ ಲೋಹಿಯಾರಂತಹವರು ಸಮಾಜವಾದಿ ಚಳವಳಿಯ ಮುಂಚೂಣಿಯಲ್ಲಿ ನಿಂತಿದ್ದರು. ಕಾಂಗ್ರೆಸ್ ಹೊರತಾದ ಸರಕಾರಗಳು ಬೇಕೆನ್ನುವ ಲೋಹಿಯಾರವರ ಘೋಷಣೆ ಕೆಲರಾಜ್ಯಗಳಲ್ಲಿ ತನ್ನ ಪ್ರಭಾವ ಬೀರ ತೊಡಗಿತ್ತು. ನಿರಂತರವಾಗಿ ಕಾಂಗ್ರೆಸ್‌ನ ಆಡಳಿತವನ್ನು ಅನುಭವಿಸುತ್ತ ಬಂದಿದ್ದ ಜನತೆಗೆ ಬದಲಾವಣೆಯ ಅಗತ್ಯವೊಂದು ಕಂಡುಬಂದಿದ್ದಲ್ಲಿ ಅಚ್ಚರಿಯೇನೂ ಇರಲಿಲ್ಲ. ಹಾಗಾಗಿಯೇ 1967ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲಬಾರಿಗೆ ದೇಶದ ಎಂಟು ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಅಧಿಕಾರ ಕಳೆದುಕೊಳ್ಳಬೇಕಾಯಿತು. ಪ್ರಜಾ ಸೋಷಿಯಲಿಸ್ಟ್ ಪಾರ್ಟಿ, ಜನಸಂಘ, ಸೇರಿದಂತೆ ಅನೇಕ ಸಣ್ಣಪುಟ್ಟ ಪಕ್ಷಗಳು ಸೇರಿ ಸಂಯುಕ್ತ ವಿದಾಯಕ ದಳದ ಹೆಸರಲ್ಲಿ ರಾಜ್ಯಗಳ ಅಧಿಕಾರ ಹಿಡಿದಾಗ ಸಹಜವಾಗಿಯೇ ಈ ಮೈತ್ರಿಕೂಟಗಳು ಒಳಜಗಳಗಳಿಂದ ತತ್ತರಿಸಿದವು. ಮೊದಲೇ ಕಾಂಗ್ರೆಸೇತರ ಪಕ್ಷಗಳ ಬಗ್ಗೆ ತೀವ್ರತರ ಅಸಹನೆ ಹೊಂದಿದ್ದ ಕಾಂಗ್ರೆಸ್ ಇದನ್ನು ಬಳಸಿಕೊಂಡು 356ನೇ ವಿಧಿಯನ್ನು ದುರ್ಬಳಕೆ ಮಾಡಿಕೊಂಡು ಆ ರಾಜ್ಯಸರಕಾರಗಳನ್ನು ವಜಾ ಮಾಡಿ ವಿಧಾನಸಭೆಗಳನ್ನು ವಿಸರ್ಜಿಸಿತು.

ಆದರೆ ಇದನ್ನು ವಿರೋಧಿಸುತ್ತಲೇ ಬಂದ ವಿರೋಧಪಕ್ಷಗಳು ಸಹ ಇದೇ ಪರಿಪಾಠವನ್ನು ಮುಂದುವರಿಸಿದವು. ತುರ್ತುಪರಿಸ್ಥಿತಿಯ ನಂತರ 1977ರಲ್ಲಿ ಜನತಾಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೂ ಸಹ ವಿರೋಧಪಕ್ಷಗಳ ರಾಜ್ಯ ಸರಕಾರಗಳನ್ನು 356ನೇ ವಿಧಿಯ ಅನ್ವಯ ವಜಾಗೊಳಿಸಿದ್ದರು. ನಂತರ 1980ರಲ್ಲಿ ದಿ. ಶ್ರೀಮತಿ ಇಂದಿರಾಗಾಂಧಿಯವರು ಸಹ ಇಂತಹ ರಾಜಕಾರಣವನ್ನೇ ಮುಂದುವರಿಸಿದರು. ಈ ಎಲ್ಲ ಬೆಳವಣಿಗೆಗಳಿಂದಾಗಿ ಲೋಕ ಸಭಾ ಮತ್ತು ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಗಳು ಬದಲಾಗುತ್ತ ಹೋದವು. ಇಂತಹ ಬೆಳವಣಿಗೆಗಳು ವಿಧಾನಸಭೆಗಳ ಚುನಾವಣೆಗಳನ್ನೂ ಮೀರಿ ಸಂಸತ್ತಿನ ಚುನಾವಣೆಗಳಿಗೂ ವ್ಯಾಪಿಸುತ್ತ ಹೋದವು.

ಎಂಬತ್ತರ ದಶಕದಲ್ಲಾದ ಇಂದಿರಾ ಮತ್ತು ರಾಜೀವರ ಹತ್ಯೆಗಳು ಹಾಗೂ ನಂತರದಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯತೊಡಗಿದ ಮೈತ್ರಿಕೂಟಗಳ ಸರಕಾರಗಳ ಆಂತರಿಕ ಕಿತ್ತಾಟಗಳಿಂದ ಅವಧಿ ಪೂರೈಸಲಾಗದೆ ವಿಸರ್ಜನೆಯಾಗತೊಡಗಿದವು. ಅಲ್ಲಿಂದ ಇಲ್ಲಿಯವರೆಗೂ ಯಾವ ನಿಶ್ಚಿತ ವೇಳಾಪಟ್ಟಿಯ ಹಂಗಿರದೆ ರಾಜಕೀಯ ಪಕ್ಷಗಳ ಹಿತಾಸಕ್ತಿಗಳಿಗನುಗುಣವಾಗಿ ನಡೆಯುತ್ತಿವೆ. ಆದರೆ ಇದೀಗ ಕೇಂದ್ರದ ಭಾಜಪ ಸರಕಾರ ಏಕಕಾಲಕ್ಕೆ ಚುನಾವಣೆ ನಡೆಸಿದರೆ ಅನಗತ್ಯ ವೆಚ್ಚ ಇಲ್ಲವಾಗುತ್ತದೆಯೆಂಬ ಹುಸಿಘೋಷಣೆಯನ್ನು ಮುಂದಿಟ್ಟುಕೊಂಡು ತನ್ನ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಈ ಹುನ್ನಾರದ ಹಿಂದಿರುವ ಉದ್ದೇಶಗಳ ಬಗ್ಗೆ ಚರ್ಚೆ ನಡೆಸಬೇಕಿರುವುದು ಈ ಕ್ಷಣದ ತುರ್ತಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)