varthabharthi



ಸಂಪಾದಕೀಯ

ಏಕಕಾಲದಲ್ಲಿ ಚುನಾವಣೆ: ರಾಜ್ಯಗಳ ವಿರುದ್ಧ ಸಂಚು

ವಾರ್ತಾ ಭಾರತಿ : 29 Jun, 2019

‘ಒಂದು ದೇಶ- ಒಂದು ಭಾಷೆ, ಒಂದು ದೇಶ-ಒಂದು ಸಂಸ್ಕೃತಿ, ಒಂದು ದೇಶ-ಒಂದು ಕಾರ್ಡ್’ ಇವುಗಳ ಜೊತೆ ಜೊತೆಗೇ ಇದೀಗ ಸರಕಾರ ‘ಒಂದು ದೇಶ-ಒಂದು ಚುನಾವಣೆ’ ಎನ್ನುವ ಘೋಷಣೆಯನ್ನು ಸೇರಿಸಿದೆ. ಮೋದಿ ಎನ್ನುವ ಒಂದು ಹೆಸರಿನ ನಾಮ ಬಲದಿಂದ ಬಿಜೆಪಿ ಅಭೂತಪೂರ್ವ ಬಹುಮತಗಳಿಸಿದ ಬಳಿಕ ಈ ‘ಒಂದು ದೇಶ-ಒಂದು ಚುನಾವಣೆ’ ಘೋಷಣೆಗೆ ಇನ್ನಷ್ಟು ಬಲ ಬಂದಿದೆ. ಮುಂದಿನ ದಿನಗಳಲ್ಲಿ ಈ ಘೋಷಣೆ ‘ಒಂದು ಚುನಾವಣೆ-ಒಬ್ಬನೇ ಅಭ್ಯರ್ಥಿ’ ಎನ್ನುವಲ್ಲಿ ಬಂದು ತಲುಪಿದರೆ ಅಚ್ಚರಿಯೇನೂ ಇಲ್ಲ. ಮೋದಿ ಎನ್ನುವ ಕೃತಕ ‘ತಟ್ಟೀರಾಯ’ನನ್ನು ಸೃಷ್ಟಿಸಿ ಇಡೀ ಚುನಾವಣೆಯ ಉದ್ದೇಶವನ್ನೇ ಬುಡಮೇಲು ಮಾಡಿದ ಕಾರ್ಪೊರೇಟ್, ಆರೆಸ್ಸೆಸ್ ಅವೆರೆಡರ ಬೀಜಗಳಿಂದ ಹುಟ್ಟಿದ ಮಾಧ್ಯಮಗಳೇ, ಏಕಕಾಲದಲ್ಲಿ ಚುನಾವಣೆ ಎಂಬ ಚರ್ಚೆಗಳಿಗೆ ವೇದಿಕೆಯನ್ನು ನೀಡುತ್ತಿವೆ. ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳು ಜೊತೆ ಜೊತೆಯಾಗಿ ನಡೆದಲ್ಲಿ, ಕೇಂದ್ರದ ನಾಯಕನನ್ನು ದೃಷ್ಟಿಯಲ್ಲಿಟ್ಟು ತಮ್ಮ ಮತ ಚಲಾಯಿಸುತ್ತಾರೆ ಎನ್ನುವ ಸಂಕುಚಿತ ಆಲೋಚನೆಯ ತಳಹದಿಯಲ್ಲಿ ಈ ಚರ್ಚೆ ಹುಟ್ಟಿಕೊಂಡಿದೆ. ಏಕಕಾಲದಲ್ಲಿ ಚುನಾವಣೆ ನಡೆದರೆ ದೇಶಕ್ಕೆ ಅಪಾರ ಹಣ ಉಳಿತಾಯವಾಗುತ್ತದೆ ಎನ್ನುವ ವಾದವನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರ ಈ ಸೂತ್ರವನ್ನು ಹರಿಯ ಬಿಟ್ಟಿದೆ. ಇಷ್ಟಕ್ಕೂ ಭಾರತ ಒಂದು ದೇಶವಾಗಿ ಉಳಿಯುವುದು, ಇಲ್ಲಿರುವ ಬಹುತ್ವಗಳನ್ನು ಗೌರವಿಸಿದಾಗ ಮಾತ್ರ. ವೈವಿಧ್ಯಮಯ ಭಾಷೆ, ಸಂಸ್ಕೃತಿ, ಜನಜೀವನ, ಆಹಾರ ಪದ್ಧತಿ, ಆರಾಧನಾ ಪದ್ಧತಿ ಇವುಗಳನ್ನು ಒಪ್ಪಿಕೊಳ್ಳುವವರೆಗೆ ಮಾತ್ರ ಈ ದೇಶ ‘ಒಂದು ದೇಶ’ವಾಗಿ ಉಳಿಯುತ್ತದೆ. ಯಾವಾಗ ಈ ದೇಶದೊಳಗಿರುವ ಬಹುತ್ವವನ್ನು ನಾಶಗೊಳಿಸಿ, ವೈವಿಧ್ಯಮಯ ಸಂಸ್ಕೃತಿ, ಭಾಷೆ, ಆಹಾರ ಪದ್ಧತಿ ಇತ್ಯಾದಿ ಇತ್ಯಾದಿಗಳನ್ನು ಅಳಿಸಿ ಒಂದು ದೇಶವಾಗಿಸಲು ಯತಿಸಿಲಾಗುತ್ತದೆಯೋ ಆಗ, ಒಂದಾಗಿರುವ ದೇಶ ಛಿನ್ನಛಿನ್ನವಾಗಬಹುದು ಎನ್ನುವ ಎಚ್ಚರಿಕೆ ಕೇಂದ್ರದ ನಾಯಕರಲ್ಲಿರಬೇಕಾಗಿದೆ. ಈ ಕಾರಣಕ್ಕಾಗಿಯೇ ಈ ದೇಶದ ಹಿರಿಯರು ‘ವೈವಿಧ್ಯತೆಯಲ್ಲಿ ಏಕತೆ’ ಎನ್ನುವ ಘೋಷಣೆಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಅದುವೇ ಈ ದೇಶದ ಹಿರಿಮೆಯೂ ಆಗಿದೆ. ಕೇಂದ್ರದಲ್ಲಿರುವ ನಾಯಕರು ಈ ದೇಶದ ವೈವಿಧ್ಯತೆಯನ್ನು, ಪ್ರಾದೇಶಿಕತೆಯನ್ನು ಸದಾ ಗೌರವಿಸುತ್ತಾ ಬಂದುದರಿಂದ ದೇಶವೆನ್ನುವ ಪರಿಕಲ್ಪನೆ ಹೊಲಿಗೆ ಬಿಚ್ಚದೆ ಇನ್ನೂ ಗಟ್ಟಿಯಾಗಿಯೇ ಉಳಿದುಕೊಂಡಿದೆ. ಇದೀಗ ಕೇಂದ್ರ ಇಡೀ ದೇಶದ ವೈವಿಧ್ಯತೆಗಳನ್ನು ಅಳಿಸಿ ಒಂದು ದೇಶವನ್ನಾಗಿಸುವ ಪ್ರಯತ್ನದಲ್ಲಿದೆ. ಬಹುಶಃ ಸಂಘಪರಿವಾರದ ‘ಹಿಂದುತ್ವ ದೇಶ’ದ ಪರಿಕಲ್ಪನೆಯ ಪೂರ್ವ ಹಂತವಿದು. ಇನ್ನೂ ಸ್ಪಷ್ಟವಾಗಿ ಹೇಳುವುದಾಗಿದ್ದರೆ, ಈ ದೇಶದ ವೈವಿಧ್ಯಮಯ ಸಂಸ್ಕೃತಿಗಳನ್ನೆಲ್ಲ ಅಳಿಸಿ ಅವುಗಳ ಮೇಲೆ ವೈದಿಕ ಅಥವಾ ಸನಾತನ ಧರ್ಮದ ಸಂಸ್ಕೃತಿಯನ್ನು ಹೇರುವುದೇ ಆರೆಸ್ಸೆಸ್‌ನ ಅಂತಿಮ ಗುರಿ. ಆದುದರಿಂದಲೇ, ‘ಏಕ ಕಾಲದ ಚುನಾವಣೆ’ ಬಿಜೆಪಿಯ ರಾಜಕೀಯ ತಂತ್ರವಷ್ಟೇ ಅಲ್ಲ. ಆ ರಾಜಕೀಯ ಗುರಿಯ ಉದ್ದೇಶವೇ ಹಿಂದುತ್ವದ ಕನಸುಗಳನ್ನು ನನಸಾಗಿಸುವುದು. ಒಂದೇ ಅವಧಿಯಲ್ಲಿ ಚುನಾವಣೆ ನಡೆದರೆ ಮೋದಿ ಎನ್ನುವ ಭ್ರಮೆಯನ್ನು ಏಕಕಾಲದ ಚುನಾವಣೆಯ ಮೂಲಕ ರಾಜ್ಯಗಳ ಮೇಲೂ ಹೇರಬಹುದು ಎನ್ನುವ ಲೆಕ್ಕಾಚಾರ ಆರೆಸ್ಸೆಸ್‌ನದು. ಈಗಾಗಲೇ ಕೇಂದ್ರದ ನಿಲುವುಗಳಿಗೆ ಪ್ರತಿರೋಧಗಳನ್ನು ಒಡ್ಡುವ ರಾಜ್ಯಗಳ ಮತದಾರರನ್ನು ಗೊಂದಲಕ್ಕೀಡು ಮಾಡಿ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರ ಹಿಡಿಯುವಂತೆ ನೋಡಿಕೊಳ್ಳುವುದು ಮತ್ತು ಆ ಮೂಲಕ ತಮ್ಮ ಸರ್ವಾಧಿಕಾರಿ ನಿಲುವುಗಳನ್ನು ರಾಜ್ಯಗಳ ಮೇಲೆ ಸುಲಭವಾಗಿ ಹೇರುತ್ತಾ ಹೋಗುವುದೇ ಇದರ ಅಂತಿಮ ಗುರಿಯಾಗಿದೆ.

 ಇಷ್ಟಕ್ಕೂ ಚುನಾವಣಾ ವೆಚ್ಚವನ್ನು ಇಳಿಸುವ ಬಿಜೆಪಿ ನಾಯಕರ ಹೇಳಿಕೆಗಳೇ ತಮಾಷೆಯಿಂದ ಕೂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಹಣವನ್ನು ವೆಚ್ಚ ಮಾಡಿದ ಹೆಗ್ಗಳಿಕೆಯನ್ನು ಸ್ವತಃ ಬಿಜೆಪಿ ಹೊಂದಿದೆ. ಒಟ್ಟು ಪಕ್ಷಗಳು ವೆಚ್ಚ ಮಾಡಿದ ಹಣಕ್ಕೆ ಹೋಲಿಸಿದರೆ ಶೇ. 40ರಷ್ಟು ಹಣವನ್ನು ಬಿಜೆಪಿ ಪಕ್ಷವೊಂದೇ ಸುರಿದಿದೆ. ಕಳೆದ 20 ವರ್ಷಗಳಲ್ಲಿ ಆರು ಲೋಕಸಭಾ ಚುನಾವಣೆಗಳು ನಡೆದಿವೆ. ಪ್ರತಿ ಚುನಾವಣೆಯಲ್ಲೂ ಪಕ್ಷಗಳ ಚುನಾವಣಾ ವೆಚ್ಚ ಹೆಚ್ಚುತ್ತಲೇ ಇವೆ. ಸದ್ಯಕ್ಕೆ ಅದು ಆರು ಪಟ್ಟು ಹೆಚ್ಚಳವಾಗಿದೆ. ಅಂದರೆ, ಒಂಬತ್ತು ಸಾವಿರ ಕೋಟಿ ರೂಪಾಯಿಯಿಂದ ಅದು 55 ಸಾವಿರ ಕೋಟಿ ರೂಪಾಯಿಗೆ ತಲುಪಿದೆ. ಸದ್ಯಕ್ಕೆ ಬಿಜೆಪಿ ಚುನಾವಣೆಗಾಗಿ ದೇಶದಲ್ಲೇ ಅತಿ ಹೆಚ್ಚು ಹಣವನ್ನು ಸುರಿಯುವ ಪಕ್ಷವಾಗಿ ಗುರುತಿಸಿಕೊಂಡಿದೆ. ಇಂತಹ ಪಕ್ಷ ‘ಏಕ ಕಾಲದ ಚುನಾವಣೆ’ಯ ಮೂಲಕ ದೇಶಕ್ಕೆ ಉಳಿತಾಯದ ಪಾಠವನ್ನು ಹೇಳಲು ಹೊರಟಿದೆ. ಇಂದು ಇಡೀ ದೇಶ ಒಕ್ಕೊರಲಲ್ಲಿ ಮತಯಂತ್ರಗಳ ಕುರಿತಂತೆ ಅನುಮಾನ ವ್ಯಕ್ತಪಡಿಸುತ್ತಿದೆ. ಚುನಾವಣೆಯಲ್ಲಿ ಸುಧಾರಣೆಗಳು ತರುವ ಮೊದಲು, ಈ ಅನುಮಾನವನ್ನು ಪರಿಹರಿಸುವುದು ಅತ್ಯಗತ್ಯವಾಗಿದೆ. ಆದರೆ ಮತಯಂತ್ರಗಳ ಕುರಿತಂತೆ ಕೇಳಿ ಬರುತ್ತಿರುವ ಆರೋಪಗಳನ್ನು ಸಾರಸಗಟಾಗಿ ನಿರ್ಲಕ್ಷಿಸುತ್ತಿರುವ ಕೇಂದ್ರ ಸರಕಾರದಿಂದ ಚುನಾವಣೆಯಲ್ಲಿ ಸುಧಾರಣೆಗಳನ್ನು ನಿರೀಕ್ಷಿಸುವುದೇ ಮೂರ್ಖತನವಾಗಿದೆ. ಭಾರತ ಒಂದು ದೇಶವೇ ಆಗಿದ್ದರೂ, ಕೇಂದ್ರದ ಹಿಡಿತ ಉತ್ತರ ಭಾರತೀಯರ ಕೈಯಲ್ಲಿದೆ. ಒಂದು ರಾಜ್ಯಕ್ಕೆ ಕೇಂದ್ರ ಸಂಪೂರ್ಣ ನ್ಯಾಯವನ್ನು ಕೊಡಲಾರದು. ಯಾಕೆಂದರೆ ರಾಜ್ಯಗಳನ್ನು ವಿಂಗಡಿಸಿರುವುದೇ ಪ್ರಾದೇಶಿಕ ವೈವಿಧ್ಯತೆಗಳ ಆಧಾರದಲ್ಲಿ. ರಾಜ್ಯಗಳು ತನ್ನ ಅವಶ್ಯಗಳ ಅನುಸಾರವಾಗಿ ತನ್ನ ರಾಜ್ಯದ ನಾಯಕನನ್ನು ಆರಿಸುತ್ತದೆ. ಕೆಲವೊಮ್ಮೆ ಕೇಂದ್ರ ರಾಜ್ಯಗಳ ಮೇಲೆ ಸರ್ವಾಧಿಕಾರವನ್ನು ಪ್ರದರ್ಶಿಸುವ ಸಂದರ್ಭದಲ್ಲಿ ಅದಕ್ಕೆ ಪ್ರತಿರೋಧ ರೂಪದಲ್ಲೂ ರಾಜ್ಯಗಳ ಜನರು ಮತ ಚಲಾಯಿಸುತ್ತಾರೆ. ರಾಜ್ಯಗಳ ಅಗತ್ಯವನ್ನು ಎತ್ತಿ ಹಿಡಿದು, ಕೇಂದ್ರಕ್ಕೆ ಒತ್ತಡ ಹೇರುವವನೇ ರಾಜ್ಯದ ನಾಯಕನಾಗುತ್ತಾನೆ. ದಕ್ಷಿಣ ಭಾರತದಲ್ಲಿ ಇಂದಿಗೂ ಪ್ರಾದೇಶಿಕ ಪಕ್ಷಗಳು ಕೈ ಮೇಲಾಗಿಸಿರುವುದು ಇದೇ ಕಾರಣಕ್ಕೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ಮೂಲಕ, ಮತದಾರರನ್ನು ಗೊಂದಲಗೊಳಿಸಿ ಆ ಮೂಲಕ ರಾಜ್ಯಗಳ ಮೇಲೆ ಕೇಂದ್ರ ಹಿಡಿತ ಸಾಧಿಸಲು ಹೊರಟಿದೆ. ಪಾರದರ್ಶಕವಾದ ಚುನಾವಣೆಗಳನ್ನು ನಡೆಸುವುದಕ್ಕೆ ವ್ಯಯ ಮಾಡುವ ಹಣ ವ್ಯರ್ಥವಾಗುವುದಿಲ್ಲ. ಅದು ಪರೋಕ್ಷವಾಗಿ ದೇಶದ ಸಮಗ್ರತೆಗೆ ತನ್ನದೇ ಆದ ಕೊಡುಗೆಯನ್ನು ನೀಡಿಯೇ ನೀಡುತ್ತದೆ. ಚುನಾವಣೆಯಲ್ಲಿ ಇದಕ್ಕೆ ಹೊರತಾಗಿ ಹಲವು ರೀತಿಯಲ್ಲಿ ಹಣ ಪೋಲಾಗುತ್ತದೆ. ಒಬ್ಬನೇ ಅಭ್ಯರ್ಥಿ ಎರಡೆರಡು ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದು, ಆಪರೇಷನ್ ಕಮಲಗಳಂತಹ ಕಾರ್ಯಾಚರಣೆಯ ಮೂಲಕ ಆರಿಸಿ ಬಂದ ಅಭ್ಯರ್ಥಿಗಳನ್ನು ಕೊಂಡುಕೊಂಡು ಮತ್ತೆ ಅದೇ ಕ್ಷೇತ್ರಗಳ ಮೇಲೆ ಚುನಾವಣೆಗಳನ್ನು ಹೇರುವುದು, ಭ್ರಷ್ಟ, ಕ್ರಿಮಿನಲ್‌ಗಳು ಚುನಾವಣೆಯಲ್ಲಿ ಸ್ಪರ್ಧಿಸುವುದು ಇವೆಲ್ಲವುಗಳನ್ನು ತಡೆಯಲು ಕಠಿಣ ಕಾನೂನನ್ನು ಜಾರಿಗೆ ತಂದರೆ, ಹಣವೂ ಉಳಿತಾಯವಾಗುತ್ತದೆ, ಚುನಾವಣೆಯ ಉದ್ದೇಶವೂ ಸಾರ್ಥಕವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)