varthabharthi


ಸುಗ್ಗಿ

ಚೌಕಟ್ವು ಮೀರಿದ ಪ್ರತಿಭೆ ಚೌಟ

ವಾರ್ತಾ ಭಾರತಿ : 29 Jun, 2019
ಡಾ. ರಾಜಶ್ರೀ, ಮಂಗಳೂರು

ತೊಂಬತ್ತರ ದಶಕದಲ್ಲಿ ಸಿಜಿಕೆಯ ಮೂಲಕ ರಂಗಭೂಮಿಗೆ ಪರಿಚಿತರಾದ ಆನಂತರದಲ್ಲಿ ಸಮುದಾಯ ಸೇರಿದಂತೆ ಕರ್ನಾಟಕದ ವಿವಿಧ ರಂಗ ತಂಡಗಳಿಗೆ ಕಲಾಪೋಷಕರಾಗಿಯೂ ಚೌಟರು ನೀಡಿದ ಸಹಕಾರ ಮಹತ್ವದ್ದು. ಸಿಜಿಕೆ ನಂತರ ರಂಗ ನಿರಂತರದ ಚುಕ್ಕಾಣಿ ಹಿಡಿದು ಸಂಘಟನೆಗೆ ಬಲ ತುಂಬಿದರು. ಚಿತ್ರ ಕಲಾ ಪರಿಷತ್ತಿನ ಮೂಲಕ ಚಿತ್ರ ಸಂತೆಯನ್ನು ಏರ್ಪಡಿಸಿ ಚಿತ್ರ ಕಲಾಕೃತಿಗಳನ್ನು ಜನ ಸಾಮಾನ್ಯರ ಹತ್ತಿರಕ್ಕೆ ತಂದರು. ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಪರಿಷತ್ತು ಖ್ಯಾತಿ ಪಡೆಯಲು ಕಾರಣವಾಯಿತು. ಕಲೆ ಮತ್ತು ಕಲಾವಿದನನ್ನು ಸಮಾನವಾಗಿ ಗೌರವಿಸುವ ಚೌಟರು ಕಲಾವಿದರಿಗೆ, ನಾಟಕ ಸಂಸ್ಥೆಗಳಿಗೆ, ಸಾಹಿತಿಗಳಿಗೆ ಸಾಕಷ್ಟು ಧನ ಸಹಾಯವನ್ನೂ ನೀಡಿದ್ದಾರೆ.

ತುಳು - ಕನ್ನಡ ರಂಗಭೂಮಿ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ವೌಲಿಕ ಕೊಡುಗೆ ನೀಡಿ ಜನಮಾನಸದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ ಡಾ. ದರ್ಬೆ ಕೃಷ್ಣಾನಂದ ಚೌಟ ಅವರು ಭೌತಿಕವಾಗಿ ನಮ್ಮಿಂದ ದೂರವಾಗಿದ್ದಾರೆ. ಅಚ್ಚ ಬಿಳಿ ಗರಿಗರಿ ಉಡುಪಿನ ಆಜಾನುಬಾಹು ಡಿ.ಕೆ. ಚೌಟರು ಸಾಹಿತಿ, ಚಿತ್ರ ಕಲಾವಿದ, ರಂಗಕರ್ಮಿ, ಸಂಘಟಕ, ಕೃಷಿಕ, ಪರಿಸರಪ್ರೇಮಿ, ಮಾನವತಾವಾದಿಯಾಗಿ ಬಹುಮುಖೀ ವ್ಯಕ್ತಿತ್ವವನ್ನು ಹೊಂದಿದವರು. ಗಡಿನಾಡು ಕಾಸರಗೋಡು ಹಾಗೂ ಕರ್ನಾಟಕದ ಸಾಹಿತ್ಯ ಲೋಕದ ಕೊಂಡಿಯಾಗಿ ಇವರು ನೀಡಿದ ಕೊಡುಗೆ ಅನನ್ಯ. ಆನಂದಕೃಷ್ಣ ಎಂಬ ಕೃತಿ ನಾಮದಲ್ಲಿ ತಮ್ಮ ಬದುಕಿನ ನೆನಪುಗಳು ಮತ್ತು ಅನುಭವವನ್ನು ಬೆಸೆದು ತುಳುವಿನಲ್ಲಿ ಮಹತ್ತ್ವದ ಕೃತಿಗಳನ್ನು ರಚಿಸಿ ತುಳು ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟವಾದ ನೆಲೆ ಬೆಲೆ ತಂದುಕೊಟ್ಟವರು.

‘ಕರಿಯವಜ್ಜೆರೆನ ಕತೆಕುಲು’ ಮತ್ತು ‘ಪತ್ತ್ ಪಜ್ಜೆಲು’ ತುಳುವಿನ ಕಥಾ ಸಂಕಲನಗಳು. ತುಳು ಸಾಹಿತ್ಯಕ್ಕೆ ನೂತನ ಆಯಾಮವನ್ನು ನೀಡಿದ ಕೃತಿಗಳಲ್ಲಿ ಒಂದಾಗಿರುವ ಚೌಟರ ಮೊದಲ ಕಥಾ ಸಂಕಲನ ‘ಕರಿಯವಜ್ಜೆರೆನ ಕತೆಕುಲು’ ಸಂಕಲನಕ್ಕೆ 1996ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಪುಸ್ತಕ ಬಹುಮಾನ ದೊರೆತಿದೆ. ಚೌಟರ ನಾಟಕಗಳು ರಂಗಕೃತಿಯಾಗಿ ಅದ್ಭುತ ಯಶಸ್ಸನ್ನು ಕಂಡಿವೆ. ಅವರ ಎರಡನೆಯ ಪ್ರಸಿದ್ಧ ಕೃತಿ ‘ಪಿಲಿ ಪತ್ತಿ ಗಡಸ್’ ನಾಟಕವು ನೂರಾರು ಪ್ರದರ್ಶನಗಳನ್ನು ಕಂಡು ತುಳು ಮಾತ್ರವಲ್ಲ ತುಳುವೇತರರ ಮನಸ್ಸನ್ನು ಸೂರೆಗೊಂಡಿದೆ. ‘ಧರ್ಮೆತ್ತಿ ಮಾಯೆ’ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆಗೊಂಡ ಪ್ರಯೋಗ. ‘ಮೂಜಿ ಮುಟ್ಟು ಮೂಜಿ ಲೋಕ’, ‘ಉರಿಉಷ್ಣದ ಮಾಯೆ’, ‘ರಡ್ಡ್ ಮಾಯೊದ ನಾಟಕೊಲು’ ಚೌಟರ ಇತರ ಕೆಲವು ರಂಗಕೃತಿಗಳು. ‘ಮಿತ್ತಬೈಲ್ ಯಮುನಕ್ಕೆ’ - ‘ಒಂಜಿ ಗುತ್ತುದ ಕತೆ’ ತುಳುವ ಸಾಂಸ್ಕೃತಿಕ ದಾಖಲೆಯನ್ನೊಳಗೊಂಡ ವಿಶಿಷ್ಟ ಕಾದಂಬರಿ. 

‘ಅರ್ಧ ಸತ್ಯ ಬಾಕಿ ಸುಳ್ಳಲ್ಲ’ ಇವರ ಕನ್ನಡ ಕಾದಂಬರಿ. ಇವರ ನಾಟಕಗಳು, ಕಾದಂಬರಿ, ಸಣ್ಣಕತೆಗಳು ಕನ್ನಡಕ್ಕೆ ಅನುವಾದಗೊಂಡು ‘ದರ್ಬೆ’ ಎಂಬ ಸಂಪುಟವಾಗಿ ಪ್ರಕಟಗೊಂಡಿದೆ. ‘ಮಿತ್ತಬೈಲು ಯಮುನಕ್ಕೆ’ ಆಂಗ್ಲ ಭಾಷೆಗೂ ಅನುವಾದಗೊಂಡಿದೆ. ಅನುವಾದಗಳ ಮೂಲಕ ಚೌಟರು ಕನ್ನಡ ಹಾಗೂ ಆಂಗ್ಲ ಭಾಷೆಯ ಓದುಗರಿಗೂ ಒದಗಿದ್ದಾರೆ. ಈ ಮಟ್ಟದಲ್ಲಿ ತುಳುವಿನ ಲೇಖಕನೊಬ್ಬ ತುಳುವರಿಗೆ ಕನ್ನಡಿಗರಿಗೆ ಹಾಗೂ ಜಾಗತಿಕ ಮಟ್ಟದಲ್ಲಿ ಹತ್ತಿರವಾದ ನಿದರ್ಶನಗಳಿಲ್ಲ. ಚೌಟರಿಗೆ ಕನ್ನಡದ ಅಭಿಮಾನಿ ಓದುಗರಿದ್ದಾರೆ. ಅಂತೆಯೇ ಕನ್ನಡದ ವಿಮರ್ಶಕರು ಅವರ ಕೃತಿಗಳನ್ನು ವಿಮರ್ಶಿಸಿ ಅವುಗಳ ಮಹತ್ವ ಮತ್ತು ಅನನ್ಯತೆಯನ್ನು ವಿಶ್ಲೇಷಿಸಿ, ವ್ಯಾಖ್ಯಾನಿಸಿ, ವೌಲ್ಯಮಾಪನ ಮಾಡಿದವರಿದ್ದಾರೆ. ಚೌಟರ ಕೋರಿಕೆಯಂತೆ ಕನ್ನಡನುವಾದದ ಮೂಲಕ ಮುಹಮ್ಮದ್ ಕುಳಾಯಿ ಹಾಗೂ ಆಂಗ್ಲ ಅನುವಾದದ ಮೂಲಕ ಪ್ರೊ. ಸುರೇಂದ್ರ ರಾವ್ ಮತ್ತು ಪ್ರೊ. ಚಿನ್ನಪ್ಪ ಗೌಡ ಅವರು ಕನ್ನಡೇತರರಿಗೆ ಮಾತ್ರವಲ್ಲ, ಜಾಗತಿಕ ನೆಲೆಯಲ್ಲಿಯೂ ಚೌಟರು ಓದುಗರಿಗೆ ನಿಲುಕುವಂತೆ ಮಾಡಿದ್ದಾರೆ. ಮೀಯಪದವಿನ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಚೌಟರನ್ನು ಅಲ್ಲಿನ ಪರಿಸರ ಬಹಳವಾಗಿ ಪ್ರಭಾವಿಸಿದಂತೆಯೇ ಬಾಲ್ಯದಲ್ಲಿ ಸಾಹಿತ್ಯಾಸಕ್ತಿ ಮೊಳಕೆಯೊಡೆಯುವುದಕ್ಕೆ ಮಂಜೇಶ್ವರ ಗೋವಿಂದ ಪೈಗಳೂ ಕಾರಣರು.ಡಿ.ಕೆ. ಚೌಟರಿಗೆ ಮಂಜೇಶ್ವರ ಗೋವಿಂದ ಪೈಗಳೆಂದರೆ ಅಪಾರ ಗೌರವ ಮತ್ತು ಪ್ರೀತಿ. ಎಳವೆಯಲ್ಲಿ ಚೌಟರು ಆಗಾಗ ಗೋವಿಂದ ಪೈಗಳ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅವರ ಪುಸ್ತಕ ಪ್ರೀತಿ, ಹಲವು ಭಾಷೆಗಳ ಪುಸ್ತಕ ಸಂಗ್ರಹ ಮತ್ತು ಅವುಗಳ ಆಮೂಲಾಗ್ರ ಪರಿಶೀಲನೆ, ಓದು ಹಾಗೂ ಪೈಗಳ ಸಂಶೋಧನಾ ಕೃತಿಗಳ ವೌಲಿಕತೆಯನ್ನು ಅರಿತು ನಿಬ್ಬೆರಗಾಗಿ ಅವರ ಪ್ರೇರಣೆ ಪ್ರಭಾವಗಳಿಗೆ ಒಳಗಾದರು. ಜೊತೆ ಜೊತೆಗೇ ಕುವೆಂಪು, ಮಾಸ್ತಿ, ರಾಜರತ್ನಂ, ಕಾರಂತರಂತಹ ಕನ್ನಡದ ಅನನ್ಯ ಸಾಹಿತ್ಯ ದಿಗ್ಗಜರನ್ನು ಎಳವೆ ಯಲ್ಲಿಯೇ ಪೈಗಳ ಮನೆಯಲ್ಲಿ ನೋಡುವ, ‘ಕಾಣುವ’ ಅವಕಾಶವೂ ದೊರೆಯುತ್ತಿತ್ತು. ಇವೆಲ್ಲವೂ ಚೌಟರಲ್ಲಿ ಗಂಭೀರ ಓದಿನ, ಬರವಣಿಗೆಯ ಹುಚ್ಚು ಹಿಡಿಸಿತು. ತುಳುವಿನಲ್ಲಿ ಸೃಜನಶೀಲ ಕೃತಿಗಳನ್ನು ಬರೆಯುವುದಕ್ಕೆ ಮೊದಲು ಚೌಟರು ಕೂಡಾ ಹಲವು ಭಾಷೆಗಳ ಕೃತಿಗಳನ್ನು ಕೊಂಡು, ಓದಿ, ಪರಿಶೀಲಿಸಿ, ಚರ್ಚಿಸಿ ಬದುಕು ಮಾಗಿದ ಬಳಿಕ ಬರೆಯತೊಡಗಿದರು. ಮಾಗಿದ ಅನುಭವಗಳ ಹೂರಣದಿಂದ ಉತ್ಪನ್ನವಾದ ಮೊದಲ ಕೃತಿಯ ಹಸ್ತಪ್ರತಿಯನ್ನು ಆ ಕಾಲಕ್ಕೆ ಕನ್ನಡ ವಿಭಾಗದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರೊ. ಬಿ.ಎ. ವಿವೇಕ ರೈ ಅವರ ಕೈಗಿತ್ತು ಕೃತಿಯನ್ನು ಬೆಳಕಿಗೆ ತರುವಲ್ಲಿ ಅದರ ಸಾಧಕ ಬಾಧಕಗಳನ್ನು ಚರ್ಚಿಸಿದರು. ಕೃತಿಯನ್ನು ಪರಾಮರ್ಶಿಸಿ, ಅದರ ವೌಲಿಕತೆಯನ್ನು ಅರಿತು ಬಹಳವಾಗಿಯೇ ಮೆಚ್ಚಿಕೊಂಡ ಪ್ರೊ.ವಿವೇಕ ರೈ ಅವರು ಚೌಟರನ್ನು ತುಳು ಸಾಹಿತ್ಯ ಲೋಕಕ್ಕೆ ‘ಕಾಣಿಸುವ’ ತುರ್ತನ್ನು ಮನಗಂಡರು. ಚೌಟರ ಕಾರ್ಯ ಕ್ಷೇತ್ರವು ಗುತ್ತಿನ ಮನೆ, ಮೀಯಪದವು, ಕರಾವಳಿಯನ್ನೂ ದಾಟಿ ಬೆಂಗಳೂರು, ದಿಲ್ಲಿ, ಘಾನಾ, ಲಂಡನ್, ನೈಜೀರಿಯಾದವರೆಗೂ ವ್ಯಾಪಿಸಿದೆ. ಎಲ್ಲಾ ಕಡೆಯೂ ವೃತ್ತಿಯೊಂದಿಗೆ ಬೆಸೆದುಕೊಂಡ ಓದು ಅವರ ಜ್ಞಾನದ ಹಂದರವನ್ನು ವಿಸ್ತರಿಸಿತು. ಹಾಗಾಗಿ ಚೌಟರೊಳಗೆ ತುಳು, ಕನ್ನಡ, ಭಾರತೀಯ ಹಾಗೂ ಪಾಶ್ಚಾತ್ಯ ಸಾಹಿತ್ಯದ ಅಗಾಧ ಓದಿನ ತಿಳಿವಿತ್ತು. ಹೊರನಾಡು, ಹೊರದೇಶಗಳಲ್ಲಿ ಉದ್ಯಮಿಯಾಗಿ ಕಾರ್ಯನಿರ್ವಹಿಸಿದ ಅನುಭವಗಳೊಂದಿಗೆ ಅವರನ್ನು ಆತ್ಯಂತಿಕವಾಗಿ ಕಾಡುತ್ತಿದ್ದುದು ಕರಾವಳಿ, ತನ್ನ ಹುಟ್ಟೂರು, ದರ್ಬೆ ಮನೆ, ಕೃಷಿ, ಅಲ್ಲಿನ ಸಾಂಸ್ಕೃತಿಕ ಜಗತ್ತು, ಸಾಮಾಜಿಕ, ಸಾಂಸ್ಕೃತಿಕ ಬಿಕ್ಕಟ್ಟು, ತಲ್ಲಣಗಳು, ಪಲ್ಲಟಗಳು. ಅವರ ಕೃತಿಗಳಲ್ಲಿ ಈ ಎಲ್ಲ ಅಂಶಗಳು ಮಿಳಿತಗೊಂಡಿವೆ. ಗುತ್ತು ಮತ್ತು ಅದರೊಳಗಿನ ಸಂಭ್ರಮ, ತಲ್ಲಣಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ ಚೌಟರು ಸೃಜನಶೀಲವಾಗಿ ಕೃತಿಗಳಲ್ಲಿ ದುಡಿಸಿಕೊಂಡಿದ್ದಾರೆ. ಪಿಲಿಪತ್ತಿ ಗಡಸ್ ನಾಟಕದ ವಸ್ತು ಒಂದು ಗುತ್ತಿಗೆ ಸಂಬಂಧಿಸಿದೆ. ಊರಿನ ಆಢ್ಯ ಮನೆತನವಾದ ಗುತ್ತಿನ ಯಜಮಾನನ ನೈತಿಕ ಅಧಃಪತನ ಒಂದು ಗುತ್ತಿನ ನಾಶಕ್ಕೆ ಕಾರಣವಾಗುವ ಬಗೆಯನ್ನು ಈ ನಾಟಕದಲ್ಲಿ ವಿಶ್ಲೇಷಿಸಿದ್ದಾರೆ.

ಅಧಿಕಾರ ಮತ್ತು ಅಂತಸ್ತುಗಳೇ ಕಾರಣವಾಗಿ ಗಂಡಸರಿಂದ ಹೆಂಗಸರು ನರಳುವ, ಅನುಭವಿಸುವ ತಲ್ಲಣಗಳು, ಮಿತಿಮೀರಿದ ವರ್ತನೆಯಿಂದ ಹೆಂಗಸರು ಸೆಟೆದುನಿಲ್ಲುವ ರೀತಿಯನ್ನು ಈ ನಾಟಕದಲ್ಲಿ ಚೌಟರು ಮಾರ್ಮಿಕವಾಗಿ ನಿರೂಪಿಸಿದ್ದಾರೆ. ‘ಮಿತ್ತಬೈಲ್ ಯಮುನಕ್ಕೆ’ ಕಾದಂಬರಿಯಲ್ಲಿ ಈ ವಸ್ತು ಇನ್ನಷ್ಟು ವಿಸ್ತಾರವಾಗಿ ಚಿತ್ರಿತವಾಗಿದೆ. ಗುತ್ತಿನ ಏಳು ಬೀಳುಗಳನ್ನು ವಿವರಿಸುವ ಮೂರು ತಲೆಮಾರುಗಳ ಕತೆ ಇಲ್ಲಿದೆ. ಒಂದು ಗುತ್ತಿನ ನಾಶಕ್ಕೆ ಒಳಗಿನ ಮತ್ತು ಹೊರಗಿನ ಹುನ್ನಾರಗಳು ಕಾರಣವಾಗುವ ಬಗೆಯನ್ನು ಈ ಕಾದಂಬರಿ ನಿರೂಪಿಸುತ್ತದೆ. ಕೆಲವು ಶತಮಾನಗಳ ಕಾಲಘಟ್ಟದಲ್ಲಿ ಗುತ್ತಿನ ಏಳುಬೀಳು ಮತ್ತು ಆಧುನಿಕತೆಗೆ ತೆರೆದುಕೊಂಡ ಆಯಾಮವನ್ನು ಚೌಟರು ಇಲ್ಲಿ ವಿವರಿಸಿದ್ದಾರೆ. ಚೌಟರ ಎಲ್ಲ ಕೃತಿಗಳಲ್ಲಿಯೂ ಗಮನಿಸಬಹುದಾದ ಇನ್ನೊಂದು ಪ್ರಮುಖ ಅಂಶವೆಂದರೆ ಅವರ ಸ್ತ್ರಿಪರ ನಿಲುವು. 

ತೋಟವೇ ಸಂಶೋಧನಾ ಕೇಂದ್ರ

ಉದ್ಯಮಿಯಾಗಿ, ಸಾಹಿತಿಯಾಗಿ ಯಶಸ್ಸು ಕಂಡ ಚೌಟರು ತಮ್ಮ ಮೀಯಪದವಿನ ಜಮೀನಿನಲ್ಲಿ ನಾನಾ ಬೆಳೆಗಳನ್ನು ಬೆಳೆಯುವ ಯಶಸ್ವೀ ಕೃಷಿಕರೂ ಹೌದು. ತಾವು ಬೆಂಗಳೂರಿನಲ್ಲಿದ್ದರೂ ತಮ್ಮ ಜಮೀನಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಅನೇಕ ಎಕರೆಗಳ ವಿಸ್ತಾರದಲ್ಲಿರುವ ಈ ತೋಟವು ಬೃಹತ್ತಾದ ಸಂಶೋಧನಾ ಕೇಂದ್ರವೇ ಆಗಿದೆ. ಇಲ್ಲಿನ ಅನೇಕ ಕೃಷಿ ಚಟುವಟಿಕೆಗಳು, ಕೃಷಿಯ ಕುರಿತ ಪ್ರಾತ್ಯಕ್ಷಿಕೆ, ವಿಚಾರ ವಿಮರ್ಶೆಗಳು ವಿಶೇಷ ಪ್ರಶಂಸೆಗೆ ಪಾತ್ರವಾಗಿವೆ. ನೂತನ ಆವಿಷ್ಕಾರಗಳೊಂದಿಗೆ ತೋಟವನ್ನು ಬೆಳೆಸುವಲ್ಲಿ ಅವರ ಸಹೋದರ ಸಸ್ಯ ವಿಜ್ಞಾನಿ, ಸಂಶೋಧಕ, ಪ್ರಗತಿ ಪರ ಕೃಷಿಕ ಡಾ. ಡಿ.ಸಿ. ಚೌಟ ಮತ್ತು ಇನ್ನೋರ್ವ ಸಹೋದರ ಪ್ರಭಾಕರ ಚೌಟರ ಸಹಕಾರವೂ ಅನನ್ಯ. ತೊಂಬತ್ತರ ದಶಕದಲ್ಲಿ ಸಿಜಿಕೆಯ ಮೂಲಕ ರಂಗಭೂಮಿಗೆ ಪರಿಚಿತರಾದ ಆನಂತರದಲ್ಲಿ ಸಮುದಾಯ ಸೇರಿದಂತೆ ಕರ್ನಾಟಕದ ವಿವಿಧ ರಂಗ ತಂಡಗಳಿಗೆ ಕಲಾಪೋಷಕರಾಗಿಯೂ ಅವರು ನೀಡಿದ ಸಹಕಾರ ಮಹತ್ವದ್ದು. ಸಿಜಿಕೆ ನಂತರ ರಂಗ ನಿರಂತರದ ಚುಕ್ಕಾಣಿ ಹಿಡಿದು ಸಂಘಟನೆಗೆ ಬಲ ತುಂಬಿದರು. ಚಿತ್ರ ಕಲಾ ಪರಿಷತ್ತಿನ ಮೂಲಕ ಚಿತ್ರ ಸಂತೆಯನ್ನು ಏರ್ಪಡಿಸಿ ಚಿತ್ರ ಕಲಾಕೃತಿಗಳನ್ನು ಜನ ಸಾಮಾನ್ಯರ ಹತ್ತಿರಕ್ಕೆ ತಂದರು. ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಪರಿಷತ್ತು ಖ್ಯಾತಿ ಪಡೆಯಲು ಕಾರಣವಾಯಿತು. ಕಲೆ ಮತ್ತು ಕಲಾವಿದನನ್ನು ಸಮಾನವಾಗಿ ಗೌರವಿಸುವ ಚೌಟರು ಕಲಾವಿದರಿಗೆ, ನಾಟಕ ಸಂಸ್ಥೆಗಳಿಗೆ, ಸಾಹಿತಿಗಳಿಗೆ ಸಾಕಷ್ಟು ಧನ ಸಹಾಯವನ್ನೂ ನೀಡಿದ್ದಾರೆ. ಗೋವಿಂದ ಪೈ ಸ್ಮಾರಕ ಗಿಳಿವಿಂಡು ನಿರ್ಮಾಣದಲ್ಲಿ ಕರ್ನಾಟಕ ಮತ್ತು ಕೇರಳ ಸರಕಾರದ ಪ್ರಧಾನ ಕೊಂಡಿಯಾಗಿ ನಿರಂತರ ಶ್ರಮಿಸಿದ ಫಲವಾಗಿ ಮಂಜೇಶ್ವರದಲ್ಲಿ ಗಿಳಿವಿಂಡು ಲೋಕಾರ್ಪಣೆಯಾಗಿದೆ. ಕಾರ್ಕಳದ ಕಾಂತಾವರದ ಚೌಟರ ಚೌಕಿ, ಮೀಯಪದವಿನ ಚೌಟರ ಬಯಲು ರಂಗ ಮಂದಿರ, ನಾಟಕ ತಂಡ ಮತ್ತು ಪ್ರದರ್ಶನಗಳಿಗೆ ಅನುದಾನ, ತುಳುವಿನ ವೌಲಿಕ ಕೃತಿಗಳ ಪ್ರಕಟನೆಗೆ ಅನುದಾನ - ಹೀಗೆ ಚೌಟರು ಸಾಹಿತ್ಯ ಮತ್ತು ರಂಗಭೂಮಿಯನ್ನು ಕಟ್ಟಿ ಬೆಳೆಸಿದ ರೀತಿ ಅನನ್ಯವಾದುದು. ಡಿ.ಕೆ. ಚೌಟರ ತುಳು ಸಾಹಿತ್ಯ ಮತ್ತು ರಂಗಭೂಮಿ ಚಟುವಟಿಕೆಗಳಿಗಾಗಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ, ತುಳು ಸಾಹಿತ್ಯ ಅಕಾಡಮಿಯ ಗೌರವ, ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಮಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ತುಳುನಾಡು, ತುಳು ಭಾಷೆ, ರಂಗಭೂಮಿ ಯನ್ನು ಅತೀವವಾಗಿ ಪ್ರೀತಿಸಿದ ಚೌಟರ ನೆನಪನ್ನು ಅವರ ಕೃತಿಗಳು ಚಿರಸ್ಥಾಯಿ ಯಾಗಿಸಿವೆ. ಶ್ರೀಮಂತಿಕೆಗೆ ಹಲವು ಆಯಾಮಗಳಿವೆ. ಆ ಶ್ರೀಮಂತಿಕೆಯನ್ನು ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವ ಹೃದಯ ಶ್ರೀಮಂತಿಕೆ ಚೌಟರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)