varthabharthi


ಸುಗ್ಗಿ

ಇತಿಹಾಸ

ಕಾಕೋರಿ ಕಾಂಡ

ವಾರ್ತಾ ಭಾರತಿ : 29 Jun, 2019
ಎಂ.ಐ. ರಾಜಸ್ವಿ, ಕನ್ನಡಕ್ಕೆ: ಜೆ. ಕಲೀಂ ಬಾಷ

ಅಶ್ಫಾಖುಲ್ಲಾ ಖಾನ್

1925 ಆಗಸ್ಟ್ 7ರಂದು ಶಾಹಜಹಾಂಪುರದಲ್ಲಿ ಸಭೆ ಸರಕಾರಿ ಖಜಾನೆಯನ್ನು ಲೂಟಿ ಮಾಡುವ ಯೋಚನೆ ಮತ್ತು ಯೋಜನೆ ರಾಂಪ್ರಸಾದ್ ಬಿಸ್ಮಿಲ್‌ರಿಗೆ ತುಂಬಾ ಇಷ್ಟವಾಯಿತು. ಏಕೆಂದರೆ ಮೇಲಿಂದ ಮೇಲೆ ತನ್ನ ದೇಶವಾಸಿಗಳ ಸಂಪತ್ತನ್ನು ಲೂಟಿ ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ಇದರಿಂದ ಲೂಟಿಯಾದ ಪರಿವಾರದವರಿಗಾಗುವ ದೈಹಿಕ ಮತ್ತು ಮಾನಸಿಕ ಹಿಂಸೆ, ನೋವಿನಿಂದ ಅವರಿಗೆ ದುಃಖವಾಗುತ್ತಿತ್ತು. ಜೊತೆಗೆ ಲೂಟಿಯಾದ ಸಂಪತ್ತನ್ನು ಹಿಂದಿರುಗಿಸುವ ಯೋಚನೆ, ಚಿಂತೆ ಅವರಿಗಿತ್ತು. ಇದೇ ಉದ್ದೇಶದಿಂದ ಬಿಸ್ಮಿಲ್‌ಜಿ ಅವರು 7 ಆಗಸ್ಟ್ 1925ರಂದು ದಳದ ಪ್ರಮುಖ ಸದಸ್ಯರ ಸಭೆ ಕರೆದರು. ಅದಕ್ಕಾಗಿ ಅವರು ಶಾಹಜಹಾಂಪುರದ ಮೊಹಲ್ಲಾವೊಂದರಲ್ಲಿ ರಾಜಾರಾಂ ಭಾರತೀಯ ಅವರ ಹೆಸರಲ್ಲಿ ದಳದ ಕಾರ್ಯಕ್ಕಾಗಿ ಒಂದು ಮನೆಯನ್ನು ಬಾಡಿಗೆಗೆ ಪಡೆದರು. ಈ ಮನೆಯಲ್ಲಿ ಸಭೆಯನ್ನು ಆಯೋಜಿಸಿ, ಈ ಸಭೆಯ ನಡಾವಳಿಗಳನ್ನು ಗುಪ್ತವಾಗಿಟ್ಟರು.

ಸಭೆಯಲ್ಲಿ ಸರ್ವಶ್ರೀ ರಾಜೇಂದ್ರ ನಾಥ್ ಲಹಿರಿ, ಮನ್ಮಥನಾಥ ಗುಪ್ತ, ಶಚೀಂದ್ರನಾಥ ಬಕ್ಷಿ, ಠಾಕೂರ್ ರೋಶನ್ ಸಿಂಗ್, ಬನವಾರಿ ಲಾಲ್ ಶ್ರೀವಾಸ್ತವ, ಚಂದ್ರಶೇಖರ್ ಆಝಾದ್, ಇಂದ್ರ ವಿಕ್ರಮ ಗುಪ್ತ, ಮುಕುಂದಿ ಲಾಲ್, ಮುರಾರಿ ಲಾಲ್, ಶರ್ಮಾ, ಕೇಶವ ಚಂದ್ರ ಚಕ್ರವರ್ತಿ, ಅಶ್ಫಾಖುಲ್ಲಾ ಖಾನ್ ಮತ್ತು ರಾಂಪ್ರಸಾದ್ ಬಿಸ್ಮಿಲ್ ಮತ್ತಿತರ ಕ್ರಾಂತಿಕಾರಿಗಳು ಭಾಗವಹಿಸಿದ್ದರು. ಸಭೆಯ ಕಾರ್ಯಸೂಚಿಯ ಪ್ರಮುಖ ವಿಷಯ ‘‘ದಳದ ಕಾರ್ಯಕ್ರಮಕ್ಕಾಗಿ ಧನ ಸಂಗ್ರಹ ಮಾಡುವುದು’’ ಸಭೆಯಲ್ಲಿ ಬಿಸ್ಮಿಲ್‌ಜಿ ಅವರು ಧನ ಸಂಗ್ರಹದ ತಮ್ಮ ಯೋಜನೆಯನ್ನು ದಳದ ಸಭೆಯಲ್ಲಿ ಮಂಡಿಸಿದರು. ಯೋಜನೆ ವಿವರ ಶಾಹಜಹಾಂಪುರದಿಂದ ಹೊರಡುವ ಯಾವುದೇ ರೈಲು ಗಾಡಿಯಲ್ಲಿನ ಸರಕಾರಿ ಖಜಾನೆ ಲೂಟಿ ಮಾಡುವುದಾಗಿತ್ತು. ಯಾವ ರೈಲು ಗಾಡಿಯ ಖಜಾನೆ ಲೂಟಿ ಮಾಡಬೇಕೆಂಬುದನ್ನು ನಿರ್ಣಯಿಸುವುದು ದಳದ ಸದಸ್ಯರಿಗೆ ಬಿಡಲಾಯಿತು. ಎಲ್ಲಾ ಸದಸ್ಯರು ಬಿಸ್ಮಿಲ್‌ಜಿ ಅವರು ಈ ಯೋಜನೆಗೆ ತಮ್ಮ ಸಹಮತ ವ್ಯಕ್ತಪಡಿಸಿದರು.

8 ಆಗಸ್ಟ್, 1925ರಂದು ಕೆಲವು ಕ್ರಾಂತಿಕಾರಿ ಯುವಕರು ಶಾಹಜಹಾಂಪುರ ರೈಲ್ವೆ ಸ್ಟೇಷನ್‌ನಿಂದ ನಂ.8 ಸಹಾರನ್‌ಪುರ ಪ್ಯಾಸೆಂಜರ್ ರೈಲಿನಲ್ಲಿ ಕುಳಿತು ಲೂಟಿಗಾಗಿ ತೆರಳಬೇಕು ಎಂದು ನಿರ್ಣಯಿಸಲಾಯಿತು. ಲಕ್ನೋದ ಸಮೀಪವಿರುವ ಕಾಕೋರಿ ರೈಲ್ವೆ ಸ್ಟೇಷನ್‌ನಲ್ಲಿ ರೈಲನ್ನು ನಿಲ್ಲಿಸಿ ಖಜಾನೆ ಲೂಟಿ ಮಾಡಲು ತೀರ್ಮಾನಿಸಲಾಯಿತು. ಈ ಕಾರ್ಯಕ್ಕಾಗಿ ಹತ್ತು ಕ್ರಾಂತಿಕಾರಿಗಳ ಒಂದು ಸಮಿತಿ ರಚಿಸಿದರು. ಅದರ ಸದಸ್ಯರು ಪಂಡಿತ್ ರಾಂಪ್ರಸಾದ್ ಬಿಸ್ಮಿಲ್, ಅಶ್ಫಾಖುಲ್ಲಾ ಖಾನ್ ‘ವಾರಸಿ’ ರಾಜೇಂದ್ರನಾಥ ‘ಲಹಿರಿ’, ಚಂದ್ರಶೇಖರ್ ‘ಆಝಾದ್’, ಶಚೀಂದ್ರನಾಥ್ ಬಕ್ಷಿ, ಮನ್ಮಥ ನಾಥ ಗುಪ್ತ್ತಾ, ಮುಕುಂದಿಲಾಲ್ ಗುಪ್ತಾ, ಕೇಶವ ಚಂದ್ರ ಚಕ್ರವರ್ತಿ, ಮುರಾರಿ ಲಾಲ್ ಶರ್ಮಾ ಮತ್ತು ಬನವಾರಿ ಲಾಲ್ ಆಗಿದ್ದರು. ಯೋಜನೆಯ ಅನುಸಾರ ಎಲ್ಲ ಕ್ರಾಂತಿ ವೀರರು ನಿಶ್ಚಿತ ದಿನಾಂಕ 8 ಆಗಸ್ಟ್, 1925ರಂದು ನಿರ್ಧರಿತ ಸಮಯದಲ್ಲಿ ಶಾಹಜಹಾಂಪುರ ರೈಲು ನಿಲ್ದಾಣದಲ್ಲಿ ಬಂದು ಸೇರಿದರು. ಆದರೆ ದುರದೃಷ್ಟವಶಾತ್ ರೈಲು ನಿಲ್ದಾಣದಲ್ಲಿ ಬಿಸ್ಮಿಲ್‌ಜಿ ಅವರ ಕೆಲವು ಪರಿಚಿತ ವ್ಯಕ್ತಿಗಳು ಭೇಟಿಯಾದರು. ಈ ಕಾರ್ಯವನ್ನು ಈ ದಿನ ತಾವು ಮಾಡಿ ಮುಗಿಸಿದಲ್ಲಿ ಪರಿಚಿತ ವ್ಯಕ್ತಿಗಳಿಂದ ತಮ್ಮ ಯೋಜನೆ ಬಯಲಾಗುವುದು ಎಂದು ಬಿಸ್ಮಿಲ್‌ಜಿ ಹೆದರಿದರು. ಆದ್ದರಿಂದ ಪೂರ್ವನಿರ್ಧರಿತ ಆಗಸ್ಟ್ 8ಕ್ಕೆ ಈ ಯೋಜನೆ ಕೈಗೊಂಡರು. ಸ್ಟೇಶನ್‌ನಿಂದ ಮರಳಿ ಬಂದು ಎಲ್ಲ ಕ್ರಾಂತಿಕಾರಿಗಳೂ ಶಾಹಜಹಾಂಪುರದ ಆರ್ಯ ಸಮಾಜ ಮಂದಿರದಲ್ಲಿ ಮತ್ತೆ ಸಭೆ ಸೇರಿ ಮುಂದಿನ ದಿನ ಸಹಾರನ್‌ಪುರ ಲಕ್ನೋ ಪ್ಯಾಸೆಂಜರ್ ಗಾಡಿಯಲ್ಲಿ ಕಾಕೋರಿ ಬಳಿ ಖಜಾನೆ ಲೂಟಿ ಮಾಡಬೇಕೆಂದು ತೀರ್ಮಾನಿಸಿದರು. ಹತ್ತು ಕ್ರಾಂತಿಕಾರಿ ಗಳು ಫಿರಂಗಿ ಖಜಾನೆ ಲೂಟಿ ಮಾಡಿದರು. ಒಂಬತ್ತು, ಆಗಸ್ಟ್ 1925ರಂದು ಉಳಿ, ಸುತ್ತಿಗೆ, ಕೊಡಲಿ ಮುಂತಾದ ಶಸ್ತ್ರಾಸ್ತ್ರಗಳ ಸಹಿತ ಕ್ರಾಂತಿಕಾರಿ ಯೋಜನಾನುಸಾರವಾಗಿ ರೈಲು ದರೋಡೆಗಾಗಿ ಕ್ರಾಂತಿಕಾರಿ ಯುವಕರು ಹೊರಟರು. ಅಂದು ಸಂಜೆ ಏಳು ಗಂಟೆಗೆ ನಂ.8 ಸಹಾರನ್‌ಪುರ-ಲಕ್ನೋ ಪ್ಯಾಸೆಂಜರ್ ಗಾಡಿಯಲ್ಲಿ ಶಾಹಜಹಾಂಪುರದಿಂದ ಲಕ್ನೋ ಕಡೆಗೆ ಹೊರಟರು. ಎಲ್ಲರಲ್ಲೂ ರೈಲಿನ ಟಿಕೆಟ್‌ಗಳಿದ್ದವು. ಯೋಜನೆಯಂತೆ ಮೂವರು ವ್ಯಕ್ತಿಗಳು ಶ್ರೀ ಅಶ್ಫಾಖುಲ್ಲಾ ಖಾನ್, ಶ್ರೀ ಶಚೀಂದ್ರನಾಥ್ ಬಕ್ಷಿ ಮತ್ತು ರಾಜೇಂದ್ರನಾಥ ಲಹಿರಿ ದ್ವಿತೀಯ ಶ್ರೇಣಿಯ ಡಬ್ಬಿಯಲ್ಲಿ ಕುಳಿತರು. ತೃತೀಯ ಶ್ರೇಣಿಯ ಡಬ್ಬಿಯಲ್ಲಿ ಪ್ರಯಾಣಿಸಿದರು. ಉಳಿದ ವ್ಯಕ್ತಿಗಳು ತೃತೀಯ ಶ್ರೇಣಿಯ ಡಬ್ಬಿಯಲ್ಲಿ ರೈಲನ್ನು ನಿಲ್ಲಿಸುವ ಚೈನು ಸೂಕ್ತವಾಗಿ ಕಾರ್ಯನಿರ್ವಹಿಸದ ಕಾರಣ ದ್ವಿತೀಯ ಶ್ರೇಣಿಯಲ್ಲಿ ಕುಳಿತ ವ್ಯಕ್ತಿಗಳು ಪೂರ್ವ ನಿರ್ಧಾರಿತ ಸ್ಥಳದಲ್ಲಿ ರೈಲು ಡಬ್ಬಿಯ ಚೈನನ್ನು ಎಳೆದು ನಿಲ್ಲಿಸಲು ಸಾಧ್ಯವೆಂದು ಭಾವಿಸಲಾಗಿತ್ತು. ಟ್ರೇನು ಶಾಹಜಹಾಂಪುರದಿಂದ ಮುಂದೆ ಸಾಗಿತ್ತು. ಸಂಜೆಯ ಸಮಯ, ಕೆಲ ಸಮಯದ ಹಿಂದೆ ಭೀಕರ ಮಳೆ ಸುರಿಯಿತು. ಅದರಿಂದ ರೈಲಿನ ಹಳಿಗಳ ಮೇಲೆ ಅಲ್ಲಲ್ಲಿ ನೀರು ತುಂಬಿತು. ಹಸಿರು ಹುಲ್ಲಿನ ಮೈದಾನಗಳ ಮಧ್ಯೆ ಇದ್ದ ತಗ್ಗು, ಗುಂಡಿಗಳಲ್ಲಿ ಮಳೆ ನೀರು ಬಿದ್ದು, ಸ್ವಚ್ಛ ನೀರಿನಿಂದಾಗಿ ಭೂ ಮಾತೆ ಸ್ವಚ್ಛ ಬಿಳಿ ಪ್ಯಾಚ್ ವರ್ಕಿನ ಹಸಿರು ಸೀರೆಯನ್ನು ಹೊದ್ದಂತೆ ಕಾಣುತ್ತಿತ್ತು. ಮಳೆಯ ಪಟ ಪಟ ಶಬ್ದ ಇನ್ನೂ ಜಾರಿಯಲ್ಲಿತ್ತು. ರೈಲುಗಾಡಿ ಚುಕ್-ಬುಕ್ ಎನ್ನುತ್ತಾ ಲಕ್ನೋದತ್ತ ವೇಗವಾಗಿ ಹೋಗುತ್ತಿತ್ತು. ಎಲ್ಲಾ ಪ್ರಯಾಣಿಕರು ಮೋಜು ಮಸ್ತಿಯಲ್ಲಿದ್ದರು. ಕೆಲವರು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದರೆ ಕೆಲವರು ಬಿಸಿ ಚಹಾದ ಸ್ವಾದವನ್ನು ಸುರು, ಸುರ್ ಎಂದು ಎಳೆಯುತ್ತಿದ್ದರು. ಕೆಲವರು ಇಸ್ಪೀಟ್ ಎಲೆಗಳ ಆಟದಲ್ಲಿ ಮಗ್ನರಾಗಿದ್ದರು. ಕೆಲವರು ಹರಟೆಯಲ್ಲಿ. - ಹೀಗೆ ಎಲ್ಲರೂ ತಮ್ಮದೇ ಪ್ರಪಂಚದಲ್ಲಿ ಲೀನರಾಗಿದ್ದರು. ಮುಂದಿನ ಕ್ಷಣದಲ್ಲಿ ಏನಾಗಬಹುದೆಂದು ಯಾರಿಗೂ ಅರಿವಿರಲಿಲ್ಲ. ರೈಲು ಸಮಾನತೆಯಿಂದ ಪ್ರತಿ ಚಿಕ್ಕ ದೊಡ್ಡ ಸ್ಟೇಷನ್‌ಗಳಲ್ಲಿ ನಿಧಾನವಾಗಿ ನಿಂತು ನಿಂತು ಸಾಗುತ್ತಿತ್ತು. ಪ್ರತಿ ನಿಲ್ದಾಣದಲ್ಲಿ ಕೆಲವು ಹೊಸ ಯಾತ್ರಿಕರು ರೈಲನ್ನು ಏರುತ್ತಿದ್ದರೆ, ಕೆಲವರು ತಮ್ಮ ತಮ್ಮ ಊರುಗಳಲ್ಲಿ ಇಳಿಯುತ್ತಿದ್ದರು. ಜೀವನವೇ ಹೀಗೊಂದು ಯಾತ್ರೆ ಇದ್ದಂತೆ. ಇಲ್ಲಿ ಕೆಲವರು ಹೊಸಬರು ಆಗಮಿಸಿದರೆ, ಹಳಬರು ನಿರ್ಗಮಿಸುತ್ತಾರೆ. ಇದೇ ಜೀವನದ ಸಾರ. ಇದೇ ರೀತಿ ಬರುವ ಹೋಗುವ, ಏರುವ-ಇಳಿಯುವ ಜನಗಳ ಮಧ್ಯೆ ಕೂಗು ‘ಚಾಯ್-ಚಾಯ್’ ಚಾಯ್‌ವಾಲಾ ‘ಗರಂ ಗರಂ ಚಾಯ್’ ‘ಗರಂ ಪುರಿ’, ‘ಸಮೋಸ’ದ ಶಬ್ದಗಳು ಸಹ ಕೇಳಿ ಬರುತ್ತಿದ್ದವು. ಅದೇ ಸಮಯದಲ್ಲಿ ಓರ್ವ ಪ್ರಯಾಣಿಕ ತನ್ನ ಪಕ್ಕದಲ್ಲಿ ಕುಳಿತ ಸಹ ಪ್ರಯಾಣಿಕನನ್ನು ಕುರಿತು ‘ಭಾಯಿ ಸಾಹಬ್, ಕಾಕೋರಿ ಸ್ಟೇಷನ್ ಬರಲು ಇನ್ನೂ ಎಷ್ಟು ಸಮಯ ಬೇಕು?’ ಎಂದ. ‘ಬೇಗ ಬರಲಿದೆ’ ಸಹ ಪ್ರಯಾಣಿಕ ಆತನನ್ನು ನೋಡದೆ ಉತ್ತರಿಸಿದ. ಈ ಸಮಯದ ತನಕ ರೈಲುಗಾಡಿ ಕಾಕೋರಿ ಸಮೀಪದಲ್ಲಿ ಆಗಮಿಸಿತ್ತು. ಯೋಜನಾನುಸಾರ ದ್ವಿತೀಯ ಶ್ರೇಣಿಯ ಡಬ್ಬಿಯಲ್ಲಿ ಕುಳಿತ ಅಶ್ಛಾಖುಲ್ಲಾಖಾನ್ ಅವರು ಇಲ್ಲಿ ಗಾಡಿಯ ಚೈನನ್ನು ಎಳೆದರು. ಗಾಡಿಯು ಕೆಲವು ಕ್ಷಣ ಮುಂದೆ ಉರುಳಿ ಮತ್ತೆ ನಿಂತಿತು. ಗಾಡಿಯು ನಿಂತ ಕ್ಷಣ ಪ್ರಯಾಣಿಕರಲ್ಲಿ ಗಲಿಬಿಲಿ ಉಂಟಾಯಿತು. ‘‘ಅರೆ ಗಾಡಿ ಇಲ್ಲೇಕೆ ನಿಂತಿತು?’’ ಎಲ್ಲರ ಮನದಲ್ಲೂ ಇದೇ ಪ್ರಶ್ನೆ ಎದ್ದಿತು. ಕೆಲವರು ಇಂಜನ್ ಕೆಟ್ಟಿದೆ ಎಂದರು. ಕೆಲವರು ಮುಂದೆ ಸಿಗ್ನಲ್ ಹಾಕಿರಲಿಕ್ಕಿಲ್ಲ ಎಂದರು. ಕೆಲವರು ‘‘ರೈಲು ಹಳಿ ಮುರಿದಿದೆ’’ ಎಂದರು. ಕೆಲವರು ‘‘ ರೈಲಿನಲ್ಲಿ ಕೆಲವು ದರೋಡೆಕೋರರು ನುಗ್ಗಿದ್ದಾರೆ, ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ ಎಂದರು. ಇದೇ ಕೋಲಾಹಲದಲ್ಲಿ ಎಲ್ಲಾ ಪ್ರಯಾಣಿಕರು ಸತ್ಯ ಏನೆಂದು ಅರಿಯಲು ಕಿಟಕಿ , ಬಾಗಿಲುಗಳ ಮೂಲಕ ಇಣುಕಿ ನೋಡಲು ಆರಂಭಿಸಿದರು.

ಇದೇ ಸಮಯದಲ್ಲಿ ಎಲ್ಲಾ ಕ್ರಾಂತಿಕಾರಿಗಳು ತಮ್ಮ ಕೆಲಸಗಳಲ್ಲಿ ತೊಡಗಿಕೊಂಡರು. ಗಾರ್ಡ್ ರೈಲು ಏಕೆ ನಿಂತಿದೆ ಎಂದು ಅರಿಯಲು ವೇಗವಾಗಿ ಓಡಿ ಬಂದು ಎರಡನೇ ದರ್ಜೆಯ ಡಬ್ಬಿಯ ಸಮೀಪ ನಿಂತಾಗ ಓರ್ವ ಕ್ರಾಂತಿಕಾರಿ ಅವನ ಮೇಲೆ ಗುರಿ ಇಟ್ಟು ಬಂದೂಕು ತೋರಿಸಿ, ‘‘ ನೀನು ಜೀವಂತವಾಗಿರಬೇಕೆಂದರೆ ಹೊಟ್ಟೆಯನ್ನು ನೆಲದ ಮೇಲೆ ಮಾಡಿ ಸುಮ್ಮನೆ ಮರು ಮಾತನಾಡದೆ ಮಲಗು’’ ಎಂದು ಆದೇಶಿಸಿದ. ಪ್ರಾಣ ಭಯದಿಂದ ಗಾರ್ಡ್ ಮರು ಮಾತನಾಡದೆ ಆದೇಶ ಪಾಲಿಸಿದ. ಏಕೆಂದರೆ ಗಾರ್ಡ್‌ನ ಆದೇಶವಿಲ್ಲದೆ ಗಾಡಿ ಮುಂದೆ ಚಲಿಸದು. ಇನ್ನೋರ್ವ ಕ್ರಾಂತಿಕಾರನು ರೈಲಿನ ಆಂಗ್ಲ ಚಾಲಕನಿಗೆ ತನ್ನ ಜಾಗ ಬಿಟ್ಟು ತೆರಳಲು ಹೇಳಿದ. ಹೆದರಿದ ರೈಲಿನ ಚಾಲಕ ತನ್ನ ಸೀಟಿನ ಕೆಳಗೆ ನುಸುಳಿ ಕುಳಿತ. ಚಾಲಕನ ಬಳಿ ಇದ್ದ ಇನ್ನೋರ್ವ ಆಂಗ್ಲ ರೈಲ್ವೆ ಇಂಜಿನಿಯರ್ ಹೆದರಿ ಶೌಚಾಲಯದಲ್ಲಿ ಹೋಗಿ ಅಡಗಿಕೊಂಡ. ಪ್ರಯಾಣಿಕರಿಗೆ ಹೆದರಿಸುವ ಉದ್ದೇಶದಿಂದ ಕ್ರಾಂತಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿದರು. ಇದರಿಂದ ಪ್ರಯಾಣಿಕರಿಗೆ ಈ ಕ್ರಾಂತಿಕಾರಿಗಳು ನಿಜವಾಗಿಯೂ ಏನೂ ಮಾಡಬಲ್ಲರು ಎಂಬುದು ಖಾತ್ರಿಯಾಯಿತು. ಗಾಳಿಯಲ್ಲಿ ಗುಂಡು ಹಾರಿಸಿದ ತಕ್ಷಣ ಪ್ರಯಾಣಿಕರ ಮೇಲೆ ಪ್ರಭಾವ ಬೀರಿ ಅವರು ತಮ್ಮ ಆಸನದ ಬಳಿ ಇರುವ ಕಿಟಕಿಗಳನ್ನು ಮುಚ್ಚಿ ಸುಮ್ಮನೆ ಕುಳಿತರು.

ಈಗ ಕ್ರಾಂತಿಕಾರಿಗಳಾದ ಅಶ್ಫಾಖುಲ್ಲಾ ಖಾನ್ ಮತ್ತು ಮುಕುಂದಿಲಾಲ್ ನಿಶ್ಚಿಂತೆಯಿಂದ ಹಣ ತುಂಬಿದ ಲೋಹದ ಭಾರೀ ಬಂದೂಕನ್ನು ಗಾಡಿಯಿಂದ ಕೆಳಗೆ ಬೀಳಿಸಿದರು. ಇಬ್ಬರು ಕ್ರಾಂತಿಕಾರಿಗಳು ಬಂದೂಕು ಹಿಡಿದು ಖಜಾನೆಯ ರಕ್ಷಣೆಗಾಗಿ ಅತ್ತ-ಇತ್ತ ನಿಂತರು. ನಾಲ್ಕು ಜನ ಕ್ರಾಂತಿಕಾರಿಗಳು ಇಬ್ಬಿಬ್ಬರಾಗಿ ಗಾಡಿಯ ಎರಡೂ ಬದಿಯಲ್ಲಿ ನಿಂತು ಐದು-ಐದು ನಿಮಿಷಗಳ ಅಂತರದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಘೋಷಿಸುತ್ತಿದ್ದರು ನಾವು ದರೋಡೆಕೋರರಲ್ಲ. ನಾವು ಕ್ರಾಂತಿಕಾರಿಗಳು, ‘‘ನಾವು ದೇಶಕ್ಕಾಗಿ ಸರಕಾರಿ ಖಜಾನೆ ಲೂಟಿಮಾಡುತ್ತಿದ್ದೇವೆ. ನಾವು ಯಾವುದೇ ಪ್ರಯಾಣಿಕರನ್ನು ಲೂಟಿ ಮಾಡುವುದಿಲ್ಲ. ನಿಮಗೆ ಯಾವುದೇ ತೊಂದರೆ ಕೊಡುವುದಿಲ್ಲ. ಪ್ರಯಾಣಿಕರು ಹೆದರುವ ಅವಶ್ಯಕತೆ ಇಲ್ಲ. ನೀವೆಲ್ಲರೂ ನಿಮ್ಮ ನಿಮ್ಮ ಆಸನಗಳಲ್ಲಿ ಸುಮ್ಮನೆ ಕುಳಿತಿರಿ. ನೀವೆಲ್ಲರೂ ನಮ್ಮ ಸಹೋದರರೇ. ನಾವು ಆತಂಕಕಾರಿ ಬ್ರಿಟಿಷರಿಂದ ನಮ್ಮ ಭಾರತಮಾತೆಯನ್ನು ಬ್ರಿಟಿಷ್ ದಾಸ್ಯತ್ವದಿಂದ ಸ್ವತಂತ್ರಗೊಳಿಸಲು ಈ ರೀತಿ ನಡೆದುಕೊಳ್ಳುತ್ತಿದ್ದೇವೆ’’ ಎಲ್ಲಾ ಪ್ರಯಾಣಿಕರು ಮೊದಲೇ ಗುಂಡಿನ ಶಬ್ದ ಕೇಳಿ ತಮ್ಮ ಆಸನಗಳಲ್ಲಿ ಸುಮ್ಮನೆ ಕುಳಿತಿದ್ದರು.

 ಈಗ ಕ್ರಾಂತಿಕಾರಿಗಳು ಲೋಹದ ಭಾತೀ ಬಂದೂಕವನ್ನು ರೈಲಿನಿಂದ ಕೆಳಗಿಳಿಸಿದ ನಂತರ, ಸಂದೂಕಕ್ಕೆ ಹಾಕಿದ ಭಾರೀ ಬೀಗವನ್ನು ಕಬ್ಬಿಣದ ಆಯುಧ ಸುತ್ತಿಗೆಗಳಿಂದ ಒಡೆಯುವ ಪ್ರಯತ್ನ ಮಾಡಿದರು. ಎಷ್ಟು ಬಾರಿ ಮರಳಿಯತ್ನವ ಮಾಡಿದರೂ ಸಹ ಲೋಹದ ಭಾರೀ ಬೀಗ ಅವರಿಂದ ಒಡೆಯಲಾಗಲಿಲ್ಲ. ಕೊನೆಗೆ ಬಲಿಷ್ಠ ಭುಜಬಲದ ಆರಡಿ ಉದ್ದದ ಆಜಾನುಬಾಹು ಅಶ್ಫಖುಲ್ಲಾ ಖಾನ್ ಅವರು ಭಾರೀ ಕೊಡಲಿ ಹಿಡಿದು ಸಂದೂಕದ ಬೀಗದ ಮೇಲೆ ಜೋರಾಗಿ ಮೇಲೆ ಮೇಲೆ ಪ್ರಹಾರ ಮಾಡಲು ಆರಂಭಿಸಿದರು. ಅದರಿಂದ ಲೋಹದ ಬಂದೂಕದಲ್ಲಿ ಬಹು ದೊಡ್ಡ ರಂಧ್ರ ಬಿದ್ದಿತು. ಕ್ರಾಂತಿಕಾರಿಗಳು ನೋಡ ನೋಡುತ್ತಿದ್ದಂತೆ ಆ ದೊಡ್ಡ ರಂಧ್ರದಿಂದಲೇ ಬಂದೂಕದಲ್ಲಿದ್ದ ಎಲ್ಲಾ ಹಣದ ಚೀಲಗಳನ್ನು ಹೊರ ತೆಗೆದು ಒಂದು ಬಟ್ಟೆಯಲ್ಲಿ ಗಂಟು ಕಟ್ಟಿದರು. ಈ ರೀತಿ ಬೇಗ ಬೇಗ ದರೋಡೆ ಕೆಲಸ ಮುಗಿಸಿ ಕ್ರಾಂತಿಕಾರಿ ಯುವಕರು ಅಲ್ಲಿಂದ ಲಕ್ನೋ ನಗರದತ್ತ ಓಡಲು ಆರಂಭಿಸಿದರು. ಅದೇ ಸಂದರ್ಭದಲ್ಲಿ ನಡೆದ ಒಂದು ಘಟನೆ ಬಗ್ಗೆ ಬಿಸ್ಮಿಲ್ ಅವರು ತಮ್ಮ ಆತ್ಮಕಥೆಯಲ್ಲಿ ಹೀಗೆ ಬರೆಯುತ್ತಾರೆ: ‘‘ಓರ್ವ ಕ್ರಾಂತಿಕಾರಿ ಶಸ್ತ್ರಧಾರಿ ಗಾರ್ಡ್ ನ ಡಬ್ಬಿಯಿಂದ ಇಳಿದು, ಇಂತಹ ಶುಭ ಅವಕಾಶ ಯಾವಾಗಲೂ ಸಿಗಲಿಕಿಲ್ಲ ಎಂದು ಲೆಕ್ಕ ಹಾಕಿ ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಲು ಶುರು ಮಾಡಿದ. ಇದನ್ನು ಕಂಡ ನಾನು ಅವನಿಗೆ ಬೆದರಿಸಿ ನಿಲ್ಲಿಸಲು ಸೂಚಿಸಿದೆ. ಗುಂಡು ಹಾರಿಸುವುದು ಅವನ ಕೆಲಸ ಆಗಿರಲಿಲ್ಲ. ಅಕಸ್ಮಾತ್ ಯಾರಾದರೂ ಪ್ರಯಾಣಿಕ ಕುತೂಹಲದಿಂದ ತಮ್ಮ ತಲೆ ಕಿಟಕಿ ಅಥವಾ ಬಾಗಿಲನಿಂದ ಇಣುಕಿ ನೋಡಿದ್ದೇ ಆದರೆ, ಗುಂಡು ನೇರವಾಗಿ ಅವನಿಗೆ ತಗಲುವ ಸಂಭವವಿತ್ತು. ಹಾಗೇ ಆಯ್ತು. ಓರ್ವ ವ್ಯಕ್ತಿ ತನ್ನ ಡಬ್ಬಿಯಿಂದಿಳಿದು ತನ್ನ ಹೆಂಡತಿ ಇರುವ ಮಹಿಳಾ ಡಬ್ಬಿಯ ಕಡೆಗೆ ಹೋಗುತ್ತಿದ್ದ. ಆಗ ಆ ಕ್ರಾಂತಿಕಾರಿಯ ಗುಂಡು ಆ ವ್ಯಕ್ತಿಗೆ ತಗುಲಿದೆ. ಕೇವಲ ಎರಡು ಮೂರು ಗುಂಡು ಹಾರಿದ್ದವು. ಅದೇ ಸಮಯ ಆ ವ್ಯಕ್ತಿಯ ಹೆಂಡತಿ ಮೊದಲೇ ಕಿರುಚಾಡಲು ಆರಂಭಿಸಿದ್ದಾಳೆ. ಅದನ್ನು ಕೇಳಿದ ಅವಳ ಪತಿ ಹೋಗುತ್ತಿದ್ದಿರಬಹುದು. ಈ ಗುಂಡು ಹಾರಿಸಿದ ವ್ಯಕ್ತಿಯ ಅತಿ ಉತ್ಸಾಹಕ್ಕೆ ಈ ಅಮಾಯಕ ಬಲಿಯಾಗಬೇಕಾಯಿತು.’’

ಬಿಸ್ಮಿಲ್‌ಜಿ ಹೇಳುತ್ತಾರೆ. ‘‘ನಾನು ಕ್ರಾಂತಿಕಾರಿಗಳಿಗೆ ಯಾರೂ ಸಹ, ಯಾರ ಮೇಲೂ ಬಂದೂಕು ಪ್ರಯೋಗ ಮಾಡಬಾರದೆಂದು ಶಿಸ್ತಿನಿಂದ ಆದೇಶಿಸಿದ್ದೆ. ನಾನು ಮಾನವ ಹತ್ಯೆಯ ವಿರೋಧಿಯಾಗಿದ್ದೆ. ಮಾನವ ಹತ್ಯೆ ಮಾಡಿಸಿ ದರೋಡೆ ಭೀಕರ ರೂಪ ಕೊಡಲು ನನಗೆ ಇಷ್ಟವಿರಲಿಲ್ಲ. ಆದರೂ ಸಹ ತನ್ನ ಕರ್ತವ್ಯವನ್ನು ಬಿಟ್ಟು ಈ ವ್ಯಕ್ತಿ ಬಂದೂಕು ಪ್ರಯೋಗಿಸಿ ಈ ಹತ್ಯೆ ಮಾಡಿದ. ನಾನು ಬಂದೂಕು ಪ್ರಯೋಗಿಸುವ ಕರ್ತವ್ಯ ಯಾರಿಗೆ ನೀಡಿದ್ದೆನೂ ಆತ ದಕ್ಷ ಹಾಗೂ ಅನುಭವಿಯಾಗಿದ್ದ. ಆತನಿಂದ ತಪ್ಪಾಗುವ ಸಂಭವವೇ ಇರಲಿಲ್ಲ. ಆ ದಕ್ಷ ಕ್ರಾಂತಿಕಾರಿ ಯುವಕರನ್ನು ನಾನು ನೋಡಿದಾಗ ಅವರು ತಮ್ಮ ಸ್ಥಾನದಿಂದ ಪ್ರತಿ ಐದು ನಿಮಿಷಕ್ಕೊಮ್ಮೆ ಬಂದೂಕು ಚಲಾಯಿಸುತ್ತಿದ್ದರು. ಇದೇ ನನ್ನ ಆದೇಶ ಸಹ ಆಗಿತ್ತು.’’

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)