varthabharthi

ಸಿನಿಮಾ

ರುಸ್ತುಂ ಕಂಡರೆ ಖುಷ್ ತುಮ್!

ವಾರ್ತಾ ಭಾರತಿ : 29 Jun, 2019

ಐಎಎಸ್ ಅಧಿಕಾರಿಯೊಬ್ಬರ ನಾಪತ್ತೆ ಪ್ರಕರಣದ ಮೂಲಕ ಆರಂಭವಾಗುವ ಚಿತ್ರ ಪಡೆದುಕೊಳ್ಳುವ ವಿಶೇಷ ತಿರುವುಗಳನ್ನು ಇರಿಸಿಕೊಂಡು ಮಾಡಿರುವಂಥ ಚಿತ್ರ ರುಸ್ತುಂ.

 ಚಿತ್ರದ ಆರಂಭದಲ್ಲೇ ದೇಶಪಾಂಡೆ ಎನ್ನುವ ಐಎಎಸ್ ಅಧಿಕಾರಿಗೆ ನೀಡಲಾಗುವ ಬೆದರಿಕೆಯನ್ನು ತೋರಿಸಲಾಗುತ್ತದೆ. ಅದರ ಬಳಿಕ ನಾಪತ್ತೆಯಾಗುವ ದೇಶಪಾಂಡೆಯನ್ನು ಹುಡುಕಾಟ ನಡೆಸುವ ತಂದೆ ಮತ್ತು ಕುಟುಂಬಕ್ಕೆ ಸಹಾಯವಾಗಿ ಬರುತ್ತಾನೆ ಪಕ್ಕದ ಮನೆಗೆ ಹೊಸದಾಗಿ ಬಂದಂತಹ ಅಭಿಷೇಕ್ ಭಾರ್ಗವ್. ಆದರೆ ಆತ ಉತ್ತರದಿಂದ ಬಂದ ಐಎಎಸ್ ಅಧಿಕಾರಿಯ ಹೋರಾಟಕ್ಕೆ ಬೆಂಬಲಿಸಲೆಂದೇ ಬಂದ ಪೊಲೀಸ್ ಅಧಿಕಾರಿ ಎನ್ನುವ ಸತ್ಯ ಮುಂದೆ ಅರಿವಾಗುತ್ತದೆ. ಅವರಿಬ್ಬರ ನಡುವಿನ ಸಂಬಂಧಕ್ಕೆ ಕಾರಣವಾದಂಥ ಘಟನೆಗಳೇನು ಎನ್ನುವುದೇ ಚಿತ್ರದ ಹೂರಣ. ಆ ಹೂರಣದೊಳಗೆ ತುಂಬಿರುವುದೆಲ್ಲ ಅಭಿಷೇಕ್ ಭಾರ್ಗವ್ ಎಂಬ ಪಾತ್ರದ ವೈಭವೀಕರಣ.

ಪೊಲೀಸ್ ಅಧಿಕಾರಿ ಅಭಿಷೇಕ್ ಭಾರ್ಗವ್ ಪಾತ್ರದಲ್ಲಿ ಶಿವರಾಜ್ ಕುಮಾರ್ ಎಂದಿನ ಎನರ್ಜಿಯನ್ನು ತುಂಬಿಸಿಕೊಂಡು ಫುಲ್ ಲೋಡೆಡ್ ಗನ್‌ನಂತೆ ಗರ್ಜಿಸಿದ್ದಾರೆ. ಅವರ ಸ್ನೇಹಿತನ ಪಾತ್ರದಲ್ಲಿ ಮತ್ತೋರ್ವ ಪೊಲೀಸ್ ಅಧಿಕಾರಿಯಾಗಿ ವಿವೇಕ್ ಒಬೇರಾಯ್ ನಟಿಸಿದ್ದಾರೆ. ಶಿವರಾಜ್ ಮತ್ತು ವಿವೇಕ್ ಒಬೇರಾಯ್ ಕಾಂಬಿನೇಶನ್ ದೃಶ್ಯಗಳು ಶಿವಣ್ಣನ ಅಭಿಮಾನಿಗಳಿಗೆ ಖುಷಿ ನೀಡುವುದರಲ್ಲಿ ಸಂದೇಹವಿಲ್ಲ. ಗೃಹಮಂತ್ರಿ ದುರ್ಗಾ ಪ್ರಸಾದ್‌ರಾಗಿ ಕಾಣಿಸಿಕೊಂಡು ಕಾಡುವ ಪಾತ್ರವಾಗಿ ಕಳೆ ನೀಡಿದವರು ತಮಿಳು ನಟ ಮಹೇಂದ್ರನ್. ಅವರ ಪುತ್ರನಾಗಿ ನಟಿಸಿರುವ ಹರೀಶ್ ಉತ್ತಮನ್ ಅವರ ಪಾತ್ರ ಸಣ್ಣದಾಗಿದ್ದರೂ ಖಳ ಛಾಯೆಯನ್ನು ನಮ್ಮೊಳಗೆ ಸ್ಥಾಪಿಸುವಲ್ಲಿ ಸಮರ್ಥರಾಗಿದ್ದಾರೆ.

ಗೃಹಮಂತ್ರಿಯ ಎರಡನೇ ಪುತ್ರನಾಗಿ ನಟಿಸಿದ ಅರ್ಜುನ್ ಎಂಬ ನವನಟನಿಂದ ಹಿಡಿದು ಎರಡೇ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಆರ್ ಜೆ ರೋಹಿತ್ ತನಕ ಪ್ರತಿಯೊಬ್ಬರಿಂದ ದಿ ಬೆಸ್ಟ್ ಪರ್ಫಾರ್ಮನ್ಸ್ ಹೊರತರುವ ನಿರ್ದೇಶಕರ ಪ್ರಯತ್ನ ಯಶಸ್ವಿಯಾಗಿದೆ ಎಂದೇ ಹೇಳಬಹುದು. ಆದರೆ ಶಿವಣ್ಣನ ಜೋಡಿಯಾಗಿ ಶ್ರದ್ಧಾ ಶ್ರೀನಾಥ್ ಮತ್ತು ವಿವೇಕ್ ಒಬೇರಾಯ್ ಪತ್ನಿಯಾಗಿ ರಚಿತಾ ರಾಮ್ ಇಬ್ಬರೂ ಕಳೆದು ಹೋಗಬಹುದಾದ ಪಾತ್ರಗಳನ್ನು ತಮ್ಮ ತಾರಾ ವರ್ಚಸ್ಸಿನ ಮೂಲಕ ತುಸು ನೆನಪಾಗಿ ಉಳಿಸಿದ್ದಾರೆಂದು ಒಪ್ಪಲೇಬೇಕು. ಎಲ್ಲ ಆ್ಯಕ್ಷನ್ ಚಿತ್ರಗಳಲ್ಲಿನ ತಂಗಿಯರ ಹಾಗೆ ಇಲ್ಲಿಯೂ ಒಬ್ಬ ಮುದ್ದಿನ ತಂಗಿಯಾಗಿ ಮಯೂರಿ ಪ್ರತ್ಯಕ್ಷವಾಗಿದ್ದಾರೆ.

ಆದರೆ ಬಿಗ್‌ಬಾಸ್ ಖ್ಯಾತಿಯ ಧನ್‌ರಾಜ್‌ಗೆ ಒಂದು ಪ್ರಮುಖ ಪಾತ್ರವನ್ನು ನೀಡಿರುವುದು ಮತ್ತು ಆತನಿಗೆ ಆ ಪಾತ್ರ ಒಪ್ಪುವಂತೆ ಮಾಡಿರುವುದನ್ನು ನಿರ್ದೇಶಕರ ಹಿರಿಮೆ ಎಂದೇ ಹೇಳಬೇಕು. ಮೂಲತಃ ಸಾಹಸ ಸಂಯೋಜಕರಾಗಿದ್ದು ನಿರ್ದೇಶನ ರಂಗ ಪ್ರವೇಶಿಸಿರುವ ರವಿವರ್ಮ ಚಿತ್ರವೆಂದರೆ ಅನಗತ್ಯ ಆ್ಯಕ್ಷನ್‌ಗಳ ಸಂತೆ ಎಂದು ನಿರೀಕ್ಷಿಸಿದವರಿಗೆ ಅಚ್ಚರಿ ಖಚಿತ. ಮಾತ್ರವಲ್ಲ ಮೊದಲ ಬಾರಿ ನಿರ್ದೇಶಿಸಿದವರು ಶೂಟಿಂಗ್ ಮಾಡಿದ್ದೆಲ್ಲವನ್ನು ತುಂಬಿಸಿಕೊಂಡು ಚಿತ್ರವನ್ನು ದೊಡ್ಡದಾಗಿಸುವ ಪರಿಪಾಠ ಇಲ್ಲಿ ಆಗಿಲ್ಲ. ಸಂಕಲನ, ಛಾಯಾಗ್ರಹಣ ಎರಡೂ ಮೆಚ್ಚುವಂತಿದೆ. ಅನೂಪ್ ಸೀಳಿನಗ ಅವರ ಸಂಗೀತದಲ್ಲಿ ಬಿ. ಆರ್. ಲಕ್ಷ್ಮಣ್ ರಾವ್ ಅವರ ಗೀತೆ ‘‘ದೇವರೇ.. ಅಗಾಧ ನಿನ್ನ ಹಾಡು’’ ಮನಸಿಗೆ ನಾಟುತ್ತದೆ.

ರುದ್ರ ಪ್ರಸಾದ್ ಪಾತ್ರದಲ್ಲಿ ಶಿವಮಣಿಯವರ ಹಿಂದಿ ಸಂಭಾಷಣೆಗಳಲ್ಲಿನ ನೈಜತೆ ಅವರಿಗೊಂದು ಹೊಸ ಇಮೇಜ್ ನೀಡಿದಂತಿದೆ. ವಿವೇಕ್ ಒಬೇರಾಯ್ ಸೇರಿದಂತೆ ಇನ್ನಿತರ ಪಾತ್ರಗಳಿಗೆ ಹೊಂದುವಂಥ ಕಂಠಗಳನ್ನೇ ಆಯ್ಕೆ ಮಾಡಿರುವುದು ಆಗಬಹುದಾಗಿದ್ದ ಅಭಾಸವನ್ನು ತಡೆದಂತಿದೆ. ಒಂದಷ್ಟು ಸಮಯ ಹಿಂದಿಯಲ್ಲಿ ನಡೆಯುವ ಸಂಭಾಷಣೆಗಳು ಹಿಂದಿ ಅರಿಯದ, ಮೆಚ್ಚದ ಕನ್ನಡ ಸಿನೆಮಾ ಅಭಿಮಾನಿಗಳಿಗೆ ಹಿಡಿಸದೇ ಹೋದರೆ ಅಚ್ಚರಿಯೇನಿಲ್ಲ. ಆದರೆ ಸ್ವಲ್ಪ ಹಿಂದಿ ಗೊತ್ತಿದ್ದು, ಮಸಾಲ ಚಿತ್ರಗಳನ್ನು ಮೆಚ್ಚುವವರಲ್ಲಿ ’ರುಸ್ತುಂ’ ನೋಡಿದರೆ ‘ಖುಷ್ ತುಮ್’ ಆಗುತ್ತೀಯೆಂದು ಹೇಳಬಹುದು.

ತಾರಾಗಣ: ಶಿವರಾಜ್ ಕುಮಾರ್, ವಿವೇಕ್ ಒಬೇರಾಯ್, ಮಹೇಂದ್ರನ್, ಶ್ರದ್ಧಾ ಶ್ರೀನಾಥ್, ರಚಿತಾ ರಾಮ್
ನಿರ್ದೇಶನ: ರವಿವರ್ಮ
ನಿರ್ಮಾಪಕರು: ಜಯಣ್ಣ-ಬೋಗೇಂದ್ರ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)