varthabharthi

ಸಿನಿಮಾ

ಚಿತ್ರ ಜಗತ್ತಿನ ಸಂಬಂಧ ಕಡಿದುಕೊಂಡ ‘ದಂಗಲ್’ ಖ್ಯಾತಿಯ ಝೈರಾ ವಾಸಿಂ

ವಾರ್ತಾ ಭಾರತಿ : 30 Jun, 2019

ಶ್ರೀನಗರ: ರಾಷ್ಟ್ರಪ್ರಶಸ್ತಿ ವಿಜೇತೆ ಚಿತ್ರನಟಿ ಝೈರಾ ವಾಸಿಂ ನಟನಾಕ್ಷೇತ್ರದ ಜತೆಗಿನ ಸಂಬಂಧ ಕಡಿದುಕೊಂಡಿರುವುದಾಗಿ ರವಿವಾರ ಪ್ರಕಟಿಸಿದ್ದಾರೆ. ಚಿತ್ರಜಗತ್ತು ತನಗೆ ಸಂತಸ ತಂದಿಲ್ಲ ಹಾಗೂ ನಂಬಿಕೆ ಹಾಗೂ ಧರ್ಮದ ಮೇಲೆ ಹಸ್ತಕ್ಷೇಪ ಮಾಡುತ್ತದೆ ಕಾರಣದಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ನಟಿ ಮಾಡಿರುವ ವಿವರವಾದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ಕಾಶ್ಮೀರದಲ್ಲಿ ಹುಟ್ಟಿದ "ದಂಗಲ್" ಖ್ಯಾತಿಯ ಝೈರಾ, "ನಾನು ಇಲ್ಲಿಗೆ ಪರಿಪೂರ್ಣವಾಗಿ ಹೊಂದಿಕೆಯಾಗುತ್ತಿದ್ದರೂ, ನಾನು ಇಲ್ಲಿ ಉಳಿಯಲಾರೆ" ಎಂದು ಹೇಳಿದ್ದಾರೆ.

"ಐದು ವರ್ಷದ ಹಿಂದೆ ನಾನು ಕೈಗೊಂಡ ನಿರ್ಧಾರ ನನ್ನ ಇಡೀ ಬದುಕನ್ನೇ ಬದಲಾಯಿಸಿತು. ನಾನು ಬಾಲಿವುಡ್‍ನಲ್ಲಿ ಹೆಜ್ಜೆ ಇಟ್ಟಾಗ ಅಪಾರ ಜಪ್ರಿಯತೆಯ ಬಾಗಿಲು ನನಗೆ ತೆರೆಯಿತು. ಸಾರ್ವಜನಿಕ ಗಮನ ಸಳೆಯುವ ಪ್ರಧಾನ ಆಕರ್ಷಣೆ ನಾನಾದೆ. ಯಶಸ್ಸಿನ ಕಲ್ಪನೆಯ ದೇವಕನ್ಯೆಯಾಗಿ ಹಾಗೂ ಯುವಜನತೆಗೆ ಮಾದರಿಯಾಗಿ ನನ್ನನ್ನು ಬಿಂಬಿಸಲಾಯಿತು" ಎಂದು ಬಣ್ಣಿಸಿದ್ದಾರೆ.

"ಆದಾಗ್ಯೂ ನಾನು ಬಯಸ್ಸಿದ್ದು ಅದನ್ನಲ್ಲ; ಯಶಸ್ಸು ಹಾಗೂ ವೈಫಲ್ಯಕ್ಕೆ ಸಂಬಂಧಿಸಿದ ನನ್ನ ಕಲ್ಪನೆಗಳ ವಿಚಾರ ಈಗಷ್ಟೇ ತೆರೆದುಕೊಳ್ಳುತ್ತಿದ್ದು, ಅರ್ಥ ಮಾಡಿಕೊಳ್ಳುತ್ತಿದ್ದೇನೆ" ಎಂದು ವೃತ್ತಿಯಲ್ಲಿ ಐದು ವರ್ಷ ಪೂರ್ಣಗೊಳಿಸಿದ 18 ವರ್ಷದ ನಟಿ ಹೇಳಿದ್ದಾರೆ. "ಈ ಕೆಲಸದ ಬಗ್ಗೆ ನನಗೆ ಸಂತಸವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

"ಈ ಕ್ಷೇತ್ರ ನನಗೆ ಅಪಾರ ಪ್ರೀತಿ, ಬೆಂಬಲ ಮತ್ತು ಶ್ಲಾಘನೆಯನ್ನು ತಂದುಕೊಟ್ಟಿದ್ದರೂ, ಅದು ನಿರ್ಲಕ್ಷ್ಯದ ಹಾದಿಯತ್ತಲೂ ನನ್ನನ್ನು ಮುನ್ನಡೆಸಿದೆ. ಮೌನವಾಗಿ, ಪ್ರಜ್ಞಾಪೂರ್ವಕವಲ್ಲದ ರೀತಿಯಲ್ಲಿ ನನ್ನ ನಂಬಿಕೆಯನ್ನು ಬದಲಾಯಿಸಿದೆ. ನನ್ನ ನಂಬಿಕೆ ಮೇಲೆ ನಿರಂತರವಾಗಿ ಹಸ್ತಕ್ಷೇಪ ಮಾಡುವ ವಾತಾವರಣದಲ್ಲಿ ನಾನು ಕಾರ್ಯ ಮುಂದುವರಿಸಿದರೆ, ಧರ್ಮದ ಜತೆಗಿನ ನನ್ನ ಸಂಬಂಧಕ್ಕೆ ಅಪಾಯವಿದೆ" ಎಂದು ವಿವರಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)