varthabharthi

ನಿಮ್ಮ ಅಂಕಣ

​ವಾಸ್ತವದಲ್ಲಿ ‘ಮಧ್ಯಮಪಂಥ’ ಇಲ್ಲ

ವಾರ್ತಾ ಭಾರತಿ : 30 Jun, 2019
ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

ಮಾನ್ಯರೇ,

ಮಾಸ್ತಿ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ನಾಡಿನ ಪ್ರಮುಖ ಲೇಖಕರೂ ಚಿಂತಕರೂ ಆದ ಮೊಗಳ್ಳಿ ಗಣೇಶ ಅವರು ‘ಸಾಹಿತಿ, ಕಲಾವಿದರಿಗೆ ಎಡ, ಬಲ, ಮಧ್ಯಮಪಂಥದ ಅವಶ್ಯಕತೆ ಇಲ್ಲ’ ಎಂದು ಹೇಳಿದರೆಂದು ವರದಿಯಾಗಿದೆ. (ವಾ.ಭಾ.ಜೂನ್ 30).’ಎಡ, ಬಲ, ಮಧ್ಯಮ ಪಂಥಗಳು’ ಆಕಾಶದಲ್ಲಿರುವ ಆಲೋಚನೆಗಳಲ್ಲ. ಶೋಷಿತ ಜನರಮೇಲೆ ಶೋಷಕರು ನಡೆಸುವ ರಾಜಕೀಯ ಮತ್ತು ಆರ್ಥಿಕ ದಬ್ಬಾಳಿಕೆಯನ್ನು ಕೊನೆಗಾಣಿಸಿದಾಗ ಮಾತ್ರ ಎಲ್ಲರಿಗೂ ನ್ಯಾಯ-ನೆಮ್ಮದಿ ದೊರೆಯುವಂಥ ಸಮಸಮಾಜ ಸಾಧ್ಯ ಎಂದು ಪ್ರತಿಪಾದಿಸುವುದು ‘ಎಡಪಂಥ’. ಶೋಷಣೆ, ಅಸಮಾನತೆ, ಸಾಮಾಜಿಕ-ಆರ್ಥಿಕ ತಾರತಮ್ಯಗಳು ನಿಸರ್ಗದತ್ತವಾದವುಗಳು. ಆದ್ದರಿಂದ, ಬಲಿಷ್ಠರು ದುರ್ಬಲರ ಜೀವನವನ್ನು ತಮಗೆ ಅನುಕೂಲವಾಗುವ ರೀತಿಯಲ್ಲಿ ನಿರ್ದೇಶಿಸಿ ನಿಯಂತ್ರಿಸುವುದು ಅನ್ಯಾಯವಲ್ಲ ಎಂದು ಪ್ರತಿಪಾದಿಸುವುದು ‘ಬಲಪಂಥ’.’ಎಡಪಂಥದ’ ಸರ್ವಜನರ ಶೋಷಣಾರಹಿತ ನ್ಯಾಯ-ನೆಮ್ಮದಿ ಮತ್ತು ‘ಬಲಪಂಥ’ದ ತಾರತಮ್ಯಸಹಿತವಾದ ‘ಸಮೃದ್ಧಿ’ ಎರಡನ್ನೂ ಕೂಡಿಸಿ, ಕಲ್ಪಿತವಾದ ಸಮಾನತೆ-ನ್ಯಾಯ-ನೆಮ್ಮದಿಗಳನ್ನು ಸಾಧಿಸಬೇಕೆಂದು ಹೇಳುವ ಗುಂಪು ತಮ್ಮನ್ನು ‘ಮಧ್ಯಮಪಂಥ’ವೆಂದು ಕರೆದುಕೊಳ್ಳುತ್ತದೆ. ಆದರೆ ಅಂಥ ‘ಮಧ್ಯಮಪಂಥ’ ವಾಸ್ತವದಲ್ಲಿ ಇಲ್ಲ. ಇರುವುದು ಎರಡೇ, ಎಡಪಂಥ ಮತ್ತು ಬಲಪಂಥ.

ಸಾಹಿತಿಗಳಿರಲಿ, ಕಲಾವಿದರಿರಲಿ, ನಾವ್ಯಾರೂ ಹುಟ್ಟುವಾಗ ನಿರ್ವಾತದಲ್ಲಿ ಹುಟ್ಟುವುದಿಲ್ಲ. ಈಗಾಗಲೇ ಅಸ್ತಿತ್ವದಲ್ಲಿರುವ ಒಂದು ಕುಟುಂಬದೊಳಕ್ಕೆ, ಸಮಾಜದೊಳಕ್ಕೆ ಮಗುವಾಗಿ ಪ್ರವೇಶಿಸುತ್ತೇವೆ. ನಮಗೆ ಅರಿವಿಲ್ಲದೆಯೇ ಆ ಕುಟುಂಬ ಮತ್ತು ಸಮಾಜವು ಈಗಾಗಲೇ ಏರ್ಪಡಿಸಿಕೊಂಡಿರುವ ಸಂಬಂಧಗಳ ಹಿಂದಿರುವ ಆರ್ಥಿಕ-ರಾಜಕೀಯ ವ್ಯವಸ್ಥೆಯ ನ್ಯಾಯ-ನೆಮ್ಮದಿಗಳ ಪರಿಕಲ್ಪನೆಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತೇವೆ. ಸಹಜವಾಗಿಯೇ, ಹಾಲುಣಿಸುವ ತಾಯಿಯು ಎಡ-ಬಲ-ಮಧ್ಯಮ ಪಂಥಗಳಿಂದ ಮುಕ್ತವಾದವಳೆಂದು ಭಾವಿಸುತ್ತೇವೆ. ಪ್ರಶ್ನಿಸುವ-ಚಿಂತಿಸುವ ವಯಸ್ಸಿನಲ್ಲಿ ಇದಕ್ಕೆ ಹೊರತಾದ ಲೋಕದೃಷ್ಟಿಯನ್ನು ಮಾತ್ರ ‘ಒಂದು ಪಂಥ’ ವೆಂದು ಪ್ರಜ್ಞಾಪೂರ್ವಕಾಗಿ ಗುರುತಿಸಿ ಒಪ್ಪುತ್ತೇವೆ ಅಥವಾ ತಿರಸ್ಕರಿಸುತ್ತೇವೆ. ನಾವು ಮೈಗೂಡಿಸಿಕೊಂಡು ಬೆಳೆದುಬಂದ ಲೋಕದೃಷ್ಟಿಯೂ ಸಹ ಒಂದು ‘ಪಂಥ’ವೇ ಎಂಬುದು ಹೊಳೆಯುವುದೇ ಇಲ್ಲ. (ಕಂಪ್ಯೂಟರ್ ಭಾಷೆಯಲ್ಲಿ ಹೇಳುವುದಾದರೆ) ಈ ‘ಡಿಫಾಲ್ಟ್ ಪಂಥ’ದ ಬಗ್ಗೆ ಹಾಲುಣಿಸುವ ತಾಯಿಗಾಗಲಿ, (ಹಾಲುಂಡು ಬೆಳೆದ) ಮಗುವಿಗಾಗಲಿ ಅರಿವಿಲ್ಲ ಎಂದಮಾತ್ರಕ್ಕೆ ಪಂಥವೇ ಇಲ್ಲ ಎಂದಾಗುತ್ತದೆಯೇ?

ಸಾಹಿತ್ಯದ ವಿದ್ಯಾರ್ಥಿಯಾದ ಮೊಗಳ್ಳಿಯವರಿಗೆ ಕಾಲ್ಪನಿ ಕವಾದ ‘ಪಂಥರಹಿತ’ ಜೀವನ ಮತ್ತು ಸೃಜನಶೀಲತೆಗಳ ಕನಸಿನಲೋಕ ಸಹಜವೇ. ಆದರೆ ಸಾಹಿತ್ಯದ ಜೊತೆಗೆ ಅರ್ಥಶಾಸ್ತ್ರ ವನ್ನೂ ಅಭ್ಯಾಸಮಾಡಿರುವ ಅವರು ಬದುಕುತ್ತಿರುವುದು ‘ಎಡ-ಬಲ ಪಂಥಗಳ’ ತಿಕ್ಕಾಟದ ವಾಸ್ತವಲೋಕದಲ್ಲಿ. ಎರಡರಲ್ಲಿ ಯಾವುದನ್ನು ಒಪ್ಪಬೇಕು ಎನ್ನುವುದು ಸಂವೇದನಾಶೀಲರಾದ ಅವರ ಆಯ್ಕೆಗೆ ಬಿಟ್ಟ ವಿಚಾರ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)