varthabharthiಸಂಪಾದಕೀಯ

ಪೆಹ್ಲೂ ಖಾನ್ ಗುಂಪು ಹತ್ಯೆ: ಮೂಕಸಾಕ್ಷಿ ಯಾದ ಕಾಂಗ್ರೆಸ್

ವಾರ್ತಾ ಭಾರತಿ : 1 Jul, 2019

ಕಳೆದ ಚುನಾವಣೆಯ ಬಳಿಕ ಕಾಂಗ್ರೆಸ್ ಇನ್ನಷ್ಟು ಹತಾಶೆಗೊಂಡಂತಿದೆ. ಮುಂದಿನ ದಿನಗಳಲ್ಲಿ ಚುನಾವಣೆಯನ್ನು ಯಾವ ವೌಲ್ಯಗಳ ಆಧಾರದಲ್ಲಿ ಎದುರಿಸಬೇಕು ಎನ್ನುವ ಅದರ ಗೊಂದಲಗಳು ಈ ಫಲಿತಾಂಶದ ಬಳಿಕ ತೀವ್ರವಾಗಿದೆ. ಒಂದೆಡೆ ಕಾಂಗ್ರೆಸ್‌ನ ಸಕಲ ಫಲಾನುಭವಗಳನ್ನು ತನ್ನದಾಗಿಸಿಕೊಂಡ ವೃದ್ಧ ನಾಯಕರೆಲ್ಲ ಆರೆಸ್ಸೆಸ್ ಮತ್ತು ಬಿಜೆಪಿಯ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಳ್ಳುತ್ತಿದ್ದರೆ, ಇತ್ತ ಕಾಂಗ್ರೆಸ್ ಪಕ್ಷ ಹಾಡ ಹಗಲೇ ಆರೆಸ್ಸೆಸ್ ತೋಡಿದ ಹಳ್ಳಕ್ಕೆ ಬೀಳಲು ಸಜ್ಜಾಗಿ ನಿಂತಿದೆ. ಈ ದೇಶದ ಜಾತ್ಯತೀತ ವೌಲ್ಯಗಳಿಗೆ ಬದ್ಧವಾಗಿ ನಿಂತು ಸ್ಪಷ್ಟವಾಗಿ ಮಾತನಾಡಬೇಕಾಗಿದ್ದ ಕಾಂಗ್ರೆಸ್, ಆರೆಸ್ಸೆಸ್ ಸೃಷ್ಟಿಸಿದ ರಾಷ್ಟ್ರೀಯತೆಯ ವಿಸ್ಮತಿಗೆ ಸ್ವತಃ ತಾನೇ ಸಿಲುಕಿಕೊಂಡಿದೆ. ಬಹುಶಃ ಕಾಂಗ್ರೆಸ್‌ನೊಳಗಿರುವ ಬಹುತೇಕ ನಾಯಕರು ಆರೆಸ್ಸೆಸ್ ಚಿಂತನೆಗಳ ಜೊತೆಗೆ ಭಾಗಶಃ ಸಮ್ಮತಿಯನ್ನು ಹೊಂದಿರುವುದು, ಅಧಿಕಾರ ಹಿಡಿಯುವ ಒಂದೇ ಕಾರಣಕ್ಕಾಗಿ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿರುವುದು ಇದಕ್ಕೆ ಕಾರಣವಾಗಿರಬಹುದು. ಈ ಹಿನ್ನೆಲೆಯಲ್ಲೇ ವಂದೇಮಾತರಂ, ಗೋಮಾಂಸಾಹಾರ, ಕೇಸರಿ ಭಯೋತ್ಪಾದನೆ ಇವೆಲ್ಲವುಗಳ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತನಾಡುವುದಕ್ಕೆ ಕಾಂಗ್ರೆಸ್‌ನೊಳಗಿರುವ ನಾಯಕರು ಹಿಂಜರಿಯುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ತನ್ನನ್ನು ತಾನು ‘ಬ್ರಾಹ್ಮಣ’ ಎಂದು ಘೋಷಿಸಿಕೊಂಡು ಚುನಾವಣೆ ಎದುರಿಸಬೇಕಾದ ದೈನೇಸಿ ಸ್ಥಿತಿಗೆ ಇಳಿದಿದ್ದ ರಾಹುಲ್‌ಗಾಂಧಿ. ಸದ್ಯಕ್ಕೆ ಎಲ್ಲೂ ಸಲ್ಲದವರಾಗಿ ಕಾಂಗ್ರೆಸ್‌ನಲ್ಲಿ ಒಂಟಿಯಾಗಿದ್ದಾರೆ.

ಕಾಂಗ್ರೆಸ್‌ನೊಳಗಿರುವ ನಾಯಕರಿಗೆ ರಾಹುಲ್‌ಗಾಂಧಿಯವರ ಕುಟುಂಬದ ‘ಗಾಂಧಿ’ ತಲೆನಾಮವಷ್ಟೇ ಬೇಕಾಗಿದೆ. ಕಾಂಗ್ರೆಸ್‌ನ ಜಾತ್ಯತೀತ ನಿಲುವುಗಳು ಬೇಡವಾಗಿದೆ. ರಾಜಸ್ತಾನದಲ್ಲಿ ನಕಲಿ ಗೋರಕ್ಷಕರ ಕುರಿತಂತೆ ಕಾಂಗ್ರೆಸ್ ಆಡುತ್ತಿರುವ ರಕ್ಷಣಾತ್ಮಕ ಆಟವೇ ಕಾಂಗ್ರೆಸ್‌ನ ಸದ್ಯದ ಸ್ಥಿತಿಯನ್ನು ಹೇಳುತ್ತಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಂತೆಯೇ, ಅಲ್ಲಿ ನಕಲಿ ಗೋರಕ್ಷಕರಿಂದ ಹತ್ಯೆಗೀಡಾದ, ಹಲ್ಲೆಗೀಡಾದ ಸಂತ್ರಸ್ತರಿಗೆ ನ್ಯಾಯ ಸಿಗಬಹುದು ಎಂದು ಭಾವಿಸಲಾಗಿತ್ತು. ಆದರೆ ಪೊಲೀಸರು ಸರಕಾರದ ಯಾವ ಅಂಜಿಕೆಯೂ ಇಲ್ಲದೆ, ಹಲ್ಲೆಯಲ್ಲಿ ಮೃತಪಟ್ಟಿರುವ ಪೆಹ್ಲೂಖಾನ್ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ದೋಷಾರೋಪ ಪಟ್ಟಿಯನ್ನು ದಾಖಲಿಸಿದ್ದಾರೆ ಮತ್ತು ಈ ಬೆಳವಣಿಗೆಯನ್ನು ಅಲ್ಲಿನ ಮುಖ್ಯಮಂತ್ರಿ ಸಮರ್ಥಿಸಿದ ರೀತಿಯಂತೂ ಇನ್ನಷ್ಟು ತಮಾಷೆಯಾಗಿದೆ. ‘‘ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಡೆದ ತನಿಖೆಗೆ ಅನುಗುಣವಾಗಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ’’ ಎಂದು ಮುಖ್ಯಮಂತ್ರಿ ಗೆಹ್ಲೋಟ್ ಸ್ಪಷ್ಟನೆ ನೀಡಿದ್ದಾರೆ.

ಪೆಹ್ಲೂಖಾನ್ ಹತ್ಯೆಯನ್ನು ಇದೇ ಕಾಂಗ್ರೆಸ್ ತೀವ್ರತರವಾಗಿ ಖಂಡಿಸಿತ್ತು ಮತ್ತು ಅಧಿಕಾರಕ್ಕೇರಿದಾಕ್ಷಣ ಈ ಕುರಿತಂತೆ ಹೊಸ ತನಿಖೆಗೆ ಆದೇಶ ನೀಡುವುದು ಸರಕಾರದ ಕರ್ತವ್ಯವಾಗಿತ್ತು. ಬಿಜೆಪಿ ನಡೆಸಿದ ತನಿಖೆಯ ಪ್ರಕಾರ ಪೊಲೀಸರು ದೋಷಾರೋಪಣೆ ಮಾಡಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್‌ಗೆ, ಸದ್ಯ ರಾಜಸ್ಥಾನವನ್ನು ಬಿಜೆಪಿ ಆಳುತ್ತಿಲ್ಲ ಎನ್ನುವ ಅರಿವೂ ಇದ್ದಂತಿಲ್ಲ. ನಕಲಿ ಗೋರಕ್ಷಕರ ವಿರುದ್ಧ ಕ್ರಮ ಕೈಗೊಂಡರೆ ಹಿಂದೂ ಮತಗಳು ಪುನಃ ಕ್ರೋಡೀಕರಣಗೊಳ್ಳಬಹುದು ಮತ್ತು ಕಾಂಗ್ರೆಸ್ ಹಿಂದೂ ವಿರೋಧಿ ಮತ್ತು ಮುಸ್ಲಿಂ ಪರವಾದ ಪಕ್ಷವಾಗಿದೆ ಎಂದು ಬಿಜೆಪಿಗೆ ಆರೋಪಿಸಲು ಅವಕಾಶ ಸಿಗಬಹುದು ಎನ್ನುವ ಈ ಯೋಚನೆ ಈ ನಿರ್ಧಾರದ ಹಿಂದಿರಬಹುದಾಗಿದೆ. ಆರೆಸ್ಸೆಸ್ ಪ್ರತಿಪಾದಿಸುತ್ತಿರುವ ‘ಹಿಂದುತ್ವ’ವನ್ನೇ ‘ಹಿಂದೂಧರ್ಮ’ ಎಂದು ಒಪ್ಪಿಕೊಳ್ಳುತ್ತಿರುವ ಸೂಚನೆ ಇದಾಗಿದೆ. ನಕಲಿ ಗೋರಕ್ಷಕರ ವಿರುದ್ಧ ಕಾನೂನು ತರುವ ಕುರಿತಂತೆ ಕಾಂಗ್ರೆಸ್ ಮಾತನಾಡುತ್ತಿದೆ. ಆದರೆ ಪೆಹ್ಲೂ ಖಾನ್ ಮತ್ತು ಅವರ ಇಬ್ಬರು ಪುತ್ರರ ವಿರುದ್ಧ ದೂರು ದಾಖಲಿಸಿದ ನಂತರ ಈ ಕಾರ್ಯ ಮಾಡಲಿದೆ. ಅಷ್ಟಕ್ಕೂ ಪೆಹ್ಲೂ ಖಾನ್ 50,000ರೂ. ನೀಡಿ ಗೋವುಗಳನ್ನು ಖರೀದಿಸಿರುವುದಕ್ಕೆ ಸಾಕ್ಷಿ ದೊರಕಿರುವುದು ಅವುಗಳನ್ನು ಖಂಡಿತವಾಗಿಯೂ ವಧೆಗೆಂದು ಖರೀದಿಸಲಾಗಿರಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಆದರೂ ಪೆಹ್ಲೂಖಾನ್ ಕುಟುಂಬದ ಪರವಾಗಿ ಸ್ಪಷ್ಟವಾಗಿ ನಿಲ್ಲುವುದಕ್ಕೆ ಸರಕಾರ ಯಾಕೆ ಅಂಜುತ್ತಿದೆ? ರಾಜಸ್ಥಾನದಲ್ಲಿ ಕಾಂಗ್ರೆಸ್ ನಕಲಿ ಗೋರಕ್ಷಕರ ಕುರಿತಂತೆ ತಳೆದ ನಿಲುವು ಮುಂದಿನ ದಿನಗಳಲ್ಲಿ ದೇಶಾದ್ಯಂತ ಕಾಂಗ್ರೆಸ್ ಸರಕಾರಗಳುಳ್ಳ ರಾಜ್ಯಗಳಿಗೆ ಮಾದರಿಯಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮೃದು ಹಿಂದುತ್ವದ ಮುಂದುವರಿದ ಭಾಗವಾಗಿ, ಕಾಂಗ್ರೆಸ್ ಇಟ್ಟ ಇನ್ನೊಂದು ದೊಡ್ಡ ಹೆಜ್ಜೆ ಇದು. ಒಂದೆಡೆ ಮುಸ್ಲಿಮರ ಮತಗಳು ಹೇಗೂ ಸಿಕ್ಕೇ ಸಿಗುತ್ತದೆ. ಇದೇ ಸಂದರ್ಭದಲ್ಲಿ ಹಿಂದುತ್ವವಾದಿಗಳನ್ನು ಕಟುವಾಗಿ ಎದುರು ಹಾಕದೇ ಇರುವ ಮೂಲಕ ಅವರ ಓಲೈಕೆಗೆ ಕಾಂಗ್ರೆಸ್ ಹೊರಟಿರುವುದನ್ನು ಇದು ಹೇಳುತ್ತಿದೆ. ನವಉದಾರವಾದಿ ಸುಧಾರಣೆಗಳ ಮೂಲಕ ಕಾಂಗ್ರೆಸ್ ಆರ್ಥಿಕ ವಿಷಯಗಳಲ್ಲಿ ರಾಜಕೀಯ ಪಕ್ಷಗಳ ನಡುವಿನ ಅಂತರವನ್ನು ದೂರ ಮಾಡಿದೆ. ಇದೇ ರೀತಿ, ಹಿಂದುತ್ವದ ಮೂಲಕ ಬಿಜೆಪಿ ಸಾಮಾಜಿಕ ವಿಷಯಗಳಲ್ಲಿ ಪಕ್ಷಗಳ ನಡುವಿನ ವ್ಯತ್ಯಾಸಗಳನ್ನು ದೂರ ಮಾಡುತ್ತಿದೆ. ಬಿಜೆಪಿ ಹೆಚ್ಚು ಕಾರ್ಪೊರೇಟ್ ಪರ ಮತ್ತು ನವಉದಾರವಾದಿ ತತ್ವಗಳನ್ನು ಅಳವಡಿಸುವ ಮೂಲಕ ಸಣ್ಣ ವ್ಯಾಪಾರಿಗಳು ಮತ್ತು ಸ್ವದೇಶಿ ಉತ್ಪಾದಕರ ರಕ್ಷಣೆಯ ಕಾರ್ಯವನ್ನು ಕೈಬಿಟ್ಟಿದೆ ಮತ್ತು ಕಾಂಗ್ರೆಸ್ ಮೃದು ಹಿಂದುತ್ವವನ್ನು ಅಳವಡಿಸಿಕೊಂಡಿದೆ. ಕಾಂಗ್ರೆಸ್‌ನ ಆರ್ಥಿಕ ನೀತಿಯನ್ನು ಬಿಜೆಪಿ, ಬಿಜೆಪಿಯ ಹಿಂದುತ್ವವನ್ನು ಕಾಂಗ್ರೆಸ್ ಅಳವಡಿಸಿಕೊಳ್ಳುತ್ತಾ ಪರಸ್ಪರ ಒಂದಾಗಿ ಬೆಸೆದುಕೊಳ್ಳುತ್ತಿವೆ.

ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ ಗಳಿಕೆಯಲ್ಲಿ ಹೆಚ್ಚಿನ ಬದಲಾವಣೆಯಿಲ್ಲದೆ ಚುನಾವಣೆಗಳನ್ನು ಗೆದ್ದುಕೊಂಡಿತ್ತು. ಮಧ್ಯ ಪ್ರದೇಶದಲ್ಲಿ ಬಿಜೆಪಿಯಲ್ಲಿದ್ದ ಒಳಜಗಳ ಮತ್ತು ರಾಜಸ್ಥಾನದಲ್ಲಿ ವಸುಂಧರಾ ರಾಜೇ ಅವರ ಅತಿಆತ್ಮವಿಶ್ವಾಸದ ಪರಿಣಾಮವಾಗಿ ಕಾಂಗ್ರೆಸ್ ಚುನಾವಣೆಗಳನ್ನು ಗೆದ್ದಿದೆ ಎಂದು ಪಕ್ಷವೇ ಒಪ್ಪಿಕೊಂಡಿದೆ. ಬಹುಶಃ ಕಾಂಗ್ರೆಸ್‌ಗೆ ತಾನು ಯಾಕೆ ಸೋಲುತ್ತಿದ್ದೇನೆ ಎನ್ನುವುದು ಗೊತ್ತಾದಂತಿದೆ. ಹಿಂದುತ್ವ ದೇಶಾದ್ಯಂತ ಬಲವಾಗಿ ಬೇರಿಳಿಸುತ್ತಿರುವುದು ಅದರ ಗಮನಕ್ಕೆ ಬಂದಿದೆ. ಇದೇ ಸಂದರ್ಭದಲ್ಲಿ ತನ್ನ ಗೆಲುವಿನ ಹಿನ್ನೆಲೆಯ ಬಗ್ಗೆ ಮಾತ್ರ ಅದು ಅಸ್ಪಷ್ಟವಾಗಿದೆ. ಕಾಂಗ್ರೆಸ್ ಸದ್ಯಕ್ಕೆ ಎರಡು ದೋಣಿಯ ಮೇಲೆ ಕಾಲಿಟ್ಟಿದೆಯಾದರೂ, ಮುಂದೊಂದು ದಿನ ಹಿಂದುತ್ವದ ಎರಡನೇ ದೋಣಿಯ ಮಾಲಕನಾಗುವ ಹಂತಕ್ಕೆ ಇದು ಪೀಠಿಕೆಯಾಗಿದೆ. ಬಹುಶಃ ಈ ದೇಶದಲ್ಲಿ ಸಂವಿಧಾನ, ಪ್ರಜಾಸತ್ತೆಯ ವೌಲ್ಯಗಳು ಉಳಿಯಬೇಕಾದರೆ ಕಾಂಗ್ರೆಸ್ ಹಿಂದುತ್ವದ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಳ್ಳುವುದೇ ಒಳ್ಳೆಯದೇನೋ. ಆಗ ಜನರು ನಿಜವಾದ ಜಾತ್ಯತೀತ, ಸಂವಿಧಾನ ಬದ್ಧ ಪರ್ಯಾಯ ಪಕ್ಷವನ್ನು ಕಂಡುಕೊಳ್ಳುವುದಕ್ಕೆ ದಾರಿ ತೆರೆದುಕೊಳ್ಳಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)