varthabharthi

ವಿಶೇಷ-ವರದಿಗಳು

ಜುಲೈ 1: ಜಿಎಸ್‌ಟಿ ಜಾರಿಗೊಂಡ ದಿನ

ಜಿಎಸ್‌ಟಿ: ಲಾಭವೆಷ್ಟು ? ನಷ್ಟವೆಷ್ಟು ?

ವಾರ್ತಾ ಭಾರತಿ : 1 Jul, 2019

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದು ಜುಲೈ 1ಕ್ಕೆ ಎರಡು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವಿವಿಧ ವಲಯಗಳ ಜನರಲ್ಲಿ ವಾರ್ತಾಭಾರತಿ ಪತ್ರಿಕೆ ಕೇಳಿದ ಪ್ರಶ್ನೆಗಳು.

► ಜಿಎಸ್‌ಟಿ ಜಾರಿ ವ್ಯಾಪಾರ, ಉದ್ಯಮಗಳ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಿದೆ?

► ಇದರಿಂದ ವಾಣಿಜ್ಯ ಉದ್ಯಮ ವ್ಯವಹಾರಗಳಿಗೆ ತೊಂದರೆ ಯಾಗಿದೆಯೇ? ಯಾವ ರೀತಿಯಲ್ಲಿ?

► ಲಾಭವಾಗಿದ್ದರೆ ಯಾವ ರೀತಿಯಲ್ಲಿ?

► ಜಿಎಸ್‌ಟಿಯಲ್ಲಿ ಬದಲಾವಣೆಗಳು ಆಗಬೇಕಾಗಿದೆಯೇ? ತೆರಿಗೆಯಲ್ಲಿ ಯಾವ ರೀತಿಯಲ್ಲಿ ಬದಲಾವಣೆ ಆಗಬೇಕಾಗಿದೆ.

ಪೆಟ್ರೋಲ್, ಆಲ್ಕೋಹಾಲ್ ಜಿಎಸ್‌ಟಿ ವ್ಯಾಪ್ತಿಗೆ ಬರಲಿ

► ಇದು ಎರಡು ರೀತಿಯಲ್ಲಿ ಪರಿಣಾಮ ಬೀರಿದೆ. ಒಂದು ಸಾಮಾನ್ಯವಾಗಿ ಎಲ್ಲರೂ ಒಪ್ಪಿಕೊಂಡಿದ್ದಾರೆ. ಮತ್ತೊಂದು ಕೆಲವು ಆಡಳಿತಾತ್ಮಕ ತೊಂದರೆಯಿಂದ ಸಮಸ್ಯೆಯಾಗಿದೆ. ಜಿಎಸ್‌ಟಿ ದರ ನಿಗದಿ ಬಗ್ಗೆ 2005ರಿಂದಲೂ ಚರ್ಚೆಯಾಗುತ್ತಿದೆ. 2003ರಲ್ಲಿ ರಾಜ್ಯದಲ್ಲಿ ಮೌಲ್ಯಾಧಾರಿತ ತೆರಿಗೆ ಬಂದ ನಂತರ ಜಿಎಸ್‌ಟಿ ಬಗ್ಗೆ ಪ್ರಶ್ನೆ ಶುರುವಾಗಿತ್ತು. ಮೂರು ದರ ಮಾತ್ರ ಇರಬೇಕು ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿತ್ತು. ಆದರೆ ಐದು ಗುಂಪುಗಳನ್ನಾಗಿ ಮಾಡಿ ನಾಲ್ಕು ದರಗಳನ್ನು ನಿಗದಿ ಪಡಿಸಲಾಗಿದೆ. ಜಿಎಸ್‌ಟಿ ಜಾರಿ ಮಾಡುವಾಗ ಬಹಳಷ್ಟು ಬದಲಾವಣೆಗಳು ಮೇಲಿಂದ ಮೇಲೆ ಆಗಿದ್ದರಿಂದ ಜನರಿಗೆ ತೊಂದರೆಯಾಗಿದೆ. ವ್ಯಾಪಾರ ಉದ್ಯಮಗಳು ಸಾಮಾನ್ಯವಾಗಿ ಅಭಿವೃದ್ಧಿ ಹೊಂದಿದೆ. ಕೆಲವು ವಲಯಗಳಲ್ಲಿ ಮಾತ್ರ ಸಮಸ್ಯೆ ಇದೆ.

► ತೊಂದರೆ ಅಂದರೆ ಜಿಎಸ್‌ಟಿ ತೆರಿಗೆಯನ್ನು ಒಂದೊಂದು ವಸ್ತುಗಳ ಮೇಲೆ ಒಂದೊಂದು ತರಹ ವಿಧಿಸಲಾಗಿದೆ. ಕೆಲವಕ್ಕೆ ಶೇ. 12, 15,18 ಮತ್ತು 25 ಪರ್ಸೆಂಟ್ ದರ ನಿಗದಿಪಡಿಸಲಾಗಿದೆ.ಅಗತ್ಯ ವಸ್ತುಗಳ ಮೇಲೂ ಮೇಲಿಂದ ಮೇಲೆ ದರ ಬದಲಾವಣೆ ಮಾಡಲಾಗಿದೆ. ಉದಾಹರಣೆಗೆ ಬಿಸ್ಕಟ್ ಮೇಲೆ ಬಹಳಷ್ಟು ಜಿಎಸ್‌ಟಿ ದರ ಹಾಕಲಾಗಿತ್ತು. ನಂತರ ಕಡಿಮೆ ಮಾಡಲಾಯಿತು. ಆಟೋ ಮೊಬೈಲ್ ಸ್ಪೇರ್‌ಪಾರ್ಟ್ಸ್‌ಗಳ ಮೇಲೆ ತೆರಿಗೆ ದರ ಏರು ಪೇರು ಮಾಡಿರುವುದು ಸೇರಿದಂತೆ ಜಿಎಸ್‌ಟಿ ದರ ನಿಗದಿ ಮಾಡುವುದರಲ್ಲಿ ತೊಂದರೆ ಇದೆ. ಆಟೋ ಮೊಬೈಲ್ ಕಂಪೆನಿಗಳು ಭಾರೀ ದರ ಕಡಿತಗೊಳಿಸುವ ಬಗ್ಗೆ ಸಾಕಷ್ಟು ಮನವಿ ಮಾಡಿವೆ. ಸ್ಪೇರ್‌ಪಾರ್ಟ್ಸ್‌ಗಳ ಮೇಲೆ ಶೇ.18ರಿಂದ ಶೇ. 28 ಪರ್ಸೆಂಟ್ ವರೆಗೂ ದರ ಇರುವುದರಿಂದ ಆಟೋ ಮೊಬೈಲ್ ಇಂಡಸ್ಟ್ರಿಯಲ್ಲಿ ಈಗಲೂ ಸಮಸ್ಯೆ ಇದೆ.

► ವಾಸ್ತವವಾಗಿ ನಷ್ಟವಾಗಿರುವುದು ನಿಜ. ರಾಜ್ಯ ಸರಕಾರಗಳಿಗೆ ಆಗಲಿ ಕೇಂದ್ರ ಸರಕಾರಕ್ಕೆ ಆಗಲಿ ತೆರಿಗೆ ಸಂಗ್ರಹದಲ್ಲಿ ಸಾಕಷ್ಟು ತೊಂದರೆಯಾಗಿದೆ. ಇದಕ್ಕೆ ಕಾರಣ ಆಡಳಿತಾತ್ಮಕ ತೊಂದರೆಗಳು. ಜಿಎಸ್‌ಟಿ ಯಿಂದ ಕೆಲವಕ್ಕೆ ಲಾಭವಾಗಿವೆ. ಬಹುಸಂಖ್ಯೆಯ ಕಂಪೆನಿಗಳಿದ್ದವಲ್ಲ ಅವುಗಳ ಪದಾರ್ಥಗಳನ್ನು ಮಾರುಕಟ್ಟೆಗೆ ತರಬೇಕಾದ ಸಂದರ್ಭದಲ್ಲಿ ಬೇರೆ ಬೇರೆ ಅಧಿಕಾರಿಗಳನ್ನು ಮೀಟ್ ಮಾಡಬೇಕಿತ್ತು. ಇದರಿಂದ ವ್ಯಾಪಾರಿಗಳಿಗೆ ನಷ್ಟವಾಗುತ್ತಿತ್ತು. ಅದು ಮೂಲಭೂತವಾಗಿ ಕಡಿಮೆಯಾಗಿದೆ. ಅದು ಜಿಎಸ್‌ಟಿಯಿಂದ ದೊಡ್ಡ ಲಾಭ. ದೀರ್ಘಾವಧಿಯಲ್ಲಿ ಇದರಿಂದ ಲಾಭವಾಗಲಿದೆ.

► ಖಂಡಿತ ಬದಲಾವಣೆ ಆಗಬೇಕಿದೆ. ದರ ನಿಗದಿ ಮಾಡುವಲ್ಲಿ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ದರ ನಿಗದಿ ಮಾಡಬೇಕು. ಶೇ.5 ಜಿಎಸ್‌ಟಿ ಹೇರಬೇಕು. ತೆರಿಗೆ ಮುಕ್ತ ಗುಂಪು ಮತ್ತು ಶೇ.12 ತೆರಿಗೆ ಇರಬೇಕು. ಶೇ.18 ತೆರಿಗೆ ಇರುವಂತಹವು ಇದೆ? ಜಿಎಸ್‌ಟಿ ದೇಶದ ಮೇಲೆ ಒಟ್ಟಾರೆ ಪ್ರಭಾವ ಬೀರಬೇಕು ಎಂದರೆ ಪೆಟ್ರೋಲ್ ಮತ್ತು ಆಲ್ಕೋಹಾಲ್ ಎಲ್ಲವನ್ನೂ ಜಿಎಸ್‌ಟಿ ಒಳಗೆ ತಂದರೆ ಒಳ್ಳೆಯದು. ಉದಾಹರಣೆಗೆ 40 ಲಕ್ಷ ವಹಿವಾಟು ನಡೆಸುವವರಿಗೆ ಇಂತಿಷ್ಟು ತೆರಿಗೆ ನಿಗದಿಪಡಿಸಬೇಕು. ರಾಜ್ಯ, ಕೇಂದ್ರ ಮತ್ತು ಅಂತರ್‌ರಾಜ್ಯ ತೆರಿಗೆಗಳನ್ನು ಸರಳಗೊಳಿಸಬೇಕು ಮತ್ತು ದಾಖಲೆಗಳನ್ನು ಸಲ್ಲಿಸುವ ವೇಳೆ ತೆರಿಗೆಯನ್ನು ಸರಳಗೊಳಿಸಬೇಕು. 

ಪ್ರೊ. ಆರ್.ಎಂ.ಚಿಂತಾಮಣಿ, 

ಸ್ನಾತಕೋತ್ತರ ಮತ್ತು ವಾಣಿಜ್ಯ ವಿಭಾಗದ ನಿವೃತ್ತ ನಿರ್ದೇಶಕರು, ಮೈಸೂರು ಜೆಎಸ್‌ಎಸ್ ಕಾಲೇಜು

ದೊಡ್ಡಮಟ್ಟದ ತೆರಿಗೆ ತುಂಬಾ ಅಪಾಯಕಾರಿ

► ಈ ಮೊದಲು 19 ವಿವಿಧ ರೀತಿಯ ತೆರಿಗೆಗಳನ್ನು ಒಂದು ಗೂಡಿಸಿ ಜಿಎಸ್‌ಟಿ ವ್ಯಾಪ್ತಿಗೆ ತಂದಿರುವುದು ದೊಡ್ಡ ಮಟ್ಟದ ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿದೆ.

► ಜಿಎಸ್‌ಟಿಯಿಂದ ಯಾವುದೇ ತೊಂದರೆಯಾಗಿಲ್ಲ. ತೆರಿಗೆ ಕಳ್ಳತನಕ್ಕೆ ಕಡಿವಾಣ ಬಿದ್ದಿದೆ.

► ಉದ್ಯಮಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಜೊತೆಗೆ 18 ಸಾವಿರ ಕೋಟಿ ರೂ. ತೆರಿಗೆ ಹಣ ಹೆಚ್ಚಳವಾಗಿದೆ.

► ಜಿಎಸ್‌ಟಿಯಿಂದ ತೆರಿಗೆ ಸಂಗ್ರಹ ಹೆಚ್ಚಳವಾಗಿದ್ದರಿಂದ ರಾಷ್ಟ್ರೀಯ ಆದಾಯ ಹೆಚ್ಚಳವಾಗಿದೆ. ಇದರಿಂದ ದೇಶಕ್ಕೆ ಲಾಭವಾಗಿದೆ.

► ಜಿಎಸ್‌ಟಿ ನಮ್ಮಂತಹ ಅಭಿವೃದ್ಧಿ ಶೀಲ ದೇಶಗಳಿಗೆ ಅಲ್ಲ. ನಮ್ಮ ದೇಶದಲ್ಲಿ ಬಡವರು ಹೆಚ್ಚು. ಇದು ಪಾಶ್ಚಿಮಾತ್ಯ ದೇಶಗಳಿಗೆ ಮಾತ್ರ ಸೂಕ್ತ. ನಮ್ಮ ದೇಶದಲ್ಲಿ ಕೇವಲ ಶೇ. 5ರಷ್ಟು ಶ್ರೀಮಂತರಿದ್ದಾರೆ. ಜಿಎಸ್‌ಟಿ ಸಣ್ಣ ಕೈಗಾರಿಕೆಗಳು, ರಿಯಲ್ ಎಸ್ಟೇಟ್, ಸೇವಾ ವಲಯಕ್ಕೆ ದೊಡ್ಡ ಮಟ್ಟದ ಹೊಡೆತ ಕೊಟ್ಟಿದೆ. 18 ರಿಂದ 32ರಷ್ಟು ತೆರಿಗೆ ಸಂಗ್ರಹ ಜನರಿಗೆ ತೊಂದರೆಯಾಗಿದೆ. ತೆರಿಗೆ ಹೆಚ್ಚಳದಿಂದ ಉತ್ಪಾದನಾ ವಸ್ತುಗಳ ಕೊಂಡುಕೊಳ್ಳುವಿಕೆ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಕೃಷಿ ವಲಯ ಸೇರಿದಂತೆ ಸೇವಾ ಕ್ಷೇತ್ರಗಳಿಗೆ ತೆರಿಗೆ ವಿನಾಯಿತಿ ನೀಡಬೇಕು. ಜಿಎಸ್‌ಟಿಯಲ್ಲಿ ಬದಲಾವಣೆ ಆಗತ್ಯ. 

ಪ್ರೊ. ಬಿ.ಪಿ. ವೀರಭದ್ರಪ್ಪ

ಮುಖ್ಯಸ್ಥರು ಅರ್ಥಶಾಸ್ತ್ರ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ

ಲಾಭಕ್ಕಿಂತ ನಷ್ಟವೇ ಹೆಚ್ಚು

►  ಜಿಎಸ್‌ಟಿಯಿಂದ ನಮ್ಮ ಸೇವಾ ಕ್ಷೇತ್ರಕ್ಕೆ ಬಿಸಿ ತಟ್ಟಿದೆ. ಶೇ.18 ತೆರಿಗೆಯಿಂದಾಗಿ ನಮ್ಮಲ್ಲಿರುವ ಕಾರ್ಮಿಕರಿಗೆ ಹೊರೆಯಾಗಿದೆ. ಸಣ್ಣ ಕೈಗಾರಿಕೆಗಳಿಗೆ ತೊಂದರೆಯಾಗಿದೆ.

► ನಾವು ಕಟ್ಟಿದ ತೆರಿಗೆ ನಮಗೆ ವಾಪಸ್ ಬರುತ್ತಿಲ್ಲ. ಇದರಿಂದ ನಮ್ಮ ಕಾರ್ಮಿಕರಿಗೆ ತೊಂದರೆಯಾಗಿದೆ.

► ಜಿಎಸ್‌ಟಿಯಿಂದ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚ್ತು.

► 100 ಕ್ಕೆ 100 ರಷ್ಟು ಬದಲಾವಣೆ ಅವಶ್ಯವಾಗಿದೆ. ಸೇವಾ ಕ್ಷೇತ್ರಕ್ಕೆ ವಿಧಿಸಿರುವ ಶೇ.18 ರಷ್ಟು ತೆರಿಗೆಯನ್ನು ಕಡಿಮೆ ಮಾಡಬೇಕು. 

ಟಾರ್ಗೆಟ್ ಅಸ್ಲಂ,

ಟಾರ್ಗೆಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರು, ದಾವಣಗೆರೆ

ಜಿಎಸ್‌ಟಿಯಿಂದ ಉದ್ಯಮಕ್ಕೊಂದು ಹೊಸ ವ್ಯಾಖ್ಯಾನ

► ಏಕರೀತಿಯ ತೆರಿಗೆ ಅನ್ವಯವಾಗುವುದರಿಂದ ತೆರಿಗೆ ಪ್ರಕ್ರಿಯೆ ಅತ್ಯಂತ ಸರಳ ಮತ್ತು ಸುಲಭ.

► ಎಲ್ಲಾ ಉತ್ಪನ್ನಗಳು ಮತ್ತು ಸೇವೆಗಳು ಜಿಎಸ್‌ಟಿಗೆ ಒಳಪಡಬೇಕು. ಹಲವು ಉತ್ಪನ್ನಗಳು ಇನ್ನೂ ಜಿಎಸ್‌ಟಿಗೆ ಒಳಪಟ್ಟಿಲ್ಲ.

► ಜಾಗತಿಕ ಮಟ್ಟದಲ್ಲಿ ನಮ್ಮ ದೇಶ ಪ್ರಾತಿನಿಧ್ಯ ಪಡೆಯಲು ಇದೊಂದು ಉತ್ತಮ ಬೆಳವಣಿಗೆ. ದೇಶದ ಆರ್ಥಿಕ ಸುಧಾರಣೆಯಲ್ಲಿ ಸಮಾನ ತೆರಿಗೆ ಎನ್ನುವುದು ಭವಿಷ್ಯದ ದೃಷ್ಟಿಯಿಂದ ಕ್ರಾಂತಿಕಾರಿ ಬೆಳವಣಿಗೆಯಾಗಿ ಮಾರ್ಪಾಟಾಗಬಹುದು. ಉದ್ಯಮ ರಂಗದಲ್ಲಿ ಪಾರದರ್ಶಕ ಸೂತ್ರವನ್ನು ಕಲ್ಪಿಸಲು ಇದು ಅನುಕೂಲ. ‘ಉದ್ಯಮದಲ್ಲಿ ಸಮಾನತೆ- ಸಮಾನತೆಯಲ್ಲಿ ಉದ್ಯಮ’ಕ್ಕೊಂದು ಹೊಸ ವ್ಯಾಖ್ಯಾನ ಜಿಎಸ್‌ಟಿ ಮೂಲಕ ಸೃಷ್ಟಿಯಾಗಲಿದೆ.

► ಜಿಎಸ್‌ಟಿಯಿಂದ ಜನರಿಗೆ ಸರಕಾರವು ತೆರಿಗೆ ವಿನಾಯಿತಿ, ಲಾಭಗಳನ್ನು ನೀಡುತ್ತದೆ. ಆದರೆ ಈ ಬಗ್ಗೆ ಜನರಿಗೆ ಇನ್ನೂ ಸಮರ್ಪಕವಾಗಿ ಮಾಹಿತಿ ತಲುಪಿಲ್ಲ. ಹೀಗಾಗಿ ವ್ಯಾಪಾರಸ್ಥರು ಜಿಎಸ್‌ಟಿ ಹೆಸರಿನಲ್ಲಿ ಉತ್ಪನ್ನಗಳ ಬೆಲೆ ಏರಿಕೆ ಮಾಡುವಂತಹ ಪ್ರಮೇಯಗಳೂ ಇದೆ. ಇದರಿಂದಾಗಿ ಜನರಿಗೆ ಜಿಎಸ್‌ಟಿ ಬಗ್ಗೆ ತಪ್ಪು ಗ್ರಹಿಕೆಗೆ ಕಾರಣವಾಗಿದೆ. 

ಅಶ್ವತ್ ಡಿ.ಪಿ., ಉಪನ್ಯಾಸಕರು,

ವಾಣಿಜ್ಯ ಮತ್ತು ಆಡಳಿತ ವಿಭಾಗ ಶಾರದಾ ಕಾಲೇಜು, ತಲಪಾಡಿ

ದೊಡ್ಡ ಮಟ್ಟದಲ್ಲಿ ತೊಂದರೆಯಾಗಿದೆ

►  ವ್ಯಾಪಾರ ಬಹಳ ಕಡಿಮೆಯಾಗಿದೆ. ವ್ಯವಹಾರಸ್ಥರು ವ್ಯಾಪಾರ ಮಾಡುತ್ತಿಲ್ಲ. ತೆರಿಗೆ ಹೆಚ್ಚಳದಿಂದ ಎಪಿಎಂಸಿ ಕಡೆ ವ್ಯಾಪಾರಸ್ಥರು ಮತ್ತು ರೈತರು ಬರುತ್ತಿಲ್ಲ. ಹೊರಗಿನಿಂದಲೇ ಖರೀದಿ ವ್ಯವಹಾರ ನಡೆಯುತ್ತಿದೆ. ಭತ್ತ ಬಿಟ್ಟರೆ ಉಳಿದ ಧಾನ್ಯಗಳು ಹೊರಗಡೆಯಿಂದಲೇ ಖರೀದಿ ಮಾಡುತ್ತಿದ್ದಾರೆ. ದೊಡ್ಡಮಟ್ಟದಲ್ಲಿ ವ್ಯವಹಾರಕ್ಕೆ ಪೆಟ್ಟು ಬಿದ್ದಿದೆ. ವ್ಯಾಪಾರಸ್ಥರು ವ್ಯವಹಾರ ಬಿಟ್ಟು ಬೇರೆಯವರೊಂದಿಗೆ ಕೆಲಸ ಮಾಡಬೇಕಾದ ಸ್ಥಿತಿಯಿದೆ. ಕೇಂದ್ರ ಸರಕಾರ 1 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ ಎಂದು ಸುಳ್ಳು ಹೇಳುತ್ತಿದೆ. ಗುಜರಾತ್‌ನಲ್ಲಿ 57 ಸಾವಿರ ನಕಲಿ ಬಿಲ್ ದೊರೆತಿವೆ. ಆದ್ದರಿಂದ ಕೇಂದ್ರ ಜಿಎಸ್‌ಟಿ ತೆರಿಗೆ ಇಳಿಸಬೇಕು.

► ದೊಡ್ಡ ಮಟ್ಟದಲ್ಲಿಯೇ ತೊಂದರೆಯಾಗಿದೆ. ಆದರೆ, ಗ್ರಾಹಕರಿಗೆ ಸ್ಪಲ್ಪಮಟ್ಟದಲ್ಲಿ ಅನುಕೂಲವಾಗಿದೆ. ಬ್ಯಾಂಕ್‌ಗಳಲ್ಲಿನ ಡಿಪಾಸಿಟ್ ಮೇಲಿನ ಬಡ್ಡಿದರ ಇಳಿಸುವ ಸಾಧ್ಯತೆಯು ಇದೆ. ತೆರಿಗೆ ಭಾರಕ್ಕೆ ಭಯಗೊಂಡು ಮಾರುಕಟ್ಟೆಯತ್ತ ರೈತರು ಬರುತ್ತಿಲ್ಲ.

► ಸ್ವಲ್ಪಲಾಭವಿದೆ. ಆದರೆ, ತೆರಿಗೆ ಜಾಸ್ತಿಯಿದೆ.

► ಬದಲಾವಣೆ ಬಹಳ ಅಗತ್ಯವಾಗಿದೆ. 2 ಹಂತದ ತೆರಿಗೆ ವಿಧಿಸುವಂತೆ ಜಿಎಸ್‌ಟಿ ಮಂಡಳಿಗೆ ಮನವಿ ಮಾಡಿದ್ದೇವೆ. ಆದರೆ ಅವರು ಇದಕ್ಕೆ ಒಪ್ಪುತ್ತಿಲ್ಲ. ಐಶಾರಾಮಿ ಕಾರುಗಳಿಗೆ 48ರಷ್ಟು ತೆರಿಗೆ ವಿಧಿಸಿದ್ದಾರೆ. ಇದರಿಂದ ತೊಂದರೆಯಾಗುತ್ತದೆ. ವಿಮೆಗಳ ಮೇಲಿನ ತೆರಿಗೆ ಜನರಿಗೆ ಹೊರೆಯಾಗಿದೆ. ಅದರಿಂದ ಇದರಲ್ಲಿ ಬಹಳಷ್ಟು ಬದಲಾವಣೆ ಅವಶ್ಯವಾಗಿದೆ.

ರಾಧೇಶ್ ಜಂಬಗಿ,

ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರು, ದಾವಣಗೆರೆ

ಕೋಟ್ಯಾಂತರ ಸಣ್ಣ ವ್ಯಾಪಾರಸ್ಥರಿಗೆ ಪೆಟ್ಟು

► ಜಿಎಸ್‌ಟಿ ಜಾರಿಯು ಇಡೀ ಅಸಂಘಟಿತ ವಲಯ ಹಾಗೂ ಉತ್ಪಾದನಾ ವಲಯದ ಮೇಲೆ ಪರಿಣಾಮ ಬೀರಿದೆ. ಕೋಟ್ಯಂತರ ಸಣ್ಣ ವ್ಯಾಪಾರಸ್ಥರಿಗೆ ಜಿಎಸ್‌ಟಿಯಿಂದ ಪೆಟ್ಟು ಬಿದ್ದಿದೆ. ಅಸಂಘಟಿತ ವಲಯ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.

► ಜಿಎಸ್‌ಟಿಯಿಂದ ಕಟ್ಟಡ ನಿರ್ಮಾಣ ಉದ್ಯಮ ತೊಂದರೆಗೆ ಸಿಲುಕಿದೆ. ಸಿಮೆಂಟ್ ದರ ಸೇರಿದಂತೆ ಎಲ್ಲವೂ ಅಧಿಕವಾಗಿದ್ದು, ವಾಣಿಜ್ಯದ ಉದ್ಯಮದ ಮೇಲೆ ತೀವ್ರತರವಾದ ಪರಿಣಾಮ ಬೀರಿದೆ. ಇದೀಗ ನಿರ್ಮಾಣ ವಲಯ ಕೆಲಸದ ಪ್ರಮಾಣ ಕಡಿಮೆಯಾಗಿದ್ದು, ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

► ಹೌದು ಜಿಎಸ್‌ಟಿ ಜಾರಿಯಿಂದ ಕೇಂದ್ರ ಸರಕಾರಕ್ಕೆ ಲಾಭವಾಗಿದೆ. ಜನರಿಂದ ವಸೂಲಿ ಮಾಡುವ ತೆರಿಗೆ ಹಣವನ್ನು ಕಾರ್ಪೊರೇಟ್ ವಲಯಕ್ಕೆ ಅನುಕೂಲ ಮಾಡಿಕೊಡಲು ಬಳಸಲಾಗುತ್ತಿದೆ. ಇದರಿಂದ ದುಡಿಯುವ ವರ್ಗಕ್ಕೆ ಅಥವಾ ಸಣ್ಣ ಉದ್ದಿಮೆದಾರರಿಗೆ, ಕೈಗಾರಿಕೆಗಳಿಗೆ ಯಾವುದೇ ಲಾಭವಾಗಿಲ್ಲ, ನಷ್ಟವೇ ಅಧಿಕವಿದೆ.

► ಕೇಂದ್ರ ಸರಕಾರ ಜಾರಿ ಮಾಡಿರುವ ಜಿಎಸ್‌ಟಿಯಿಂದ ಜನರು, ಸಣ್ಣ ಉದ್ದಿಮೆದಾರರು, ಸಣ್ಣ ಕೈಗಾರಿಕೆಗಳು ಸೇರಿದಂತೆ ಇಡೀ ವ್ಯವಸ್ಥೆ ತತ್ತರಿಸಿ ಹೋಗಿದೆ. ಹೀಗಾಗಿ, ಜಿಎಸ್‌ಟಿ ಕಡಿಮೆಯಾಗಬೇಕು. ಉತ್ಪಾದನಾ ವಲಯ, ವ್ಯಾಪಾರ, ಕಟ್ಟಡ ನಿರ್ಮಾಣದ ಉದ್ಯಮ ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ಬಳಸುವ ವಸ್ತುಗಳ ಮೇಲೆ ಜಿಎಸ್‌ಟಿ ಕಡಿಮೆ ಮಾಡಬೇಕು. ಇದು ಕಡಿಮೆಯಾದರೆ ಬೆಲೆ ಏರಿಕೆ ನಿಯಂತ್ರಣವಾಗುತ್ತದೆ.

ಮಹಾಂತೇಶ, ಕಾರ್ಮಿಕ ಸಂಘದ ನಾಯಕ

ಮಧ್ಯಮ ವರ್ಗದ ಮೇಲೆ ವ್ಯತಿರಿಕ್ತ ಪರಿಣಾಮ ಜಿಎಸ್‌ಟಿ 

► ಜಾರಿಯಿಂದ ದೇಶಾದ್ಯಂತ ಏಕ ರೂಪದ ತೆರಿಗೆ ಸಂಗ್ರಹಿಸುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಸ್ಥರ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದು ಸಣ್ಣ ಮತ್ತು ಮಧ್ಯಮ ವರ್ಗದ ವ್ಯವಹಾರ ಮತ್ತು ಉದ್ಯಮಗಳಿಗೆ ಹೆಚ್ಚಿನ ಹೊರೆಯಾಗಿದೆ.

► ಖಂಡಿತವಾಗಿ ಸಾಕಷ್ಟು ಬದಲಾವಣೆಗಳಾಗಬೇಕಿದೆ. ತೆರಿಗೆದಾರರಲ್ಲಿ Composite ತೆರಿಗೆದಾರರಿಗೆ ವಿನಾಯಿತಿ ನೀಡಬೇಕು. ಅವರಿಗೆ 1 ವರ್ಷಕ್ಕೆ ಒಂದು ಬಾರಿ ರಿಟರ್ನ್ ಫೈಲ್ ಮಾಡುವಂತೆ ಸರಳೀಕರಿಸಬೇಕು ಮತ್ತು ನವೋದ್ಯಮಗಳಿಗೆ ಕನಿಷ್ಠ 5 ವರ್ಷಗಳ ಎಲ್ಲಾ ರೀತಿಯ ತೆರಿಗೆ ವಿನಾಯಿತಿ ನೀಡಬೇಕು. ಆಗ ಮಾತ್ರ ದೇಶಾದ್ಯಂತ ಉದ್ಯಮಗಳು ಪ್ರಾರಂಭವಾಗುತ್ತವೆ ಮತ್ತು ಉದ್ಯಮಗಳು ಬೆಳೆಯಲು ಅವಕಾಶಗಳು ಹೆಚ್ಚುತ್ತವೆ.

► ಪ್ರತೀ ತಿಂಗಳು ರಿಟರ್ನಿಂಗ್ ಮಾಡುವ ಕೊನೆಯ ದಿನಾಂಕ ನಿಗದಿ ಮಾಡಿರುವುದು ಸರಿಯಷ್ಟೆ, ಕೆಲ ಸಂದರ್ಭಗಳಲ್ಲಿ ರಿಟರ್ನಿಂಗ್‌ಮಾಡುವಾಗ ಬಿಲ್‌ಗಳನ್ನು ಬಿಟ್ಟಿದ್ದರೆ ಅಂತಹ ಬಿಲ್‌ಗಳನ್ನ್ನು ಮುಂದಿನ ತಿಂಗಳ ರಿಟರ್ನಿಂಗ್‌ನಲ್ಲಿ ಸೇರಿಸಲು ಅವಕಾಶ ನೀಡಬೇಕು. ಶೇ.18 ಮತ್ತು ಶೇ. 28 ಜಿಎಸ್‌ಟಿಗಳಿಂದ ಗ್ರಾಹಕರಿಗೆ ಹೆಚ್ಚು ಅನನುಕೂಲವಾಗುವುದು. ಉದ್ಯಮಿಗಳು ಹಾಗೂ ವ್ಯಾಪಾರಸ್ಥರಿಗೆ ಎಷ್ಟೇ ಹೆಚ್ಚುವರಿ ತೆರಿಗೆ ವಿಧಿಸಿದರೂ ಅವರು ನೇರವಾಗಿ ಗ್ರಾಹಕರ ಮೇಲೆ ಹಾಕುತ್ತಾರೆ.

ಟಿ.ಕೃಪ ಅಧ್ಯಕ್ಷರು,

ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ನಿ.,

ಜಿಎಸ್‌ಟಿಯಲ್ಲಿ ಬದಲಾವಣೆ ಬೇಕು

 ಸದ್ಯಕ್ಕೆ ವ್ಯಾಪಾರ ಮಾಡುವವರಿಗೆ ತೊಂದರೆಯಾಗಿದೆ. ಆದರೆ, ಮುಂದಿನ 2-3 ವರ್ಷಗಳಲ್ಲಿ ಅನುಕೂಲವಾಗಲಿದೆ. ಮ್ಯಾನೇಜಮೆಂಟ್ ಮತ್ತು ಬಿಕಾಂ ಅಧ್ಯಯನ ಮಾಡಿದಂತಹವರಿಗೆ ಸ್ವಲ್ಪ ಮಟ್ಟದ ಉದ್ಯೋಗ ಲಭಿಸಿದೆ. ಹೊಸ ಯೋಜನೆಗಳು ಬಂದಾಗ ಅನನುಕೂಲಗಳ ಜೊತೆಗೆ ಅನುಕೂಲತೆಗಳೂ ಇವೆ. ಇದಕ್ಕೆ ಸಮಯಬೇಕು ಅಷ್ಟೇ.

► ತೊಂದರೆ ಆಗಲ್ಲ. ಹೊಸ ಪಾಲಿಸಿಗಳು ಬಂದಾಗ ತೊಂದರೆ ಸಹಜ. ಮುಂದಿನ ದಿನಗಳಲ್ಲಿ ಸರಿಹೋಗಲಿದೆ.

► ಜಿಎಸ್‌ಟಿಯಿಂದ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ಇದು ಲಾಭವೇ. ಆದರೆ, ಹೊಸ ಆರ್ಥಿಕ ನೀತಿಗಳು ದೇಶಕ್ಕೆ ಅನ್ವಯವಾಗಲು ಸಮಯ ಬೇಕು. ನಂತರ ದಿನಗಳಲ್ಲಿ ಲಾಭವಾಗಲಿದೆ.

► ಬದಲಾವಣೆ ಬೇಕಾಗಿದೆ. ತೆರಿಗೆ ಶೇ.14ರಷ್ಟಿದೆ. ಅದನ್ನು 12ಕ್ಕೆ ಇಳಿಸಲು ಚಿಂತನೆ ನಡೆದಿದೆ. ಈ ಮೂಲಕ ಬದಲಾವಣೆ ತರುವ ಸಾಧ್ಯತೆಯಿದೆ.

ಪ್ರೊ. ಷಣ್ಮುಕಪ್ಪ,

ಪ್ರಾಚಾರ್ಯರು, ಎಸ್‌ಬಿಸಿ ಕಾಲೇಜು ದಾವಣಗೆರೆ

ಒಂದಷ್ಟು ಬದಲಾವಣೆಗಳನ್ನು ತರಬೇಕು

►  ಜಿಎಸ್‌ಟಿ ಜಾರಿಗೊಂಡು 2 ವರ್ಷಗಳಾಗಿವೆ. ಆರಂಭದಲ್ಲಿ ಇದ್ದಂತಹ ಆತಂಕ ಇದೀಗ ದೂರವಾಗಿದೆ. ಜಿಎಸ್‌ಟಿ ಜಾರಿಗೊಂಡಾಗ ವ್ಯವಸ್ಥೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ತರಬೇಕು ಎಂಬ ಅಪೇಕ್ಷೆ ನಮ್ಮದಾಗಿತ್ತು. ಅದರಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬದಲಾವಣೆ ಮಾಡುತ್ತಲೇ ಬಂದಿದ್ದಾರೆ. ವ್ಯಾಪಾರ-ಉದ್ಯಮ-ವಹಿವಾಟಿನ ದೃಷ್ಟಿಯಿಂದ ಇದೊಂದು ಒಳ್ಳೆಯ ಪ್ರಯೋಗ. ನಮಗೆ ಇದರ ಪ್ರಯೋಜನ ಮತ್ತು ಮಹತ್ವ ಸದ್ಯಕ್ಕೆ ಗೋಚರಿಸುವುದಿಲ್ಲ. ಇದು ದೂರದೃಷ್ಟಿಯುಳ್ಳ ವ್ಯವಸ್ಥೆಯಾಗಿದೆ. ಒಂದಕ್ಕೊಂದು ಲಿಂಕ್ ಆಗಿರುವುದರಿಂದ ಯಾರಿಗೂ, ಎಲ್ಲೂ ತೆರಿಗೆ ತಪ್ಪಿಸಿ ವಂಚಿಸಲು ಸಾಧ್ಯವಿಲ್ಲ. ಸದ್ಯ ಬೇರೆ ಬೇರೆ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸ್ವಲ್ಪ ಕುಸಿತ ಕಂಡುಬಂದರೂ ಉದ್ಯಮಿಗಳು, ಜನಸಾಮಾನ್ಯರ ಸಹಿತ ಶೇ.90ರಷ್ಟು ಮಂದಿಗೆ ಇದರಿಂದ ತುಂಬಾ ಪ್ರಯೋಜನವಾಗಿದೆ.

 ಗೌರವ ಹೆಗ್ಡೆ, ಅಧ್ಯಕ್ಷರು ಕೆನರಾ ಸಣ್ಣ ಕೈಗಾರಿಕೆಗಳ ಸಂಘ, ಬೈಕಂಪಾಡಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)